Lose Weight in Summer: ಬೇಸಿಗೆಯಲ್ಲಿ ದೇಹ ತೂಕ ಇಳಿಸಿಕೊಳ್ಳಲು ಇರುವ ಆರೋಗ್ಯಕರ ಮಾರ್ಗಗಳು
ತೂಕವನ್ನು ಕಡಿಮೆ ಮಾಡಿಕೊಳ್ಳಬೇಕೆಂದು ಹೆಚ್ಚಿನವರು ಬಯಸುತ್ತಾರೆ. ದೇಹದ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ಬೇಸಿಗೆಯ ಋತುಮಾನ ಸೂಕ್ತವಾಗಿದೆ. ಈ ಋತುವಿನಲ್ಲಿ ಆರೋಗ್ಯಕರ ರೀತಿಯಲ್ಲಿ ದೇಹದ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳುವ ಕೆಲವು ಮಾರ್ಗಗಳು ಇಲ್ಲಿವೆ.
ಚಳಿಗಾಲದ ಜಡ ದಿನಗಳಲ್ಲಿ ಚಳಿಯಿಂದ ದೇಹವನ್ನು ಬೆಚ್ಚಗಿರಿಸಲು ಜನರು ಬಿಸಿ ಬಿಸಿಯಾದ ತಿಂಡಿಗಳನ್ನು ಹೆಚ್ಚು ಸೇವಿಸುತ್ತಿರುತ್ತಾರೆ. ಈ ಎಣ್ಣೆಯಲ್ಲಿ ಕರಿದ ತಿಂಡಿಗಳು ಸಾಮಾನ್ಯವಾಗಿ ದೇಹದಲ್ಲಿನ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಈ ಚಳಿಗಾಲದಲ್ಲಿ ಗಳಿಸಿದ ಹೆಚ್ಚುವರಿ ತೂಕವನ್ನು ಕರಗಿಸಲು ಬೇಸಿಗೆ ದಿನಗಳು ಪರಿಪೂರ್ಣವಾಗಿದೆ. ಆದರೆ ಬೇಸಿಗೆಯಲ್ಲಿನ ಸುಡು ಬಿಸಿಲು ಮತ್ತು ವಿಪರೀತ ಶಾಖವು ಮನೆಯಿಂದ ಹೊರ ಹೊಗಲು ಮತ್ತು ಜಿಮ್ ಗೆ ಹೋಗಲು ಅಡ್ಡಿ ಉಂಟು ಮಾಡಬಹುದು. ಈ ಬೇಸಿಗೆಯಲ್ಲಿ ಶಾಖದಿಂದ ಮುಕ್ತಿ ಪಡೆಯಬೇಕೆಂದು ತಣ್ಣನೆಯ ಐಸ್ ಕ್ರೀಮ್ಗಳಂತಹ ಹೆಚ್ಚಿನ ಕ್ಯಾಲೋರಿ ಆಹಾರಗಳನ್ನು ಅತಿಯಾಗಿ ಸೇವಿಸುವುದರಿಂದ ದೇಹತೂಕ ಮತ್ತಷ್ಟು ಹೆಚ್ಚಾಗಬಹುದು. ಇವುಗಳಿಂದ ಆದಷ್ಟು ದೂರವಿದ್ದು ಆರೋಗ್ಯಕರ ವಿಧಾನಗಳ ಮೂಲಕ ನೀವು ಸರಳವಾಗಿ ದೇಹದ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಬಹುದು. ಈಜು, ನಡಿಗೆ ಮತ್ತಿತರ ದೈಹಿಕ ಚಟುವಟಿಕೆಗಳನ್ನು ಮಾಡುವ ಮೂಲಕ ಹಾಗೂ ಕಾಲೋಚಿತ ಹಣ್ಣುಗಳಾದ ಕಲ್ಲಂಗಡಿ, ಸೀತಾಫಲ, ಮಾವಿನಹಣ್ಣು, ದ್ರಾಕ್ಷಿ ಇತ್ಯಾದಿಗಳನ್ನು ಸೇವಿಸುವ ಮೂಲಕ ಆರೋಗ್ಯಕರ ರೀತಿಯಲ್ಲಿ ತೂಕವನ್ನು ಕಳೆದುಕೊಳ್ಳಬಹುದು.
ಬೇಸಿಗೆ ಸಮೀಪಿಸುತ್ತಿದ್ದಂತೆ, ಜನರು ಚಳಿಗಾಲದಲ್ಲಿ ಹೆಚ್ಚಿಸಿಕೊಂಡ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ಪ್ರಯತ್ನಗಳನ್ನು ಪ್ರಾರಂಭಿಸುತ್ತಾರೆ. ಬೇಸಿಗೆಯಲ್ಲಿನ ಅತಿಯಾದ ಬೆವರುವಿಕೆ ಕೂಡ ತ್ವರಿತವಾಗಿ ಹೆಚ್ಚುವರಿ ದೇಹ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ಡಯೆಟಿಷಿಯನ್ ಗರಿಮಾ ಗೋಯಲ್ ಹೇಳುತ್ತಾರೆ.
ಗರಿಮಾ ಗೋಯಲ್ ಬೇಸಿಗೆಯಲ್ಲಿ ತೂಕವನ್ನು ಕಳೆದುಕೊಳ್ಳುವ ಮಾರ್ಗಗಳನ್ನು ಸೂಚಿಸಿದ್ದಾರೆ:
ಈಜಲು ಹೋಗಿ: ಈಜು ಬೇಸಿಗೆಯ ಬಿಸಿ ವಾತಾವರಣದಲ್ಲಿ ನಮ್ಮ ದೇಹಕ್ಕೆ ವಿಶ್ರಾಂತಿಯನ್ನು ನೀಡುತ್ತದೆ. ನೀರಿನಲ್ಲಿ ಈಜುವ ಮೂಲಕ ತೂಕವನ್ನು ಕೂಡ ಕಳೆದುಕೊಳ್ಳಬಹುದು. ಇದು ಉತ್ತಮವಾದ ಏರೋಬಿಕ್ ವ್ಯಾಯಾಮ ಆಗಿದೆ. ಈಜುವಾಗ ಉಂಟಾಗುವ ಹೆಚ್ಚಿದ ಹೃದಯ ಬಡಿತದಿಂದಾಗಿ ದೇಹ ತೂಕವು ಕಡಿಮೆಯಾಗುತ್ತದೆ.
ಸಕ್ಕರೆಯುಕ್ತ ಪಾನೀಯಗಳಿಂದ ಆದಷ್ಟು ದೂರವಿರಿ: ಬೇಸಿಗೆಯಲ್ಲಿನ ಶಾಖದ ಒತ್ತಡದಿಂದಾಗಿ ದೇಹವನ್ನು ತಂಪಾಗಿರಿಸಲು ಜನರು ಕೊಕಾಕೋಲಾ, ಹಣ್ಣಿನ ಜ್ಯೂಸ್, ನಿಂಬೆ ಸೋಡಾ ಇತ್ಯಾದಿ ಪ್ಯಾಕೆಜ್ಡ್ ಪಾನೀಯಗಳನ್ನು ಸೇವಿಸುತ್ತಾರೆ. ಆದರೆ ಇದರಲ್ಲಿ ಅತಿಯಾದ ಸಕ್ಕರೆ ಅಂಶ ಅಡಗಿರುತ್ತದೆ. ಇದು ಸ್ಥೂಲಕಾಯತೆಗೆ ಕಾರಣವಾಗಬಹುದು. ಆದ್ದರಿಂದ ಆದಷ್ಟು ಅತಿಯಾದ ಸಕ್ಕರೆಯುಕ್ತ ಪಾನೀಯಗಳನ್ನು ಸೇವನೆ ಮಾಡುವುದನ್ನು ನಿಲ್ಲಿಸಿ. ಇದರ ಮೂಲಕ ತೂಕವನ್ನು ಆರೋಗ್ಯಕರವಾಗಿ ಕಡಿಮೆ ಮಾಡಿಕೊಳ್ಳಬಹುದು.
ಹೆಚ್ಚು ನೀರನ್ನು ಸೇವಿಸಿ: ತೂಕ ಇಳಿಕೆಯ ಪ್ರಯಾಣದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಸೇವಿಸುವ ಅಗತ್ಯವಿರುತ್ತದೆ. ಜೊತೆಗೆ ಬೇಸಿಗೆಯಲ್ಲಿ ದೇಹದಲ್ಲಿ ಅತಿಯಾದ ಬೆವರು ಹರಿದು ಹೋಗುವ ಕಾರಣ ನಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದ ನೀರಿನ ಅಗತ್ಯವಿರುತ್ತದೆ. ಮತ್ತು ನೀರು ಕುಡಿಯುವ ಮೂಲಕ ಹೆಚ್ಚುವರಿ ಕ್ಯಾಲೋರಿಗಳ ಸೇವನೆ ಮಾಡುವುದನ್ನು ತಪ್ಪಿಸಬಹುದು.
ಇದನ್ನೂ ಓದಿ:Weight Loss Diet: ಮಾವಿನ ಹಣ್ಣು ತಿನ್ನುವುದರಿಂದ ದೇಹ ತೂಕ ಹೆಚ್ಚಾಗುತ್ತದೆಯೇ? ತಜ್ಞರ ಅಭಿಪ್ರಾಯ?
ನಡಿಗೆ: ಹೆಚ್ಚು ಹೊತ್ತು ನಡೆದಾಡುವ ಮೂಲಕ ದೇಹದಲ್ಲಿನ ಹೆಚ್ಚುವರಿ ತೂಕವನ್ನು ಕಡಿಮೆ ಮಾಡಬಹುದು. ಸಂಜೆ ಅಥವಾ ಬೆಳಗ್ಗೆ ಹೊತ್ತು ವಾಕಿಂಗ್ ಹೋಗಿ ಅಥವಾ ಹೊರಗಡೆ ಹೋದಾಗ ಲಿಫ್ಟ್ ಗಳ ಬದಲಿಗೆ ಮೆಟ್ಟಿಲುಗಳಲ್ಲಿ ನಡೆದುಕೊಂಡು ಹೋಗಿ. ಹೀಗೆ ಹೆಚ್ಚು ಕಾಲ ನಡೆದಾಡುವ ಮೂಲಕ ತೂಕ ನಷ್ಟವನ್ನು ಮಾಡಬಹುದು ಹಾಗೂ ಸ್ನಾಯುಗಳನ್ನು ಬಲಪಡಿಸಬಹುದು.
ಊಟದಲ್ಲಿ ಪ್ರೋಬಯಾಟಿಕ್ ಸೇರಿಸಿ: ಬೇಸಿಗೆಯಲ್ಲಿ ಕೆಲವೊಮ್ಮೆ ಹೊಟ್ಟೆ ಉರಿ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ನೀವು ಊಟ ಮಾಡುವಾಗ ಒಂದು ಬೌಲ್ ಮೊಸರು ಅಥವಾ ಮಜ್ಜಿಗೆಯನ್ನು ಸೇವಿಸಲು ಮರೆಯದಿರಿ. ಇದು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಕಾರಿಯಾಗಿದೆ ಹಾಗೂ ಇದು ದೇಹವನ್ನು ತಂಪಾಗಿರಿಸುತ್ತದೆ.
ಕಲ್ಲಂಗಡಿ ಹಣ್ಣನ್ನು ಸೇವಿಸಿ: ಬೆಸಿಗೆಯಲ್ಲಿನ ಕಾಲೋಚಿತ ಹಣ್ಣುಗಳಲ್ಲಿ ಕಲ್ಲಂಗಡಿಯೂ ಒಂದು. ಇದು ರಿಫ್ರೆಶಿಂಗ್ ಮತ್ತು ಹೈಡ್ರೇಟಿಂಗ್ ಹಣ್ಣಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ನೀರಿನಾಂಶವಿದೆ. ಜೊತೆಗೆ ಇವುಗಳು ತೂಕ ನಷ್ಟಕ್ಕೆ ಸಹಕಾರಿಯಾಗಿದೆ.
ಹೆಚ್ಚಿನ ಪ್ರಮಾಣದಲ್ಲಿ ತರಕಾರಿಗಳನ್ನು ಸೇವಿಸಿ: ಹಸಿರು ತರಕಾರಿ ಸೊಪ್ಪುಗಳ ಸಲಾಡ್ ಸೇವಿಸಬಹುದು. ಇವುಗಳಲ್ಲಿ ಕಡಿಮೆ ಕ್ಯಾಲೋರಿ ಇರುವುದರಿಮದ ತೂಕವನ್ನು ಕಳೆದುಕೊಳ್ಳಲು ಇದು ಸಹಕಾರಿಯಾಗಿದೆ. ಸೌತೆಕಾಯಿ, ಟೊಮೆಟೊಗಳಂತಹ ತರಕಾರಿಗಳಲ್ಲಿ ಹೆಚ್ಚಿನ ಪ್ರಮಾಣದ ನೀರಿನಾಂಶವಿರುವುದರಿಂದ ಇವುಗಳು ನಮ್ಮ ಬಾಯಾರಿಕೆಯನ್ನು ತಣಿಸಲು ಸಹಾಯ ಮಾಡುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:29 pm, Thu, 27 April 23