Health Tips: ಎಂದಾದರೂ ಪೇರಳೆ ಎಲೆಯ ಚಹಾ ಕುಡಿದಿದ್ದೀರಾ? ಪ್ರಯೋಜನಗಳೇನು ಗೊತ್ತಾ?

| Updated By: ಅಕ್ಷತಾ ವರ್ಕಾಡಿ

Updated on: Jan 12, 2024 | 5:40 PM

ಪೇರಳೆ ಎಲೆಯನ್ನು ಸಾಂಪ್ರದಾಯಿಕವಾಗಿ ಜ್ವರ ಮತ್ತು ಉರಿಯೂತಕ್ಕೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ, ಆದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಮಧುಮೇಹಕ್ಕೆ ಪೇರಳೆ ಎಲೆಯ ಚಹಾವನ್ನು ಹೇಗೆ ಬಳಸುವುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Health Tips: ಎಂದಾದರೂ ಪೇರಳೆ ಎಲೆಯ ಚಹಾ ಕುಡಿದಿದ್ದೀರಾ? ಪ್ರಯೋಜನಗಳೇನು ಗೊತ್ತಾ?
guava leaf tea
Image Credit source: Pinterest
Follow us on

ಪೇರಳೆಯು ಚಳಿಗಾಲದಲ್ಲಿ ನೀವು ಆನಂದಿಸಲೇಬೇಕಾದ ಪರಿಪೂರ್ಣ ಕಾಲೋಚಿತ ಹಣ್ಣಾಗಿದೆ. ಪೇರಳೆ ಹಣ್ಣು ಮಾತ್ರವಲ್ಲ ಅದರ ಎಲೆಯೂ ಚಿಕಿತ್ಸಕ ಪ್ರಯೋಜನಗಳನ್ನು ಹೊಂದಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಪೇರಳೆ ಎಲೆಯ ಚಹಾವನ್ನು ಕುಡಿಯುವುದರಿಂದ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸಬಹುದು ಎಂದು ನಿಮಗೆ ತಿಳಿದಿದೆಯಾ? ಏಕೆಂದರೆ ಪೇರಳೆ ಮರದ ಎಲೆಗಳು ಫ್ಲೇವನಾಯ್ಡ್ಗಳು, ಟ್ಯಾನಿನ್ಗಳು ಮತ್ತು ಪಾಲಿಫಿನಾಲ್ಗಳಂತಹ ರಾಸಾಯನಿಕಗಳನ್ನು ಹೊಂದಿರುತ್ತವೆ, ಅವು ಮಧುಮೇಹ ವಿರೋಧಿ ಗುಣಲಕ್ಷಣಗಳನ್ನು ಹೊಂದಿವೆ. ಆದರೆ ಇದನ್ನು ಸೇವನೆ ಮಾಡುವುದು ಎಲ್ಲರಿಗೂ ಒಳ್ಳೆಯದೇ? ಮಧುಮೇಹ ಇರುವವರು ಪೇರಳೆ ಎಲೆಯ ಚಹಾ ಕುಡಿಯುವ ಬಗ್ಗೆ ತಜ್ಞರ ಅಭಿಪ್ರಾಯವೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಪೇರಳೆ ಎಲೆಯ ಚಹಾವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಹೇಗೆ ಸಹಾಯ ಮಾಡುತ್ತದೆ?

ಫುಡ್ಸ್ ಜನರಲ್ ನಲ್ಲಿ ಪ್ರಕಟವಾದ ಅಧ್ಯಯನವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಸೂಚಿಸುತ್ತದೆ. ನ್ಯೂಟ್ರಿಷನ್ ಮತ್ತು ಮೆಟಬಾಲಿಸಂ ಜರ್ನಲ್ ನಲ್ಲಿ ಪ್ರಕಟವಾದ ಮತ್ತೊಂದು ಅಧ್ಯಯನವು ಪೇರಳೆ ಎಲೆಯ ಚಹಾವು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಕಂಡು ಹಿಡಿದಿದೆ. ಆದರೆ ಮಧುಮೇಹ ಹೊಂದಿರುವ ವ್ಯಕ್ತಿಗಳು ಪ್ರಾಥಮಿಕ ಚಿಕಿತ್ಸೆಯಾಗಿ, ಪೇರಳೆ ಎಲೆಯ ಚಹಾವನ್ನು ಸೇವಿಸುವ ಮೊದಲು ತಮ್ಮ ಆರೋಗ್ಯ ತಜ್ಞರನ್ನು ಸಂಪರ್ಕಿಸಬೇಕು.

ಪೇರಳೆ ಎಲೆಯಿಂದ ಮಾಡಿದ ಚಹಾ ಕುಡಿಯುವುದರಿಂದ ಸಿಗುವ ಪ್ರಯೋಜನಗಳೇನು?

ಪೇರಳೆ ಎಲೆಯ ಚಹಾವು ವಿವಿಧ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಪೌಷ್ಟಿಕ ತಜ್ಞೆ ದೀಪ್ತಿ ಖತುಜಾ ಈ ಬಗ್ಗೆ ವಿವರಿಸಿರುವ ಎಲ್ಲಾ ಮಾಹಿತಿ ಇಲ್ಲಿದೆ.

  • ರಕ್ತದಲ್ಲಿನ ಸಕ್ಕರೆ ಮಟ್ಟದ ನಿಯಂತ್ರಣ: ಪೇರಳೆ ಎಲೆಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
  • ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ: ಇದು ಕಾರ್ಬೋಹೈಡ್ರೇಟ್ ಗಳನ್ನು ಸಿಹಿ ಅಂಶವಾಗಿ ಪರಿವರ್ತಿಸುವುದನ್ನು ತಡೆಯುವ ಮೂಲಕ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
  • ಜೀರ್ಣಕಾರಿ ಆರೋಗ್ಯವನ್ನು ಉತ್ತೇಜಿಸುತ್ತದೆ: ಪೇರಳೆ ಎಲೆಯ ಚಹಾವು ಅತಿಸಾರ ವಿರೋಧಿ ಪರಿಣಾಮಗಳನ್ನು ಹೊಂದಿದ್ದು ಜೀರ್ಣಕಾರಿ ಆರೋಗ್ಯವನ್ನು ಉತ್ತೇಜಿಸುತ್ತದೆ
  • ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು: ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಇದು ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಸಹಾಯ ಮಾಡುತ್ತದೆ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
  • ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಈ ಚಹಾದಲ್ಲಿ ವಿಟಮಿನ್ ಸಿ ಇದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅಗತ್ಯವಾದ ಪೋಷಕಾಂಶವಾಗಿದೆ.

ಇದನ್ನೂ ಓದಿ: ಅಯೋಧ್ಯೆಯಲ್ಲಿ ಪ್ರಸಾದ ತಯಾರಿಸುವ ಈ ಬಾಣಸಿಗನಿಂದ 12 ವಿಶ್ವ ದಾಖಲೆ

ಪೇರಳೆ ಎಲೆಯ ಚಹಾ ತಯಾರಿಸುವುದು ಹೇಗೆ?

ಬೇಕಾಗುವ ಸಾಮಗ್ರಿಗಳು:

  • ಪೇರಳೆ ಎಲೆಗಳು
  • 1/2 ಟೀ ಸ್ಪೂನ್ ಸಾಮಾನ್ಯ ಚಹಾ ಎಲೆಗಳು ಅಥವಾ ಚಹಾ ಪುಡಿ
  • 1 1/2 ಕಪ್ ನೀರು
  • ಸಿಹಿಕಾರಕವಾಗಿ ಜೇನುತುಪ್ಪ, ಬೆಲ್ಲ, ಅಥವಾ ಕಂದು ಸಕ್ಕರೆ ಬಳಸಬಹುದು.

ಮಾಡುವ ವಿಧಾನ:

  1. 5-10 ತಾಜಾ ಪೇರಳೆ ಎಲೆಗಳನ್ನು ತೆಗೆದುಕೊಂಡು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ.
  2. ಒಂದು ಪಾತ್ರೆಯಲ್ಲಿ ಒಂದೂವರೆ ಕಪ್ ನೀರನ್ನು ಹಾಕಿ ಮಧ್ಯಮ ಶಾಖದಲ್ಲಿ ಎರಡು ನಿಮಿಷಗಳ ಕಾಲ ಕುದಿಸಿ.
  3. ನಂತರ ಸ್ವಚ್ಛಗೊಳಿಸಿದ ಪೇರಳೆ ಎಲೆಗಳನ್ನು ಸೇರಿಸಿ ಐದು ನಿಮಿಷಗಳ ಕಾಲ ಕುದಿಸಿ.
  4. ಬಣ್ಣ ಮತ್ತು ಪರಿಮಳ ಬರುವುದಕ್ಕಾಗಿ 1/2 ಟೀ ಸ್ಪೂನ್ ಸಾಮಾನ್ಯ ಚಹಾ ಎಲೆ ಅಥವಾ ಚಹಾ ಪುಡಿಯನ್ನು ಸೇರಿಸಿ.
  5. ಹತ್ತು ನಿಮಿಷಗಳ ಕುದಿಸಿದ ನಂತರ, ನೀರನ್ನು ಸೋಸಿಕೊಳ್ಳಿ.
  6. ಅಂತಿಮವಾಗಿ, ಬೆಲ್ಲ ಅಥವಾ ಜೇನುತುಪ್ಪವನ್ನು ನಿಮಗೆ ಬೇಕಾದಷ್ಟು ಸಿಹಿ ಸೇರಿಸಿ.

ಪೇರಳೆ ಎಲೆಯ ಚಹಾವನ್ನು ಯಾರು ತಪ್ಪಿಸಬೇಕು?

ಗರ್ಭಿಣಿ ಅಥವಾ ಹಾಲುಣಿಸುವವರು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಪೇರಳೆ ಎಲೆಯ ಚಹಾವನ್ನು ತಪ್ಪಿಸುವುದು ಒಳ್ಳೆಯದು. ಔಷಧಿಗಳನ್ನು ತೆಗೆದುಕೊಳ್ಳುವ ವ್ಯಕ್ತಿಗಳು, ವಿಶೇಷವಾಗಿ ಮಧುಮೇಹ ಅಥವಾ ಅಧಿಕ ರಕ್ತದೊತ್ತಡಕ್ಕೆ, ಪೇರಳೆ ಎಲೆಯ ಚಹಾವನ್ನು ತಮ್ಮ ದಿನಚರಿಯಲ್ಲಿ ಸೇರಿಸುವ ಮೊದಲು ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸುವುದು ಒಳ್ಳೆಯದು.

ಪೇರಳೆ ಎಲೆಯ ಚಹಾ ಕುಡಿಯುವುದರಿಂದ ಯಾವುದೇ ಅಡ್ಡಪರಿಣಾಮಗಳು ಇವೆಯೇ?

ಕೆಲವು ಜನರು ಪೇರಳೆ ಎಲೆಗಳ ಸೇವನೆಯಿಂದ ಅಲರ್ಜಿ ಉಂಟಾಗಬಹುದು. ಇದರ ಪರಿಣಾಮವಾಗಿ ತುರಿಕೆ ಅಥವಾ ದದ್ದುಗಳಂತಹ ಅಲರ್ಜಿಯ ಪ್ರತಿಕ್ರಿಯೆಗಳು ಉಂಟಾಗುತ್ತವೆ. ಇನ್ನು ಕೆಲವರಲ್ಲಿ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಪೇರಳೆ ಎಲೆಯ ಚಹಾವನ್ನು ನಿಯಮಿತವಾಗಿ ಸೇವಿಸಬಹುದಾದರೂ, ಮಿತಗೊಳಿಸುವುದು ಬಹಳ ಮುಖ್ಯ. ಅತಿಯಾದ ಸೇವನೆಯು ಅನಗತ್ಯ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. ಇದನ್ನು ನಿಮ್ಮ ದೈನಂದಿನ ದಿನಚರಿಯಲ್ಲಿ ಸೇರಿಸುವ ಮೊದಲು ವೈಯಕ್ತಿಕ ಆರೋಗ್ಯ ಪರಿಸ್ಥಿತಿಗಳನ್ನು ಪರಿಗಣಿಸುವುದು ಅತ್ಯಗತ್ಯ ಎಂದು ತಜ್ಞರು ಹೇಳುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: