ಮಕ್ಕಳನ್ನು ಸ್ಮಾರ್ಟ್‌ಫೋನ್‌ನಿಂದ ದೂರವಿಡಲು ಈ ಸಿಂಪಲ್‌ ಟ್ರಿಕ್ಸ್‌ಗಳನ್ನು ಪ್ರಯತ್ನಿಸಿ

ಇಂದಿನ ಈ ಡಿಜಿಟಲ್‌ ಯುಗದಲ್ಲಿ ಮಕ್ಕಳು ಸ್ಮಾರ್ಟ್‌ ಫೋನ್‌ ವ್ಯಸನಿಗಳಾಗಿದ್ದಾರೆ. ಫೋನ್‌ ಇಲ್ಲದೆ ಒಂದು ಕ್ಷಣವೂ ಇರೋಲ್ಲ ಅಂತಾರೆ. ಇದು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುತ್ತದೆ. ಹೀಗಿರುವಾಗ ಪೋಷಕರು ಸಲಹೆ ಸೂಚನೆಗಳನ್ನು ಪಾಲಿಸುವ ಮೂಲಕ ಮಕ್ಕಳು ಸ್ಮಾರ್ಟ್‌ ಫೋನ್‌ ಚಟಕ್ಕೆ ಒಳಗಾಗುವುದನ್ನು ತಪ್ಪಿಸಬಹುದು.

ಮಕ್ಕಳನ್ನು ಸ್ಮಾರ್ಟ್‌ಫೋನ್‌ನಿಂದ ದೂರವಿಡಲು ಈ ಸಿಂಪಲ್‌ ಟ್ರಿಕ್ಸ್‌ಗಳನ್ನು ಪ್ರಯತ್ನಿಸಿ
ಸಾಂದರ್ಭಿಕ ಚಿತ್ರ
Image Credit source: Pinterest

Updated on: May 26, 2026 | 7:25 PM

ಈ ಡಿಜಿಟಲ್‌ ಯುಗದಲ್ಲಿ ದೊಡ್ಡವರಿಗಿಂತ ಮಕ್ಕಳೇ (children) ಹೆಚ್ಚು  ಮೊಬೈಲ್‌ ಫೋನ್‌ ವ್ಯಸನಿಗಳಾಗಿದ್ದಾರೆ. ಹೌದು ಈಗಿನ ಮಕ್ಕಳಂತೂ ಹೊರಗೆ ಹೋಗಿ ಆಟ ಆಡುವುದಕ್ಕಿಂತ ಹೆಚ್ಚು ಮೊಬೈಲ್‌ನಲ್ಲಿಯೇ ಸಮಯ ಕಳೆಯುತ್ತಿದ್ದಾರೆ. ಈ ಒಂದು ಅಭ್ಯಾಸ ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಮಕ್ಕಳನ್ನು ಸ್ಮಾರ್ಟ್‌ಫೋನ್‌ನಿಂದ ದೂರವಿಡುವುದು ಬಹಳ ಮುಖ್ಯ. ಆದರೆ ಅನೇಕ ಪೋಷಕರಿಗೆ ತಮ್ಮ ಮಕ್ಕಳನ್ನು ಮೊಬೈಲ್‌ ಚಟಕ್ಕೆ ಒಳಗಾಗದಂತೆ ನೋಡಿಕೊಳ್ಳುವುದು ಹೇಗೆ ಎಂಬುದೇ ಗೊತ್ತಿಲ್ಲ. ಈ ಕೆಲವೊಂದು ಟ್ರಿಕ್ಸ್‌ಗಳನ್ನು ಪಾಲಿಸುವ ಮೂಲಕ ಸುಲಭವಾಗಿ ಮಕ್ಕಳನ್ನು ಸ್ಮಾರ್ಟ್‌ ಫೋನ್‌ನಿಂದ ದೂರವಿಡಬಹುದು.

ಮಕ್ಕಳನ್ನು ಸ್ಮಾರ್ಟ್‌ ಫೋನ್‌ನಿಂದ ದೂರವಿಡುವುದು ಹೇಗೆ?

ಹೊರಗೆ ಆಟವಾಡಲು ಪ್ರೇರೇಪಿಸಿ: ಮಕ್ಕಳನ್ನು ಆಟವಾಡಲು ಕರೆದುಕೊಂಡು ಹೋಗಿ. ಸೈಕ್ಲಿಂಗ್‌, ಕ್ರಿಕೆಟ್, ಬ್ಯಾಡ್ಮಿಂಟನ್ ಅಥವಾ ಫುಟ್ಬಾಲ್ ಆಡಲು ಪ್ರೋತ್ಸಾಹಿಸಿ. ಇಲ್ಲವೆ ಉದ್ಯಾನವನಗಳಿಗೆ ವಾಕಿಂಗ್‌ ಕರೆದುಕೊಂಡು ಹೋಗಿ, ಈ ರೀತಿ ಹೊರಾಂಗಣ ಆಟಗಳನ್ನು ಆಡಿದಾಗ  ಮಕ್ಕಳು ದೈಹಿಕವಾಗಿ ಅಭಿವೃದ್ಧಿ ಹೊಂದುತ್ತಾರೆ ಮತ್ತು ಫೋನ್‌ನಿಂದ ಮನಸ್ಸನ್ನು ದೂರವಿಡುತ್ತಾರೆ.

ಹೊಸ ಹವ್ಯಾಸಗಳನ್ನು ಕಲಿಸಿ: ಚಿತ್ರಕಲೆ, ನೃತ್ಯ, ಹಾಡುಗಾರಿಕೆ, ಒರಿಗಮಿಯಂತ ಹವ್ಯಾಸಗಳನ್ನು ಕಲಿಸಿ ಮತ್ತು ಈ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ. ಮಕ್ಕಳು ತಮ್ಮ ಆಯ್ಕೆಯ ಸೃಜನಶೀಲ ಅನ್ವೇಷಣೆಗಳಲ್ಲಿ ತೊಡಗಿಸಿಕೊಂಡಾಗ, ಅವರು ಮೊಬೈಲ್‌ನಲ್ಲಿ ತೊಡಗಿಕೊಳ್ಳುವುದನ್ನು ಸಂಪೂರ್ಣವಾಗಿ ಮರೆತುಬಿಡುತ್ತಾರೆ.

ಮನೆಕೆಲಸಗಳನ್ನು ಮೋಜಿನಿಂದ ಮಾಡಿಸಿ: ಮಕ್ಕಳಿಗೆ ಮೊಬೈಲ್‌ ನೀಡುವ ಬದಲು ಅಡುಗೆ ಅಥವಾ ತೋಟಗಾರಿಕೆಯಂತಹ ಚಟುವಟಿಕೆಗಳಲ್ಲಿ ನಿಮ್ಮ ಮಕ್ಕಳನ್ನು ತೊಡಗಿಸಿಕೊಳ್ಳಿ. ಸಸ್ಯಗಳಿಗೆ ನೀರು ಹಾಕುವುದು,  ವಾರ್ಡ್ರೋಬ್ ಅನ್ನು ಜೋಡಿಸುವುದು, ಗುಡಿಸುವುದು ಇತ್ಯಾದಿ ಕೆಲಸಗಳಿಗೆ , ಸಹಾಯಕ್ಕಾಗಿ ಅವರನ್ನು ಕೇಳಿ. ಇದು ಮಕ್ಕಳಲ್ಲಿ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸುತ್ತದೆ, ಹೊಸದನ್ನು ಕಲಿಯಲು ಸಹಾಯ ಮಾಡುತ್ತದೆ ಮತ್ತು ಮೊಬೈಲ್‌ನಲ್ಲಿ ತೊಡಗಿಕೊಳ್ಳದಂತೆ ಮಾಡುತ್ತದೆ.

ಒಳಾಂಗಣ ಆಟಗಳನ್ನು ಆಡಿಸಿ: ಲುಡೋ, ಕ್ಯಾರಮ್, ಹಾವು ಮತ್ತು ಏಣಿ, ಚದುರಂಗ ಅಥವಾ ಒಗಟುಗಳಂತಹ ಆಟಗಳನ್ನು ಆಡಿಸಿ, ಈ ಆಟಗಳು ಮಕ್ಕಳ ಮನಸ್ಸನ್ನು ಚುರುಕುಗೊಳಿಸುತ್ತವೆ. ಈ ಆಟಗಳು ಮಕ್ಕಳನ್ನು ಮೊಬೈಲ್‌ ಫೋನ್‌ಗಳಿಂದ ದೂರ ಇರಿಸುತ್ತವೆ.

ನಿಯಮಗಳನ್ನು ಹೊಂದಿಸಿ: ಮನೆಯಲ್ಲಿ ಕೆಲವು ಕಟ್ಟುನಿಟ್ಟಾದ ನಿಯಮಗಳನ್ನು ಹೊಂದಿಸಿ. ಉದಾಹರಣೆಗೆ, ಊಟ ಮಾಡುವಾಗ ಮೊಬೈಲ್‌ ನೋಡಬಾರದು ಅಥವಾ ಮಲಗುವ ಸಮಯಕ್ಕೆ ಕನಿಷ್ಠ ಒಂದು ಗಂಟೆ ಮೊದಲು ಯಾರೂ ಗ್ಯಾಜೆಟ್‌ಗಳನ್ನು ಬಳಸುವಂತಿಲ್ಲ ಎಂಬ ನಿಯಮಗಳನ್ನು ಮಾಡಿ. ಈ ಮೂಲಕ ಮಕ್ಕಳ ಫೋನ್‌ ಬಳಕೆಯನ್ನು ಕಡಿಮೆ ಮಾಡಬಹುದು.

ಇದನ್ನೂ ಓದಿ: ಅತಿಯಾದ ಕೋಪ ದೇಹದ ಎಷ್ಟೆಲ್ಲಾ ದುಷ್ಪರಿಣಾಮಗಳನ್ನು ಬೀರುತ್ತವೆ ಗೊತ್ತಾ?

ಒಟ್ಟಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ: ಕೆಲವೊಮ್ಮೆ ಮಕ್ಕಳು ಬೇಸರಗೊಂಡಾಗ  ಅಥವಾ ಮಾತನಾಡಲು ಯಾರೂ ಇಲ್ಲದ ಕಾರಣ ಫೋನ್ ನೋಡುತ್ತಾರೆ. ಆದ್ದರಿಂದ, ಪೋಷಕರು ಅವರೊಂದಿಗೆ ಸಾಧ್ಯವಾದಷ್ಟು ಸಮಯ ಕಳೆಯಬೇಕು. ಅವರ ಶಾಲೆಯ ಬಗ್ಗೆ ಕೇಳಿ, ನಿಮ್ಮ ಬಾಲ್ಯದ ತಮಾಷೆಯ ಕಥೆಗಳನ್ನು ಹೇಳಿ, ಅಥವಾ ಕುಳಿತು ಒಳ್ಳೆಯ ಪುಸ್ತಕ ಓದಿ.

ಮಕ್ಕಳ ಮುಂದೆ ನಿಮ್ಮ ಮೊಬೈಲ್ ಬಳಕೆಯನ್ನು ಮಿತಿಗೊಳಿಸಿ: ಮಕ್ಕಳು ತಮ್ಮ ಪೋಷಕರು ಏನು ಮಾಡುತ್ತಾರೋ ಅದನ್ನೇ ಕಲಿಯುತ್ತಾರೆ ಮತ್ತು ಅನುಕರಿಸುತ್ತಾರೆ. ನೀವು ದಿನವಿಡೀ ನಿಮ್ಮ ಮೊಬೈಲ್ ಫೋನ್‌ನೊಂದಿಗೆ ಕಳೆದರೆ, ನಿಮ್ಮ ಮಗುವೂ ಸಹ ಮೊಬೈಲ್‌ ಬೇಕೆಂದು ಹಠ ಹಿಡಿಯುತ್ತದೆ. ಆದ್ದರಿಂದ ಮಕ್ಕಳ ಮುಂದೆ ಪೋಷಕರು ಮೊಬೈಲ್‌ ಬಳಸಬಾರದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us