ವಾರಕ್ಕೆ ಎಷ್ಟು ಬಾರಿ ತಲೆ ಸ್ನಾನ ಮಾಡಿದರೆ ಉತ್ತಮ? ನೀವು ತಿಳಿಯಲೇಬೇಕಾದ ಮಾಹಿತಿ ಇದು
ಪ್ರತಿದಿನ ಸ್ನಾನ ಮಾಡುವುದು ಒಳ್ಳೆಯ ಅಭ್ಯಾಸ. ಆದ್ರೆ ಪ್ರತಿದಿನ ತಲೆ ಸ್ನಾನ ಮಾಡುವುದು ಅಷ್ಟು ಸೂಕ್ತವಲ್ಲ ಎಂದು ತಜ್ಞರು ಹೇಳುತ್ತಾರೆ. ಹೌದು ಪ್ರತಿದಿನ ಶಾಂಪೂ, ಸೋಪ್ ಬಳಸಿ ತಲೆ ಸ್ನಾನ ಮಾಡುವುದರಿಂದ ನೆತ್ತಿಯ ಮೇಲಿನ ನೈಸರ್ಗಿಕ ಎಣ್ಣೆ ಮಾಸಿ ಹೋಗಬಹುದು ಮತ್ತು ಇದರಿಂದ ಕೂದಲು ದುರ್ಬಲವಾಗುತ್ತದೆ. ಹಾಗಿದ್ದರೆ ಕೂದಲ ಆರೋಗ್ಯದ ದೃಷ್ಟಿಯಲ್ಲಿ ವಾರಕ್ಕೆ ಎಷ್ಟು ಬಾರಿ ತಲೆ ಸ್ನಾನ ಮಾಡಿದ್ರೆ ಬೆಸ್ಟ್ ಅನ್ನೋದನ್ನು ತಿಳಿಯಿರಿ.

ಕೂದಲು (Hair) ಒಬ್ಬರ ನೋಟ ಮತ್ತು ಸೌಂದರ್ಯವನ್ನು ಹೆಚ್ಚಿಸುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಕೆಲವರಂತೂ ತಮ್ಮ ಕೂದಲಿನ ಆರೋಗ್ಯವನ್ನು ಕಾಪಾಡಲು ಸಿಕ್ಕಾಪಟ್ಟೆ ಖರ್ಚು ಮಾಡುತ್ತಾರೆ, ಜೊತೆಗೆ ಧೂಳು, ಮಾಲಿನ್ಯಗಳಿಂದ ಕೂದಲನ್ನು ರಕ್ಷಿಸುವ ಸಲುವಾಗಿ ಪ್ರತಿನಿತ್ಯ ತಲೆ ಸ್ನಾನ ಮಾಡುತ್ತಾರೆ. ಆದ್ರೆ ತಜ್ಞರ ಪ್ರಕಾರ ಪ್ರತಿದಿನ ತಲೆ ಸ್ನಾನ ಮಾಡುವುದು ಸೂಕ್ತವಲ್ಲ. ಏಕೆಂದರೆ ಕೂದಲನ್ನು ತೊಳೆಯಲು ಬಳಸುವಂತ ಶಾಂಪೂ, ಸೋಪುಗಳಲ್ಲಿ ಸಾಕಷ್ಟು ರಾಸಾಯನಿಕ ಅಂಶಗಳಿದ್ದು, ಇವು ಕೂದಲಿನ ನೈಸರ್ಗಿಕ ಎಣ್ಣೆಯನ್ನು ತೆಗೆದು ಹಾಕುತ್ತವೆ. ಇದರಿಂದಾಗಿ ಕಾಲಾನಂತರದಲ್ಲಿ ಕೂದಲು ನಿರ್ಜೀವ ಮತ್ತು ದುರ್ಬಲವಾಗುವ ಸಾಧ್ಯತೆ ಇರುತ್ತವೆ, ಕೂದಲು ಉದುರುವ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ. ಹೀಗಿರುವಾಗ ವಾರಕ್ಕೆ ಎಷ್ಟು ಬಾರಿ ತಲೆ ಸ್ನಾನ ಮಾಡಿದರೆ ಸೂಕ್ತ ಎಂಬುದನ್ನು ತಪ್ಪದೇ ತಿಳಿಯಿರಿ.
ವಾರದಲ್ಲಿ ಎಷ್ಟು ಬಾರಿ ತಲೆ ಸ್ನಾನ ಮಾಡಿದರೆ ಸೂಕ್ತ?
ಪ್ರತಿದಿನ ತಲೆ ಸ್ನಾನ ಮಾಡುವುದರಿಂದ ಕೂದಲು ಸ್ವಚ್ಛ ಮತ್ತು ಆರೋಗ್ಯಕರವಾಗಿರುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ಪ್ರತಿದಿನ ತಲೆ ಸ್ನಾನ ಮಾಡುವುದು ಅನಿವಾರ್ಯವಲ್ಲ ಏಕೆಂದರೆ ನೀವು ಬಳಸುವ ರಾಸಾಯನಿಕಯುಕ್ತ ಶಾಂಪೂ ನಿಮ್ಮ ಕೂದಲಿನ ನೈಸರ್ಗಿಕ ಎಣ್ಣೆಯನ್ನು ತೆಗೆದುಹಾಕಬಹುದು. ಆದ್ದರಿಂದ ವಾರಕ್ಕೆ 2 ರಿಂದ ಮೂರು ಬಾರಿ ತಲೆ ಸ್ನಾನ ಮಾಡಿದರೆ ಸಾಕು ಎನ್ನುತ್ತಾರೆ ತಜ್ಞರು. ಇನ್ನೂ ಎಣ್ಣೆಯುಕ್ತ ಕೂದಲನ್ನು ಹೊಂದಿರುವವರು ವಾರದಲ್ಲಿ 3 ರಿಂದ 4 ಬಾರಿ ತಲೆಸ್ನಾನ ಮಾಡಬಹುದು.
ಪ್ರತಿಯೊಬ್ಬರ ನೆತ್ತಿಯೂ ವಿಭಿನ್ನವಾಗಿರುತ್ತದೆ. ಕೆಲವರ ನೆತ್ತಿ ಎಣ್ಣೆಯುಕ್ತವಾಗಿದ್ದರೆ, ಇನ್ನು ಕೆಲವರ ನೆತ್ತಿ ಡ್ರೈಯಾಗಿರುತ್ತದೆ. ಎಣ್ಣೆಯುಕ್ತ ಕೂದಲಿದ್ದರೆ, ಕೂದಲು ಬೇಗನೆ ಜಿಡ್ಡಿನಂತಾಗುತ್ತದೆ ಹಾಗಾಗಿ ಎಣ್ಣೆಯುಕ್ತ ಕೂದಲನ್ನು ಹೊಂದಿರುವವರು ವಾರಕ್ಕೆ 3 ರಿಂದ 4 ಬಾರಿ ತಲೆ ಸ್ನಾನ ಮಾಡಬಹುದು. ಒಣ ಕೂದಲನ್ನು ಹೊಂದಿರುವವರು ನೆತ್ತಿ ಹಾಗೂ ಕೂದಲಿನ ನೈಸರ್ಗಿಕ ತೇವಾಂಶವನ್ನು ಕಾಪಾಡಲು ವಾರಕ್ಕೆ 1 ಅಥವಾ ಎರಡು ಬಾರಿ ತಲೆ ಸ್ನಾನ ಮಾಡಿದರೆ ಸಾಕು ಎನ್ನುತ್ತಾರೆ ತಜ್ಞರು.
ಇದನ್ನೂ ಓದಿ: ಮೆಂತ್ಯೆಯೊಂದಿಗೆ ಈ ವಸ್ತುವನ್ನು ಬೆರೆಸಿ ಹಚ್ಚಿದರೆ ಕೂದಲು ಸೊಂಪಾಗಿ, ಉದ್ದವಾಗಿ ಬೆಳೆಯುತ್ತಂತೆ
ತಲೆ ಸ್ನಾನ ಮಾಡುವಾಗ ಈ ವಿಷಯಗಳನ್ನೂ ಗಮನಿಸಿ:
ಹೆಚ್ಚಾಗಿ ಕೂದಲು ತೊಳೆಯಲು ಶಾಂಪೂ ಅಥವಾ ಸೋಪ್ ಬಳಸುತ್ತಾರೆ. ಈ ರಾಸಾಯನಿಕಯುಕ್ತ ಶಾಂಪೂಗಳು ಕೂದಲನ್ನು ದುರ್ಬಲಗೊಳಿಸುವ ಸಾಧ್ಯತೆ ಇರುತ್ತವೆ. ಆದ್ದರಿಂದ ಅತಿಯಾದ ಕೂದಲು ತೊಳೆಯುವುದನ್ನು ತಪ್ಪಿಸಿ. ಇದಲ್ಲದೆ, ಕೂದಲಿನ ಪ್ರಕಾರಕ್ಕೆ ಅನುಗುಣವಾಗಿ ಶಾಂಪೂ ಮತ್ತು ಕಂಡಿಷನರ್ ಆಯ್ಕೆ ಮಾಡಿ.. ಕೂದಲಿಗೆ ಬಣ್ಣ ಹಚ್ಚಿದ್ದರೆ, ಸಲ್ಫೇಟ್ ಮುಕ್ತ ಮತ್ತು ಸೌಮ್ಯವಾದ ಶಾಂಪೂ ಮಾತ್ರ ಬಳಸಿ.
ಹೊರಗೆ ಕೆಲಸ ಮಾಡುವುದರಿಂದ ಹಾಗೂ ವ್ಯಾಯಾಮ ಮಾಡಿ ತಲೆಯಲ್ಲಿ ಬೆವರು ಉತ್ಪತ್ತಿಯಾಗುತ್ತೆ ಹಾಗಾಗಿ ಪ್ರತಿದಿನ ತಲೆ ಸ್ನಾನ ಮಾಡಲೇಬೇಕು ಎನ್ನುವವರು ಪ್ರತಿಬಾರಿ ಶಾಂಪೂ ಉಪಯೋಗಿಸುವ ಬದಲು ಬರೀ ನೀರು ಅಥವಾ ನೈಸರ್ಗಿಕ ಪದಾರ್ಥಗಳನ್ನು ಹೊಂದಿರುವ ಸಲ್ಫೇಟ್ ಮುಕ್ತ ಶಾಂಪೂ ಬಳಸಿ. ಅಲ್ಲದೆ, ಕೂದಲು ತನ್ನ ತೇವಾಂಶವನ್ನು ಉಳಿಸಿಕೊಳ್ಳಲು ಕಂಡಿಷನರ್ ಬಳಸಲು ಮರೆಯದಿರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




