ಪತ್ರೊಡೆ
ಮಳೆಗಾಲ ಆರಂಭವಾಯಿತೆಂದರೆ ಕರಾವಳಿ ಹಾಗೂ ಮಲೆನಾಡಿನಲ್ಲಿ ಮನೆಯ ಸುತ್ತಮುತ್ತಲು ಸಿಗುವ ಸೊಪ್ಪು ತರಕಾರಿಗಳಿಂದ ವಿಶೇಷ ಖಾದ್ಯವನ್ನು ಮಾಡಿ ಸವಿಯುತ್ತಾರೆ. ಈ ಸಮಯದಲ್ಲಿ ಕೆಸುವಿನ ಎಲೆಯ ವಿವಿಧ ಖಾದ್ಯಗಳು ಈ ಪ್ರಾಂತ್ಯದಲ್ಲಿ ಸಿಕ್ಕಾಪಟ್ಟೆ ಫೇಮಸ್. ಸುರಿಯುವ ಮಳೆಯ ನಡುವೆ ಪತ್ರೊಡೆ ಮಾಡಿದರೆ ಸವಿದರೆ ಬೇರೆ ಯಾವ ತಿನಿಸು ಇದಕ್ಕೆ ಸರಿಸಾಟಿಯಾಗುವುದಿಲ್ಲ. ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಈ ತಿನಿಸನ್ನು ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ.
ಪತ್ರೊಡೆ ಮಾಡಲು ಬೇಕಾಗುವ ಸಾಮಾಗ್ರಿಗಳು
ಕೆಸುವಿನ ಎಲೆ, ಒಂದು ಚಮಚ ಜೀರಿಗೆ, ಮೂರು ಚಮಚ ಕೊತ್ತಂಬರಿ ಬೀಜ, ಒಂದು ಚಮಚ ಜೀರಿಗೆ, ಒಂದು ಚಿಟಿಕೆಯಷ್ಟು ಇಂಗು, ಒಂದು ಕಪ್ ಅಕ್ಕಿ, ಮುಕ್ಕಾಲು ಕಪ್ ತೊಗರಿಬೇಳೆ, ಅರ್ಧ ಕಪ್ ಕಡಲೆಬೇಳೆ, ಒಣಮೆಣಸು (ಘಾಟಿ ಮೆಣಸು), ಹುಣಸೆ ಹಣ್ಣು, ಬೆಲ್ಲ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.
ಇದನ್ನೂ ಓದಿ; ನಿಧಾನಗೊಳ್ಳುತ್ತಿದೆ ಭೂಮಿಯ ಒಳಪದರದ ತಿರುಗುವಿಕೆಯ ವೇಗ, ಇದರಿಂದ ಏನು ಪರಿಣಾಮ? ಅಧ್ಯಯನ ಹೇಳಿದ್ದೇನು?
ಪತ್ರೊಡೆ ಮಾಡುವ ವಿಧಾನ
- ಮೊದಲಿಗೆ ಅಕ್ಕಿ, ತೊಗರಿಬೇಳೆ, ಕಡಲೆಬೇಳೆ, ಜೀರಿಗೆ ಮತ್ತು ಕೊತ್ತಂಬರಿಯನ್ನು ಒಂದು ಪಾತ್ರೆಗೆ ಹಾಕಿ ನೀರಿನಲ್ಲಿ ಮೂರು ಗಂಟೆಗಳ ಕಾಲ ನೆನಸಿಟ್ಟು, ಆ ಬಳಿಕ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಬೇಕು.
- ಈಗಾಗಲೇ ನೀರಿನಲ್ಲಿ ನೆನೆಸಿಟ್ಟ ಹುಣಸೆಹಣ್ಣು, ಒಣಮೆಣಸು (ಘಾಟಿ ಮೆಣಸು) ಹಾಗೂ ಬೆಲ್ಲವನ್ನು ಚೆನ್ನಾಗಿ ರುಬ್ಬಿಕೊಳ್ಳಬೇಕು.
- ಈಗಾಗಲೇ ರುಬ್ಬಿದ ಹಿಟ್ಟಿಗೆ ಈ ಮಿಶ್ರಣವನ್ನು ಸೇರಿಸಿಚೆನ್ನಾಗಿ ಬೆರೆಸಿಕೊಳ್ಳಬೇಕು. ಇದಕ್ಕೆ ಚಿಟಿಕೆಯಷ್ಟು ಇಂಗು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಶ್ರಣ ಮಾಡಿಕೊಳ್ಳಿ.
- ಈಗಾಗಲೇ ತೊಳೆದಿಟ್ಟ ಕೆಸುವಿನ ಎಲೆಗಳನ್ನು ಒಂದೊಂದಾಗಿ ತೆಗೆದುಕೊಂಡು ಎಲೆಯ ಮುಂಭಾಗ ಮತ್ತು ಹಿಂಭಾಗದಲ್ಲಿ ಈ ಹಿಟ್ಟಿನ ಮಿಶ್ರಣವನ್ನು ಹಚ್ಚಿಕೊಳ್ಳಿ.
- ಐದಾರು ಎಲೆಗಳಿಗೆ ಹಚ್ಚಿದ ಬಳಿಕ, ದೊಡ್ಡ ಎಲೆಯ ಮೇಲೆ ಒಂದೊಂದಾಗಿ ಸಣ್ಣ ಎಲೆಗಳನ್ನು ಇಟ್ಟು, ವೃತ್ತಾಕಾರದಲ್ಲಿ ಸುತ್ತಿಕೊಳ್ಳಿ. ಹೀಗೆ ಎಲ್ಲಾ ಎಲೆಗಳಿಗೆ ಹಿಟ್ಟನ್ನು ಹಚ್ಚಿ ರೋಲ್ ಮಾಡಿ.
- ನಂತರದಲ್ಲಿ ಇಡ್ಲಿ ಪಾತ್ರೆಯಲ್ಲಿ ಈ ರೋಲ್ ಗಳನ್ನು ಇಟ್ಟು ಹಬೆಯಲ್ಲಿ ಬೇಯಿಸಿಕೊಳ್ಳಬೇಕು.
- ಬೆಂದ ಬಳಿಕ ಇದನ್ನು ವೃತ್ತಾಕಾರವಾಗಿ ಚಾಕುವಿನಿಂದ ಕತ್ತರಿಸಿಕೊಳ್ಳಿ. ಕಟ್ ಮಾಡಿದ ತುಂಡುಗಳನ್ನು ಬಾಣಲೆಗೆ ಎಣ್ಣೆ ಹಾಕಿ ಕರಿದರೆ ರುಚಿಕರವಾದ ಪತ್ರೊಡೆ ಸವಿಯಲು ಸಿದ್ಧ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ