North Karnataka Special Food: ಸಂಜೆ ಕಾಫಿ ಟೀ ಜೊತೆಗೆ ಗಿರ್ಮಿಟ್ ಸವಿದರೆ ಮಜಾನೇ ಬೇರೆ, ಸುಲಭ ರೆಸಿಪಿ
ಉತ್ತರ ಕರ್ನಾಟಕದ ಜನರ ಆಹಾರ ಪದ್ಧತಿ ಸ್ವಲ್ಪ ಭಿನ್ನ. ಖಾರವನ್ನೇ ಇಷ್ಟ ಪಡುವ ಇಲ್ಲಿನ ಜನರು ತಯಾರಿಸುವ ಅಡುಗೆಗಳು ವಿಭಿನ್ನವಾಗಿರುತ್ತದೆ. ಈ ಭಾಗದಲ್ಲಿ ಮಂಡಕ್ಕಿ ಗಿರ್ಮಿಟ್ ಸಿಕ್ಕಾಪಟ್ಟೆ ಫೇಮಸ್. ಮಳೆಗಾಲದಲ್ಲಿ ಬೆಳಗ್ಗಿನ ಉಪಹಾರ ಅಥವಾ ಸಂಜೆ ಕಾಫಿ ಟೀ ಜೊತೆಗೆ ಸೇವಿಸಿದರೆ ಅದರ ರುಚಿಯೇ ಬೇರೆ. ಹಾಗಾದ್ರೆ ಈ ಮಂಡಕ್ಕಿ ಗಿರ್ಮಿಟ್ ಮಾಡುವ ರೆಸಿಪಿಯ ಬಗೆಗಿನ ಸಂಪೂರ್ಣ ಮಾಹಿತಿಯು ಇಲ್ಲಿದೆ.
ಮಳೆಗಾಲದಲ್ಲಿ ಒಂದೊಂದು ಪ್ರದೇಶದಲ್ಲಿ ವಿವಿಧ ಬಗೆಯ ತಿಂಡಿ ತಿನಿಸುಗಳು ಜನಪ್ರಿಯತೆಯನ್ನು ಪಡೆದುಕೊಂಡಿರುತ್ತದೆ. ಈ ಮಳೆ ಆರಂಭವಾಯಿತೆಂದರೆ ಮಲೆನಾಡಿಗರ ಹಾಗೂ ಕರಾವಳಿಗರ ಅಡುಗೆಯ ಮನೆಯಲ್ಲಿ ತಿನಿಸುಗಳ ಘಮ ಮೂಗಿಗೆ ಬಡಿಯುತ್ತದೆ. ಆದರೆ ಉತ್ತರ ಕರ್ನಾಟಕದಲ್ಲಿ ಅಷ್ಟೇನು ವಿಶೇಷವಾಗಿಲ್ಲದಿದ್ದರೂ ಇಲ್ಲಿನ ಜನರು ಖಾರದ ತಿನಿಸುಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ. ಸುರಿಯುವ ಮಳೆಯ ನಡುವೆ ನಾಲಿಗೆಗೆ ರುಚಿ ನೀಡುವ ಗಿರ್ಮಿಟ್ ಮಾಡಿ ಸವಿಯಲು ಇಷ್ಟ ಪಡುತ್ತಾರೆ. ಈ ರೆಸಿಪಿ ಮಾಡೋದು ಸುಲಭವಾಗಿದ್ದು, ಈ ಖಾದ್ಯದ ರುಚಿಯನ್ನೊಮ್ಮೆ ಸವಿದರೆ ಮತ್ತೆ ಬೇಡ ಎನ್ನಲು ಮನಸ್ಸೇ ಬರುವುದಿಲ್ಲ.
ಮಂಡಕ್ಕಿ ಗಿರ್ಮಿಟ್ ಮಾಡಲು ಬೇಕಾಗುವ ಸಾಮಗ್ರಿಗಳು
ಮಂಡಕ್ಕಿ, ಒಂದೆರಡು ಈರುಳ್ಳಿ, ಒಂದು ಟೊಮೇಟೊ, ಎರಡು ಚಮಚ ಹುರಿಗಡಲೆ ಪುಡಿ, ಹಸಿ ಮೆಣಸಿನಕಾಯಿ, ಚಿಟಿಕೆಯಷ್ಟು ಅರಿಶಿನ ಪುಡಿ, ಜೀರಿಗೆ, ಬೆಲ್ಲ, ಸಾಸಿವೆ, ಕ್ಯಾರೆಟ್, ನಿಂಬೆರಸ, ಸೇವ್, ಮೂರರಿಂದ ನಾಲ್ಕು ಚಮಚ ಹುಣಸೆ ರಸ, ಎಣ್ಣೆ ಕೊತ್ತಂಬರಿ ಸೊಪ್ಪು, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು.
ಇದನ್ನೂ ಓದಿ: ಇಂದು ವಿಶ್ವ ಎಮೋಜಿ ದಿನ: ಈ ಎಮೋಜಿಯನ್ನು ರಚಿಸಿದವರು ಯಾರು ಗೊತ್ತಾ?
ಗಿರ್ಮಿಟ್ ಮಾಡುವ ವಿಧಾನ
* ಮೊದಲಿಗೆ ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾಗುತ್ತಿದ್ದಂತೆ ಒಗ್ಗರಣೆಗೆ ಸಾಸಿವೆ, ಜೀರಿಗೆ ಹಾಕಿ, ಕತ್ತರಿಸಿಟ್ಟ ಹಸಿ ಮೆಣಸಿನಕಾಯಿ, ಕರಿಬೇವು ಹಾಕಿ ಚೆನ್ನಾಗಿ ಹುರಿದುಕೊಳ್ಳಿ.
* ಆ ಬಳಿಕ ಅರಿಶಿನ ಪುಡಿ, ಕತ್ತರಿಸಿಟ್ಟ ಈರುಳ್ಳಿಯನ್ನು ಹಾಕಿ ಒಂದೆರಡು ನಿಮಿಷಗಳ ಕಾಲ ಹುರಿದುಕೊಳ್ಳಿ.
* ನಂತರದಲ್ಲಿ ಅದಕ್ಕೆ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪುಸೇರಿಸಿಕೊಂಡರೆ ಗಿರ್ಮಿಟ್ ಮಸಾಲೆ ಸಿದ್ಧವಾಗುತ್ತದೆ.
* ಇನ್ನೊಂದು ಪಾತ್ರೆಯಲ್ಲಿ ಮಂಡಕ್ಕಿ ಹಾಕಿ ತಯಾರಿಸಿದ ಮಸಾಲಾವನ್ನು ಸೇರಿಸಿಕೊಳ್ಳಿ.
* ತದನಂತರದಲ್ಲಿ ಸಣ್ಣಗೆ ಕತ್ತರಿಸಿದ ಟೊಮೆಟೊ, ಈರುಳ್ಳಿ, ಹುರಿಗಡಲೆ ಪುಡಿ ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
* ಅದಕ್ಕೆ ಈಗಾಗಲೇ ತುರಿದಿಟ್ಟ ಕ್ಯಾರೆಟ್, ಸೇವ್ ಉದುರಿಸಿ, ನಿಂಬೆಯನ್ನು ಹಿಂಡಿದರೆ ಗಿರ್ಮಿಟ್ ಸವಿಯಲು ಸಿದ್ಧ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ