Home Made Kulifi: ಈ ಹಣ್ಣುಗಳಿಂದ ಮನೆಯಲ್ಲೇ ಮಾಡಿ ಕೂಲ್ ಕೂಲ್ ಕುಲ್ಫಿ
ಬೇಸಿಗೆಯಲ್ಲಿ ಹೆಚ್ಚಿನವರು ತಣ್ಣನೆಯ ಆಹಾರವನ್ನು ಸೇವಿಸಲು ಇಷ್ಟ ಪಡುತ್ತಾರೆ. ದೇಹವನ್ನು ತಂಪಾಗಿಟ್ಟುಕೊಳ್ಳಲು ತಾಜಾವಾಗಿಡುವ ಆಹಾರಗಳ ಮೊರೆ ಹೋಗುತ್ತೇವೆ. ಐಸ್ ಕ್ರೀಮ್ ಕೊಟ್ಟರಂತೂ ಬೇಡ ಎನ್ನುವುದೇ ಇಲ್ಲ. ಮಕ್ಕಳಿಂದ ಹಿಡಿದು ದೊಡ್ಡದವರೆಗೂ ದೇಹವನ್ನು ಕೂಲ್ ಆಗಿಸುವ ಐಸ್ ಕ್ರೀಮ್ ಅನ್ನು ಸೇವಿಸುತ್ತಾರೆ. ಐಸ್ ಕ್ರೀಮ್ ಅಥವಾ ಕುಲ್ಫಿ ತಿನ್ನುವುದರಿಂದ ಸುಡು ಬಿಸಿಲಿನಿಂದ ಕೊಂಚ ರಿಲ್ಯಾಕ್ಸ್ ಆಗಿಸುತ್ತದೆ. ಯಾರಪ್ಪಾ ಹೊರಗಡೆ ಹೋಗಿ ಐಸ್ ಕ್ರೀಮ್ ತರ್ತಾರೆ ಎನ್ನುವವರು ಮನೆಯಲ್ಲಿರುವ ಕೆಲವೇ ಕೆಲವು ಪದಾರ್ಥಗಳಿಂದ ಕುಲ್ಫಿ ಮಾಡಿ ಸವಿಯಬಹುದು.
ಬಿಸಿಲಿನ ಧಗೆ ಹೆಚ್ಚಾಗಿದೆ, ಸೂರ್ಯನು ತನ್ನ ಪ್ರಖರತೆಯನ್ನು ತೋರಿಸುತ್ತಿದ್ದಾನೆ. ಅಬ್ಬಬ್ಬಾ ಸಿಕ್ಕಾಪಟ್ಟೆ ಸೆಕೆ, ಯಾವಾಗ ಮಳೆಗಾಲ ಬರುತ್ತೋ ಹೀಗೆ ಗೊಣಗುವವರು ಹೆಚ್ಚಾಗಿದ್ದಾರೆ. ಈ ಸೂರ್ಯನ ಸುಡು ಬಿಸಿಲಿನ ನಡುವೆ ಹೊರಗಡೆ ಅಡ್ಡಾಡಲು ಸಾಧ್ಯವಿಲ್ಲ ಎನ್ನುವಂತಾಗಿದೆ. ಅಪ್ಪಿ ತಪ್ಪಿ ಹೋದರಂತೂ ತಲೆ ನೋವು, ಬಾಯಾರಿಕೆ, ಸುಸ್ತು ಬಿಟ್ಟರೆ ಬೇರೇನೂ ಇಲ್ಲ. ಹೊರಗಡೆ ಹೋಗಿ ಮನೆ ಬಂದ ಮೇಲೆ ಬಿಸಿ ಬಿಸಿ ಆಹಾರವನ್ನು ಮುಂದೆ ಇಟ್ಟರಂತೂ ಪಿತ್ತ ನೆತ್ತಿಗೇರುತ್ತದೆ. ಈ ಸಮಯದಲ್ಲಿ ನಿಮ್ಮ ಕೈಗೆ ತಣ್ಣನೆಯ ಐಸ್ ಕ್ರೀಮ್ ತಂದುಕೊಟ್ಟರೆ ಖುಷಿಯಾಗುವುದು ಸಹಜ.
ಕಲ್ಲಂಗಡಿ ಕುಲ್ಫಿ ಮಾಡಲು ಬೇಕಾಗುವ ಸಾಮಾಗ್ರಿಗಳು:
* ಕತ್ತರಿಸಿದ ಕಲ್ಲಂಗಡಿ ತುಂಡುಗಳು
* ನಿಂಬೆ ರಸ
* ಸಕ್ಕರೆ
ಕಲ್ಲಂಗಡಿ ಕುಲ್ಫಿ ಮಾಡುವ ವಿಧಾನ:
* ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ಎಲ್ಲಾ ಬೀಜಗಳನ್ನು ತೆಗೆದು, ಸಣ್ಣ ಸಣ್ಣ ತುಂಡುಗಳಾಗಿ ಮಾಡಿ ಇಡಿ.
* ಮಿಕ್ಸಿ ಜಾರಿಗೆ ಸಣ್ಣ ತುಂಡುಗಳನ್ನು ಸೇರಿಸಿ ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಿ ರುಬ್ಬಿಕೊಳ್ಳಿ.
* ಇದಕ್ಕೆ 3 ಚಮಚ ನಿಂಬೆ ರಸವನ್ನು ಬೆರೆಸಿ ಸ್ವಲ್ಪ ಹಾಗೆ ಬಿಡಿ.
* ಕಲ್ಲಂಗಡಿ ರಸವನ್ನು ಕುಲ್ಫಿ ಅಚ್ಚಿನಲ್ಲಿ ಸುರಿದು, 3 ರಿಂದ 4 ಗಂಟೆಗಳ ಕಾಲ ಫಿಡ್ಜ್ ನಲ್ಲಿಡಿ. ಆ ಬಳಿಕ ಹೊರತೆಗೆದರೆ ಕೂಲ್ ಕೂಲ್ ಕಲ್ಲಂಗಡಿ ಕುಲ್ಫಿ ಸವಿಯಲು ಸಿದ್ಧ.
ಇದನ್ನೂ ಓದಿ: ಹೋಳಿ ಆಚರಣೆಗೆ ಹೇಗೆಲ್ಲಾ ಪ್ಲಾನ್ ಮಾಡಿಕೊಂಡಿದ್ದೀರಾ? ಇದನ್ನು ಸೇರಿಸಿಕೊಳ್ಳಲಿ
ಮ್ಯಾಂಗೋ ಕುಲ್ಫಿಗೆ ಬೇಕಾಗುವ ಸಾಮಗ್ರಿಗಳು :
* ಒಂದೂವರೆ ಕಪ್ ಕೆನೆಭರಿತ ಹಾಲು
* ಒಂದು ಕಪ್‌ಗಿಂತ ಸ್ವಲ್ಪ ಕಮ್ಮಿ ಮಂದವಾದ ಹಾಲು
* ಅರ್ಧ ಕಪ್ ಕ್ರೀಮ್
* ಏಲಕ್ಕಿ
* ಮಾವಿನ ಹಣ್ಣಿನ ತಿರುಳು
ಮ್ಯಾಂಗೋ ಕುಲ್ಫಿ ಮಾಡುವ ವಿಧಾನ:
* ಮೊದಲಿಗೆ ಕೆನೆಭರಿತ ಹಾಲು, ಕುದಿಸಿಟ್ಟ ಮಂದವಾದ ಹಾಲು ಹಾಗೂ ಮಾವಿನ ಹಣ್ಣಿನ ತಿರುಳನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.
* ಇದಕ್ಕೆ ಕ್ರೀಮ್, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
* ಈ ಮಿಶ್ರಣವನ್ನು ಕುಲ್ಫಿ ಅಚ್ಚಿಗೆ ಹಾಕಿ ಫ್ರೀಜರ್‌ನಲ್ಲಿ ಎಂಟು ಗಂಟೆಗಳ ಕಾಲ ಇಟ್ಟು, ಆ ಬಳಿಕ ತೆಗೆದರೆ ಮ್ಯಾಂಗೋ ಕುಲ್ಫಿ ರೆಡಿಯಾಗಿರುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ