Benefits Of Milk: ಪ್ರತಿನಿತ್ಯ ಒಂದು ಲೋಟ ಹಾಲು ಕುಡಿಯುವುದರಿಂದ ಲಭಿಸುವ ಆರೋಗ್ಯ ಪ್ರಯೋಜನಗಳು
ಹಾಲು ಪೋಷಕಾಂಶಗಳ ಉಗ್ರಾಣವಾಗಿದೆ. ಹಾಗಾಗಿ ಇದರ ಆರೋಗ್ಯ ಪ್ರಯೋಜನಗಳ ದೃಷ್ಟಿಯಿಂದ ಹೆಚ್ಚಾಗಿ ಪೋಷಕರು ಪ್ರತಿನಿತ್ಯ ತಮ್ಮ ಮಕ್ಕಳಿಗೆ ಒಂದು ಲೋಟ ಹಾಲನ್ನು ನೀಡುತ್ತಾರೆ. ಮಕ್ಕಳಿಗೆ ಮಾತ್ರವಲ್ಲದೆ ಮಹಿಳೆಯರು ಹಾಗೂ ಎಲ್ಲಾ ವಯಸ್ಸಿನವರಿಗೂ ಹಾಲು ಅತ್ಯಂತ ಪ್ರಯೋಜನಕಾರಿಯಾಗಿದೆ. ಪ್ರತಿನಿತ್ಯ ಒಂದು ಲೋಟ ಹಾಲುನ್ನು ಕುಡಿಯುವ ಮೂಲಕ ನೀವು ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಹಾಲು ಸಂಪೂರ್ಣ ಆಹಾರವಾಗಿದ್ದು, ಇದರಲ್ಲಿ ಕಂಡುಬರುವ ಜೀವಸತ್ವಗಳು ಮತ್ತು ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಕ್ಯಾಲೋರಿಗಳು, ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಡಿ, ವಿಟಮಿನ್ ಬಿ 12 ಮತ್ತು ಪೊಟ್ಯಾಸಿಯಂ ಹಾಲಿನಲ್ಲಿ ಹೇರಳವಾಗಿ ಕಂಡುಬರುತ್ತದೆ. ಇದು ಅನೇಕ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಹಾಲು ಮಕ್ಕಳಿಗಷ್ಟೇ ಅಲ್ಲ ಎಲ್ಲಾ ವಯಸ್ಸಿನವರಿಗೂ ಪ್ರಯೋಜನಕಾರಿ ಎನ್ನುತ್ತಾರೆ ಆರೋಗ್ಯ ತಜ್ಞರು. ಹಾಲು ಸಂಪೂರ್ಣ ಆಹಾರವಾಗಿರುವುದರಿಂದ ಪ್ರತಿನಿತ್ಯ ಒಂದು ಲೋಟ ಹಾಲು ಕುಡಿಯಬೇಕೆಂದು ತಜ್ಞರು ಶಿಫಾರಸು ಮಾಡುತ್ತಾರೆ. ಏಕೆಂದರೆ ಇದು ದೇಹಕ್ಕೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುವ ಅನೇಕ ಪೋಷಕಾಂಶಗಳನ್ನು ಹೊಂದಿದೆ. ಹಾಗಾದರೆ ಹಾಲು ದೇಹಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದನ್ನು ತಿಳಿಯೋಣ.
ಹಾಲು ದೇಹಕ್ಕೆ ಎಷ್ಟು ಪ್ರಯೋಜನಕಾರಿ?
ಮೂಳೆಯ ಆರೋಗ್ಯ ಸುಧಾರಿಸುತ್ತದೆ:
ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಹಾಲಿನಲ್ಲಿ ಹೇರಳವಾಗಿ ಕಂಡುಬರುತ್ತದೆ. ಮೂಳೆಗಳ ಆರೋಗ್ಯಕ್ಕೆ ಈ ಎರಡೂ ಪೋಷಕಾಂಶಗಳು ಬಹಳ ಮುಖ್ಯ. ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ವಿಟಮಿನ್ ಡಿ ದೇಹಕ್ಕೆ ಸರಬರಾಜು ಆಗುವಂತಹ ಆಹಾರದಿಂದ ಕ್ಯಾಲ್ಸಿಯಂ ನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಪ್ರತಿನಿತ್ಯ ಹಾಲು ಕುಡಿಯುವುದರಿಂದ ಮೂಳೆಗಳು ಆರೋಗ್ಯಕರ ಮತ್ತು ಬಲವಾಗಿರುತ್ತದೆ. ಅಲ್ಲದೆ ಹಾಲು ಕ್ಯಾಲ್ಸಿಯಂ ಕೊರತೆಯನ್ನು ನೀಗಿಸುವುದರ ಜೊತೆಗೆ ಅಸ್ಟಿಯೊಪೊರೋಸಿಸ್ ನಂತಹ ಮೂಳೆ ರೋಗಗಳನ್ನು ಸಹ ತಡೆಯಲು ಸಹಕಾರಿಯಾಗಿದೆ.
ತೂಕ ಕಡಿಮೆ ಮಾಡಲು ಸಹಾಯಕವಾಗಿದೆ:
ಹಾಲು ತೂಕ ಇಳಿಕೆಗೂ ಸಹಕಾರಿ. ಹಾಲಿನಲ್ಲಿ ಕಂಡುಬರುವ ಕಾರ್ಬೋಹೈಡ್ರೇಟ್ ಗಳು, ಪ್ರೋಟೀನ್ ಮತ್ತು ಕೊಬ್ಬಿನ ಸಮತೋಲಿತ ಸಂಯೋಜನೆಯು ತೂಕ ನಷ್ಟಕ್ಕೆ ಪರಿಣಾಮಕಾರಿಯಾಗಿದೆ. ಹಾಲಿನಲ್ಲಿರುವ ಕಾರ್ಬೋಹೈಡ್ರೇಟ್ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಮತ್ತು ದೇಹವನ್ನು ಸಕ್ರಿಯವಾಗಿಡಲು ಸಹಾಯ ಮಾಡುತ್ತದೆ. ಮಾತ್ರವಲ್ಲದೆ ಹಾಲು ಕುಡಿಯುವುದರಿಂದ ಹಸಿವು ಕಡಿಮೆಯಾಗುತ್ತದೆ. ಹಾಗೂ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಆದ್ದರಿಂದ ತೂಕ ಇಳಿಸಿಕೊಳ್ಳಲು ಬಯಸುವವರು ಪ್ರತಿದಿನ ಒಂದು ಲೋಟ ಕಡಿಮೆ ಕೊಬ್ಬಿನಾಂಶವಿರುವ ಹಾಲನ್ನು ಕುಡಿಯಬೇಕು.
ಮಧುಮೇಹ ಅಪಾಯವನ್ನು ಕಡಿಮೆ ಮಾಡುತ್ತದೆ:
ಹಾಲು ಕುಡಿಯುವುದರಿಂದ ಟೈಪ್-2 ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು. ಸುಮಾರು 6 ಲಕ್ಷ ಜನರ ಮೇಲೆ ನಡೆಸಿದ ಅಧ್ಯಯನವೊಂದರಲ್ಲಿ ಡೈರಿ ಉತ್ಪನ್ನಗಳು ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಕಾರಿ ಎಂದು ತಿಳಿದುಬಂದಿದೆ. ಹಾಗಾಗಿ ಮಧುಮೇಹ ರೋಗಿಗಳು ಹಾಲು ಕುಡಿಯುವುದು ಉತ್ತಮ.
ಇದನ್ನೂ ಓದಿ: ರಾತ್ರಿಯ ಊಟದ ನಂತರ ಮಾಡುವ ಈ ಕೆಲವು ತಪ್ಪುಗಳು ತೂಕ ಹೆಚ್ಚಾಗಲು ಕಾರಣವಾಗಬಹುದು
ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ:
ಕೆನೆರಹಿತ ಅಥವಾ ಕಡಿಮೆ ಕೊಬ್ಬಿನ ಹಾಲು ಆರೋಗ್ಯಕರ ಕೊಬ್ಬಿನ ಮೂಲವಾಗಿದೆ. ಹಾಲಿನಲ್ಲಿ ಕಂಡುಬರುವ ಪೊಟ್ಯಾಸಿಯಮ್ ಪಾರ್ಶ್ವವಾಯು, ಹೃದ್ರೋಗ ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಅಧಿಕ ಕೊಬ್ಬಿನ ಹಾಲು ಸ್ಯಾಚುರೇಟೆಡ್ ಆಗಿರುವುದರಿಂದ ಇದು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಹೃದ್ರೋಗಿಗಳು ಕಡಿಮೆ ಕೊಬ್ಬಿನ ಹಾಲನ್ನು ಸೇವನೆ ಮಾಡುವುದು ಉತ್ತಮ.
ಮೆದುಳಿನ ಆರೋಗ್ಯಕ್ಕೆ ಉತ್ತಮ:
ಹಾಲು ಮೆದುಳಿನ ಆರೋಗ್ಯಕ್ಕೆ ಉತ್ತಮವೆಂದು ಪರಿಗಣಿಸಲಾಗಿದೆ. ಹಾಲಿನ ಸೇವನೆಯು ಅಲ್ಝೈಮರ್ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅನೇಕ ಸಂಶೋಧನೆಗಳು ಹೇಳಿವೆ. ಕೆನೆ ರಹಿತ ಡೈರಿ ಉತ್ಪನ್ನಗಳು, ಮಜ್ಜಿಗೆ ಮೆದುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಆದ್ದರಿಂದ ಬೆಳಗಿನ ಉಪಹಾರದಲ್ಲಿ ಓಟ್ಸ್ ಜೊತೆಗೆ ಸ್ವಲ್ಪ ಹಾಲನ್ನು ಬೆರೆಸಿ ಸೇವಿಸುವು ಮೂಲಕ ಉತ್ತಮ ಆರೋಗ್ಯ ಪ್ರಯೋಜನವನ್ನು ಪಡೆಯಬಹುದು. ಅಲ್ಲದೆ ಹಾಲಿನಲ್ಲಿ ಕಂಡುಬರುರುವ ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ವಿಟಮಿನ್ ಬಿ 12 ಯುವಕರು ಮತ್ತು ವಯಸ್ಸಾದವರ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ಚರ್ಮದ ಆರೋಗ್ಯಕ್ಕೂ ಪ್ರಯೋಜನಕಾರಿ:
ಪ್ರತಿನಿತ್ಯ ಹಾಲು ಸೇವಿಸುವುದರಿಂದ ನಯವಾದ ಮತ್ತು ಆರೋಗ್ಯಕರ ಚರ್ಮವನ್ನು ಪಡೆಯಬಹುದು. ವಿಟಮಿನ್ ಬಿ 12 ಹಾಲಿನಲ್ಲಿ ಕಂಡುಬರುತ್ತದೆ, ಇದು ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಹಾಲಿನಲ್ಲಿ ಕಂಡುಬರುವ ವಿಟಮಿನ್ ಎ ಪ್ರಮಾಣವು ಅನೇಕ ಚರ್ಮ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹಾಗೂ ನಿಯಮಿತವಾಗಿ ಹಾಲನ್ನು ಸೇವಿಸುವ ಮೂಲಕ ಚರ್ಮದಲ್ಲಿ ಕಾಣಿಸಿಕೊಳ್ಳುವ ವಯಸ್ಸಾಗುವಿಕೆಯ ಲಕ್ಷಣವನ್ನು ತಡೆಗಟ್ಟಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 9:48 am, Wed, 20 September 23