Children’s Day 2025: ವಿದ್ಯಾರ್ಥಿಗಳೇ… ಮಕ್ಕಳ ದಿನಾಚರಣೆಗೆ ಈ ರೀತಿ ಭಾಷಣ ಮಾಡಿ

ಪ್ರತಿವರ್ಷ ನವೆಂಬರ್‌ 14 ರಂದು ಜವಾಹರಲಾಲ್‌ ನೆಹರು ಅವರ ಜನ್ಮ ದಿನದ ಪ್ರಯುಕ್ತ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗಾಗಿ ಹಲವಾರು ಸ್ಪರ್ಧೆ, ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಇನ್ನೂ ಮಕ್ಕಳಿಗಾಗಿ ಭಾಷಣ ಸ್ಪರ್ಧೆಗಳು ಕೂಡ ನಡೆಯುತ್ತವೆ. ವಿದ್ಯಾರ್ಥಿಗಳೇ… ಈ ಬಾರಿಯ ಮಕ್ಕಳ ದಿನಾಚರಣೆಗೆ ನೀವು ಕೂಡ ಭಾಷಣ ಮಾಡಬೇಕೆಂದುಕೊಂಡಿದ್ದೀರಾ, ಹಾಗಿದ್ದರೆ ನಿಮಗಾಗಿ ಇಲ್ಲಿವೆ ಸಲಹೆಗಳು.

Children’s Day 2025: ವಿದ್ಯಾರ್ಥಿಗಳೇ… ಮಕ್ಕಳ ದಿನಾಚರಣೆಗೆ ಈ ರೀತಿ ಭಾಷಣ ಮಾಡಿ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Nov 13, 2025 | 12:57 PM

ಭಾರತದಲ್ಲಿ ಪ್ರತಿವರ್ಷ ನವೆಂಬರ್‌ 14 ರಂದು ಮಕ್ಕಳ ದಿನಾಚರಣೆಯನ್ನು (Children’s Day)  ಆಚರಿಸಲಾಗುತ್ತದೆ. ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರು ಅವರ ಜನ್ಮ ಜಯಂತಿಯ ಅಂಗವಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನದಂದು ಶಾಲೆಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಮಕ್ಕಳಿಗಾಗಿ ಭಾಷಣ, ರಸಪ್ರಶ್ನೆ, ಚಿತ್ರಕಲೆ, ಹಾಡುಗಾರಿಕೆ, ನೃತ್ಯ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಬಹುಮಾನ ವಿತರಣೆಗಳನ್ನೂ ಮಾಡಲಾಗುತ್ತದೆ. ವಿದ್ಯಾರ್ಥಿಗಳೇ ಈ ಬಾರಿಯ ಮಕ್ಕಳ ದಿನಾಚರಣೆಗೆ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವ ಬಯಕೆ ನಿಮಗೂ ಇದ್ಯಾ, ಹಾಗಿದ್ರೆ ನಿಮ್ಮ ಭಾಷಣ ಹೀಗಿರಲಿ.

ಮಕ್ಕಳ ದಿನಾಚರಣೆಗೆ ಈ ರೀತಿ ಭಾಷಣ ಮಾಡಿ:

ವೇದಿಕೆಯ ಮೇಲಿರುವ ಗಣ್ಯರೇ, ಶಿಕ್ಷಕರೇ, ಬೋಧಕೇತರ ಸಿಬ್ಬಂದಿ ವರ್ಗದವರೇ ಹಾಗೂ ನನ್ನೆಲ್ಲಾ ಆತ್ಮೀಯ ಸ್ನೇಹಿತರೇ.. ನಿಮಗೆಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು. ಇಂದು ನಾವೆಲ್ಲರೂ  ಸ್ವತಂತ್ರ ಭಾರತದ ಮೊದಲ ಪ್ರಧಾನಿ ಪಂಡಿತ್‌ ಜವಾಹರಲಾಲ್‌ ನೆಹರೂ ಅವರ ಜನ್ಮ ಜಯಂತಿ ಆಚರಿಸಲು ಸೇರಿದ್ದೇವೆ.  ಮಕ್ಕಳು ರಾಷ್ಟ್ರದ ನಿಜವಾದ ಶಕ್ತಿ ಮತ್ತು ಸಮಾಜದ ಅಡಿಪಾಯ ಎಂದು ನಂಬಿದ್ದ ಚಾಚಾ ನೆಹರೂ ಅವರಿಗೆ ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ. ಇದೇ ಕಾರಣಕ್ಕೆ ಇವರ ಜನ್ಮ ದಿನವಾದ ನವೆಂಬರ್‌ 14 ರಂದು ದೇಶಾದ್ಯಂತ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಸ್ನೇಹಿತರೇ, ಚಾಚಾ ನೆಹರೂ ಅವರಿಗೆ ಮಕ್ಕಳು ಮಾತ್ರವಲ್ಲ ಭಾರತ ದೇಶದ ಮೇಲೂ ಅಪಾರ ಪ್ರೀತಿ ಮತ್ತು ಗೌರವವನ್ನು ಹೊಂದಿದ್ದವರು. ನಮ್ಮ ದೇಶವನ್ನು ಬ್ರಿಟೀಷರಿಂದ ಮುಕ್ತಗೊಳಿಸುವಲ್ಲಿ ಇವರ ಕೊಡುಗೆಯು ಸಹ ಅಪಾರ. ಇವರಲ್ಲಿರುವ ನಾಯಕತ್ವದ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡೇ ಇವರನ್ನು ಸ್ವತಂತ್ರ ಭಾರತದ ಮೊದಲು ಪ್ರಧಾನಿಯನ್ನಾಗಿ ಮಾಡಲಾಯಿತು. ಆಗಿನ ಕಷ್ಟದ ಸಂದರ್ಭದಲ್ಲಿಯೂ ದೇಶದ ಆಡಳಿತದ ಜವಾಬ್ದಾರಿಯನ್ನು ಯಶಸ್ವಿಯಾಗಿ ವಹಿಸಿಕೊಂಡರು. ಇಂತಹ ಮಹಾನ್‌ ನಾಯಕನನ್ನು ನೆನೆಯುವ ಸುದಿನ ಇಂದು.

ಮಕ್ಕಳನ್ನು ತುಂಬಾನೇ ಇಷ್ಟಪಡುತ್ತಿದ್ದ ಚಾಚಾ ನೆಹರೂ ಇಂದಿನ ಮಕ್ಕಳೇ ನಾಳಿನ ಭವಿಷ್ಯ, ನಾವು ಮಕ್ಕಳನ್ನು ಚೆನ್ನಾಗಿ ನೋಡಿಕೊಂಡಷ್ಟು, ನಾಳಿನ ಉತ್ತಮ ರಾಷ್ಟ್ರ ನಿರ್ಮಾಣವಾಗುತ್ತದೆ ಎಂದು ನಂಬಿದ್ದರು. ಅವರು “Tomorrow is yours” ಎಂದು ಮಕ್ಕಳಿಗೆ ಯಾವಾಗಲೂ ಹೇಳುತ್ತಿದ್ದರು. ಭಾರತದ ಮಕ್ಕಳಿಗೆ ಅಗತ್ಯ ಶಿಕ್ಷಣ ಕೊಡಿಸಬೇಕೆಂಬುದು ಅವರ ಧ್ಯೇಯವಾಗಿತ್ತು. ಮಕ್ಕಳ ಮೇಲಿನ ಈ  ಪ್ರೀತಿಗಾಗಿ ಅವರು ತಮ್ಮ ಜನ್ಮ ದಿನವನ್ನು ಮಕ್ಕಳ ದಿನವಾಗಿ ಆಚರಿಸಲು ಹೇಳಿದ್ದರು. ಅವರ ಮಾತಿನಂತೆ ಇಂದಿಗೂ ಇವರ ಜನ್ಮ ಜಯಂತಿಯಂದು  ಮಕ್ಕಳ ದಿನವನ್ನು ಆಚರಿಸಲಾಗುತ್ತಿದೆ. ಈ ದಿನದಂದು ಚಾಚಾ ನೆಹರೂ ಅವರನ್ನು ನೆನೆಯುವುದರ ಜೊತೆಗೆ ಮಕ್ಕಳ ಹಕ್ಕುಗಳು, ಆರೈಕೆ ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವಂತಹ ಕಾರ್ಯಗಳು ನಡೆಯುತ್ತದೆ.

ಇದನ್ನೂ ಓದಿ: ಬದುಕಿನಿಂದ ಮರೆಯಾಗದಿರಲಿ ದಯೆ, ಮಾನವೀಯ ಗುಣ

ನೆಹರು ಅವರ ಬಯಕೆಯಂತೆ ಸರ್ಕಾರ ಮಕ್ಕಳ ಶ್ರೇಯೋಭಿವೃದ್ಧಿ, ಶಿಕ್ಷಣಕ್ಕೆ ಹಲವಾರು ಯೋಜನೆಗಳನ್ನು ರೂಪಿಸಿವೆ. ಬಾಲ ಕಾರ್ಮಿಕ ಪದ್ಧತಿಯನ್ನು ನಿಷೇಧಿಸಿವೆ,  ಹೀಗಿದ್ದರೂ ಕೂಡ ಇಂದಿಗೂ ಅದೆಷ್ಟೋ ಮಕ್ಕಳು ಶಿಕ್ಷಣ, ಅವರ ಹಕ್ಕುಗಳಿಂದ ವಂಚಿತರಾಗಿಯೇ ಉಳಿದಿದ್ದಾರೆ. ಆ ನಮ್ಮ ಸ್ನೇಹಿತರ ಓದುವ ಕನಸಿಗೆ, ಅವರ ಭವಿಷ್ಯಕ್ಕೆ ಬೆಂಬಲವಾಗಿ ನಿಂತು, ಪ್ರತಿ ಮಕ್ಕಳಿಗೂ ಕೂಡ ಶಿಕ್ಷಣ ದೊರೆಯುವಂತೆ ಮಾಡುವ ಮೂಲಕ ನೆಹರೂ ಚಾಚಾ ಅವರ ಕನಸನ್ನು ನನಸು ಮಾಡಲು ಶ್ರಮಿಸೋಣ ಎನ್ನುತ್ತಾ  ನನ್ನ ಈ ಪುಟ್ಟ ಭಾಷಣವನ್ನು ಮುಗಿಸುತ್ತಿದ್ದೇನೆ. ಅವಕಾಶಕ್ಕಾಗಿ ಎಲ್ಲರಿಗೂ ಧನ್ಯವಾದಗಳು.

ಈ ರೀತಿಯಾಗಿ ಶಿಕ್ಷಕರ ದಿನಾಚರಣೆಗೆ ಭಾಷಣ ಮಾಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ