ಅಂಡರ್‌ವೇರ್‌ಗೆ ಎಕ್ಸ್‌ಪೈರಿ ಡೇಟ್‌ ಇರುತ್ತಾ? ಒಳಉಡುಪನ್ನು ಎಷ್ಟು ಸಮಯಗಳಿಗೊಮ್ಮೆ ಬದಲಾಯಿಸುತ್ತಿರಬೇಕು?

ಒಳ ಉಡುಪುಗಳು ಇತರ ಬಟ್ಟೆಗಳಿಗಿಂತ ನಮ್ಮ ದೇಹದೊಂದಿಗೆ ಹೆಚ್ಚು ಸಂಪರ್ಕದಲ್ಲಿರುತ್ತವೆ. ಆದ್ದರಿಂದ ಒಳ ಉಡುಪಿನ ಆಯ್ಕೆ ಮತ್ತು ಅದರ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಇಲ್ಲವಾದರೆ ಒಳ ಉಡುಪಿನಿಂದಲೇ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದಲೇ ಒಂದು ಬಾರಿ ತೊಟ್ಟ ಒಳ ಉಡುಪನ್ನು ಒಗೆಯದೆ ಇನ್ನೊಂದು ಬಾರಿ ಧರಿಸುವುದು ಒಳ್ಳೆಯದಲ್ಲ ಎಂದು ತಜ್ಞರು ಹೇಳೋದು. ಅದೇ ರೀತಿ ಒಳ ಉಡುಗಳಿಗೆ ವೈಯಕ್ತಿಕ ನೈರ್ಮಲ್ಯ ಮತ್ತು ಆರೋಗ್ಯದ ದೃಷ್ಟಿಯಿಂದ ನಾವು ಧರಿಸುವ ಒಳ ಉಡುಪುಗಳನ್ನು ನಿರ್ದಿಷ್ಟ ಅವಧಿಯೊಳಗೆ ಬದಲಾಯಿಸಲೇಬೇಕು.

ಅಂಡರ್‌ವೇರ್‌ಗೆ ಎಕ್ಸ್‌ಪೈರಿ ಡೇಟ್‌ ಇರುತ್ತಾ? ಒಳಉಡುಪನ್ನು ಎಷ್ಟು ಸಮಯಗಳಿಗೊಮ್ಮೆ ಬದಲಾಯಿಸುತ್ತಿರಬೇಕು?
ಸಾಂದರ್ಭಿಕ ಚಿತ್ರ
Image Credit source: Getty Images

Updated on: Oct 22, 2026 | 5:08 PM

ನಾವು ಧರಿಸುವ ಬಟ್ಟೆಗಳ ಆಯ್ಕೆಗೆ ತಲೆಕೆಡಿಸಿಕೊಳ್ಳುವಂತೆ ಒಳ ಉಡುಪುಗಳ (Underwear) ಬಗ್ಗೆ ಹೆಚ್ಚಿನವರು ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಹೌದು ಹೆಚ್ಚಿನವರು ಇದರ ಗುಣಮಟ್ಟದ ಬಗ್ಗೆ ಗಮನ ಹರಿಸುವುದಿಲ್ಲ, ಅದರ ಸ್ವಚ್ಛತೆಗೂ ಗಮನ ಕೊಡೋದಿಲ್ಲ. ನೈರ್ಮಲ್ಯ ಹಾಗೂ ಆರೋಗ್ಯದ ದೃಷ್ಟಿಯಿಂದ ಒಳ ಉಡುಪುಗಳ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಅದೇ ರೀತಿ ನೈರ್ಮಲ್ಯದ ದೃಷ್ಟಿಯಿಂದ ಒಳ ಉಡುಪುಗಳನ್ನು ಆಗಾಗ ಬದಲಿಸುತ್ತಲೇ ಇರಬೇಕು.  ಹೊರಗಡೆ ಧರಿಸುವು ಬಟ್ಟೆಗಳಿಗಿಂತ ಭಿನ್ನವಾಗಿ, ಒಳ ಉಡುಪುಗಳು ಬೆವರು, ಬ್ಯಾಕ್ಟೀರಿಯಾ, ಮೃತ ದೇಹದ ಜೀವಕೋಶಗಳು ಮತ್ತು ದೇಹದ ವಾಸನೆಗೆ ನೇರವಾಗಿ ಒಡ್ಡಿಕೊಳ್ಳುತ್ತವೆ. ಹಾಗಾಗಿ ಅವುಗಳನ್ನು ಸ್ವಚ್ಛಗೊಳಿಸುವುದು ಮಾತ್ರವಲ್ಲ ನಿರ್ದಿಷ್ಟ ತಿಂಗಳು ಅಥವಾ ವರ್ಷಕ್ಕೊಮ್ಮೆ ಬದಲಾಯಿಸುತ್ತಿರಬೇಕು. ಅಂಡರ್‌ವೇರ್‌ಗಳನ್ನು ಎಷ್ಟು ಸಮಯಕ್ಕೊಮ್ಮೆ ಬದಲಾಯಿಸಲೇಬೇಕು ಎಂಬುದನ್ನು ನೋಡೋಣ ಬನ್ನಿ.

ಒಳ ಉಡುಪುಗಳಿಗೆ ಎಕ್ಸ್‌ಪೈರಿ ಡೇಟ್ ಇದೆಯೇ?

ತಜ್ಞರ ಪ್ರಕಾರ, ಯಾವುದೇ ಒಳ ಉಡುಪುಗಳಿಗೆ ಮುಕ್ತಾಯ ದಿನಾಂಕವಿಲ್ಲ. ಆದರೆ ಅದನ್ನು ಕಾಲ ಕಾಲಕ್ಕೆ ಬದಲಾಯಿಸುವುದು ತುಂಬಾನೇ ಮುಖ್ಯ. ಒಳ ಉಡುಪು ಸಡಿಲವಾಗಿದ್ದರೆ ಅಥವಾ ಅದರಲ್ಲಿ ರಂಧ್ರಗಳು ಕಾಣಿಸಿಕೊಂಡರೆ ಅಂತಹ ಒಳ ಉಡುಪನ್ನು ಧರಿಸಬಾರದು. ಇದಲ್ಲದೆ  ಅವು ಸ್ವಚ್ಛವಾಗಿ ಮತ್ತು ಉತ್ತಮ ಸ್ಥಿತಿಯಲ್ಲಿ ಇದ್ದರೂ, ಪ್ರತಿ 6 ರಿಂದ 12 ತಿಂಗಳಿಗೊಮ್ಮೆ ಒಳ ಉಡುಪುಗಳನ್ನು ಬದಲಾಯಿಸಬೇಕು. ಜೊತೆಗೆ ನೀವು ನಿಮ್ಮ ಒಳ ಉಡುಪುಗಳನ್ನು ಸರಿಯಾಗಿ ಸ್ವಚ್ಛಗೊಳಿಸುತ್ತಿರಬೇಕು. ಒಮ್ಮೆ ಧರಿಸಿದ ಒಳ ಉಡುಪು ಉತ್ತಮ ಡಿಟರ್ಜೆಂಟ್ ಮತ್ತು ಡೆಟಾಲ್ ನೀರಿನಿಂದ ತೊಳೆಯಬೇಕು. ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಖಾಸಗಿ ಅಂಗಗಳಲ್ಲಿ ತುರಿಕೆ, ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಕೊಳಕಾಗಿದ್ದರೆ, ನಿಮಗೆ ಸೋಂಕು ತಗಲಬಹುದು.

ಒಳ ಉಡುಪುಗಳನ್ನು ಸಮಯಕ್ಕೆ ಸರಿಯಾಗಿ ಬದಲಾಯಿಸದಿದ್ದರೆ ಏನಾಗುತ್ತದೆ?

ಹಳೆಯ ಅಥವಾ ಸರಿಯಾಗಿ ಸ್ವಚ್ಛಗೊಳಿಸದ ಒಳ ಉಡುಪುಗಳನ್ನು ಧರಿಸುವುದರಿಂದ ಚರ್ಮದ ಕಿರಿಕಿರಿ, ತುರಿಕೆ, ಸೋಂಕುಗಳು ಮತ್ತು ಇತರ ನೈರ್ಮಲ್ಯ ಸಮಸ್ಯೆಗಳು ಉಂಟಾಗಬಹುದು. ಅವುಗಳನ್ನು ನಿಯಮಿತವಾಗಿ ಬದಲಾಯಿಸುವುದು ಬಹಳ ಮುಖ್ಯ. ಜೊತೆಗೆ ಪ್ರತಿ ಬಳಕೆಯ ನಂತರ ಒಳ ಉಡುಪುಗಳನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಅತ್ಯಗತ್ಯ. ಅವುಗಳನ್ನು ನೀರಿನಿಂದ ಮಾತ್ರವಲ್ಲ, ಸೋಪ್ ಅಥವಾ ಡಿಟರ್ಜೆಂಟ್‌ನಿಂದ ತೊಳೆಯಬೇಕು

ಸಮಯಕ್ಕೆ ಸರಿಯಾಗಿ ಒಳ ಉಡುಪುಗಳನ್ನು ಬದಲಾಯಿಸುವುದು ಏಕೆ ಅವಶ್ಯಕ?

ವಾಸ್ತವವಾಗಿ, ನಿರಂತರ ಬಳಕೆ ಮತ್ತು ತೊಳೆಯುವಿಕೆಯಿಂದಾಗಿ, ಬಟ್ಟೆಯ ನಾರುಗಳಲ್ಲಿ ಸಣ್ಣ ರಂಧ್ರಗಳು ಕಾಣಿಸಿಕೊಳ್ಳುತ್ತವೆ. ಈ ಸಣ್ಣ ರಂಧ್ರಗಳು ಬ್ಯಾಕ್ಟೀರಿಯಾ, ಶಿಲೀಂಧ್ರ, ಸತ್ತ ಚರ್ಮ ಮತ್ತು ದೈಹಿಕ ದ್ರವಗಳನ್ನು ಹಿಡಿದಿಟ್ಟುಕೊಳ್ಳಬಹುದು, ತೊಳೆದರೂ ಸಹ ಈ ಸೂಕ್ಷ್ಮಾಣು ಜೀವಿಗಳು ಹೋಗುವುದಿಲ್ಲ. ಸಂಗ್ರಹವಾದ ಈ ಕೊಳೆ ವಾಸನೆ ಮತ್ತು ಚರ್ಮದ ಸೋಂಕುಗಳಿಗೆ ಕಾರಣವಾಗಬಹುದು. ಹಾಗಾಗಿ ಎಲಾಸ್ಟಿಕ್ ಸಡಿಲವಾದರೆ, ಬಟ್ಟೆ ತೆಳುವಾಗಿದ್ದರೆ ಅಥವಾ ಸಣ್ಣ ರಂಧ್ರಗಳು ಕಾಣಿಸಿಕೊಂಡರೆ, ಒಳ ಉಡುಪುಗಳನ್ನು ಬದಲಾಯಿಸಲೇಬೇಕು.

ಇದನ್ನೂ ಓದಿ: ಕೂದಲಿಗೆ ಎಣ್ಣೆ ಹಚ್ಚುವ ಸರಿಯಾದ ಕ್ರಮ ಯಾವುದು ಗೊತ್ತೇ?

ಒಳ ಉಡುಪುಗಳ ಆಯ್ಕೆ ಹೇಗಿರಬೇಕು?

ಬಟ್ಟೆಯ ಆಯ್ಕೆಯೂ ಮುಖ್ಯ. ಹತ್ತಿಯಂತಹ ನೈಸರ್ಗಿಕ, ಉಸಿರಾಡುವ ಬಟ್ಟೆಗಳು ಚರ್ಮಕ್ಕೆ ಉತ್ತಮವೆಂದು ಸಂಶೋಧನೆ ತೋರಿಸುತ್ತದೆ. ಅವು ತೇವಾಂಶವನ್ನು ಹೀರಿಕೊಳ್ಳುತ್ತವೆ ಮತ್ತು ಗಾಳಿಯನ್ನು ಪರಿಚಲನೆ ಮಾಡಲು ಅವಕಾಶ ಮಾಡಿಕೊಡುತ್ತವೆ, ಯೀಸ್ಟ್ ಮತ್ತು ಬ್ಯಾಕ್ಟೀರಿಯಾದ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತವೆ. ಅದೇ ಸಂಶ್ಲೇಷಿತ ಬಟ್ಟೆಗಳು ತೇವಾಂಶವನ್ನು ಹಿಡಿದಿಟ್ಟುಕೊಳ್ಳಬಹುದು ಮತ್ತು ಕಿರಿಕಿರಿ ಅಥವಾ ಅಲರ್ಜಿಯ ಪ್ರತಿಕ್ರಿಯೆಗಳ ಸಾಧ್ಯತೆಯನ್ನು ಹೆಚ್ಚಿಸಬಹುದು. ಹಾಗಾಗಿ ಹತ್ತಿ ಬಟ್ಟೆಯಿಂದ ತಯಾರಿಸಿದ ಒಳ ಉಡುಪುಗಳನ್ನು ಧರಿಸಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:07 pm, Thu, 22 October 26

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us