
ದಿನದ ಆರಂಭದಲ್ಲಿ ಸಕಾರಾತ್ಮಕ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ದೇಹ ಮತ್ತು ಮನಸ್ಸನ್ನು ಆರೋಗ್ಯಕರವಾಗಿಟ್ಟುಕೊಳ್ಳಬಹುದು. ಹೌದು ಬೆಳಗಿನ ಅಭ್ಯಾಸಗಳು ನಮ್ಮ ಇಡೀ ದಿನವನ್ನು ನಿರ್ಧರಿಸುತ್ತದೆ. ಅದಕ್ಕಾಗಿ ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ನೋಡುವ ಬದಲು ಉತ್ತಮ ದಿನಚರಿಯನ್ನು (morning routine) ಪಾಲಿಸಬೇಕು, ಇದು ನಿಮ್ಮನ್ನು ದಿನವಿಡೀ ಆಕ್ಟಿವ್ ಆಗಿರಲು ಸಹಾಯ ಮಾಡುವುದು ಮಾತ್ರವಲ್ಲದೆ, ಮಾನಸಿಕ ಸಮತೋಲನ ಮತ್ತು ದೈಹಿಕ ಆರೋಗ್ಯವನ್ನು ಸುಧಾರಿಸುತ್ತದೆ. ಹಾಗಿದ್ರೆ ಸದೃಢವಾಗಿರಲು, ಸೂಪರ್ ಆಕ್ಟಿವ್ ಆಗಿರಲು ಯಾವ ಬೆಳಗಿನ ದಿನಚರಿಯಲ್ಲಿ ಯಾವ ಅಭ್ಯಾಸಗಳನ್ನು ಪಾಲಿಸಬೇಕು ಎಂಬುದನ್ನು ನೋಡೋಣ ಬನ್ನಿ.
ಸೂರ್ಯನ ಬೆಳಕಿನಲ್ಲಿ ಸ್ವಲ್ಪ ಸಮಯ ಕಳೆಯಿರಿ: ಬೆಳಗಿನ ಸೂರ್ಯನ ಬೆಳಕು ದೇಹದಲ್ಲಿ ವಿಟಮಿನ್ ಡಿ ಅನ್ನು ಉತ್ಪಾದಿಸುತ್ತದೆ, ಇದು ಮೂಳೆಗಳನ್ನು ಬಲಪಡಿಸುತ್ತದೆ, ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಬೆಳಿಗ್ಗೆ 10 ರಿಂದ 15 ನಿಮಿಷಗಳ ಕಾಲ ಸೂರ್ಯನ ಬೆಳಕಿನಡಿಯಲ್ಲಿ ಕುಳಿತುಕೊಳ್ಳಿ. ಇದು ದಿನವನ್ನು ತಾಜಾತನದಿಂದ ಪ್ರಾರಂಭಿಸಲು ಸಹಾಯ ಮಾಡುವುದಲ್ಲದೆ ಆಯಾಸವನ್ನು ಕಡಿಮೆ ಮಾಡುತ್ತದೆ.
ಧ್ಯಾನ ಮಾಡಿ: ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರತಿನಿತ್ಯ ಬೆಳಗ್ಗೆ ಎದ್ದ ತಕ್ಷಣ ಧ್ಯಾನ ಮಾಡಿ. ಆಳವಾದ ಉಸಿರಾಟದ ವ್ಯಾಯಾಮ, ಧ್ಯಾನ ಮತ್ತು ಸಕಾರಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳುವುದು ಒತ್ತಡ ಮತ್ತು ಆತಂಕವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮತ್ತು ದಿನವಿಡೀ ನೀವು ಆಕ್ಟಿವ್ ಆಗಿರಲು ಸಹಾಯ ಮಾಡುತ್ತದೆ.
ವ್ಯಾಯಾಮ ಮಾಡಿ: ಬೆಳಗಿನ ದಿನಚರಿಯಲ್ಲಿ ವ್ಯಾಯಾಮ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. 20 ರಿಂದ 30 ನಿಮಿಷಗಳ ಕಾಲ ಲಘು ಯೋಗ, ಸ್ಟ್ರೆಚಿಂಗ್, ವಾಕಿಂಗ್ ಅಥವಾ ಯಾವುದೇ ದೈಹಿಕ ಚಟುವಟಿಕೆಯನ್ನು ಮಾಡಿ. ವ್ಯಾಯಾಮವು ದೇಹವನ್ನು ಸದೃಢವಾಗಿರಿಸುತ್ತದೆ, ತೂಕವನ್ನು ನಿಯಂತ್ರಿಸುತ್ತದೆ, ಮತ್ತು ಉತ್ತಮವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ವ್ಯಾಯಾಮವು ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ: ಊಟದ ಬಳಿಕ ವೀಳ್ಯದೆಲೆ ತಿನ್ನೋದ್ರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ಆರೋಗ್ಯಕರ ಅಹಾರ ಸೇವನೆ: ಬೆಳಗಿನ ಉಪಕಾರಕ್ಕೆ ಆರೋಗ್ಯಕರ ಆಹಾರ ಸೇವನೆ ಮಾಡಿ. ಅದರಲ್ಲೂ ಹಸಿರು ತರಕಾರಿಗಳನ್ನು ತಿನ್ನುವುದು ತುಂಬಾನೇ ಮುಖ್ಯ. ಪಾಲಕ್, ಮೆಂತ್ಯ, ಬ್ರೊಕೊಲಿಯಂತಹ ಹಸಿರು ತರಕಾರಿಗಳು ಜೀವಸತ್ವಗಳು, ಖನಿಜಗಳು ಮತ್ತು ನಾರಿನಂಶದಿಂದ ಸಮೃದ್ಧವಾಗಿವೆ. ಇವು ಕಣ್ಣುಗಳು, ಚರ್ಮ ಮತ್ತು ಜೀರ್ಣಕ್ರಿಯೆಗೆ ಪ್ರಯೋಜನಕಾರಿ. ನಿಮ್ಮ ದೈನಂದಿನ ಆಹಾರದಲ್ಲಿ ಹಸಿರು ತರಕಾರಿಗಳನ್ನು ಸೇರಿಸಿ, ಇದರಿಂದ ದೇಹವು ನಿರ್ವಿಷಗೊಳ್ಳುತ್ತದೆ.
ನೀರು ಕುಡಿಯಿರಿ: ಬೆಳಿಗ್ಗೆ ಎದ್ದ ತಕ್ಷಣ 1-2 ಗ್ಲಾಸ್ ನೀರು ಕುಡಿಯಿರಿ ಮತ್ತು ದಿನವಿಡೀ 8-10 ಗ್ಲಾಸ್ ನೀರು ಕುಡಿಯಿರಿ. ನೀರು ದೇಹಕ್ಕೆ ಜಲಸಂಚಯನವನ್ನು ಒದಗಿಸುತ್ತದೆ, ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಬೆಚ್ಚಗಿನ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಯೂ ಸುಧಾರಿಸುತ್ತದೆ. ಹೀಗೆ ಈ ಎಲ್ಲಾ ಅಭ್ಯಾಸಗಳನ್ನು ನಿಮ್ಮ ಬೆಳಗಿನ ದಿನಚರಿಯಲ್ಲಿ ಪಾಲಿಸುವ ಮೂಲಕ ನೀವು ಸದೃಢವಾಗಿರಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ