Monsoon Pet Care: ಈ ಮಳೆಗಾಲದಲ್ಲಿ ಸಾಕುಪ್ರಾಣಿಗಳ ಆರೈಕೆ ಹೇಗೆ? ಇಲ್ಲಿವೆ ಸೂಕ್ತ ಸಲಹೆಗಳು

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 13, 2023 | 3:33 PM

ಮಳೆಗಾಲದಲ್ಲಿ ರೋಗರುಜಿನಗಳು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಿರೋ, ಹಾಗೇಯೇ ನಿಮ್ಮ ಸಾಕು ಪ್ರಾಣಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಏಕೆಂದರೆ ಮಳೆಗಾಲವು ಸಾಕುಪ್ರಾಣಿಗಳಿಗೆ ರೋಗಗಳ ಕಾಲವಾಗಿದೆ. ಈ ಋತುವಿನಲ್ಲಿ ಸಾಕುಪ್ರಾಣಿಗಳ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಅವುಗಳು ವೈರಲ್ ಸೋಂಕುಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮಳೆಯ ದಿನಗಳಲ್ಲಿ ನಿಮ್ಮ ಸಾಕುಪ್ರಾಣಿಗಳನ್ನು ಸುರಕ್ಷಿತವಾಗಿರಿಸುವುದು ಅವಶ್ಯಕ. ಈ ಮಳೆಗಾಲದಲ್ಲಿ ಸಾಕುಪ್ರಾಣಿಗಳ ಸರಿಯಾದ ಆರೈಕೆಗೆ ಇಲ್ಲಿವೆ ಕೆಲವೊಂದು ಸಲಹೆಗಳು

Monsoon Pet Care: ಈ ಮಳೆಗಾಲದಲ್ಲಿ ಸಾಕುಪ್ರಾಣಿಗಳ ಆರೈಕೆ ಹೇಗೆ? ಇಲ್ಲಿವೆ ಸೂಕ್ತ ಸಲಹೆಗಳು
ಸಾಂದರ್ಭಿಕ ಚಿತ್ರ
Follow us on

ಇದೀಗ ಮಳೆಗಾಲ ಆರಂಭವಾಗಿದೆ. ಈ ಸಮಯದಲ್ಲಿ ರೋಗನಿರೋಧಕ ಶಕ್ತಿಯು ಕಡಿಮೆಯಾಗಿರುವುದರಿಂದ ಸೋಂಕುಗಳು ಹಾಗೂ ಕಾಲೋಚಿತ ಕಾಯಿಲೆಗಳಿಗೆ ತುತ್ತಾಗವು ಸಾಧ್ಯತೆ ಹೆಚ್ಚು. ಆ ಸಂದರ್ಭದಲ್ಲಿ ಮನುಷ್ಯರಾದ ನಾವು ವೈದ್ಯರ ಬಳಿ ನಿಯಮಿತ ಆರೋಗ್ಯ ತಪಾಸನೆ ಮಾಡುತ್ತಾ ಹಾಗೂ ನಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾ, ಈ ಮಳೆಗಾಲದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುತ್ತೇವೆ. ನಾವು ನಮ್ಮ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೇವೆಯೋ, ಈ ಮಳೆಗಾಲದಲ್ಲಿ ನಮ್ಮ ಸಾಕುಪ್ರಾಣಿಗಳ ಆರೋಗ್ಯದ ಕಾಳಜಿ ವಹಿಸುವುದು ಕೂಡಾ ಅಷ್ಟೇ ಮುಖ್ಯ. ಏಕೆಂದರೆ ಮಳೆಗಾಲವು ಸಾಕುಪ್ರಾಣಿಗಳಿಗೆ ರೋಗಗಳ ಕಾಲವಾಗಿದೆ. ಈ ಋತುವಿನಲ್ಲಿ ಸಾಕುಪ್ರಾಣಿಗಳ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಅವುಗಳು ವೈರಲ್ ಸೋಂಕುಗಳಿಗೆ ತಯತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮಳೆಯ ದಿನಗಳಲ್ಲಿ ನಿಮ್ಮ ಸಾಕುಪ್ರಾಣಿಗಳನ್ನು ಸುರಕ್ಷಿತವಾಗಿರಿಸುವುದು ಅವಶ್ಯಕ.

ಮಳೆಗಾಲದಲ್ಲಿ ಸಾಕುಪ್ರಾಣಿಗಳ ಆರೈಕೆಯ ಸಲಹೆಗಳು:

ದೈಹಿಕ ಸ್ವಚ್ಛತೆ:

ಮಳೆಯ ನೀರಿನಲ್ಲಿ ಮೋಜು ಮಸ್ತಿ ಮಾಡಲು ಯಾರಿಗೆ ಇಷ್ಟವಿಲ್ಲ ಹೇಳಿ. ಮನುಷ್ಯರಂತೆ ಪ್ರಾಣಿಗಳೂ ಕೂಡಾ ಇಷ್ಟಪಡುತ್ತವೆ. ಸಾಕುಪ್ರಾಣಿಗಳು ಮಳೆಗೆ ಒದ್ದೆಯಾಗುತ್ತಾ ಓಡಾಡುತ್ತಿರುತ್ತವೆ. ಈ ಕಾರಣದಿಂದಾಗಿ, ಅವುಗಳ ರೋಮಗಳು ಒದ್ದೆಯಾಗುತ್ತವೆ. ಅದು ಬೇಗನೆ ಒಣಗುವುದಿಲ್ಲ. ಇದರಿಂದಾಗಿ ಅವುಗಳ ಆರೋಗ್ಯವು ಹದಗೆಡುತ್ತದೆ. ಅಲ್ಲದೆ ಅವುಗಳು ನೀರಿನಲ್ಲಿ ಓಡಾಡುವುದರಿಂದ ಮಳೆಗಾಲದಲ್ಲಿ ಹೆಚ್ಚಿನ ಸಾಕುಪ್ರಾಣಿಗಳಲ್ಲಿ ಶಿಲೀಂಧ್ರಗಳ ಸೋಂಕು ಪಾದಗಳಿಂದ ಆರಂಭವಾಗುತ್ತದೆ, ಹಾಗಾಗಿ ಕಡಿತ, ಸೋಂಕುಗಳ ಹರಡುವಿಕೆಯನ್ನು ತಡೆಗಟ್ಟಲು ಅವುಗಳ ಪಾದಗಳನ್ನು ಸ್ವಚ್ಛಗೊಳಿಸುವುದು ಅವಶ್ಯಕ.

ಸಾಕುಪ್ರಾಣಿಗಳು ಮಲಗುವ ಸ್ಥಳಗಳನ್ನು ಸ್ವಚ್ಛವಾಗಿರಿಸಿ:

ಮಳೆಗಾಲದಲ್ಲಿ ಸಾಕುಪ್ರಾಣಿಗಳ ವಾಸಸ್ಥಳಕ್ಕೆ ಗಮನಕೊಡುವುದು ಬಹಳ ಮುಖ್ಯ. ಕೆಲವರು ನಾಯಿಗಳನ್ನು ಮನೆಯ ಹೊರಗೆ ಶೆಡ್ ಗಳಲ್ಲಿ ಮಲಗಲು ಬಿಡುತ್ತಾರೆ. ಅಂತಹ ಸಂದರ್ಭದಲ್ಲಿ ನಾಯಿಗಳು ಮಲಗುವ ಸ್ಥಳಗಳು ತೇವಾವಾಗಿರದಂತೆ ನೋಡಿಕೊಳ್ಳಿ, ಹಾಗೂ ಮೈಮೇಲೆ ನೀರು ಬೀಳದಂತೆ ಇರುವ ಸ್ಥಳದಲ್ಲಿ ಅವುಗಳನ್ನು ಇರಿಸಿ. ಆದಷ್ಟು ಬೆಚ್ಚಗೆ ಮಲಗಲು ವ್ಯವಸ್ಥೆ ಮಾಡಿಕೊಡಬೇಕು.

ಸೊಳ್ಳೆಗಳಿಂದ ರಕ್ಷಣೆ:

ಮಾನ್ಸೂನ್ ಋತುವು ಕೀಟಗಳು ಮತ್ತು ಸೊಳ್ಳೆಗಳ ಸಂತಾನೋತ್ಪತ್ತಿಯ ಅವಧಿಯಾಗಿದೆ. ಇದು ನಿಮ್ಮ ಸಾಕುಪ್ರಾಣಿಗಳಿಗೆ ಅಪಾಯಕಾರಿಯಾಗಿದೆ. ಈ ಸೊಳ್ಳೆಗಳ ಕಾಟದಿಂದ ನಿಮ್ಮ ಸಾಕುಪ್ರಾಣಿಗಳನ್ನು ರಕ್ಷಿಸಲು ಅವುಗಳು ಮಲಗುವ ಹಾಗೂ ಓಡಾಡುವ ಸ್ಥಳಗಳಲ್ಲಿ ಸೊಳ್ಳೆಯ ಸ್ಪ್ರೇ ಸಿಂಪಡಿಸಿ. ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಅವುಗಳು ಮಲಗುವ ಸ್ಥಳ ಮತ್ತು ಒಳಾಂಗಣ ಪ್ರದೇಶಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ.

ಇದನ್ನೂ ಓದಿ:ನಿಮ್ಮ ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ, ಎಂದಿಗೂ ಈ 5 ತಪ್ಪುಗಳನ್ನು ಮಾಡದಿರಿ

ಮನೆಯೊಳಗೆ ಇರಿಸಿ:

ಮಳೆಗಾಲದಲ್ಲಿ ಸಾಕುಪ್ರಾಣಿಗಳನ್ನು ಹೆಚ್ಚು ಹೊರಗೆ ಹೋಗಲು ಬಿಡಬೇಡಿ. ಈ ಋತುವಿನಲ್ಲಿ ಅವುಗಳಿಗೆ ವಿಶೇಷ ಕಾಳಜಿಯ ಅಗತ್ಯವಿರುತ್ತದೆ. ಮನೆಯೊಳಗೆ ಬೆಚ್ಚಗಿನ ವಾತಾವರಣವಿರುತ್ತದೆ. ಆದರೆ ಹೊರಗಿನ ತಣ್ಣನೆಯ ಹವಾಮಾನವು ಅವುಗಳ ಆರೋಗ್ಯವನ್ನು ಹದಗೆಡಿಸುತ್ತದೆ. ಆ ಕಾರಣದಿಂದ ನಿಮ್ಮ ಸಾಕುಪ್ರಾಣಿಗಳನ್ನು ಅನಾರೋಗ್ಯದಿಂದ ರಕ್ಷಿಸಲು ಅವುಗಳನ್ನು ಮನೆಯೊಳಗೆ ಇರಿಸಿ.

ಆಹಾರ ಮತ್ತು ಪಾನೀಯ:

ಮಳೆಗಾಲದಲ್ಲಿ ಪ್ರಾಣಿಗಳ ಆಹಾರ ಮತ್ತು ಪಾನೀಯಗಳ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕು. ಶುದ್ಧ ಪಾತ್ರೆಗಳಲ್ಲಿ ಅವುಗಳಿಗೆ ಆಹಾರ ನೀಡಿ. ಕಾಲಕಾಲಕ್ಕೆ ಆರೋಗ್ಯಕರ ಆಹಾರಗಳನ್ನು ನೀಡುತ್ತಿರಿ. ಹಾಗೆಯೇ ಅವುಗಳು ಕುಡಿಯುವ ನೀರಿನ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯವಿರುತ್ತದೆ. ಏಕೆಂದರೆ ಹಲವು ಬಾರಿ ಬಾಯಾರಿಕೆಯಾದಾಗ ಹೊರಗಡೆ ಇರುವಂತಹ ನೀರನ್ನು ಕುಡಿಯುತ್ತವೆ. ಇದರಿಂದ ದೇಹಕ್ಕೆ ಬ್ಯಾಕ್ಟೀರಿಯಾಗಳು ಸೇರುವ ಸಾಧ್ಯತೆ ಹೆಚ್ಚಿರುತ್ತದೆ. ಇದನ್ನು ತಡೆಗಟ್ಟಲು ಯಾವಾಗಲೂ ತಾಜಾ, ಫಿಲ್ಟರ್ ಮಾಡಿದ ನೀರನ್ನು ಕುಡಿಯಲು ನೀಡಿ.

ದೈಹಿಕ ವ್ಯಾಯಾಮ:

ಮಳೆಯು ಹೊರಾಂಗಣ ಚಟುವಟಿಕೆಗಳನ್ನು ಕಡಿಮೆಗೊಳಿಸಬಹುದಾರರದೂ, ನಿಮ್ಮ ಸಾಕುಪ್ರಾಣಿಗಳಿಗೆ ಒಳಾಂಗಣದಲ್ಲಿ ಆಡಲು ಅವಕಾಶ ನೀಡುವ ಮೂಲಕ ಅವುಗಳನ್ನು ಸಕ್ರಿಯವಾಗಿರಿಸಿ. ಹೀಗೆ ಆಟವಾಡುವ ಮೂಲಕ ದೈಹಿಕ ವ್ಯಾಯಾಮಗಳನ್ನು ಮಾಡುವುದರಿಂದ ಅವುಗಳ ಆರೋಗ್ಯ ಸುಧಾರಿಸುತ್ತದೆ.

ವೈದ್ಯಕೀಯ ಪರೀಕ್ಷೆ:

ಮನುಷ್ಯರಾದ ನಮಗೆ ಕಾಲಕಾಲಕ್ಕೆ ಆರೋಗ್ಯವನ್ನು ಪರೀಕ್ಷಿಸುವ ಅಗತ್ಯವಿರುವಂತೆ ಪ್ರಾಣಿಗಳಿಗೂ ಕೂಡಾ ಆರೋಗ್ಯ ತಪಾಸಣೆಯನ್ನು ಮಾಡುತ್ತಿರಬೇಕು. ಯಾವುದೇ ಋತುವಿನಲ್ಲಾದರೂ ಸರಿ, ಪಶುವೈದ್ಯರ ಬಳಿ ಸಾಕುಪ್ರಾಣಿಗಳ ಆರೋಗ್ಯ ಪರೀಕ್ಷಿಸುವುದು ಮುಖ್ಯವಾಗಿದೆ. ಅವುಗಳ ಆರೋಗ್ಯದ ಮೇಲ್ವಿಚಾರಣೆ ಮಾಡಲು ನಿಯಮಿತವಾಗಿ ಪಶುವೈದ್ಯರನ್ನು ಸಂಪರ್ಕಿಸಿ. ಹಾಗೂ ಲಸಿಕೆಗಳನ್ನು ನೀಡುತ್ತಿರಿ. ಹಾಗೂ ಮಳೆಗಾಲದಲ್ಲಿ ಸಾಕುಪ್ರಾಣಿಗಳ ಅರೋಗ್ಯದ ಬಗ್ಗೆ ಕಾಳಜಿ ವಹಿಸಲು ಸೂಕ್ತ ಸಲಹೆಗಳನ್ನು ಕೂಡಾ ಕೇಳಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: