ಕಾಲಿನ ಅಂದ ಹೆಚ್ಚಿಸುವ ಪಾದರಕ್ಷೆ ಖರೀದಿಸುವಾಗ ಈ ತಪ್ಪು ಮಾಡ್ಲೇಬೇಡಿ
ಕೆಲವರಿಗೆ ಚಪ್ಪಲಿ ಮೇಲೆ ಹೆಚ್ಚು ಕ್ರೇಜ್ ಹೊಂದಿರುತ್ತಾರೆ. ತಮ್ಮ ಬಳಿ ವಿಭಿನ್ನ ಚಪ್ಪಲಿ ಕಲೆಕ್ಷನ್ ಇದ್ದರೂ ಕೂಡ ವಿವಿಧ ವಿನ್ಯಾಸ ಹಾಗೂ ಬ್ರ್ಯಾಂಡ್ ನ ಚಪ್ಪಲಿ ಖರೀದಿ ಮಾಡುವುದನ್ನಂತೂ ನಿಲ್ಲಿಸಲ್ಲ. ಆದರೆ ಹೆಚ್ಚಿನವರಿಗೆ ಈ ಚಪ್ಪಲಿ ಅಂಗಡಿಗೆ ಹೋದಾಗ ಯಾವ ರೀತಿ ಚಪ್ಪಲಿ ಖರೀದಿ ಮಾಡಬೇಕು ಎನ್ನುವ ಗೊಂದಲವೇ ಹೆಚ್ಚು. ಆಕರ್ಷಕವಾದ ಚಪ್ಪಲಿ ಕಣ್ಣಿಗೆ ಬಿದ್ದರೆ ಕಡಿಮೆ ಬೆಲೆಯಾದ್ರು ತೊಂದರೆಯಿಲ್ಲ, ಖರೀದಿಸಿಯೇ ಬಿಡುತ್ತಾರೆ. ಆದರೆ ಚಪ್ಪಲಿ ಖರೀದಿಸುವಾಗ ಈ ಕೆಲವು ತಪ್ಪುಗಳನ್ನು ಎಂದಿಗೂ ಮಾಡಬಾರದಂತೆ. ಈ ಕೆಲವು ಸೂಕ್ಷ್ಮ ವಿಚಾರಗಳ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಮಾರುಕಟ್ಟೆಗೆ ಬಣ್ಣ ಬಣ್ಣದ ಆಕರ್ಷಕ ಚಪ್ಪಲಿಗಳು ಲಗ್ಗೆ ಇಟ್ಟು ಫ್ಯಾಷನ್ ಪ್ರಿಯರ ಗಮನ ಸೆಳೆಯುತ್ತವೆ. ಈ ಚಪ್ಪಲಿಯಲ್ಲಿಯೂ ಸಾಕಷ್ಟು ವೆರೈಂಟಿಗಳಿದ್ದು, ಕೆಲವರು ತಮ್ಮ ಉಡುಗೆ ತೊಡುಗೆಗೆ ಮ್ಯಾಚ್ ಆಗುವಂತೆ ಚಪ್ಪಲಿ ಖರೀದಿ ಮಾಡುತ್ತಾರೆ. ಆದರೆ ಬಣ್ಣದ ಶೂ ಹಾಗೂ ಚಪ್ಪಲಿ ಖರೀದಿಯ ವೇಳೆ ನಮ್ಮಿಂದಾಗುವ ಕೆಲವು ತಪ್ಪು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಚಪ್ಪಲಿ ಖರೀದಿಸುವಾಗ ಈ ವಿಚಾರಗಳ ಮೇಲೆ ಹೆಚ್ಚು ಗಮನ ನೀಡುವುದರೊಂದಿಗೆ ಕೆಲವು ತಪ್ಪುಗಳನ್ನು ಮಾಡದಿರುವುದು ಉತ್ತಮ.
- ಗಾತ್ರದೊಂದಿಗೆ ಈ ವಿಷಯದ ಮೇಲೆ ಗಮನವಿರಲಿ : ಪ್ರತಿಯೊಬ್ಬರು ಪಾದರಕ್ಷೆ ಖರೀದಿ ಮಾಡುವಾಗ ನಮ್ಮ ಪಾದಕ್ಕೆ ಸರಿಹೊಂದುತ್ತದೆಯೇ, ಗಾತ್ರ ಸರಿಯಾಗಿದೆಯೇ ಎಂದು ನೋಡುತ್ತಾರೆ. ಗಾತ್ರದ ಜೊತೆಗೆ ಲೇಸ್ ಗಳು ಬಲವಾಗಿದೆಯೇ, ಪಾದರಕ್ಷೆ ಆರಾಮದಾಯಕವಾಗಿದೆಯೇ, ತಮ್ಮ ಪಾದಕ್ಕೆ ಸರಿಹೊಂದುತ್ತದೆಯೇ ಎನ್ನುವುದರ ಕಡೆಗೆ ಗಮನ ಕೊಡಿ.
- ಯೋಚಿಸದೇ ಶೂ ಖರೀದಿಸಲೇಬೇಡಿ : ಕೆಲವರಿಗೆ ಅವರ ಬಳಿ ಶೂ ಇದೆ ನಮ್ಮ ಬಳಿಯಿಲ್ಲ ಎನ್ನುವ ಕಾರಣಕ್ಕೆ ಶೂ ಖರೀದಿಸುತ್ತಾರೆ. ಆದರೆ ಶೂ ನಮ್ಮ ಪಾದಕ್ಕೆ ಸರಿ ಹೊಂದುತ್ತದೆಯೇ, ಶೂ ನಮಗೆ ಎಷ್ಟು ಅಗತ್ಯ ಎನ್ನುವುದನ್ನು ಯೋಚಿಸುವುದಿಲ್ಲ. ಹೀಗಾಗಿ ದುಬಾರಿ ಬೆಲೆಯ ಶೂ ಖರೀದಿ ಮಾಡುವಾಗ ಈ ಎಲ್ಲದ್ದನ್ನು ಯೋಚಿಸಿ, ಅಗತ್ಯವಿದ್ದರೆ ಖರೀದಿಸುವತ್ತ ಮನಸ್ಸು ಮಾಡಿ.
- ಖರೀದಿ ವೇಳೆ ಒಂದೇ ಕಾಲಿನ ಪರೀಕ್ಷೆ ಮಾಡಬೇಡಿ : ಒಂದೇ ಕಾಲಿನ ಪರೀಕ್ಷೆ ಮಾಡುವುದು ಎಲ್ಲರೂ ಮಾಡುವ ತಪ್ಪುಗಳಲ್ಲಿ ಒಂದು. ಬಹುತೇಕರು ಒಂದೇ ಕಾಲಿಗೆ ಪಾದರಕ್ಷೆ ಹಾಕಿ ಸರಿಯಾಗಿದೆಯೇ ಆರಾಮದಾಯಕವಾಗಿದೆಯೇ ಎಂದು ಪರೀಕ್ಷೆ ಮಾಡಿ ಆ ತಕ್ಷಣವೇ ಖರೀದಿಸಿ ಬಿಡುತ್ತೇವೆ. ಆದರೆ ಒಂದೇ ಕಾಲಿಗೆ ಚಪ್ಪಲಿ ಹಾಕಿ ನೋಡುವುದು ಸರಿಯಲ್ಲ. ಎರಡು ಪಾದಗಳು ಒಂದೇ ರೀತಿ ಇರುವುದಿಲ್ಲ ಎನ್ನುವುದು ತಿಳಿದಿರಲಿ. ಒಂದು ಕಾಲಿಗೆ ಕಂಫರ್ಟ್ ಎನಿಸುವ ಚಪ್ಪಲಿ ಮತ್ತೊಂದು ಕಾಲಿಗೆ ಹಾಕಿದಾಗ ಬಿಗಿಯಾಗಿ ಅಥವಾ ಸಡಿಲವಾಗಿರಬಹುದು. ಹೀಗಾಗಿ ಚಪ್ಪಲಿ ಎರಡು ಕಾಲಿಗೆ ಹಾಕಿ ಪರೀಕ್ಷೆ ಮಾಡಿ ಖರೀದಿಸಿ.
- ಗುಣಮಟ್ಟದ ಮೇಲೆ ಗಮನವಿರಲಿ : ಚಪ್ಪಲಿ ಖರೀದಿಸುವಾಗ ಗುಣಮಟ್ಟದ ಬಗ್ಗೆ ಗಮನ ಕೊಡುವುದು ಕಡಿಮೆಯೇ. ಅಗ್ಗದ ಬೆಲೆಯಾದರೂ ಸರಿಯೇ, ಚಪ್ಪಲಿಯೂ ಕಣ್ಣಿಗೆ ಆಕರ್ಷಕವಾಗಿ ಕಂಡರೆ ಅದನ್ನು ಖರೀದಿಸಿ ಬಿಡುವವರೇ ಹೆಚ್ಚು. ಆದರೆ ಗುಣಮಟ್ಟದ ಬಗ್ಗೆ ಹೆಚ್ಚು ಗಮನ ಕೊಡಿ. ಈ ಚಪ್ಪಲಿಗೆ ಇಷ್ಟು ಹಣ ನೀಡುವುದು ಯೋಗ್ಯವೇ, ಎಷ್ಟು ದಿನಗಳ ಕಾಲ ಬಾಳಿಕೆ ಬರುತ್ತದೆ ಎನ್ನುವುದನ್ನು ಯೋಚಿಸಿ.
- ಖರೀದಿಸುವ ಚಪ್ಪಲಿ ಸಂದರ್ಭಕ್ಕೆ ಅನುಗುಣವಾಗಿರಲಿ : ಕಾಲಕ್ಕೆ ತಕ್ಕಂತೆ ಚಪ್ಪಲಿಯಲ್ಲಿ ಫ್ಯಾಷನ್ ಗಳು ಬರುತ್ತಲೇ ಇರುತ್ತದೆ. ಈಗಿನ ಫ್ಯಾಷನ್ ಗೆ ತಕ್ಕಂತೆ ನಿಮ್ಮ ಚಪ್ಪಲಿ ಆಯ್ಕೆಯಿರಲಿ. ಅದಲ್ಲದೇ ನೀವು ಚಪ್ಪಲಿಯನ್ನು ಯಾವ ಸಂದರ್ಭಕ್ಕೆ ಹಾಗೂ ಯಾವ ರೀತಿ ಉಡುಗೆಗೆ ಹೊಂದುತ್ತದೆ ಎನ್ನುವುದನ್ನು ಗಮನಿಸಿ. ದೈನಂದಿನ ಉಡುಗೆಗಳಿಗೆ ಹೊಂದುವ ಆರಾಮದಾಯಕ ಚಪ್ಪಲಿ ಧರಿಸುವುದು ಒಳ್ಳೆಯದು.
- ಆದಷ್ಟು ಸಂಜೆ ವೇಳೆಯೇ ಚಪ್ಪಲಿ ಖರೀದಿಸಿ : ನೀವೇನಾದ್ರೂ ಚಪ್ಪಲಿ ಖರೀದಿ ಮಾಡುತ್ತೀರಿ ಎಂದಾದರೆ ಸಂಜೆಯ ಸಮಯವನ್ನೇ ಆರಿಸಿಕೊಳ್ಳಿ. ಕೆಲವರಿಗೆ ಸಂಜೆಯಾದಂತೆ ಪಾದ ಊದಿಕೊಳ್ಳುತ್ತದೆ. ಒಂದು ವೇಳೆ ಚಪ್ಪಲಿ ಬೆಳಗ್ಗೆ ಖರೀದಿಸಿದರೆ ಊತದ ಸಮಸ್ಯೆಯಿರುವವರಿಗೆ ಸಂಜೆಯ ವೇಳೆ ಆ ಚಪ್ಪಲಿ ಹಾಕಲು ಸಾಧ್ಯವಾಗದೇ ಇರಬಹುದು. ಹೀಗಾಗಿ ಸಂಜೆಯ ವೇಳೆಯೇ ಚಪ್ಪಲಿ ಖರೀದಿಗೆ ಸೂಕ್ತ ಸಮಯವಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ