
ಪುಕ್ಕಟ್ಟೆ ಏನಾದ್ರೂ ಸಿಗುತ್ತೆ ಅಂದ್ರೆ ಅದನ್ನು ಪಡೆಯಲು ಜನ ನಾಮುಂದು ತಾ ಮುಂದು ಅಂತ ಧಾವಿಸ್ತಾರೆ. ಈ ರೀತಿ ಉಚಿತವಾಗಿ ಪಡೆಯುವುದು ಮನಸ್ಸಿಗೆ ಖುಷಿಯನ್ನು ನೀಡಬಹುದು, ಆದ್ರೆ ಇದು ವ್ಯಕ್ತಿಯನ್ನು ಕ್ರಮೇಣ ದುರ್ಬಲಗೊಳಿಸುತ್ತದೆ ಎಂದು ಆಚಾರ್ಯ ಚಾಣಕ್ಯರು (Acharya Chanakya) ಎಚ್ಚರಿಕೆ ನೀಡಿದ್ದಾರೆ. ಉಚಿತವಾಗಿ ಏನಾದ್ರೂ ಸಿಗುತ್ತಿದೆ ಅಂದ್ರೆ ಅದನ್ನು ಪಡೆಯುವುದರಲ್ಲಿ ತಪ್ಪೇನಿದೆ ಎಂದು ಹಲವರು ಭಾವಿಸಬಹುದು ಆದ್ರೆ ಉಚಿತವಾಗಿ ಪಡೆಯುವ ಏನಾದರೂ ಸರಿ ಅದು ಮನುಷ್ಯನ ಸ್ವಾಭಿಮಾನಕ್ಕೆ ಹಾನಿಯುಂಟು ಮಾಡುತ್ತದೆ ಎಂದಿದ್ದಾರೆ. ಹಾಗಿದ್ರೆ ಉಚಿತವಾಗಿ ಲಭಿಸುವ ಸಂಗತಿಗಳು ಮನಷ್ಯನಿಗೆ ಯಾವೆಲ್ಲಾ ರೀತಿಯಲ್ಲಿ ಹಾನಿ ಮಾಡುತ್ತವೆ ಎಂಬುದನ್ನು ತಿಳಿಯೋಣ ಬನ್ನಿ.
ಕಠಿಣ ಪರಿಶ್ರಮದ ಅಭ್ಯಾಸ ಕೊನೆಗೊಳ್ಳುತ್ತದೆ: ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿಯು ಶ್ರಮವಿಲ್ಲದೆ ಏನನ್ನಾದರೂ ಪಡೆದಾಗ, ಅವನು ಕಷ್ಟಪಟ್ಟು ಕೆಲಸ ಮಾಡುವುದನ್ನು ಮರೆತುಬಿಡುತ್ತಾನೆ, ಪ್ರತಿಯೊಂದು ಸುಲಭವಾಗಿ ಖರ್ಚಿಲ್ಲದೆ ದಕ್ಕಬೇಕು ಎಂದು ಬಯಸುತ್ತಾನೆ. ಕಠಿಣ ಪರಿಶ್ರಮದ ಮೂಲಕ ಏನನ್ನಾದರೂ ಗಳಿಸಿದಾಗ ಮಾತ್ರ ಮನುಷ್ಯ ಬಲಶಾಲಿಯಾಗಲು ಸಾಧ್ಯ, ಅದೇ ಉಚಿತವಾಗಿ ಸಿಗುವ ಭಾಗ್ಯಗಳು ಆತನನ್ನು ಸೋಮಾರಿ ಮತ್ತು ದುರ್ಬಲನನ್ನಾಗಿ ಮಾಡುತ್ತವೆ.
ಸ್ವಾಭಿಮಾನಕ್ಕೆ ಹಾನಿ: ಚಾಣಕ್ಯ ನೀತಿಯ ಪ್ರಕಾರ, ನೀವು ಪದೇ ಪದೇ ಯಾವುದೇ ವಸ್ತು, ಸಂಗತಿಯನ್ನಾದರೂ ಉಚಿತವಾಗಿ ಸ್ವೀಕರಿಸಿದರೆ, ನಿಮ್ಮ ಸ್ವಾಭಿಮಾನ ಕ್ರಮೇಣ ಕುಸಿಯುತ್ತದೆ. ಪ್ರತಿಯೊಂದನ್ನೂ ಉಚಿತವಾಗಿ ಸಿಗಬೇಕೆಂದು ಬಯಸುವ ಜನರು ಇತರರನ್ನು ಅವಲಂಬಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತಾರೆ. ಅಂತಹ ವ್ಯಕ್ತಿಗಳು ಜೀವನದಲ್ಲಿ ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ನಿರಂತರವಾಗಿ ಇತರರಿಂದ ಬೆಂಬಲವನ್ನು ಬಯಸುತ್ತಾರೆ. ಕೊನೆಗೆ ಇದು ಅವರ ವ್ಯಕ್ತಿತ್ವವನ್ನೇ ದುರ್ಬಲಗೊಳಿಸುತ್ತದೆ, ಸ್ವಾಭಿಮಾನವನ್ನೇ ಕಸಿದುಕೊಳ್ಳುತ್ತದೆ.
ದುರಾಸೆಗೆ ಕಾರಣವಾಗುತ್ತದೆ: ಚಾಣಕ್ಯ ನೀತಿಯ ಪ್ರಕಾರ, ನೀವು ಪ್ರತಿಯೊಂದನ್ನೂ ಉಚಿತವಾಗಿ ಪಡೆಯಲು ಪ್ರಾರಂಭಿಸಿದಾಗ, ದುರಾಸೆ ನಿಮ್ಮೊಳಗೆ ಹುಟ್ಟುತ್ತದೆ. ನೀವು ಎಲ್ಲವನ್ನೂ ಉಚಿತವಾಗಿಯೇ ಸಿಗಬೇಕೆಂದು ಬಯಸುವ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತೀರಿ. ಯಾವುದೇ ಪ್ರಯತ್ನ, ಪರಿಶ್ರಮವಿಲ್ಲದೆ ಎಲ್ಲವೂ ಸಲುಭವಾಗಿ ದಕ್ಕಬೇಕು ಎಂದು ಬಯಸುತ್ತೀರಿ. ಚಾಣಕ್ಯರ ಪ್ರಕಾರ, ದುರಾಸೆಯು ವ್ಯಕ್ತಿಯ ದೊಡ್ಡ ಶತ್ರು. ದುರಾಸೆಯು ನಿಮ್ಮೊಳಗೆ ಬೆಳೆದಾಗ, ಅದು ವಂಚನೆ ಮತ್ತು ತಪ್ಪು ನಿರ್ಧಾರಗಳಿಗೆ ಕಾರಣವಾಗಬಹುದು.
ಇದನ್ನೂ ಓದಿ: ಮನುಷ್ಯನ ನೆಮ್ಮದಿ ಹಾಳಾಗಲು ಕಾರಣವೇ ಈ ಸಂಗತಿಗಳು
ಮೌಲ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ: ನೀವು ಎಲ್ಲವನ್ನೂ ಉಚಿತವಾಗಿ ಪಡೆಯಲು ಪ್ರಾರಂಭಿಸಿದಾಗ, ನೀವು ಮೌಲ್ಯವನ್ನು ಕಳೆದುಕೊಳ್ಳುತ್ತೀರಿ. ಕಷ್ಟಪಟ್ಟು ಸಂಪಾದಿಸಿದ ವಸ್ತುಗಳು ಮೌಲ್ಯಯುತವಾಗುತ್ತವೆ, ಅದೇ ಏನನ್ನಾದರೂ ಉಚಿತವಾಗಿ ಪಡೆದಾಗ ನೀವು ಅವುಗಳನ್ನು ಬೇಗನೆ ವ್ಯರ್ಥ ಮಾಡುತ್ತೀರಿ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಅಲ್ಲದೆ ಇದರಿಂದ ನಿಮ್ಮ ಮೌಲ್ಯವೂ ಕುಂಠಿತಗೊಳ್ಳುತ್ತದೆ.
ಯಶಸ್ಸಿನ ಹಾದಿಯಲ್ಲಿ ಅಡೆತಡೆಗಳು ಎದುರಾಗಬಹುದು: ಚಾಣಕ್ಯ ನೀತಿಯ ಪ್ರಕಾರ, ಪ್ರತಿಯೊಂದು ಉಚಿತವಾಗಿ ಸಿಗಬೇಕೆಂದು ಬಯಸುವವರು ಜೀವನದಲ್ಲಿ ಎಂದಿಗೂ ಪ್ರಗತಿ ಹೊಂದುವುದಿಲ್ಲ. ಅಂತಹ ಜನರಿಗೆ ಹೋರಾಟ ಮತ್ತು ಕಠಿಣ ಪರಿಶ್ರಮದ ಒಂದು ಚೂರು ಕಲ್ಪನೆಯೇ ಇರುವುದಿಲ್ಲ, ಹೋರಾಟದ ಸಂದರ್ಭ ಬಂದಾಗ ಅವರು ಅಂತಹ ಪರಿಸ್ಥಿತಿಯನ್ನು ನಿಭಾಯಿಸಲು ಸಹ ಸಾಧ್ಯವಾಗುವುದಿಲ್ಲ, ಕೊನೆಗೆ ಅವರು ಜೀವನದಲ್ಲಿ ಸೋತು ಬಿಡುತ್ತಾರೆ. ಅದೇ ಕಷ್ಟಪಟ್ಟು ದುಡಿಯುವ ವ್ಯಕ್ತಿಯು ಪ್ರತಿಯೊಂದು ಪರಿಸ್ಥಿತಿಯಲ್ಲೂ ತನ್ನನ್ನು ತಾನು ನಿಭಾಯಿಸಿಕೊಂಡು, ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ