ಕೂದಲಿಗೆ ಎಣ್ಣೆ ಹಚ್ಚುವ ಸರಿಯಾದ ಕ್ರಮ ಯಾವುದು ಗೊತ್ತೇ?
ಕೂದಲನ್ನು ಆರೋಗ್ಯಕರವಾಗಿ ಮತ್ತು ಬಲವಾಗಿಡಲು ವಾರಕ್ಕೆ ಒಂದು ಅಥವಾ ಎರಡು ಬಾರಿ ಎಣ್ಣೆ ಹಚ್ಚಬೇಕು. ಪ್ರತಿಯೊಬ್ಬರೂ ಕೂದಲಿಗೆ ಎಣ್ಣೆ ಹಚ್ಚಿ ಸರಿಯಾದ ರೀತಿಯಲ್ಲಿ ಆರೈಕೆ ಮಾಡುತ್ತಾರೆ. ಆದರೆ ಅನೇರಿಗೆ ಕೂದಲಿಗೆ ಸರಿಯಾಗಿ ಎಣ್ಣೆ ಹಚ್ಚುವ ವಿಧಾನ ಯಾವುದು ಎಂಬುದೇ ತಿಳಿದಿಲ್ಲ. ಈ ಸಣ್ಣ ತಪ್ಪು ಕೂಡ ಕೂದಲು ದುರ್ಬಲಗೊಳ್ಳಲು ಕಾರಣವಾಗುತ್ತದೆ. ಅದೇ ಸರಿಯಾದ ರೀತಿಯಲ್ಲಿ ಎಣ್ಣೆ ಹಚ್ಚಿದರೆ ಕೂದಲು ಆರೋಗ್ಯಕರವಾಗಿರುತ್ತದೆ. ಹಾಗಿದ್ರೆ ಕೂದಲಿಗೆ ಎಣ್ಣೆ ಹಚ್ಚುವ ಸರಿಯಾದ ಕ್ರಮ ಯಾವುದು ಎಂಬುದನ್ನು ತಿಳಿಯೋಣ ಬನ್ನಿ.

ಕೂದಲ (hair) ಆರೈಕೆಯಲ್ಲಿ ಅತ್ಯಂತ ಮುಖ್ಯವಾದ ಹಂತವೆಂದರೆ ಎಣ್ಣೆ ಹಚ್ಚುವುದು. ಎಣ್ಣೆ ನೆತ್ತಿಯನ್ನು ಪೋಷಿಸಲು, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು, ಕೂದಲಿನ ಕಿರುಚೀಲಗಳನ್ನು ಬಲಪಡಿಸಲು ತುಂಬಾನೇ ಸಹಕಾರಿ. ಆದ್ದರಿಂದ ವಾರಕ್ಕೆ ಒಂದು ಅಥವಾ ಎರಡು ಬಾರಿ ಕೂದಲಿಗೆ ಎಣ್ಣೆ ಹಚ್ಚುವುದು ಅತ್ಯಗತ್ಯ. ಕೂದಲಿನ ಆರೋಗ್ಯದ ದೃಷ್ಟಿಯಿಂದ ಬಹುತೇಕ ಎಲ್ಲರೂ ಕೂದಲಿಗೆ ಎಣ್ಣೆ ಹಚ್ಚುತ್ತಾರೆ. ಕೇವಲ ಎಣ್ಣೆ ಹಚ್ಚಿದರೆ ಸಾಲದು, ಅದನ್ನು ಸರಿಯಾಗಿ ರೀತಿಯಲ್ಲಿ ಹಚ್ಚಿಕೊಳ್ಳುವುದು ತುಂಬಾನೇ ಮುಖ್ಯ. ಆದರೆ ಅನೇಕರಿಗೆ ಎಣ್ಣೆ ಹಚ್ಚುವ ಸರಿಯಾದ ಕ್ರಮ ಯಾವುದು ಎಂಬುದು ಗೊತ್ತಿಲ್ಲ. ಈ ಒಂದು ಸಣ್ಣ ತಪ್ಪು ಕೂದಲು ದುರ್ಬಲಗೊಳ್ಳಲು ಕಾರಣವಾಗುತ್ತದೆ. ಹಾಗಿದ್ರೆ ಕೂದಲಿಗೆ ಎಣ್ಣೆ ಹಚ್ಚುವ ಸರಿಯಾದ ಕ್ರಮ ಯಾವುದು, ಎಣ್ಣೆ ಹಚ್ಚುವಾಗ ಏನೆಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ತಿಳಿಯೋಣ ಬನ್ನಿ,
ಕೂದಲಿಗೆ ಸರಿಯಾದ ಎಣ್ಣೆಯನ್ನು ಆರಿಸಿ:
ಮಾರುಕಟ್ಟೆಯಲ್ಲಿ ಹಲವು ಬಗೆಯ ಹೇರ್ ಆಯಿಲ್‌ಗಳು ಲಭ್ಯವಿದ್ದರೂ, ತೆಂಗಿನ ಎಣ್ಣೆಯನ್ನೇ ಕೂದಲಿಗೆ ಹಚ್ಚುವುದು ಉತ್ತಮ. ತೆಂಗಿನೆಣ್ಣೆಯು ಉತ್ತಮ ಪ್ರಮಾಣದ ಲಾರಿಕ್ ಆಮ್ಲವನ್ನು ಹೊಂದಿದ್ದು, ಇದು ನೆತ್ತಿಯ ಆರೋಗ್ಯವನ್ನು ಸುಧಾರಿಸಲು, ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ತೆಂಗಿನ ಎಣ್ಣೆಯ ಸುವಾಸನೆಯು ಒತ್ತಡವನ್ನು ನಿವಾರಿಸಲು ಮತ್ತು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುವ ವಿಶೇಷ ಗುಣಗಳನ್ನು ಹೊಂದಿದೆ. ಹಾಗಾಗಿ ಕೂದಲಿಗೆ ಯಾವಾಗಲೂ ತೆಂಗಿನೆಣ್ಣೆಯನ್ನು ಹಚ್ಚುವುದು ಉತ್ತಮ.
ಅಗಲವಾದ ಹಲ್ಲಿನ ಬಾಚಣಿಗೆ ಆಯ್ಕೆ ಮಾಡಿ:
ನಿಮ್ಮ ಕೂದಲಿಗೆ ಎಣ್ಣೆ ಹಚ್ಚುವ ಮೊದಲು ಸಿಕ್ಕುಗಳನ್ನು ಬಿಡಿಸಿಕೊಳ್ಳಬೇಕು. ಸಿಕ್ಕುಗಳನ್ನು ಬಿಡಿಸಲು ಅಗಲವಾದ ಹಲ್ಲಿನ ಬಾಚಣಿಗೆಯಿಂದ ನಿಧಾನವಾಗಿ ಬಾಚಿಕೊಳ್ಳಿ. ನಿಮ್ಮ ಕೂದಲು ಸಂಪೂರ್ಣವಾಗಿ ಸಿಕ್ಕು ತೆಗೆದ ನಂತರವೇ ಎಣ್ಣೆ ಹಚ್ಚಿ.
ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಬೇಕು:
ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿದ ನಂತರವೇ ಅದನ್ನು ಕೂದಲಿಗೆ ಹಚ್ಚುವುದು ಉತ್ತಮ. ಇದು ಹೆಚ್ಚಿನ ಫಲಿತಾಂಶವನ್ನು ನೀಡುತ್ತದೆ. ಆದರೆ ನೆನಪಿಡಿ ಎಣ್ಣೆಯನ್ನು ಸ್ವಲ್ಪವೇ ಬಿಸಿ ಮಾಡಬೇಕು. ತುಂಬಾ ಬಿಸಿ ಎಣ್ಣೆ ಹಚ್ಚುವುದರಿಂದ ನಿಮ್ಮ ನೆತ್ತಿಯ ಸೂಕ್ಷ್ಮ ಚರ್ಮಕ್ಕೆ ಹಾನಿಯಾಗುತ್ತದೆ.
ನೆತ್ತಿಯನ್ನು ತುಂಬಾ ಗಟ್ಟಿಯಾಗಿ ಉಜ್ಜಬಾರದು:
ಕೂದಲಿಗೆ ಎಣ್ಣೆ ಹಾಕಿದ ನಂತರ ಅನೇಕರು ನೆತ್ತಿಯನ್ನು ಗಟ್ಟಿಯಾಗಿ ಮಸಾಜ್ ಮಾಡುತ್ತಾರೆ. ಹೀಗೆ ಹೆಚ್ಚು ಒತ್ತಡ ಹೇರುವುದರಿಂದ ನೆತ್ತಿ ಒರಟಾಗುತ್ತದೆ. ಹಾಗಾಗಿ ಎಣ್ಣೆಯನ್ನು ಹಚ್ಚಿ ನಂತರ ಕೆಲವು ನಿಮಿಷಗಳ ಕಾಲ ವೃತ್ತಾಕಾರದ ಚಲನೆಯಲ್ಲಿ ನಿಧಾನವಾಗಿ ಮಸಾಜ್ ಮಾಡಿ. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸಲು ಹಾಗೂ ಕೂದಲು ಆರೋಗ್ಯಕರವಾಗಿ ಬೆಳೆಯಲು ಸಹಾಯ ಮಾಡುತ್ತದೆ.
ಹೆಚ್ಚು ಎಣ್ಣೆ ಹಚ್ಚುವುದು ಒಳ್ಳೆಯದಲ್ಲ:
ಒಂದೇ ಬಾರಿಗೆ ಜಾಸ್ತಿ ಎಣ್ಣೆಯನ್ನು ಕೂದಲಿಗೆ ಹಚ್ಚುವುದು ಒಳ್ಳೆಯದಲ್ಲ. ಹೆಚ್ಚು ಎಣ್ಣೆ ಹಚ್ಚುವುದರಿಂದ ನೆತ್ತಿ ಮತ್ತು ಕೂದಲು ಜಿಗುಟಾಗಿ, ಭಾರವಾಗಿ ಮತ್ತು ಎಣ್ಣೆಯುಕ್ತವಾಗಿ ಕಾಣಿಸುತ್ತದೆ ಮತ್ತು ಇದರಿಂದ ಹೆಚ್ಚಿನ ಪ್ರಮಾಣದ ಶಾಂಪೂ ಹಾಕಿ ಕೂದಲು ತೊಳೆಯಬೇಕಾದುತ್ತದೆ. ಇದು ಕೂದಲಿನ ನೈಸರ್ಗಿಕ ತೇವಾಂಶವನ್ನು ಕಸಿದುಕೊಳ್ಳುತ್ತದೆ ಮತ್ತು ನೆತ್ತಿಯನ್ನು ಇನ್ನಷ್ಟು ಒಣಗಿಸುತ್ತದೆ. ಆದ್ದರಿಂದ, ಕೂದಲಿನ ಉದ್ದ, ದಪ್ಪ ಮತ್ತು ಶುಷ್ಕತೆಯ ಆಧಾರದ ಮೇಲೆ ತಜ್ಞರು ಎಣ್ಣೆ ಹಚ್ಚಲು ಶಿಫಾರಸು ಮಾಡುತ್ತಾರೆ.
ಇದನ್ನೂ ಓದಿ: ಈ ಟ್ರಿಕ್ಸ್ ಮುಖಾಂತರ ಮನೆ ಗೋಡೆಯ ಮೇಲಿನ ಕಲೆಗಳನ್ನು ಕ್ಷಣ ಮಾತ್ರದಲ್ಲಿ ನಿವಾರಿಸಬಹುದು
ತಲೆ ಸ್ನಾನಕ್ಕೂ ಮುನ್ನ ಕೂದಲಿಗೆ ಎಣ್ಣೆ ಹಚ್ಚಿದರೆ ಸಾಕು:
ಸಂಪೂರ್ಣ ಪ್ರಯೋಜನ ಪಡೆಯಲು ಕೂದಲಿಗೆ ಎಣ್ಣೆ ಹಚ್ಚಿ ರಾತ್ರಿಯಿಡಿ ಹಾಗೆಯೇ ಬಿಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳುತ್ತಾರೆ. ತಲೆ ಸ್ನಾನ ಮಾಡುವ ಸ್ವಲ್ಪ ಹೊತ್ತಿನ ಮೊದಲು ಇದನ್ನು ಹಚ್ಚಿದರೆ ಸಾಕು. ಎಣ್ಣೆ ಹಚ್ಚಿ ಹೆಚ್ಚು ಹೊತ್ತು ಹಾಗೆಯೇ ಬಿಟ್ಟರೆ ಎಣ್ಣೆಯುಕ್ತ ನೆತ್ತಿ, ತಲೆಹೊಟ್ಟು ಅಥವಾ ತುರಿಕೆ ಈ ಸಮಸ್ಯೆ ಇನ್ನಷ್ಟು ಹದಗೆಡಬಹುದು. ಆದ್ದರಿಂದ ಸ್ನಾನಕ್ಕೂ ಮುನ್ನ ಎಣ್ಣೆ ಹಚ್ಚಿ ನಂತರ ಸೌಮ್ಯವಾದ ಶಾಂಪೂ ಬಳಸಿ ಕೂದಲು ತೊಳೆಯುವುದು ಉತ್ತಮ.
ಕೂದಲಿಗೆ ಎಣ್ಣೆ ಹಚ್ಚುವ ಸರಿಯಾದ ವಿಧಾನ ಯಾವುದು?
ಮೊದಲು, ನಿಮ್ಮ ಕೂದಲಿನ ಸಿಕ್ಕುಗಳನ್ನು ಬಿಡಿಸಿ. ನಂತರ, ಸ್ವಲ್ಪ ಪ್ರಮಾಣದ ಎಣ್ಣೆಯನ್ನು ತೆಗೆದುಕೊಂಡು ಅದನ್ನು ನಿಮ್ಮ ನೆತ್ತಿಯ ವಿವಿಧ ಭಾಗಗಳಿಗೆ ಹಚ್ಚಿ. ನಂತರ, ನಿಮ್ಮ ಬೆರಳ ತುದಿಯಿಂದ ವೃತ್ತಾಕಾರದ ಚಲನೆಯನ್ನು ಬಳಸಿಕೊಂಡು ನಿಮ್ಮ ನೆತ್ತಿಯನ್ನು ನಿಧಾನವಾಗಿ ಮಸಾಜ್ ಮಾಡಿ. ಉಳಿದ ಎಣ್ಣೆಯನ್ನು ನಿಮ್ಮ ಕೂದಲಿನ ತುದಿಗಳಿಗೆ ಹಚ್ಚಿ. ಅಂತಿಮವಾಗಿ, ಅದನ್ನು ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಿ ಮತ್ತು ಸೌಮ್ಯವಾದ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
