ನಿಮ್ಮ ಹಾಸಿಗೆ ಮೇಲೊಂದು ಟೈಮ್ ಬಾಂಬ್; ಮೊಬೈಲ್ ಪಕ್ಕದಲ್ಲಿಟ್ಟುಕೊಂಡು ನಿದ್ರೆ ಮಾಡುತ್ತೀರಾ?

ಮೊದಲೆಲ್ಲ ಬೆಡ್ ರೂಂನಲ್ಲಿ ಬೆಳಗ್ಗೆ ಸರಿಯಾದ ಸಮಯಕ್ಕೆ ನಿಮ್ಮನ್ನು ಎಬ್ಬಿಸಲೆಂದು ಅಲಾರಾಂ ಇಟ್ಟುಕೊಂಡು ಮಲಗುತ್ತಿದ್ದರು. ನಿದ್ರೆ ಮಾಡುವ ಮುನ್ನ ಓದಲೆಂದು ಪುಸ್ತಕಗಳನ್ನು ಕೂಡ ಇಟ್ಟುಕೊಂಡಿರುತ್ತಿದ್ದರು. ಆದರೆ, ಈಗ ಅದೆಲ್ಲದರ ಜಾಗವನ್ನು ಸ್ಮಾರ್ಟ್‌ಫೋನ್‌ಗಳು ಅಥವಾ ಮೊಬೈಲ್​ಗಳು ಆವರಿಸಿಕೊಂಡಿವೆ. ನಮ್ಮೆಲ್ಲರ ಜೀವನದಲ್ಲಿ ಮೊಬೈಲ್ ಅವಿಭಾಜ್ಯ ಅಂಗವಾಗಿದೆ. ಅಲಾರಾಂ ಬದಲು ಮೊಬೈಲ್​ ಇಟ್ಟುಕೊಳ್ಳುವ ಅಭ್ಯಾಸ ಶುರುವಾಗಿ ಇದೀಗ ಮೊಬೈಲ್ ನೋಡದೆ ಇದ್ದರೆ ನಿದ್ರೆಯೇ ಬಾರದು ಎಂಬಷ್ಟರ ಮಟ್ಟಿಗೆ ಮೊಬೈಲ್ ನಮ್ಮ ಜೀವನವನ್ನು ಆವರಿಸಿಕೊಂಡಿದೆ. ನೀವು ಕೂಡ ಮಲಗುವಾಗ ದಿಂಬಿನಡಿ ಮೊಬೈಲ್ ಇಟ್ಟುಕೊಳ್ಳುತ್ತೀರಾ? ನಿದ್ರೆ ಮಾಡುವ ಮುನ್ನ ಮೊಬೈಲ್ ನೋಡುತ್ತಾ ಮಲಗುತ್ತೀರಾ? ಹಾಗಾದರೆ, ಈ ಸುದ್ದಿ ಓದಿ.

ನಿಮ್ಮ ಹಾಸಿಗೆ ಮೇಲೊಂದು ಟೈಮ್ ಬಾಂಬ್; ಮೊಬೈಲ್ ಪಕ್ಕದಲ್ಲಿಟ್ಟುಕೊಂಡು ನಿದ್ರೆ ಮಾಡುತ್ತೀರಾ?
Sleeping With Mobile
Image Credit source: Getty Image

Updated on: Jun 02, 2026 | 5:00 PM

ನವದೆಹಲಿ, ಜೂನ್ 2: ಮೊಬೈಲ್ ಫೋನ್ ಅನ್ನು ತಲೆಯ ಕೆಳಗೆ ಅಥವಾ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವ ಅಭ್ಯಾಸ ಇತ್ತೀಚಿನ ದಿನಗಳಲ್ಲಿ ಅನೇಕರಲ್ಲಿದೆ. ಆದರೆ, ಇದು ನಿಮ್ಮ ಆರೋಗ್ಯ, ಸುರಕ್ಷತೆ ಮತ್ತು ನಿದ್ರೆಯ (Sleep) ಗುಣಮಟ್ಟದ ಮೇಲೆ ಗಂಭೀರವಾದ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ ಎಂಬುದು ನಿಮಗೆ ಗೊತ್ತಾ? ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಜನರ ದೈನಂದಿನ ಜೀವನವು ಸ್ಮಾರ್ಟ್‌ಫೋನ್‌ಗಳ ಸುತ್ತ ಸುತ್ತುತ್ತಿದೆ. ಮೊಬೈಲ್ ಫೋನ್‌ಗಳು ರಾತ್ರಿ ಮಲಗುವ ಮುನ್ನ ನಾವು ಮುಟ್ಟುವ ಕೊನೆಯ ವಸ್ತು ಮತ್ತು ಬೆಳಿಗ್ಗೆ ಎದ್ದಾಗ ನಾವು ನೋಡುವ ಮೊದಲ ವಸ್ತುವಾಗಿ ಬಿಟ್ಟಿದೆ.

ಮೊಬೈಲ್ ಫೋನ್‌ಗಳನ್ನು ದಿಂಬಿನ ಕೆಳಗೆ ಅಥವಾ ಹಾಸಿಗೆಯ ಪಕ್ಕದಲ್ಲಿ ಇಟ್ಟುಕೊಂಡು ಮಲಗುವುದು ಅನೇಕರಿಗೆ ಅಭ್ಯಾಸವಾಗಿ ಹೋಗಿದೆ. ಈ ಬಗ್ಗೆ ಮನಶ್ಶಾಸ್ತ್ರಜ್ಞರು ಮತ್ತು ನಿದ್ರೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿಂದೆ, ಜನರು ತಮ್ಮ ಹಾಸಿಗೆಗಳ ಪಕ್ಕದಲ್ಲಿ ಅಲಾರಾಂ ಗಡಿಯಾರಗಳು, ಪುಸ್ತಕಗಳು, ರೇಡಿಯೋಗಳು ಮತ್ತು ಕ್ಯಾಲೆಂಡರ್‌ಗಳಂತಹ ವಸ್ತುಗಳನ್ನು ಇಟ್ಟುಕೊಳ್ಳುತ್ತಿದ್ದರು. ಆದರೆ, ಈಗ ಆ ಎಲ್ಲಾ ವಸ್ತುಗಳ ಅಗತ್ಯವನ್ನು ಸ್ಮಾರ್ಟ್‌ಫೋನ್‌ ಒಂದೇ ಪೂರೈಸುತ್ತಿದೆ. ಮನರಂಜನೆ, ಸಂಗೀತ, ಹವಾಮಾನ ಮತ್ತು ಪ್ರಮುಖ ರಿಮೈಂಡರ್​​ ಎಲ್ಲವೂ ಒಂದೇ ಪರದೆಯಲ್ಲಿ ಲಭ್ಯವಿರುವುದರಿಂದ ಬೆಡ್ ರೂಂನಲ್ಲಿ ಮೊಬೈಲ್ ಅತ್ಯಂತ ಅವಶ್ಯಕವಾದ ವಸ್ತುವಾಗಿಬಿಟ್ಟಿದೆ.

ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಮಾಡುವ ಈ ತಪ್ಪುಗಳು ನಿಮ್ಮ ನಿದ್ರೆಗೆ ಭಂಗ ತರಬಹುದು ಎಚ್ಚರ!

ಸಾಮಾಜಿಕ ಮಾಧ್ಯಮಗಳನ್ನು ಬ್ರೌಸ್ ಮಾಡುವುದು, ಮೆಸೇಜುಗಳಿಗೆ ಉತ್ತರಿಸುವುದು ಮತ್ತು ರಾತ್ರಿ ಹಾಸಿಗೆಯಲ್ಲಿ ಮಲಗಿರುವಾಗ ಶಾರ್ಟ್ ವೀಡಿಯೊಗಳನ್ನು ನೋಡುವುದು ಮುಂತಾದ ಚಟುವಟಿಕೆಗಳು ಅನೇಕರಿಗೆ ದಿನಚರಿಯಾಗಿ ಮಾರ್ಪಟ್ಟಿವೆ. ನಿಮ್ಮ ಮೊಬೈಲ್ ಅಡಿಕ್ಷನ್ ನಿಮ್ಮ ನಿದ್ರೆಯ ಸಮಯವನ್ನು ರಹಸ್ಯವಾಗಿ ಕದಿಯುತ್ತಿದೆ ಎಂಬ ವಿಷಯವೇ ನಿಮಗೆ ತಿಳಿಯುತ್ತಿಲ್ಲ.

ಮಲಗಿದಾಗ ಮೊಬೈಲ್ ಫೋನ್ ಬಳಸುವುದರಿಂದ ಆಗುವ ಪರಿಣಾಮಗಳೇನು?

ನೀಲಿ ಬೆಳಕಿನ ಎಫೆಕ್ಟ್:

ಸ್ಮಾರ್ಟ್‌ಫೋನ್ ಸ್ಕ್ರೀನ್​ನಿಂದ ಹೊರಸೂಸುವ ನೀಲಿ ಬೆಳಕು ನಮ್ಮ ದೇಹದ ನಿದ್ರೆಯ ಸೈಕಲ್ ಅನ್ನು ನಿಯಂತ್ರಿಸುವ ಹಾರ್ಮೋನ್ ಮೆಲಟೋನಿನ್ ಉತ್ಪಾದನೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ. ಈ ಕಾರಣಕ್ಕಾಗಿ ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡುವುದು ಉತ್ತಮ.

ಮೊಬೈಲ್ ಬ್ಲಾಸ್ಟ್ ಆದೀತು:

ಸ್ಮಾರ್ಟ್‌ಫೋನ್‌ಗಳು ಕೆಲಸ ಮಾಡುವಾಗ ಅಥವಾ ಬ್ಯಾಕ್‌ಗ್ರೌಂಡ್‌ನಲ್ಲಿ ಆ್ಯಪ್‌ಗಳು ಅಪ್‌ಡೇಟ್ ಆಗುವಾಗ ಬಿಸಿಯಾಗುತ್ತವೆ. ದಿಂಬು ಮತ್ತು ಹಾಸಿಗೆಗಳು ಶಾಖವನ್ನು ಹಿಡಿದಿಟ್ಟುಕೊಳ್ಳುವ ಗುಣ ಹೊಂದಿವೆ. ದಿಂಬಿನ ಕೆಳಗೆ ಫೋನ್ ಇಟ್ಟಾಗ ಅದರಿಂದ ಹೊರಬರುವ ಶಾಖಕ್ಕೆ ಗಾಳಿಯಾಡದೆ, ಫೋನ್ ವಿಪರೀತ ಬಿಸಿಯಾಗುತ್ತದೆ. ಅದರಲ್ಲೂ ಫೋನ್‌ಗೆ ಚಾರ್ಜರ್ ಹಾಕಿ ದಿಂಬಿನ ಕೆಳಗೆ ಇಟ್ಟರೆ, ಬ್ಯಾಟರಿ ಸ್ಫೋಟಗೊಳ್ಳುವ ಅಥವಾ ದಿಂಬಿಗೆ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಶೇ. 90ರಷ್ಟು ಹೆಚ್ಚಿರುತ್ತದೆ. ಹೀಗಾಗಿ, ಮೊಬೈಲನ್ನು ರಾತ್ರಿ ನಮ್ಮಿಂದ ದೂರ ಇಡುವುದು ಉತ್ತಮ.

ಇದನ್ನೂ ಓದಿ: ಒಳ್ಳೆಯ ನಿದ್ರೆ ಬೇಕಂದ್ರೆ ರಾತ್ರಿ ಹೊತ್ತು ಈ ಆಹಾರಗಳನ್ನು ಸೇವನೆ ಮಾಡುವುದನ್ನು ನಿಲ್ಲಿಸಿ

ಮೆಲಟೋನಿನ್ ಕೊರತೆ:

ರಾತ್ರಿ ಫೋನ್‌ನಲ್ಲಿ ಬರುವ ನೋಟಿಫಿಕೇಶನ್ ಲೈಟ್ ಕಣ್ಣಿನ ಮೇಲೆ ಬಿದ್ದಾಗ, ದೇಹದಲ್ಲಿ ನಿದ್ರೆ ತರಿಸುವ ‘ಮೆಲಟೋನಿನ್’ ಎಂಬ ಹಾರ್ಮೋನ್ ಉತ್ಪತ್ತಿ ಕಡಿಮೆಯಾಗುತ್ತದೆ. ಇದರಿಂದ ನಿದ್ರೆ ಕೆಡುತ್ತದೆ. ರಾತ್ರಿ ಮಧ್ಯೆ ಎಚ್ಚರವಾದಾಗಲೆಲ್ಲಾ ಸುಲಭವಾಗಿ ಕೈಗೆ ಸಿಗುವ ಫೋನ್ ತೆಗೆದು ಸೋಶಿಯಲ್ ಮೀಡಿಯಾ ಸ್ಕ್ರಾಲ್ ಮಾಡುವ ಚಟ ಹೆಚ್ಚಾಗುತ್ತದೆ. ಇದರಿಂದ ಬೆಳಗ್ಗೆ ಎದ್ದಾಗ ತಲೆನೋವು, ಆಲಸ್ಯ ಮತ್ತು ದಣಿವು ಉಂಟಾಗುತ್ತದೆ.

ವಿಕಿರಣಗಳ ಪ್ರಭಾವ:

ಮೊಬೈಲ್ ಫೋನ್‌ಗಳು ಸಿಗ್ನಲ್ ಪಡೆಯಲು ನಿರಂತರವಾಗಿ ರೇಡಿಯೋ ತರಂಗಗಳನ್ನು ಹೊರಸೂಸುತ್ತಿರುತ್ತವೆ. ನೀವು ಫೋನ್ ಅನ್ನು ದಿಂಬಿನ ಕೆಳಗೆ ಇಟ್ಟುಕೊಂಡು 6ರಿಂದ 8 ಗಂಟೆಗಳ ಕಾಲ ಮಲಗಿದಾಗ ಈ ವಿಕಿರಣಗಳು ನೇರವಾಗಿ ನಿಮ್ಮ ಮೆದುಳಿನ ಮೇಲೆ ಪ್ರಭಾವ ಬೀರುತ್ತವೆ. ಇದು ದೀರ್ಘಕಾಲದ ತಲೆನೋವು, ನೆನಪಿನ ಶಕ್ತಿ ಕುಂದುವಿಕೆ ಮತ್ತು ಕಿರಿಕಿರಿಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಹಲವು ಸಂಶೋಧನೆಗಳು ಎಚ್ಚರಿಸಿವೆ.

ಮೊಬೈಲ್ ಬಳಸುವುದೇ ಆದರೆ ಏನು ಮಾಡಬೇಕು?:

  • ಮಲಗುವಾಗ ಮೊಬೈಲ್ ಫೋನ್ ಅನ್ನು ನಿಮ್ಮ ಹಾಸಿಗೆಯಿಂದ ಕನಿಷ್ಠ 3ರಿಂದ 4 ಅಡಿ ದೂರದಲ್ಲಿರುವ ಟೇಬಲ್ ಅಥವಾ ನೈಟ್‌ಸ್ಟ್ಯಾಂಡ್ ಮೇಲೆ ಇಡಿ.
  • ಒಂದು ವೇಳೆ ಫೋನ್ ಅನ್ನು ಪಕ್ಕದಲ್ಲೇ ಇಡಬೇಕಾದ ಅನಿವಾರ್ಯತೆ ಇದ್ದರೆ, ‘Flight Mode’ ಆನ್ ಮಾಡಿ. ಇದರಿಂದ ರೇಡಿಯೇಶನ್ ಮತ್ತು ಫೋನ್ ಬಿಸಿಯಾಗುವುದು ಸಂಪೂರ್ಣವಾಗಿ ಕಡಿಮೆಯಾಗುತ್ತದೆ.
  • ಮೊಬೈಲ್ ಅನ್ನು ಎಂದಿಗೂ ಹಾಸಿಗೆ ಅಥವಾ ಸೋಫಾ ಮೇಲೆ ಚಾರ್ಜ್ ಮಾಡಬೇಡಿ. ಮರದ ಟೇಬಲ್ ಅಥವಾ ನೆಲದ ಮೇಲೆ ಇಟ್ಟು ಚಾರ್ಜ್ ಮಾಡಿ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us