Breast feeding: ಮಗುವಿಗೆ ಎಷ್ಟು ಸಮಯಗಳವರೆಗೆ ಎದೆಹಾಲು ಉಣಿಸಬೇಕು? ತಾಯಿ ದೇಹದಲ್ಲಿರುವ ಗಾಯ ಮಾಯವಾಗಲು ಸ್ತನ್ಯಪಾನ ಉತ್ತಮ
ಹಾಲುಣಿಸುವ ತಾಯಿಯಂದಿರ ಸಮಸ್ಯೆ ಏನೆಂದರೆ, ಅವರು ತಮ್ಮ ಮಗುವಿಗೆ ಘನ ಆಹಾರವನ್ನು ಯಾವಾಗ ಪರಿಚಯಿಸಬೇಕು ಅಥವಾ ಯಾವಾಗ ಹಾಲುಣಿಸುವಿಕೆಯನ್ನು ನಿಲ್ಲಿಸಬೇಕು ಎಂಬುವುದು. ಮಗುವಿಗೆ ಎಷ್ಟು ಸಮಯಗಳವರೆಗೆ ಎದೆಹಾಲು ಉಣಿಸಬೇಕು ಹಾಗೂ ಸ್ತನ್ಯಪಾನದಿಂದ ತಾಯಿ ಮತ್ತು ಮಗುವಿಗೆ ಲಭಿಸುವ ಆರೋಗ್ಯ ಪ್ರಯೋಜನಗಳಾವುವು ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ನವಜಾತ ಶಿಶುವಿಗೆ ತಾಯಿಯ ಎದೆಹಾಲು ಅಮೃತವಿದ್ದಂತೆ. ಜನನದ ಕೆಲವು ತಿಂಗಳುಗಳವರೆಗೆ ಮಗುವಿಗೆ ಕೇವಲ ತಾಯಿಯ ಎದೆಹಾಲು ಮಾತ್ರ ಉಣಿಸಲಾಗುತ್ತದೆ. ಮಗುವಿನ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಎದೆಹಾಲು ಬಹಳ ಮುಖ್ಯ. ಅದಕ್ಕಾಗಿಯೇ ತಾಯಿಯ ಎದೆಹಾಲನ್ನು ಮಗುವಿಗೆ ಸಂಪೂರ್ಣ ಆಹಾರವೆಂದು ಪರಿಗಣಿಸಲಾಗಿದೆ. ಮೊದಲ ಆರು ತಿಂಗಳು, ಮಗುವಿನ ದೇಹದ ಎಲ್ಲಾ ಅಗತ್ಯಗಳನ್ನು ತಾಯಿಯ ಎದೆಹಾಲಿನಿಂದ ಪೂರೈಸಲಾಗುತ್ತದೆ. ಕೆಲವು ಮಹಿಳೆಯರು ತಮ್ಮ ಮಗುವಿಗೆ ಬಹಳ ಕಡಿಮೆ ಅವಧಿಯವರೆಗೆ ಹಾಲುಣಿಸುತ್ತಾರೆ ಮತ್ತು ಕೆಲವರು ಹೆಚ್ಚು ಸಮಯದವರೆಗೆ ತಮ್ಮ ಮಕ್ಕಳಿಗೆ ಹಾಲುಣಿಸುತ್ತಾರೆ. ಆದರೆ ನಿಖರವಾಗಿ ಎಷ್ಟು ಸಮಯದವರೆಗೆ ಹಾಲುಣಿಸುವುದು ಸೂಕ್ತ ಎಂಬುವುದು ಹೆಚ್ಚಿನವರಿಗೆ ತಿಳಿದಿಲ್ಲ. ಈ ಗೊಂದಲವನ್ನು ಹೋಗಲಾಡಿಸಲು ವಿಶ್ವ ಆರೋಗ್ಯ ಸಂಸ್ಥೆಯು ಮಗುವಿಗೆ ಹಾಲುಣಿಸುವ ಅವಧಿಯನ್ನು ನಿಗದಿಪಡಿಸಿದೆ.
ಮಗುವಿಗೆ ಎಷ್ಟು ತಿಂಗಳವರೆಗೆ ಎದೆಹಾಲು ಉಣಿಸಬೇಕು:
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಮಗು ಜನಿಸಿದ ಒಂದು ಗಂಟೆಯೊಳಗೆ ಮಗುವಿಗೆ ಹಾಲುಣಿಸಬೇಕು. ಏಕೆಂದರೆ ತಾಯಿಯ ಮೊದಲ ಎದೆಹಾಲು ಮಗುವಿನ ಬೆಳವಣಿಗೆ ಮತ್ತು ಆರೋಗ್ಯಕ್ಕೆ ಅಗತ್ಯವಾದ ಗುಣಗಳನ್ನು ಮತ್ತು ಪೋಷಕಾಂಶಗಳನ್ನು ನೀಡುತ್ತದೆ. ಅದೇ ಸಮಯದಲ್ಲಿ, ಮಗುವಿಗೆ ಆರು ತಿಂಗಳವರೆಗೆ ಕೇವಲ ಎದೆಹಾಲು ಮಾತ್ರ ನೀಡಬೇಕು. 6 ತಿಂಗಳ ನಂತರ ಮಗುವಿಗೆ ಹಾಲುಣಿಸುವ ಜೊತೆಗೆ ಸ್ವಲ್ಪ ಜೀರ್ಣವಾಗುವ ಘನ ಆಹಾರಗಳನ್ನು ನೀಡಲು ಪ್ರಾರಂಭಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡುತ್ತದೆ. ಮಗುವಿಗೆ ಘನ ಆಹಾರಗಳನ್ನು ನೀಡಲು ಪ್ರಾರಂಭಿದರೂ ಮಗುವಿಗೆ 2 ವರ್ಷ ತುಂಬುವವರೆಗೆ ಕಡ್ಡಾಯವಾಗಿ ಎದೆಹಾಲು ಉಣಿಸಬೇಕು. ಇದಕ್ಕಿಂತ ಕಡಿಮೆ ಸಮಯ ಹಾಲುಣಿಸುವುದು ಮಗುವಿನ ಬೆಳವಣಿಗೆಗೆ ಅಡ್ಡಿಯಾಗುತ್ತದೆ.
ದಿನಕ್ಕೆ ಎಷ್ಟು ಬಾರಿ ಹಾಲುಣಿಸಬೇಕು:
ವಿಶ್ವ ಆರೋಗ್ಯ ಸಂಸ್ಥೆಯು 6 ತಿಂಗಳವರೆಗೆ ಮಗುವಿಗೆ ಎಷ್ಟು ಬಾರಿ ಹಸಿವಾದರೂ ಎದೆಹಾಲು ನೀಡಬೇಕು ಎಂದು ಹೇಳುತ್ತದೆ. ಅಂದರೆ ಹಗಲು ರಾತ್ರಿ ಹಸಿವಿನಿಂದ ಮಗು ಅಳಲು ಪ್ರಾರಂಭಿಸಿದಾಗಲೆಲ್ಲಾ ಸ್ತನ್ಯಪಾನ ಮಾಡಬೇಕು. ಇದರಲ್ಲಿ ಯಾವುದೇ ಅಜಾಗರೂಕತೆ ಇರಬಾರದು.
ಮಗುವಿಗೆ ಸ್ತನ್ಯಪಾನದ ಪ್ರಯೋಜನಗಳು:
• ತಾಯಿಯ ಎದೆಹಾಲು ಸೇವನೆಯಿಂದ ಮಕ್ಕಳನ್ನು ಅನೇಕ ರೋಗಗಳಿಂದ ದೂರವಿರಲು ಶಕ್ತಿಯನ್ನು ಹೊಂದುತ್ತಾರೆ. ಇದಲ್ಲದೆ ಮಕ್ಕಳ ದೇಹದಲ್ಲಿ ರೋಗನಿರೋಧಕ ಶಕ್ತಿ ಬಲವಾಗುತ್ತದೆ.
• ತಾಯಿಯ ಮೊದಲ ಹಾಲಿನಲ್ಲಿ ಕೊಲೊಸ್ಟ್ರಮ್ ಎಂಬ ದ್ರವವಿದೆ. ಇದು ಮಗುವಿಗೆ ಮಕರಂದದಂತೆ. ಇದು ಪ್ರೋಟೀನ್ ಮತ್ತು ಇತರ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ.
• ತಾಯಿಯ ಎದೆಹಾಲು ಕುಡಿಯುವ ಮಕ್ಕಳ ಮೆದುಳನ್ನು ವೇಗವಾಗಿ ಅಭಿವೃದ್ಧಿಪಡಿಸುತ್ತಾರೆ.
• ತಾಯಿಯ ಎದೆಹಾಲು ಕುಡಿಯುವ ಮಕ್ಕಳಲ್ಲಿ ಸ್ಥೂಲಕಾಯತೆಯ ಸಮಸ್ಯೆ ಕಡಿಮೆ ಕಂಡುಬರುತ್ತದೆ.
ಇದನ್ನೂ ಓದಿ: ಸ್ತನ್ಯಪಾನದ ಬಗ್ಗೆ ತಾಯಂದಿರು ತಿಳಿಯಬೇಕಾದ ಪ್ರಮುಖ ಅಂಶಗಳು
ಹಾಲುಣಿಸುವುದರಿಂದ ತಾಯಿಗೆ ಲಭಿಸುವ ಪ್ರಯೋಜನಗಳು
• ತಾಯಿಯು ಮಗುವಿಗೆ ಜನ್ಮ ನೀಡಿದಾಗ, ಆಕೆಯ ದೇಹದಲ್ಲಿ ಅನೇಕ ಗಾಯಗಳಿರುತ್ತವೆ. ಹಾಲುಣಿಸುವಿಕೆಯಿಂದ, ಈ ಗಾಯಗಳು ಬೇಗನೆ ವಾಸಿಯಾಗುತ್ತದೆ. ಸ್ತನ್ಯಪಾನವು ಗರ್ಭಧಾರಣೆಯ ನಂತರದ ಸಮಸ್ಯೆಗಳಿಂದ ತಾಯಿಗೆ ಪರಿಹಾರವನ್ನು ಪಡೆಯಲು ಸಹಾಯ ಮಾಡುತ್ತದೆ. ಉದಾಹರಣೆಗೆ ಒತ್ತಡ ಮತು ರಕ್ತಸ್ರಾವದಂತಹ ಸಮಸ್ಯೆಗಳನ್ನು ತ್ವರಿತವಾಗಿ ನಿಯಂತ್ರಿಸಬಹುದು.
• ಸ್ತನ್ಯಪಾನವು ತಾಯಿ ಮತ್ತು ಮಗುವಿನ ನಡುವೆ ಉತ್ತಮ ಬಾಂಧವ್ಯವನ್ನು ನಿರ್ಮಿಸುತ್ತದೆ. ಈ ಕಾರಣದಿಂದ ಮಗು ತನ್ನ ತಾಯಿಯನ್ನು ಬೇಗನೆ ಗುರುತು ಹಿಡಿಯಲು ಪ್ರಾರಂಭಿಸುತ್ತದೆ.
• ಗರ್ಭಾವಸ್ಥೆಯ ಸಮಯದಲ್ಲಿ ಪ್ರತಿಯೊಬ್ಬ ಮಹಿಳೆಯ ದೇಹತೂಕವು ಹೆಚ್ಚಾಗುತ್ತದೆ. ಸ್ತನ್ಯಪಾನವು ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
• ಮಗುವಿಗೆ ಹಾಲುಣಿಸುವುದರಿಂದ ತಾಯಿಯ ದೇಹದಲ್ಲಿ ಹಾರ್ಮೋನುಗಳು ಸಮತೋಲಿತವಾಗಿರುತ್ತವೆ, ಇದರಿಂದ ತಾಯಿಗೆ ಹೆಚ್ಚಿನ ಶಕ್ತಿ ಸಿಗುತ್ತದೆ, ಜೊತೆಗೆ ಮೊಡವೆಗಳು ಕಾಣಿಸಿಕೊಳ್ಳುವ ಸಾಧ್ಯತೆಯೂ ಕಡಿಮೆ.
• ಸ್ತನ್ಯಪಾನವು ತಾಯಿಯ ಗರ್ಭಾಶಯದಲ್ಲಿನ ಕ್ಯಾನ್ಸರ್ ಅಪಾಯವನ್ನು ಬಹಳ ಮಟ್ಟಿಗೆ ಕಡಿಮೆ ಮಾಡುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ