AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಗಾಲದಲ್ಲಿ ಗರ್ಭಿಣಿಯರು ಏಕೆ ಹೆಚ್ಚು ಎಚ್ಚರಿಕೆ ವಹಿಸಬೇಕು! ಡಾ. ಅನುಷಾ ಹೇಳಿರುವ ಸಿಂಪಲ್ ಟಿಪ್ಸ್ ನಿಮಗಾಗಿ

ಗರ್ಭಾವಸ್ಥೆಯಲ್ಲಿ ದೇಹದಲ್ಲಿ ಹಲವು ದೈಹಿಕ ಮತ್ತು ಹಾರ್ಮೋನಲ್ ಬದಲಾವಣೆಗಳಾಗುವುದರಿಂದ ಕೆಲವು ಸೋಂಕುಗಳು ಹಾಗೂ ಆರೋಗ್ಯ ಸಮಸ್ಯೆಗಳ ಬಗ್ಗೆ ಗರ್ಭಿಣಿಯರು ಹೆಚ್ಚಿನ ಎಚ್ಚರಿಕೆ ವಹಿಸುವುದು ಮುಖ್ಯ. ಹಾಗಾದರೆ ಮಳೆಗಾಲದಲ್ಲಿ ಗರ್ಭಿಣಿಯರು ಯಾವ ರೀತಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು? ಈ ಬಗ್ಗೆ ಎಸ್.ಡಿ.ಎಂ. ಆಯುರ್ವೇದ ಸಂಸ್ಥೆ ಮತ್ತು ಆಸ್ಪತ್ರೆಯ ಪ್ರಸೂತಿ ತಂತ್ರ ಹಾಗೂ ಸ್ತ್ರೀರೋಗ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಅನುಷಾ ಎಂ. ಅವರು ಮಳೆಗಾಲದಲ್ಲಿ ಗರ್ಭಿಣಿಯರು ಪಾಲಿಸಬೇಕಾದ ಹಲವು ಪ್ರಮುಖ ಮುನ್ನೆಚ್ಚರಿಕೆಗಳನ್ನು ವಿವರಿಸಿದ್ದಾರೆ.

ಮಳೆಗಾಲದಲ್ಲಿ ಗರ್ಭಿಣಿಯರು ಏಕೆ ಹೆಚ್ಚು ಎಚ್ಚರಿಕೆ ವಹಿಸಬೇಕು! ಡಾ. ಅನುಷಾ ಹೇಳಿರುವ ಸಿಂಪಲ್ ಟಿಪ್ಸ್ ನಿಮಗಾಗಿ
Monsoon Health Tips For PregnancyImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Aug 13, 2026 | 6:44 PM

Share

ಮಳೆಗಾಲವು ಬೇಸಿಗೆಯ ಬಿಸಿಯಿಂದ ನೆಮ್ಮದಿಯನ್ನು ನೀಡುವುದರ ಜೊತೆಗೆ ಸೋಂಕುಗಳು, ಸೊಳ್ಳೆಗಳಿಂದ ಹರಡುವ ರೋಗಗಳು, ಆಹಾರ ಮಾಲಿನ್ಯ ಹಾಗೂ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಗರ್ಭಾವಸ್ಥೆಯಲ್ಲಿ ಉಂಟಾಗುವ ಬದಲಾವಣೆಗಳಿಂದ ಗರ್ಭಿಣಿಯರು ಈ ಆರೋಗ್ಯ ಸಮಸ್ಯೆಗಳಿಗೆ ಹೆಚ್ಚು ಒಳಗಾಗುವ ಸಾಧ್ಯತೆ ಇರುತ್ತದೆ. ಕೆಲವು ಸರಳ ಮುನ್ನೆಚ್ಚರಿಕೆಗಳನ್ನು ಪಾಲಿಸುವುದರಿಂದ ಮಳೆಗಾಲದಲ್ಲಿಯೂ ಸುರಕ್ಷಿತ ಹಾಗೂ ಆರೋಗ್ಯಕರ ಗರ್ಭಧಾರಣೆಯನ್ನು ಕಾಪಾಡಿಕೊಳ್ಳಬಹುದು. ಈ ಕುರಿತು, ಎಸ್.ಡಿ.ಎಂ. ಆಯುರ್ವೇದ ಸಂಸ್ಥೆ ಮತ್ತು ಆಸ್ಪತ್ರೆಯ ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ ವಿಭಾಗದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಡಾ. ಅನುಷಾ ಎಂ ಅವರು ಹೆಚ್ಚಿನ ವಿವರಣೆ ನೀಡಿದ್ದು ಯಾವ ರೀತಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದರ ಬಗ್ಗೆ ವಿವರವಾದ ಮಾಹಿತಿ ನೀಡಿದ್ದಾರೆ.

ಸುರಕ್ಷಿತ ಆಹಾರ ಸೇವನೆ:

ಮಳೆಗಾಲದಲ್ಲಿ ಬ್ಯಾಕ್ಟೀರಿಯಾ ಮತ್ತು ಫಂಗಸ್ ಬೆಳವಣಿಗೆ ಹೆಚ್ಚಾಗುವುದರಿಂದ ಆಹಾರಜನ್ಯ ಸೋಂಕುಗಳ ಅಪಾಯವೂ ಹೆಚ್ಚಿರುತ್ತದೆ. ಆದ್ದರಿಂದ ಗರ್ಭಿಣಿಯರು ಯಾವಾಗಲೂ ತಾಜಾ, ಚೆನ್ನಾಗಿ ಬೇಯಿಸಿದ ಆಹಾರವನ್ನು ಸೇವಿಸಬೇಕು. ಹಳಸಿದ ಅಥವಾ ಮರುಬಿಸಿ ಮಾಡಿದ ಆಹಾರ, ರಸ್ತೆ ಬದಿಯ ಆಹಾರ, ಬೇಯಿಸದ ಸಲಾಡ್‌ಗಳು ಹಾಗೂ ಹೊರಗೆ ಕತ್ತರಿಸಿ ಇಟ್ಟಿರುವ ಹಣ್ಣುಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಹಣ್ಣು ಮತ್ತು ತರಕಾರಿಗಳನ್ನು ಬಳಸುವ ಮೊದಲು ಚೆನ್ನಾಗಿ ತೊಳೆಯಬೇಕು.

ಸುರಕ್ಷಿತ ಮತ್ತು ಶುದ್ಧವಾಗಿರುವ ನೀರನ್ನು ಕುಡಿಯಿರಿ:

ಕಲುಷಿತ ನೀರು ಹೊಟ್ಟೆ ಮತ್ತು ಕರುಳಿನ ಸೋಂಕುಗಳಿಗೆ ಕಾರಣವಾಗಬಹುದು. ಇದು ನಿರ್ಜಲೀಕರಣ ಹಾಗೂ ಪೌಷ್ಟಿಕಾಂಶದ ಕೊರತೆಯನ್ನು ಉಂಟುಮಾಡುವ ಸಾಧ್ಯತೆ ಇದೆ. ಆದ್ದರಿಂದ ಕುದಿಸಿದ, ಶುದ್ಧೀಕರಿಸಿದ ಅಥವಾ ಫಿಲ್ಟರ್ ನೀರನ್ನು ಮಾತ್ರ ಕುಡಿಯಿರಿ. ದಿನಕ್ಕೆ ಸುಮಾರು 2–3 ಲೀಟರ್ ನೀರು ಕುಡಿಯುವ ಮೂಲಕ ದೇಹದಲ್ಲಿ ನೀರಿನ ಸಮತೋಲನವನ್ನು ಕಾಪಾಡಿಕೊಳ್ಳಿ.

ಸೊಳ್ಳೆಗಳಿಂದ ಹರಡುವ ರೋಗಗಳಿಂದ ರಕ್ಷಿಸಿಕೊಳ್ಳಿ:

ಮಳೆಗಾಲದಲ್ಲಿ ಡೆಂಗ್ಯೂ, ಮಲೇರಿಯಾ ಪ್ರಕರಣಗಳು ಹೆಚ್ಚಾಗುತ್ತವೆ. ಇವು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಪೂರ್ಣ ತೋಳಿನ ಬಟ್ಟೆ ಧರಿಸಿ, ಸೊಳ್ಳೆ ಪರದೆ ಬಳಸಿರಿ, ಗರ್ಭಿಣಿಯರು ಸುರಕ್ಷಿತವಾದ ಸೊಳ್ಳೆ ನಿವಾರಕಗಳನ್ನು ಬಳಸಿ ಹಾಗೂ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ.

ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ:

ಸಾಬೂನು ಮತ್ತು ನೀರಿನಿಂದ ಆಗಾಗ ಕೈ ತೊಳೆಯಿರಿ. ಮಳೆಯಲ್ಲಿ ನೆನೆದ ಬಟ್ಟೆ ಮತ್ತು ಪಾದರಕ್ಷೆಗಳನ್ನು ತಕ್ಷಣ ಬದಲಾಯಿಸಿ. ಪಾದಗಳನ್ನು ಚೆನ್ನಾಗಿ ತೊಳೆದು ಒಣಗಿಸಿಕೊಳ್ಳಿ. ಇದರಿಂದ ಸೋಂಕುಗಳನ್ನು ತಡೆಗಟ್ಟಬಹುದು.

ಜಾರಿ ಬೀಳದಂತೆ ಜಾಗೃತ ವಹಿಸಿರಿ:

ಜಾರದ ತಳವಿರುವ ಆರಾಮದಾಯಕ ಪಾದರಕ್ಷೆಗಳನ್ನು ಧರಿಸಿ. ಎಚ್ಚರಿಕೆಯಿಂದ ನಡೆಯಿರಿ. ನೀರು ತುಂಬಿರುವ ಅಥವಾ ಅಸಮತಟ್ಟಾದ ರಸ್ತೆಗಳ ಮೇಲೆ ನಡೆಯುವುದನ್ನು ತಪ್ಪಿಸಿ.

ಪೌಷ್ಟಿಕ ಆಹಾರ ಸೇವಿಸಿ:

ಪ್ರೋಟೀನ್, ಕಬ್ಬಿಣಾಂಶ, ಕ್ಯಾಲ್ಸಿಯಂ, ಫೋಲಿಕ್ ಆಸಿಡ್, ವಿಟಮಿನ್‌ಗಳು ಹಾಗೂ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿರುವ ಸಮತೋಲನ ಆಹಾರವು ತಾಯಿಯ ಆರೋಗ್ಯ ಮತ್ತು ಮಗುವಿನ ಬೆಳವಣಿಗೆಗೆ ಅತ್ಯಂತ ಅಗತ್ಯ.

ಸೋಂಕಿನ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ:

ಜ್ವರ, ನಿರಂತರ ವಾಂತಿ, ಅತಿಸಾರ, ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿ, ಕೆಮ್ಮು, ಉಸಿರಾಟದ ತೊಂದರೆ ಅಥವಾ ಚರ್ಮದ ಮೇಲಿನ ದದ್ದುಗಳಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ನಿಯಮಿತ ತಪಾಸಣೆ:

ವೈದ್ಯರು ನಿಗದಿಪಡಿಸಿದ ತಪಾಸಣೆಗಳನ್ನು ತಪ್ಪದೆ ಮಾಡಿಸಿಕೊಳ್ಳಿ.

ದೈಹಿಕ ಚಟುವಟಿಕೆಯನ್ನು ಮುಂದುವರಿಸಿ:

ವೈದ್ಯರ ಸಲಹೆಯಂತೆ ಮನೆಯೊಳಗೆ ಲಘು ವ್ಯಾಯಾಮ, ನಡೆ ಅಥವಾ ಗರ್ಭಿಣಿಯರಿಗಾಗಿ ಸೂಕ್ತವಾದ ಯೋಗಾಭ್ಯಾಸ ಮಾಡಬಹುದು. ಭಾರೀ ಮಳೆಯ ಸಮಯದಲ್ಲಿ ಹೊರಾಂಗಣ ಚಟುವಟಿಕೆಗಳನ್ನು ತಪ್ಪಿಸಿ.

ಸಾಕಷ್ಟು ವಿಶ್ರಾಂತಿ ಪಡೆಯಿರಿ:

ಸಾಮಾನ್ಯವಾಗಿ ಸಾಕಷ್ಟು ನಿದ್ರೆ ಮತ್ತು ನಿಯಮಿತ ವಿಶ್ರಾಂತಿ ಗರ್ಭಾವಸ್ಥೆಯಲ್ಲಿ ಅತ್ಯಂತ ಮುಖ್ಯ. ಇದು ತಾಯಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸುತ್ತದೆ.

ನೆನಪಿರಲಿ ಇಂದು ನೀವು ವಹಿಸುವ ಸ್ವಲ್ಪ ಹೆಚ್ಚುವರಿ ಕಾಳಜಿಯೇ ನಾಳೆ ತಾಯಿ ಮತ್ತು ಮಗುವಿನ ಉತ್ತಮ ಆರೋಗ್ಯಕ್ಕೆ ಭದ್ರ ಅಡಿಪಾಯವಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us