
ಹಣ (money) ಯಾರಿಗೂ ಸುಲಭವಾಗಿ ಬರುವುದಿಲ್ಲ. ಕಷ್ಟಪಟ್ಟು ದುಡಿದರೆ ಮಾತ್ರ ಕೈತುಂಬಾ ಹಣ ಸಿಗುತ್ತದೆ. ಈ ದುಡ್ಡನ್ನು ಭವಿಷ್ಯಕ್ಕಾಗಿ ಉಳಿತಾಯ ಮಾಡಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಕೆಲವೊಂದು ತಪ್ಪುಗಳಿಂದ ದುಡಿದ ಹಣ ಸುಖಾಸುಮ್ಮನೆ ವ್ಯರ್ಥವಾಗುತ್ತದೆ. ಅದರಲ್ಲೂ ಕೆಲವರು ಪ್ರದರ್ಶನಕ್ಕಾಗಿ ಬ್ರ್ಯಾಂಡೆಡ್ ವಸ್ತುಗಳನ್ನು ಖರೀದಿಸಲು ಹಣ ವ್ಯಯಿಸುತ್ತಾರೆ. ಹೀಗೆ ಅನಗತ್ಯವಾಗಿ, ಅಜಾಗರೂಕತೆಯಿಂದ ಖರ್ಚು ಮಾಡುವ ಅಭ್ಯಾಸ ಭವಿಷ್ಯದಲ್ಲಿ ಖಂಡಿತವಾಗಿಯೂ ಆರ್ಥಿಕ ಸಂಕಷ್ಟವನ್ನು ಉಂಟುಮಾಡಬಹುದು. ಆದ್ದರಿಂದ ಹಣವನ್ನು ಯೋಚಿಸಿ ವ್ಯಯಿಸಬೇಕು, ಸರಿಯಾಗಿ ನಿರ್ವಹಿಸಬೇಕು. ಇದಕ್ಕಾಗಿ ಈ ಕೆಲವೊಂದು ಸಲಹೆಗಳನ್ನು ಅನುಸರಿಸಿ.
ಅಗತ್ಯ ವಸ್ತುಗಳಿಗೆ ಮಾತ್ರ ಖರ್ಚು ಮಾಡಿ, ನಿಮ್ಮ ಬಯಕೆಗಳಿಗೆ ಹೆಚ್ಚು ವ್ಯಯ ಮಾಡಬೇಡಿ. ಉದಾಹರಣೆಗೆ, ಹಳೆ ಫೋನ್ ಹಾಳಾಗಿರುವ ಕಾರಣಕ್ಕೆ ಹೊಸ ಮೊಬೈಲ್ ಫೋನ್ ಬೇಕು ಮತ್ತು ಮೊಬೈಲ್ ಇದ್ರೂ ಸಹ ಹೊಸ ಆವೃತ್ತಿಯ ಮೊಬೈಲ್ ಖರೀದಿಸಬೇಕು ಇವೆರಡರ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಈ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದರಿಂದ ಬಹಳಷ್ಟು ಹಣ ಉಳಿಸಬಹುದು. ಹಾಗಾಗಿ ಏನನ್ನಾದರೂ ಖರೀದಿಸುವ ಮೊದಲು ಎರಡು ಬಾರಿ ಯೋಚಿಸಿ. ಅಗತ್ಯ ವಸ್ತುಗಳಿಗೆ ಮಾತ್ರ ಹಣ ಖರ್ಚು ಮಾಡಿ. ಈ ರೀತಿ ಮಾಡುವುದರಿಂದ ಹಣ ವ್ಯರ್ಥವಾಗುವುದನ್ನು ತಪ್ಪಿಸಬಹುದು.
ನಿಮ್ಮ ಮಾಸಿಕ ಆದಾಯ ಮತ್ತು ಖರ್ಚುಗಳನ್ನು ಬರೆದು ವರ್ಗೀಕರಿಸುವುದು ಸಣ್ಣ ಕೆಲಸ ಆದರೆ ಇದು ದೊಡ್ಡ ಫಲಿತಾಂಶವನ್ನು ನೀಡುತ್ತದೆ. ಒಂದು ಬಜೆಟ್ ರೂಪಿಸಿ ಪ್ರತಿ ವಾರ ಅಥವಾ ಹಿಂದಿನ ತಿಂಗಳು ನಿಮ್ಮ ಖರ್ಚುಗಳು ಎಲ್ಲಿ ಹೆಚ್ಚಿವೆ ಎಂಬುದನ್ನು ನೋಡಿ ಮತ್ತು ಮುಂದಿನ ತಿಂಗಳು ಅವುಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿ. ಹೀಗೆ ಮಾಡುವುದರಿಂದ ಅನಗತ್ಯ ವಸ್ತುಗಳನ್ನು ಖರೀದಿಸುವುದನ್ನೂ ತಪ್ಪಿಸಬಹುದು ಜೊತೆಗೆ ಅನಗತ್ಯ ಖರ್ಚುಗಳೂ ಕಡಿಮೆಯಾಗುತ್ತದೆ.
ದಿನಸಿ ಅಥವಾ ಇನ್ಯಾವುದೇ ಶಾಪಿಂಗ್ ಹೋದಾಗ ಹೆಚ್ಚಿನವರು ಟೈಮ್ ವೇಸ್ಟ್ ಆಗುತ್ತೆ ಅಂತ ಆತುರದಿಂದ ಶಾಪಿಂಗ್ ಮಾಡುತ್ತಾರೆ. ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ಖರೀದಿಸುತ್ತಾರೆ. ಆದರೆ ಯಾವತ್ತಿಗೂ ಹೀಗೆ ಮಾಡಬೇಡಿ, ಅಗತ್ಯವಾಗಿ ಬೇಕಾಗಿರುವ ವಸ್ತುಗಳು ಯಾವುವು ಎಂಬುದನ್ನು ಪಟ್ಟಿ ಮಾಡಿ, ಜೊತೆಗೆ ಆ ವಸ್ತುಗಳಿಗೆ ಎಷ್ಟು ಖರ್ಚಾಗಬಹುದೆಂದು ಅಂದಾಜು ಮಾಡಿ, ಅಷ್ಟೇ ಹಣವನ್ನು ಕೊಂಡುಹೋಗಿ. ಡಿಜಿಟಲ್ ಪಾವತಿಗಳನ್ನು ತಪ್ಪಿಸಿ. ನಾವು ನಗದು ಹಣ ನೀಡಿದಾಗ, ಎಷ್ಟು ಹಣ ಖರ್ಚು ಮಾಡಲಾಗುತ್ತಿದೆ ಎಂಬುದು ನಮ್ಮ ಗಮನಕ್ಕೆ ಬರುತ್ತದೆ. ಇದು ವ್ಯರ್ಥ ಮಾಡುವುದಕ್ಕೆ ಕಡಿವಾಣ ಹಾಕಲು ಖಂಡಿತವಾಗಿಯೂ ಸಹಾಯ ಮಾಡುತ್ತದೆ.
ಹಣ ವ್ಯರ್ಥವಾಗುವುದನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ಉಳಿತಾಯ. ನೀವು ಪ್ರತಿ ತಿಂಗಳು ನಿಮ್ಮ ಆದಾಯದಲ್ಲಿ ಕನಿಷ್ಠ 10 ರಿಂದ 20 ಶೇಕಡಾದಷ್ಟು ಹಣ ಉಳಿತಾಯ ಮಾಡಬೇಕು. ಇಲ್ಲವೆ ಅದನ್ನು ಉಳಿಸಬೇಕು ಸುರಕ್ಷಿತ ಸ್ಥಳದಲ್ಲಿ ಹೂಡಿಕೆ ಮಾಡಬೇಕು. ಈ ಅಭ್ಯಾಸವು ಭವಿಷ್ಯದಲ್ಲಿ ಖಂಡಿತವಾಗಿಯೂ ನಿಮ್ಮ ಸಹಾಯ ಬರುತ್ತದೆ.
ಇದನ್ನೂ ಓದಿ: ಈ ನಾಲ್ಕು ಕೆಲಸಗಳನ್ನು ಮಾಡುವ ಜನರಿಗೆ ಎಂದಿಗೂ ಆರ್ಥಿಕ ಸಂಕಷ್ಟ ಎದುರಾಗುವುದಿಲ್ಲವಂತೆ
ಈಗಂತೂ ಅನೇಕ ಜನರು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತಾರೆ. ಆದರೆ ಅದನ್ನು ನಿಯಂತ್ರಣವಿಲ್ಲದೆ ಬೇಕಾಬಿಟ್ಟಿ ಬಳಸಿದರೆ ಸಾಲಕ್ಕೆ ಸಿಲುಕುವ ಅಪಾಯವಿರುತ್ತದೆ. ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಬೇಕು. ಇದು ಹಣ ವ್ಯರ್ಥವಾಗುವುದನ್ನು ತಡೆಯಬಹುದು. ಇಲ್ಲದಿದ್ದರೆ ಬಡ್ಡಿ ಮತ್ತು ಶುಲ್ಕಗಳ ಪಾವತಿಯಲ್ಲಿನ ವಿಳಂಬವು ಸುಖಾಸುಮ್ಮನೆ ಹಣ ವ್ಯರ್ಥವಾಗಲು ಕಾರಣವಾಗಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ