
ಬೆಳಗ್ಗೆ ಎದ್ದ ತಕ್ಷಣ ನಾವು ತುಂಬಾ ಆಕ್ಟಿವ್ ಆಗಿದ್ದರೂ, ಕೆಲಸದ ಒತ್ತಡ, ಬ್ಯುಸಿ ಜೀವನಶೈಲಿ ಇವೆಲ್ಲದರ ಕಾರಣದಿಂದಾಗಿ ಸಂಜೆಯ ವೇಳೆಗೆ ಸುಸ್ತು (Fatigue) ಕಾಣಿಸಿಕೊಳ್ಳುತ್ತದೆ. ಹೌದು ಸ್ನಾಯು ಸೆಳೆತ, ತಲೆ ನೋವು, ದೇಹ ನೋವಿನಂತಹ ದೈಹಿಕ ಆಯಾಸ ಮಾತ್ರವಲ್ಲ ಮಾನಸಿಕ ಆಯಾಸವು ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಬೇಗನೆ ಕೋಪಗೊಳ್ಳುತ್ತೇವೆ, ಕಿರಿಕಿರಿಯ ಭಾವನೆಯನ್ನು ಅನುಭವಿಸುತ್ತೇವೆ. ಹೀಗಿರುವಾಗ ನಿಮಗಾಗಿ ನೀವು ಸ್ವಲ್ಪ ಸಮಯವನ್ನು ಮೀಸಲಿಡುವ ಮೂಲಕ ದಿನನಿತ್ಯ ಅನುಭವಿಸುವಂತಹ ಈ ದೈಹಿಕ, ಮಾನಸಿಕ ಆಯಾಸವನ್ನು ಹೋಗಲಾಡಿಸಬಹುದು. ದಣಿವನ್ನು ನಿವಾರಿಸುವ ಆ ತಂತ್ರಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ: ಕೆಲಸದಿಂದ ಮನೆಗೆ ಬಂದ ತಕ್ಷಣ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ, ಇದರಿಂದ ಸ್ನಾಯುಗಳ ಒತ್ತಡ ಮತ್ತು ಬಿಗಿತ ಕಡಿಮೆಯಾಗುತ್ತದೆ. ಇದು ದೈಹಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ದೇಹದ ಸಾಮಾನ್ಯ ತಾಪಮಾನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಗಿಡಮೂಲಿಕೆ ಚಹಾ ಸೇವಿಸಿ: ಸಾಮಾನ್ಯ ಚಹಾದ ಬದಲು ಕೆಲಸದಿಂದ ಮರಳಿ ಮನೆಗೆ ಬಂದ ನಂತರ ಗಿಡಮೂಲಿಕಾ ಚಹಾವನ್ನು ಸೇವನೆ ಮಾಡಿ. ಕ್ಯಾಮೊಮೈಲ್ ಅಥವಾ ಲ್ಯಾವೆಂಡರ್ ಟೀ ಮನಸ್ಸನ್ನು ಶಾಂತಗೊಳಿಸುವ ಗುಣಗಳನ್ನು ಹೊಂದಿವೆ ಮತ್ತು ದೇಹವನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತವೆ. ಈ ಚಹಾಗಳು ಕೆಫೀನ್ ರಹಿತವಾಗಿದ್ದು, ಇದು ರಾತ್ರಿಯ ವೇಳೆ ವಿಶ್ರಾಂತಿ ಮತ್ತು ಆಳವಾದ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ.
ಆಳವಾದ ಉಸಿರಾಟ ಮತ್ತು ಧ್ಯಾನ ಮಾಡಿ: ಇದು ಆಯಾಸವನ್ನು ನಿವಾರಿಸಲು ಇರುವ ಉತ್ತಮ ಮಾರ್ಗವಾಗಿದೆ. ಧ್ಯಾನ ಅಥವಾ ಆಳವಾದ ಉಸಿರಾಟದ ವ್ಯಾಯಾಮ ಮಾಡುವಾಹ ನಾವು ಎಲ್ಲಾ ಚಿಂತೆಗಳನ್ನು ಮರೆತು ನಮ್ಮ ಉಸಿರಾಟದ ಮೇಲೆ ಮಾತ್ರ ಗಮನಹರಿಸುತ್ತೇವೆ. ಇದರಿಂದ ಒತ್ತಡ ನಿವಾರಣೆಯಾಗುತ್ತದೆ. ಅಲ್ಲದೆ ಆಳವಾದ ಉಸಿರಾಟ ಮತ್ತು ಧ್ಯಾನವು ರಾತ್ರಿಯ ಉತ್ತಮ ನಿದ್ರೆಯನ್ನು ಪಡೆಯಲು ಉತ್ತಮ ಮಾರ್ಗವಾಗಿದೆ.
ಇದನ್ನೂ ಓದಿ: ಫೋನ್ ವ್ಯಸನದಿಂದ ಮುಕ್ತರಾಗಲು ಈ ಸರಳ ಡಿಜಿಟಲ್ ಡಿಟಾಕ್ಸ್ ತಂತ್ರಗಳನ್ನು ಪಾಲಿಸಿ
ಅರೋಮಾ ಥೆರಪಿ: ಗಿಡಮೂಲಿಕಾ ಸಸ್ಯಗಳು ಮತ್ತು ಹೂವುಗಳಿಂದ ತಯಾರಿಸಲ್ಪಟ್ಟ ಸಾರಭೂತ ತೈಲಗಳು ಮನಸ್ಥಿತಿಯನ್ನು ಸುಧಾರಿಸುತ್ತವೆ, ಆಯಾಸವನ್ನು ಸಹ ನಿವಾರಿಸುತ್ತವೆ. ಸ್ನಾನದ ನೀರಿನಲ್ಲಿ ಅಥವಾ ಕೋಣೆಯಲ್ಲಿ ಈ ಎಣ್ಣೆಗಳ ಪರಿಮಳವನ್ನು ಹರಡುವುದರಿಂದ ವಿಶ್ರಾಂತಿ ಪಡೆಯಲು ಸಹಾಯವಾಗುತ್ತದೆ.
ಪ್ರೀತಿಪಾತ್ರರು ಅಥವಾ ಸ್ನೇಹಿತರೊಂದಿಗೆ ಸಮಯ ಕಳೆಯಿರಿ: ನೀವು ಒತ್ತಡಕ್ಕೊಳಗಾಗಿದ್ದಾಗಲೆಲ್ಲಾ, ಅದನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ನಿಮ್ಮ ಪ್ರೀತಿಪಾತ್ರರು ಅಥವಾ ಸ್ನೇಹಿತರೊಂದಿಗೆ ಸಮಯ ಕಳೆಯುವುದು. ಏಕೆಂದರೆ ನಾವು ಆ ಜನರನ್ನು ಭೇಟಿಯಾದಾಗ, ನಮಗೆ ಸಂತೋಷವಾಗುತ್ತದೆ. ಆಗ ನಾವು ನಮ್ಮ ಎಲ್ಲಾ ಚಿಂತೆಗಳನ್ನು ಮರೆತು ಖುಷಿಯಾಗಿರುತ್ತೇವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ