
ದಾಂಪತ್ಯ ಜೀವನ ಎನ್ನುವಂತಹದ್ದು, ಒಂದು ಶಾಶ್ವತ ಸಂಬಂಧವಾಗಿರುವುದರಿಂದ, ಜೀವನ ಸಂಗಾತಿಯನ್ನು (Life Partner) ಆಯ್ಕೆ ಮಾಡುವ ವಿಚಾರದಲ್ಲಿ, ಜೀವನದ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಸೂಕ್ತ ಸಂಗಾತಿಯ ಆಯ್ಕೆಯಲ್ಲಿ ಎಡವಿ ಜೀವನದಲ್ಲಿ ನೋವು ತಿಂದವರು ಹಲವರಿದ್ದಾರೆ. ಹಾಗಾಗಿ ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಆಲೋಚನೆ ಮಾಡಿ ಹೆಜ್ಜೆ ಇಡಬೇಕು. ಅದೇ ರೀತಿ ಆಚಾರ್ಯ ಚಾಣಕ್ಯರು (Chanakya) ಎಂತಹ ಜೀವನ ಸಂಗಾತಿಯನ್ನು ಆಯ್ಕೆ ಮಾಡಬೇಕು, ಎಂತಹ ಮಹಿಳೆಯರನ್ನು (Women) ಅಪ್ಪಿತಪ್ಪಿಯೂ ಮದುವೆಯಾಗಬಾರದು ಎಂಬುದಕ್ಕೆ ಗಂಡಸರಿಗೆ ಒಂದಷ್ಟು ಸಲಹೆಯನ್ನು ನೀಡಿದ್ದಾರೆ. ಹಾಗಾದರೆ ಪುರುಷರು ಎಂತಹ ಮಹಿಳೆಯರನ್ನು ಮದುವೆಯಾಗಬಾರದು ಎಂಬುದನ್ನು ನೋಡೋಣ ಬನ್ನಿ.
ಆಚಾರ್ಯ ಚಾಣಕ್ಯರ ಪ್ರಕಾರ, ಗಂಡಸರು ಎಂದಿಗೂ ಕೆಟ್ಟ ಕುಟುಂಬಕ್ಕೆ ಸೇರಿದ ಮಹಿಳೆಯನ್ನು ಮದುವೆಯಾಗಬಾರದಂತೆ. ಅವಳು ಸುಂದರವಾಗಿದ್ದರೂ ಅವಳ ಕುಟುಂಬ ಚೆನ್ನಾಗಿಲ್ಲದಿದ್ದರೆ, ಆಕೆಯನ್ನು ಎಂದಿಗೂ ಮದುವೆಯಾಗಬಾರದು. ಏಕೆಂದರೆ ಇದರಿಂದ ನಂತರದ ಜೀವನದಲ್ಲಿ ನೀವು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಯಾವ ಮಹಿಳೆ ಕುಟುಂಬ ಹಾಗೂ ಕುಟುಂಬ ಸದಸ್ಯರಿಗೆ ಗೌರವವನ್ನು ನೀಡುವುದಿಲ್ಲವೋ ಅಂತಹ ಮಹಿಳೆಯನ್ನು ಎಂದಿಗೂ ಮದುವೆಯಾಗಬಾರದು ಎಂದು ಚಾಣಕ್ಯ ಹೇಳುತ್ತಾರೆ. ಇಂತಹ ಮಹಿಳೆಯಿಂದ ಕುಟುಂಬ ಒಡೆಯುವ ಸಾಧ್ಯತೆಯೂ ಹೆಚ್ಚು.
ಒಬ್ಬ ಮಹಿಳೆ ನೋಡಲು ತುಂಬಾ ಸುಂದರವಾಗಿದ್ದರೂ, ಅವಳ ವರ್ತನೆ, ನಡವಳಿಕೆ ಚೆನ್ನಾಗಿಲ್ಲದಿದ್ದರೆ, ಅಂತಹ ಮಹಿಳೆಯನ್ನು ಸಹ ನೀವು ಮದುವೆಯಾಗಬಾರದು. ಆಚಾರ್ಯ ಚಾಣಕ್ಯರ ಪ್ರಕಾರ, ಅಂತಹ ಮಹಿಳೆ ಯಾವುದೇ ಸಮಯದಲ್ಲಿ ತನ್ನ ಗಂಡನನ್ನು ಬಿಟ್ಟು ಹೋಗಬಹುದು.
ಇದನ್ನೂ ಓದಿ: ಮದುವೆಯ ಬಳಿಕ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ; ದಾಂಪತ್ಯ ಜೀವನವೇ ಹಾಳಾಗಬಹುದು ಜೋಕೆ
ಸುಳ್ಳು ಹೇಳುವುದರಲ್ಲಿ ನಿಪುಣಳಾದ ಮಹಿಳೆಯನ್ನು ಎಂದಿಗೂ ಮದುವೆಯಾಗಬಾರದು ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಸುಳ್ಳು ಹೇಳುವ ಮಹಿಳೆಯರು ಮದುವೆಯ ನಂತರವೂ ಪತಿಯ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಅವರ ಜೀವನವನ್ನು ಹಾಳುಮಾಡಬಹುದು. ಇಷ್ಟೇ ಅಲ್ಲದೆ ಅಂತಹ ಮಹಿಳೆಯರು ಸುಳ್ಳು ಹೇಳುವ ಮೂಲಕ ತನ್ನ ಗಂಡನನ್ನು ಆತನ ಹೆತ್ತವರಿಂದ ದೂರವಿಡುವ ಕೆಲಸವನ್ನು ಸಹ ಮಾಡಬಹುದು. ಆದ್ದರಿಂದ ಸುಳ್ಳು ಹೇಳುವವರನ್ನು ಎಂದಿಗೂ ಮದುವೆಯಾಗಬಾರದಂತೆ.
ಚಾಣಕ್ಯರ ಪ್ರಕಾರ, ಯಾವಾಗಲೂ ಕಠಿಣ, ಚುಚ್ಚು ಮಾತುಗಳನ್ನಾಡುವ ಮಹಿಳೆಯನ್ನು ಮದುವೆಯಾಗಬಾರದು. ಏಕೆಂದರೆ ಮದುವೆಯ ನಂತರವೂ ಅಂತಹ ಮಹಿಳೆ ತನ್ನ ಗಂಡನನ್ನು ಮತ್ತು ಅವನ ಇಡೀ ಕುಟುಂಬವನ್ನು ತನ್ನ ಚುಚ್ಚು ಮಾತುಗಳಿಂದಲೇ ಅವಮಾನಿಸಬಹುದು. ಇಂತಹವರಿಂದ ಮನೆಯಲ್ಲಿ ಯಾವಾಗಲೂ ಜಗಳ ನಡೆಯುವ ಸಾಧ್ಯತೆ ಇರುತ್ತದೆ.
ಚಾಣಕ್ಯ ನೀತಿಯ ಪ್ರಕಾರ, ಒಬ್ಬ ಮಹಿಳೆ ಬಾಹ್ಯವಾಗಿ ಎಷ್ಟೇ ಸುಂದರವಾಗಿದ್ದರೂ, ಅವಳು ಆಂತರಿಕ ಸೌಂದರ್ಯವನ್ನು ಹೊಂದಿಲ್ಲದಿದ್ದರೆ ಅಥವಾ ಅವಳ ಆಲೋಚನೆಗಳು ಚೆನ್ನಾಗಿಲ್ಲದಿದ್ದರೆ, ನೀವು ಅವಳನ್ನು ಎಂದಿಗೂ ಮದುವೆಯಾಗಬಾರದು. ಹೌದು ಮಹಿಳೆಯ ದೇಹದ ಸೌಂದರ್ಯಕ್ಕೆ ಪ್ರಾಮುಖ್ಯತೆ ನೀಡಬಾರದು. ಒಬ್ಬ ಮಹಿಳೆ ದೈಹಿಕವಾಗಿ ಸುಂದರಿಯಾಗಿದ್ದರೂ, ಅವಳ ಮನಸ್ಸು ಶುದ್ಧವಾಗಿಲ್ಲದಿದ್ದರೆ, ಅಹಂಕಾರ ಅವಳಲ್ಲಿ ತುಂಬಿ ತುಳುಕುತ್ತಿದ್ದರೆ, ಅವಳು ತನ್ನ ಗಂಡನ ಮನೆ ಮತ್ತು ಗಂಡನ ಜೀವನವನ್ನೇ ಹಾಳು ಮಾಡಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ