Monsoon Gardening Tips: ಮಳೆಗಾಲದಲ್ಲಿ ಕೈತೋಟದ ನಿರ್ವಹಣೆ ಹೇಗೆ? ಇಲ್ಲಿದೆ ಸೂಕ್ತ ಸಲಹೆ
ಮಳೆಗಾಲ ಬಂತೆಂದರೆ ಸಾಕು ಮನೆಯ ಸುತ್ತಮುತ್ತಲಿನ ಪರಿಸರವು ಹಸಿರಿನಿಂದ ತುಂಬಿರುತ್ತದೆ. ಸಾಕಷ್ಟು ನೀರು ಬೀಳುವ ಕಾರಣ ಈ ಸಮಯದಲ್ಲಿ ಮರಗಿಡಗಳು ಉತ್ತಮವಾಗಿ ಬೆಳೆಯುತ್ತವೆ. ಆದರೆ ಕೆಲವೊಮ್ಮೆ ಹೆಚ್ಚಿನ ಮಳೆಯ ಕಾರಣದಿಂದಾಗಿ ಗಿಡಗಳು ಹಾನಿಗೊಳಗಾಗುತ್ತವೆ ಮತ್ತು ಕೊಳೆತು ಹೋಗುತ್ತವೆ. ಹಾಗಾಗಿ ಈ ಋತುವಿನಲ್ಲಿ ಗಿಡಗಳ ಆರೈಕೆಯನ್ನು ತುಸು ಹೆಚ್ಚೇ ಮಾಡಬೇಕಾಗುತ್ತದೆ. ಅದಕ್ಕಾಗಿ ಈ ಕೆಲವು ಸಲಹೆಗಳನ್ನು ಪಾಲಿಸುವ ಮೂಲಕ ನಿಮ್ಮ ಮನೆಯ ಕೈತೋಟವನ್ನು ಸುಂದರವಾಗಿ ಮತ್ತು ಆರೋಗ್ಯಕವಾಗಿ ಇರಿಸಬಹುದು.
ಮಳೆಗಾಲವು ಹೂವು, ಹಣ್ಣು ಹಾಗೂ ತರಕಾರಿಯ ತೋಟಗಾರಿಕೆಗೆ ಉತ್ತಮವಾದ ಸಮಯವಾಗಿದೆ. ಹೆಚ್ಚಿನವರು ಈ ಸಮಯದಲ್ಲಿ ಮನೆಯ ಕೈತೋಟದಲ್ಲಿ ಹೊಸ ಗಿಡಗಳನ್ನು ನೆಡಲು ಬಯಸುತ್ತಾರೆ. ಈ ಋತುವಿನಲ್ಲಿ ವಾತಾವರಣದ ತೇವಾಂಶದ ಕಾರಣದಿಂದ ಗಿಡ ಮರಗಳು ವೇಗವಾಗಿ ಬೆಳೆಯುತ್ತವೆ. ಆದರೆ ಮಳೆಗಾದಲ್ಲಿ ಸುರಿಯುವ ಹೆಚ್ಚಿನ ಮಳೆಯಿಂದಾಗಿ ಹಾಗೂ ಕೀಟಗಳ ಕಾಟದಿಂದಾಗಿ ಸಸ್ಯಗಳಿಗೆ ಹಾನಿಯಾಗಬಹುದು ಮತ್ತು ಅವುಗಳು ಕೊಳೆಯಬಹುದು. ಈ ಸಮಯದಲ್ಲಿ ಗಿಡಗಳಿಗೆ ಹೆಚ್ಚುವರಿ ಆರೈಕೆ ಮತ್ತು ಪೋಷಣೆಯ ಅಗತ್ಯವಿರುತ್ತದೆ. ಮಳೆಗಾಲದಲ್ಲಿ ಗಾರ್ಡನಿಂಗ್ ಮಾಡುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ವಿಷಯಗಳೇನು ಎಂಬುದನ್ನು ತಿಳಿದುಕೊಳ್ಳೋಣ.
ಮಳೆಗಾಲದಲ್ಲಿ ಕೈತೋಟದ ನಿರ್ವಹಣೆ:
• ನೀವೇನಾದರೂ ಗಿಡಗಳನ್ನು ಹೂ ಕುಂಡದಲ್ಲಿ ನೆಟ್ಟಿದ್ದರೆ, ಆ ಕುಂಡದ ತಳಭಾಗದಲ್ಲಿ ರಂಧ್ರಗಳಿದೆಯೇ ಎಂಬುದನ್ನು ಪರಿಶೀಲಿಸಿ. ಏಕೆಂದರೆ ಕುಂಡದಲ್ಲಿ ನೀರು ಹಾಗೇಯೇ ನಿಂತರೆ ಗಿಡಗಳ ಬೇರುಗಳು ಕೊಳೆಯಲು ಪ್ರಾರಂಭಿಸುತ್ತದೆ. ಕುಂಡದಲ್ಲಿ ರಂಧ್ರಗಳಿಲ್ಲದಿದ್ದರೆ, ಒಂದು ಅಥವಾ ಎರಡು ಸಣ್ಣ ರಂಧ್ರಗಳನ್ನು ಮಾಡಿ ನಂತರ ಅವುಗಳಲ್ಲಿ ಸಸಿಗಳನ್ನು ನೆಡಿ.
• ಮಳೆಗಾಲದಲ್ಲಿ ಗಿಡಗಳಿಗೆ ಅಗತ್ಯಕ್ಕೆ ತಕ್ಕಂತೆ ನೀರು ಹಾಕಿ. ಮತ್ತು ಹೂವಿನ ತೋಟದ ಸುತ್ತಲೂ ನೀರು ಶೇಖರಣೆಯಾಗದಂತೆ ನೋಡಿಕೊಳ್ಳಿ. ಏಕೆಂದರೆ ಅದು ಗಿಡಗಳನ್ನು ಹಾಳುಮಾಡಬಹುದು.
• ವಿಶೇಷವಾಗಿ ಹೂಕುಂಡದಲ್ಲಿ ನೀವು ಗಿಡಗಳನ್ನು ನೆಟ್ಟು ತುಂಬಾ ಸಮಯವಾಗಿದ್ದರೆ, ಅವುಗಳಿಗೆ ಹೊಸ ಮಣ್ಣನ್ನು ಹಾಕಿ. ಹಾಗೂ ಮಣ್ಣಿನ ಫಲವತ್ತತೆಯನ್ನು ಪರೀಕ್ಷಿಸುತ್ತಿರಿ.
• ಗಿಡಗಳ ಕುಂಡದಲ್ಲಿನ ಮಣ್ಣಿಗೆ ವರ್ಮಿಕಾಂಪೋಸ್ಟ್ ಅಥವಾ ಸಾವಯವ ಗೊಬ್ಬರವನ್ನು ಹಾಕುವುದರಿಂದ ಗಿಡಗಳು ಸೊಂಪಾಗಿ ಬೆಳೆಯುತ್ತವೆ. ಮತ್ತು ಮಣ್ಣಿನ ಫಲವತ್ತತೆಯು ಹೆಚ್ಚುತ್ತದೆ.
ಇದನ್ನೂ ಓದಿ: Monsoon Vegetable Gardening: ಮಳೆಗಾಲದಲ್ಲಿ ನಿಮ್ಮ ಮನೆಯಲ್ಲಿ ಬೆಳೆಯಲು ಸೂಕ್ತವಾದ ತರಕಾರಿಗಳ ಯಾವುವು?
• ಮಳೆಗಾಲದಲ್ಲಿ ಗಿಡಗಳ ಸುತ್ತಲೂ ಬೆಳೆಯುವ ಕಳೆಗಳನ್ನು ಆಗಾಗ್ಗೆ ತೆಗೆಯುತ್ತಿರಬೇಕು. ಇಲ್ಲದಿದ್ದರೆ ಆ ಕಳೆಗಳು ಸಂಪೂರ್ಣವಾಗಿ ಗಿಡಗಳನ್ನು ಆವರಿಸಿ, ರೋಗವನ್ನು ಉಂಟುಮಾಡಬಹುದು.
• ಮಳೆ ಜೋರಾಗಿ ಸುರಿದಾಗ ಮತ್ತು ಗಿಡಗಳು ಮಳೆ ನೀರಿನೊಂದಿಗೆ ನೇರ ಸಂಪರ್ಕಕ್ಕೆ ಬಂದಾಗ, ಹೂಕುಂಡಗಳನ್ನು ಎತ್ತಿಕೊಂಡು ಮಳೆಹನಿ ಬೀಳದ ಸ್ಥಳದಲ್ಲಿರಿಸಿ. ಏಕೆಂದರೆ ಮಳೆನೀರಿನ ರಭಸಕ್ಕೆ ಸಸ್ಯಗಳು ಹಾನಿಗೊಳಗಾವುವ ಸಾಧ್ಯತೆ ಇರುತ್ತದೆ.
• ಪ್ರತಿ 15 ರಿಂದ 20 ದಿನಗಳಿಗೊಮ್ಮೆ ಸಗಣಿ ಅಥವಾ ಇತರ ಗೊಬ್ಬರಗಳನ್ನು ಗಿಡಗಳ ಬುಡಕ್ಕೆ ಹಾಕುತ್ತಿರಿ.
• ಕಾಲಕಾಲಕ್ಕೆ ಗಿಡಗಳನ್ನು ಪರೀಕ್ಷಿಸುತ್ತಿರಿ. ಹಳದಿ ಮತ್ತು ರೋಗಪೀಡಿತ ಎಳೆಗಳನ್ನು ತಕ್ಷಣವೇ ತೆಗೆದು ಹಾಕಿ, ಇಲ್ಲದಿದ್ದರೆ ಸಸ್ಯಗಳಿಗೆ ಅಗತ್ಯವಿರುವ ಪೋಷಕಾಂಶಗಳು ಸಿಗುವುದಿಲ್ಲ.
• ಮಳೆಗಾಲದಲ್ಲಿ ಕೀಟಗಳು ಸಸ್ಯಗಳಿಗೆ ಸಾಕಷ್ಟು ಹಾನಿಯನ್ನುಂಟುಮಾಡುತ್ತವೆ. ಇದಕ್ಕಾಗಿ ನೀವು ನೈಸರ್ಗಿಕ ಕೀಟನಾಶಕಗಳಾದ ಬೇವಿನ ಎಣ್ಣೆಯನ್ನು ಸಸ್ಯಗಳಿಗೆ ಸಿಂಪಡಿಸಬಹುದು.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:00 pm, Wed, 12 July 23