ಉತ್ತರ ಕರ್ನಾಟಕ ಸ್ಪೆಷಲ್ ಜೋಳದ ಖಿಚಿಡಿ, ಆರೋಗ್ಯಕ್ಕೂ ಒಳ್ಳೆಯದು, ಮಾಡೋದು ಹೇಗೆ?
ಉತ್ತರ ಕರ್ನಾಟಕದಲ್ಲಿ ಜೋಳದ ರೊಟ್ಟಿ ಸಿಕ್ಕಾಪಟ್ಟೆ ಫೇಮಸ್. ಅಲ್ಲಿನ ಜನರಿಗೆ ರೊಟ್ಟಿ ತಿನ್ನದೇ ಊಟವು ಪೂರ್ಣವಾಗುವುದೇ ಇಲ್ಲ. ಗಟ್ಟಿಮುಟ್ಟಾದ ಆಹಾರವಾಗಿರುವ ಈ ಜೋಳದ ರೊಟ್ಟಿ ರುಚಿಸುವುದಿಲ್ಲ ಎನ್ನುವವರು ಜೋಳದ ಖಿಚಿಡಿಯನ್ನು ಮನೆಯಲ್ಲಿಯೇ ರುಚಿಕರವಾಗಿ ಮಾಡಬಹುದು. ಹಾಗಾದ್ರೆ ಈ ರೆಸಿಪಿಯನ್ನು ಮಾಡೋದು ಹೇಗೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಉತ್ತರ ಕರ್ನಾಟಕದ ಜನರ ಪ್ರಮುಖ ಆಹಾರವೇ ಈ ಜೋಳದ ರೊಟ್ಟಿ. ಖಡಕ್ ರೊಟ್ಟಿ ಜೊತೆಗೆ ಚಟ್ನಿ ಪುಡಿ, ಎಣ್ಣೆಯಿದ್ದರೆ ಅದಕ್ಕಿಂತ ಬೆಸ್ಟ್ ಆಹಾರ ಮತ್ತೊಂದಿಲ್ಲ. ಹೀಗಾಗಿ ಅಲ್ಲಿಯವರ ಆರೋಗ್ಯದ ರಹಸ್ಯವೇ ಈ ರೊಟ್ಟಿ ಎನ್ನಬಹುದು. ಆದರೆ ಈ ಜೋಳದಿಂದ ರೊಟ್ಟಿ ಮಾತ್ರವಲ್ಲದೇ ವಿವಿಧ ರೆಸಿಪಿಯನ್ನು ಮಾಡಬಹುದು.ಆರೋಗ್ಯ ವರ್ಧಕವಾಗಿ ಜೋಳದಿಂದ ಉತ್ತರ ಕರ್ನಾಟಕದ ಸ್ಪೆಷಲ್ ಖಿಚಿಡಿ ಮಾಡಿ ಸವಿಯಬಹುದು. ಖಿಚಿಡಿಯೂ ವಿಶೇಷ ತಿನಿಸಾಗಿದ್ದು, ಮಾಡಲು ಸುಲಭವಾಗಿದ್ದು ಬೆಳಗ್ಗಿನ ಉಪಹಾರಕ್ಕೆ ಇದು ಉತ್ತಮ ತಿಂಡಿಯಾಗಿದೆ.
ಜೋಳದ ಖಿಚಡಿ ಮಾಡಲು ಸಾಮಗ್ರಿಗಳು
* ಒಂದು ಕಪ್ ಜೋಳ
* ಕಾಲು ಕಪ್ ಹೆಸರು ಬೇಳೆ
* ಈರುಳ್ಳಿ
* ಕೊತ್ತಂಬರಿ ಸೊಪ್ಪು
* ತೆಂಗಿನ ಕಾಯಿ ತುರಿ
* ರುಚಿಗೆ ತಕ್ಕಷ್ಟು ಉಪ್ಪು
* ನೀರು
ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು
* ಅಡುಗೆ ಎಣ್ಣೆ
* ಸಾಸಿವೆ
* ಉದ್ದಿನ ಬೇಳೆ
* ಕರಿಬೇವು
* ಒಣ ಮೆಣಸಿನ ಕಾಯಿ
* ಇಂಗು
ಇದನ್ನೂ ಓದಿ: ತಲೆ ಕೂದಲಿಗೆ ಎಣ್ಣೆ ಯಾವಾಗ ಹಚ್ಚಬೇಕು? ಸ್ನಾನದ ಮೊದಲು ಅಥವಾ ನಂತರವೋ !?
ಮಾಡುವ ವಿಧಾನ
* ಮೊದಲಿಗೆ ಜೋಳವನ್ನು ರಾತ್ರಿಯಿಡಿ ನೀರಿನಲ್ಲಿ ನೆನೆಸಿಡಬೇಕು
* ಬೆಳಿಗ್ಗೆ ಕುಕ್ಕರಿನಲ್ಲಿ ಜೋಳವನ್ನು ಐದಾರು ಸೀಟಿ ಕೂಗುವವರೆಗೂ ಬೇಯಿಸಿಕೊಳ್ಳಬೇಕು.
* ಆ ಬಳಿಕ ಹೆಸರು ಬೇಳೆಯನ್ನು ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಬೇಕು.
* ಈರುಳ್ಳಿಯನ್ನು ಚಿಕ್ಕ ಚೂರುಗಳಾಗಿ ಕತ್ತರಿಸಿಟ್ಟುಕೊಳ್ಳಬೇಕು.
* ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ, ಒಗ್ಗರಣೆ ಬೇಕಾದ ಮೇಲೆ ಹೇಳಿರುವ ಎಲ್ಲಾ ಪದಾರ್ಥಗಳನ್ನು ಸೇರಿಸಿ ಒಗ್ಗರಣೆ ಮಾಡಿಕೊಳ್ಳಿ.
* ಇದಕ್ಕೆ ಕತ್ತರಿಸಿಟ್ಟ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೂ ಫ್ರೈ ಮಾಡಿಕೊಳ್ಳಿ.
* ನಂತರ ಬೇಯಿಸಿಟ್ಟ ಜೋಳ, ಹುರಿದಿಟ್ಟ ಹೆಸರುಬೇಳೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ನೀರು ಹಾಕಿ ಬೇಯಿಸಿಕೊಳ್ಳಿ.
* ಕೊನೆಗೆ ಇದಕ್ಕೆ ತೆಂಗಿನ ತುರಿ, ಕತ್ತರಿಸಿ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿ ರುಚಿಯಾದ ಜೋಳದ ಖಿಚಿಡಿ ಸವಿಯಲು ಸಿದ್ಧ.
ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ