ಬಾಯಲ್ಲಿಟ್ಟರೆ ಕರಗುವ ರಾಗಿ ಹಲ್ವಾ ಮಾಡೋದು ಹೇಗೆ? ಇಲ್ಲಿದೆ ರೆಸಿಪಿ
ರಾಗಿ ತಿಂದವನಿಗೆ ರೋಗವಿಲ್ಲ ಎನ್ನುವ ಮಾತಿದೆ. ಅತಿ ಹೆಚ್ಚು ಪೋಷಕಾಂಶಗಳಿಂದ ಸಮೃದ್ಧವಾಗಿರುವ ರಾಗಿಯನ್ನು ಸೇವಿಸುವ ಮೂಲಕ ದೇಹವನ್ನು ತಂಪಾಗಿರುವಂತೆ ನೋಡಿಕೊಳ್ಳಬಹುದು. ರಾಗಿಯಿಂದ ತಯಾರು ಮಾಡಬಹುದಾದ ಹಲವಾರು ಖಾದ್ಯಗಳು ನಿಮ್ಮ ದೇಹವನ್ನು ತಂಪಾಗಿಸುತ್ತದೆ. ಸ್ವಾಧಿಷ್ಟಭರಿತವಾದ ಈ ರಾಗಿ ಹಲ್ವಾವನ್ನು ಸುಲಭವಾಗಿ ಮಾಡಬಹುದಾಗಿದ್ದು, ಹಾಗಾದ್ರೆ ಈ ರೆಸಿಪಿ ಮಾಡೋದು ಹೇಗೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಆರೋಗ್ಯಕ್ಕೆ ಹಿತಕರವಾಗಿರುವ ರಾಗಿ ಕರ್ನಾಟಕದ ಕೆಲ ಜಿಲ್ಲೆಯ ಪ್ರಮುಖ ಆಹಾರವಾಗಿದೆ. ಈ ಸಿರಿಧಾನ್ಯದಲ್ಲಿ ಸಾಕಷ್ಟು ಪೌಷ್ಟಿಕಾಂಶ, ನಾರಿನಂಶ, ವಿಟಮಿನ್ಗಳು ಮತ್ತು ಖನಿಜಾಂಶಗಳು ಇದ್ದು ಬಾಯಿಗೆ ರುಚಿಕರ ಹಾಗೂ ದೇಹಕ್ಕೆ ತಂಪಾಗಿದೆ. ಇದರಿಂದ ರಾಗಿ ಮುದ್ದೆ, ದೋಸೆ, ಮಣ್ಣಿ, ರೊಟ್ಟಿ ಸೇರಿದಂತೆ ವಿವಿಧ ಖಾದ್ಯಗಳನ್ನು ಮಾಡಿ ಸವಿಯುತ್ತಾರೆ. ಆದರೆ, ಮನೆಯಲ್ಲಿ ರಾಗಿ ಹಿಟ್ಟಿದ್ದರೆ ಸುಲಭವಾಗಿ ರಾಗಿ ಹಲ್ವಾ ಮಾಡಿ ಬಾಯಿಯನ್ನು ಸಿಹಿಯಾಗಿಸಬಹುದು. ಫಟಾ ಫಟ್ ಎಂದು ಮಾಡಬಹುದಾದ ಈ ರೆಸಿಪಿಗೆ ಕೆಲವೇ ಕೆಲವು ಐಟಂಗಳಿದ್ದರೆ ಸಾಕು.
ರಾಗಿ ಹಲ್ವಾ ಬೇಕಾಗುವ ಸಾಮಾಗ್ರಿಗಳು
* ಒಂದು ಕಪ್ ರಾಗಿ ಹಿಟ್ಟು
* ನಾಲ್ಕರಿಂದ ಐದು ಚಮಚ ತುಪ್ಪ
* ಒಂದು ಕಪ್ ಬಿಸಿ ಹಾಲು
* ಒಂದು ಕಪ್ ಬೆಲ್ಲ
* ಏಲಕ್ಕಿ ಪುಡಿ
* ಬಾದಾಮಿ
* ಗೋಡಂಬಿ
* ಒಣದ್ರಾಕ್ಷಿ
ಇದನ್ನೂ ಓದಿ: ಉತ್ತರ ಕರ್ನಾಟಕ ಸ್ಪೆಷಲ್ ಜೋಳದ ಖಿಚಿಡಿ, ಆರೋಗ್ಯಕ್ಕೂ ಒಳ್ಳೆಯದು, ಮಾಡೋದು ಹೇಗೆ?
ರಾಗಿ ಹಲ್ವಾ ಮಾಡುವ ವಿಧಾನ
- ಮೊದಲು ಬಾಣಲೆಗೆ ಮೂರು ಚಮಚ ತುಪ್ಪ ಹಾಕಿ ಬಿಸಿಯಾಗುತ್ತಿದ್ದಂತೆ ಒಂದು ಕಪ್ ರಾಗಿ ಹಿಟ್ಟು ಸೇರಿಸಿ ಚೆನ್ನಾಗಿ ಹುರಿಯಿರಿ.
- ಗ್ಯಾಸ್ ಆಫ್ ಮಾಡಿ ಬಿಸಿ ಹಾಲನ್ನು ಮಿಶ್ರಣಕ್ಕೆ ಸೇರಿಸಿ, ಉಂಡೆಗಳಿಲ್ಲದಂತೆ ಕಲಸಿಕೊಳ್ಳಿ.
- ನಂತರದಲ್ಲಿ ಗ್ಯಾಸ್ ಆನ್ ಮಾಡಿ ಕಡಿಮೆ ಉರಿಯಲ್ಲಿ ಬೇಯಿಸಿಕೊಳ್ಳಿ. ಹಿಟ್ಟು ಸ್ವಲ್ಪ ಗಟ್ಟಿ ಆಗುವವರೆಗೆ ಕೈಯಾಡಿಸುತ್ತ ಇರಿ.
- ಈಗಾಗಲೇ ಕರಗಿಸಿಟ್ಟ ಬೆಲ್ಲ ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿ ಎರಡರಿಂದ ಮೂರು ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಬೇಕಿದ್ದರೆ ತುಪ್ಪವನ್ನು ಸೇರಿಸಬಹುದು.
- ತಳ ಬಿಡುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ ಮೂರು ನಾಲ್ಕು ನಿಮಿಷಗಳ ಕಾಲ ಬಿಡಿ.
- ಆ ಬಳಿಕ ಹಲ್ವಾಗೆ ಬಾದಾಮಿ, ಗೋಡಂಬಿ ಮತ್ತು ಒಣದ್ರಾಕ್ಷಿಗಳಿಂದ ಅಲಂಕರಿಸಿ ರುಚಿಕರವಾದ ರಾಗಿ ಹಲ್ವಾ ಸವಿಯಲು ಸಿದ್ಧ.
ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ