ಇಂದಿನ ದಿನಗಳಲ್ಲಿ ಅತಿಯಾದ ಒತ್ತಡ ಹಾಗೂ ಅನಾರೋಗ್ಯಕರ ಜೀವನಶೈಲಿಯಿಂದಾಗಿ ದೇಹದಲ್ಲಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಡಲು ಆರಂಭಿಸುತ್ತದೆ. ಇದರಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆಯು ಒಂದಾಗಿದೆ. ದೇಶದಲ್ಲಿ ಬಹುತೇಕ ಜನರು ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಪಧಮನಿಗಳಲ್ಲಿ ಹರಿಯುವ ರಕ್ತದ ವೇಗವು ಸಾಮಾನ್ಯ ವೇಗಕ್ಕಿಂತ ಹೆಚ್ಚಿರುವ ಸ್ಥಿತಿಗೆ ಅಧಿಕ ರಕ್ತದೊತ್ತಡ ಎನ್ನುತ್ತಾರೆ. ದೀರ್ಘಕಾಲದ ಅಧಿಕ ರಕ್ತದೊತ್ತಡವು ಹೃದಯ ವೈಫಲ್ಯ ಮತ್ತು ಅಪಧಮನಿಗಳಲ್ಲಿ ಅಡಚಣೆಯ ಅಪಾಯವನ್ನು ಹೆಚ್ಚಿಸುತ್ತದೆ. ನೀವು ಸಹ ಈ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದರೆ ಮತ್ತು ಅದನ್ನು ನಿಯಂತ್ರಿಸಲು ಬಯಸಿದರೆ, ಯೋಗ ಮತ್ತು ಪ್ರಾಣಾಯಾಮ ಇದಕ್ಕೆ ಉತ್ತಮ ಚಿಕಿತ್ಸೆಯಾಗಿದೆ. ಡಾ. ಐಶ್ವರ್ಯಾ ಗೌಡ ಅವರು ಹೇಳುವ ಪ್ರಕಾರ ಚಂದ್ರಭೇದನ ಪ್ರಾಣಾಯಾಮವು ನಿಮಗೆ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾದರೆ ಇದನ್ನು ಮಾಡುವುದು ಹೇಗೆ?
ನಮ್ಮ ಮೂಗಿನ ಎಡ ಹೊಳ್ಳೆಯನ್ನು ಚಂದ್ರನಿಗೆ ಹೋಲಿಸಲಾಗುತ್ತದೆ. ಏಕೆಂದರೆ ನಮ್ಮ ಶರೀರವನ್ನು ತಂಪಾಗಿಡಲು ಎಡಭಾಗದ ಹೊಳ್ಳೆಯ ಉಸಿರಾಟವು ಅತ್ಯಂತ ಪ್ರಮುಖವಾದದ್ದು. ಒಂದು ಹೊಳ್ಳೆಯಿಂದ ಮತ್ತೊಂದು ಹೊಳ್ಳೆಗೆ ಉಸಿರನ್ನು ತಳ್ಳುವ ಪ್ರಕ್ರಿಯೆಗೆ ಭೇದನ ಎನ್ನಲಾಗುತ್ತದೆ. ಇದನ್ನು ಮಾಡುವಾಗ ನಿಮಗೆ ಅನುಕೂಲಕರವಾದ ಭಂಗಿಯಲ್ಲಿ ಕುಳಿತುಕೊಳ್ಳಿ. ಬಲ ಹಸ್ತವನ್ನು ನಾಸಿಕಾಗ ಮುದ್ರೆ ಅಂದರೆ ತೋರುಬೆರಳು ಮತ್ತು ಮಧ್ಯದ ಬೆರಳನ್ನು ಮಡಿಸಿ, ಹೆಬ್ಬೆರಳನ್ನು ಬಲ ಮೂಗಿನ ಹೊಳ್ಳೆ ಮೇಲೆ ಒತ್ತಿ ಹೊಳ್ಳೆಯನ್ನು ಮುಚ್ಚಬೇಕು. ಎಡ ಹಸ್ತದ ಹೆಬ್ಬೆರಳು ಮತ್ತು ತೋರುಬೆರಳಿನ ತುದಿಯನ್ನು ತಾಕಿಸಿ ಚಿನ್ನ ಮುದ್ರೆಯನ್ನು ಮಾಡಿ ಎಡಗಾಲಿನ ಮಂಡಿಯ ಮೇಲೆ ಇರಿಸಬೇಕು.
ಇದನ್ನೂ ಓದಿ: ಬೆಳ್ಳುಳ್ಳಿ ಸಿಪ್ಪೆಗಳನ್ನು ಎಸೆಯುವ ಅಭ್ಯಾಸ ಬಿಟ್ಟುಬಿಡಿ!
ಹೆಬ್ಬೆರಳನ್ನು ಬಲ ಮೂಗಿನ ಹೊಳ್ಳೆ ಮೇಲೆ ಒತ್ತಿ ಹಿಡಿದಾಗ ಎಡ ಹೊಳ್ಳೆಯಿಂದ ಪೂರ್ಣ ಉಸಿರನ್ನು ತೆಗೆದುಕೊಳ್ಳಬೇಕು. ಈಗ ತೋರುಬೆರಳು ಮತ್ತು ಮಧ್ಯದ ಬೆರಳಿನಿಂದ ಎಡ ಹೊಳ್ಳೆಯನ್ನು ಮುಚ್ಚಬೇಕು. ಬಲ ಹೊಳ್ಳೆಯನ್ನು ತೆರೆದು ಉಸಿರನ್ನು ತೆಗೆದುಕೊಂಡು ಎಡಭಾಗದಿಂದ ಅದನ್ನು ಬಿಡಬೇಕು. ಇದು ಒಂದು ಸುತ್ತು. ಇದೇ ರೀತಿ 15 ಸುತ್ತು ಅಭ್ಯಾಸ ಮಾಡಬೇಕು. ಮಾಡುವಾಗ ಬೆನ್ನು ಮತ್ತು ಕುತ್ತಿಗೆ ನೇರವಾಗಿರಬೇಕು.
ಈ ಪ್ರಾಣಾಯಾಮವನ್ನು ಅಧಿಕ ರಕ್ತದೊತ್ತಡ ಇರುವವರು ಮಾಡಬಹುದು. ಇನ್ನು ಈ ಪ್ರಾಣಾಯಾಮವನ್ನು ಅಸ್ತಮಾ ರೋಗಿಗಳು, ಕಡಿಮೆ ರಕ್ತದೊತ್ತಡ ಇರುವವರು ಮತ್ತು ದೇಹ ಬಹು ಬೇಗ ತಂಪಾಗುವವರು ಅಂದರೆ ತಂಪಿನ ದೇಹ ಇರುವವರು ಇದನ್ನು ಮಾಡಬಾರದು ಎಂದು ಡಾ. ಐಶ್ವರ್ಯಾ ಗೌಡ ಹೇಳುತ್ತಾರೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:32 pm, Sat, 27 April 24