
ಬಹುತೇಕ ಹೆಚ್ಚಿನ ಮನೆಗಳಲ್ಲಿ ಇರುವೆಗಳ (ants) ಕಾಟ ಇದ್ದಿದ್ದೆ. ಆಹಾರಗಳನ್ನು ಹುಡುಕುತ್ತಾ ಅಡುಗೆ ಕೋಣೆಯಲ್ಲಿ, ಆಹಾರ ಇಡುವ ಸ್ಥಳಗಳಲ್ಲಿ ಇವುಗಳು ಓಡಾಡುತ್ತಿರುತ್ತವೆ. ನೋಡಲು ಪುಟ್ಟದಾಗಿದ್ದರೂ ಸಹ, ಮನೆಯೊಳಗೆ ಸೇರಿಕೊಂಡರೆ ಇವುಗಳು ಸಿಕ್ಕಾಪಟ್ಟೆ ಕಿರಿಕಿರಿಯನ್ನು ಉಂಟು ಮಾಡುತ್ತಿರುತ್ತವೆ. ಹಾಗಾಗಿ ಇವುಗಳನ್ನು ತೊಡೆದುಹಾಕಲು ಅನೇಕ ಮಂದಿ ಮಾರುಕಟ್ಟೆಯಲ್ಲಿ ಲಭ್ಯವಿರುವಂತಹ ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸುತ್ತಾರೆ. ಇದರ ಬದಲು ಮನೆಯಲ್ಲಿಯೇ ಲಭ್ಯವಿರುವಂತಹ ಈ ಕೆಲವು ವಸ್ತುಗಳು ಸಹಾಯದಿಂದ ಬಲು ಸುಲಭವಾಗಿ ಇರುವೆಗಳ ಕಾಟದಿಂದ ಮುಕ್ತಿ ಪಡೆಯಬಹುದು. ಅದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ನಿಂಬೆ ಮತ್ತು ವಿನೆಗರ್ ಮಿಶ್ರಣ: ಇರುವೆಗಳು ಹುಳಿ ಮತ್ತು ಬಲವಾದ ವಾಸನೆಯನ್ನು ದ್ವೇಷಿಸುತ್ತವೆ. ಹಾಗಾಗಿ ನೀರು, ಬಿಳಿ ವಿನೆಗರ್ ಮತ್ತು ನಿಂಬೆ ರಸವನ್ನು ಸಮಾನ ಭಾಗಗಳಲ್ಲಿ ಮಿಶ್ರಣ ಮಾಡಿ ಸ್ಪ್ರೇ ಬಾಟಲಿಯಲ್ಲಿ ಹಾಕಿ, ಇದನ್ನು ಬಾಗಿಲುಗಳು, ಕಿಟಕಿಗಳು ಮತ್ತು ಬಿರುಕು ಬಿಟ್ಟ ಸ್ಥಳಗಳಲ್ಲಿ ಸಿಂಪಡಿಸಿ. ಇವುಗಳ ಬಲವಾದ ವಾಸನೆ ಇರುವೆಗಳು ಮನೆಯೊಳಗೆ ಪ್ರವೇಶಿಸದಂತೆ ತಡೆಯುತ್ತದೆ.
ಉಪ್ಪಿನ ದ್ರಾವಣ: ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಉಪ್ಪು ಕೂಡ ಇರುವೆಗಳನ್ನು ಓಡಿಸಲು ತುಂಬಾನೇ ಸಹಕಾರಿ. ಇದಕ್ಕಾಗಿ ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಎರಡು ಚಮಚ ಉಪ್ಪು ಸೇರಿಸಿ ಕರಗಿಸಿ.ಈ ದ್ರಾವಣವನ್ನು ಇರುವೆ ಹಾದಿಗಳ ಮೇಲೆ ಸಿಂಪಡಿಸಿ.ಕೆಲವೇ ನಿಮಿಷಗಳಲ್ಲಿ ಇರುವೆಗಳು ಓಡಿ ಹೋಗುತ್ತವೆ.
ದಾಲ್ಚಿನ್ನಿ ಪುಡಿ: ದಾಲ್ಚಿನ್ನಿಯ ಬಲವಾದ ಪರಿಮಳವು ಇರುವೆಗಳನ್ನು ಹಿಮ್ಮೆಟ್ಟಿಸಲು ಉತ್ತಮ ಮಾರ್ಗವಾಗಿದೆ. ಹಾಗಾಗಿ ಇರುವೆಗಳು ಓಡಾಡುವ ಸ್ಥಳದಲ್ಲಿ ದಾಲ್ಚಿನ್ನಿ ಪುಡಿಯನ್ನು ಹಾಕಿ. ಇಲ್ಲದಿದ್ದರೆ ನೀವು ದಾಲ್ಚಿನ್ನಿ ಎಣ್ಣೆಯನ್ನು ನೀರೊಂದಿಗೆ ಬೆರೆಸಿ, ಇರುವೆಗಳು ಓಡಾಡುವ ಸ್ಥಳದಲ್ಲಿ ಸಿಂಪಡಿಸಬಹುದು. ಇದಲ್ಲದೆ ಇರುವೆಗಳು ಹೆಚ್ಚಾಗಿ ಓಡಾಡುವ ಸ್ಥಳದಲ್ಲಿ ಲವಂಗವನ್ನೂ ಇಡಬಹುದು. ಈ ತಂತ್ರ ಇರುವೆಗಳನ್ನು ಪರಿಣಾಮಕಾರಿಯಾಗಿ ಓಡಿಸಲು ಸಹಕಾರಿಯಾಗಿದೆ.
ಪುದೀನಾ ಎಣ್ಣೆ: ಪುದೀನಾ ಎಣ್ಣೆಯ ಬಲವಾದ ವಾಸನೆಯು ಇರುವೆಗಳನ್ನು ದೂರವಿಡಲು ತುಂಬಾನೇ ಸಹಕಾರಿ. ಸ್ವಲ್ಪ ನೀರಿಗೆ 10 ಹನಿ ಪುದೀನಾ ಎಣ್ಣೆಯನ್ನು ಸೇರಿಸಿ ಮಿಶ್ರಣ ಮಾಡಿ, ಈ ಮಿಶ್ರಣವನ್ನು ಮನೆಯ ಮೂಲೆಗಳು ಮತ್ತು ಇರುವೆಗಳು ಓಡಾಡುವ ಸ್ಥಳಗಳಲ್ಲಿ ಸಿಂಪಡಿಸಿ.
ಇದನ್ನೂ ಓದಿ: ಈ ಒಂದು ಹಣ್ಣಿನ ಸಿಪ್ಪೆಯ ಸಹಾಯದಿಂದ ಮನೆಯಿಂದ ಸುಲಭವಾಗಿ ಇಲಿಗಳನ್ನು ಓಡಿಸಬಹುದು
ಈರುಳ್ಳಿ: ಈರುಳ್ಳಿಯ ಬಲವಾದ ವಾಸನೆಯನ್ನು ಇರುವೆಗಳು ಇಷ್ಟಪಡುವುದಿಲ್ಲ. ಹಾಗಾಗಿ ಇರುವೆಗಳು ಓಡಾಡುವ ಪ್ರದೇಶಗಳಲ್ಲಿ ಈರುಳ್ಳಿ ಚೂರುಗಳನ್ನು ಇರಿಸಿ. ಅವು ಸ್ವಲ್ಪ ಸಮಯದಲ್ಲೇ ಅಲ್ಲಿಂದ ಮಾಯವಾಗುತ್ತವೆ.
ಈ ಕ್ರಮಗಳ ಜೊತೆಗೆ, ನಿಮ್ಮ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ, ಮನೆ ತೇವಭರಿತವಾಗಿರಂತೆ ಮುಖ್ಯವಾಗಿದೆ. ಅಡುಗೆಮನೆಯಲ್ಲಿ ಚೆಲ್ಲಿದ ಸಿಹಿತಿಂಡಿಗಳು ಅಥವಾ ಸಕ್ಕರೆ ಇರುವೆಗಳನ್ನು ಆಕರ್ಷಿಸುತ್ತದೆ. ಆದ್ದರಿಂದ, ಈ ಆಹಾರಗಳನ್ನು ಭದ್ರವಾಗಿ ಮುಚ್ಚಿಡಿ. ಇರುವೆಗಳು ಒಳಗೆ ಬರದಂತೆ ಬಿರುಕುಗಳು ಮತ್ತು ರಂಧ್ರಗಳನ್ನು ಮುಚ್ಚಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ