
ಮಲೇಷ್ಯಾ (Malaysia) ಆಗ್ನೇಯ ಏಷ್ಯಾದ ಒಂದು ಸುಂದರ ದೇಶ. ಇಲ್ಲಿನ ಸುಂದರ ನಗರಗಳು, ದ್ವೀಪಗಳು, ಕಡಲ ತೀರಗಳು ಸೇರಿದಂತೆ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ನೂರಾರು ಸಂಖ್ಯೆಯ ಪ್ರವಾಸಿಗರು ಪ್ರತಿನಿತ್ಯ ಈ ದೇಶಕ್ಕೆ ಭೇಟಿ ನೀಡುತ್ತಾರೆ. ಇದೀಗಾ ಮಲೇಷ್ಯಾ ಪ್ರವಾಸೋದ್ಯಮ ಮತ್ತು ಆರ್ಥಿಕತೆಯ ಬೆಳವಣಿಗೆಯನ್ನು ಉತ್ತೇಜಿಸುವ ಸಲುವಾಗಿ ಭಾರತೀಯ ಪ್ರಜೆಗಳಿಗೆ ತನ್ನ ವೀಸಾ ನೀತಿಗಳಲ್ಲಿ ಗಮನಾರ್ಹವಾದ ಬದಲಾವಣೆಗಳನ್ನು ಮಾಡಿದೆ. ಡಿಸೆಂಬರ್ 1, 2023 ರಿಂದ ಅಂದರೆ ಇಂದಿನಿಂದ ಮಲೇಷ್ಯಾ ದೇಶಕ್ಕೆ ಭೇಟಿ ನೀಡುವ ಭಾರತೀಯ ಪ್ರಜೆಗಳಿಗೆ ಇನ್ನು ಮುಂದೆ ವೀಸಾಗಳ ಅಗತ್ಯವಿಲ್ಲ ಎಂಬುದನ್ನು ಘೋಷಿಸಿದೆ. ಹೀಗಿರುವಾಗ ನೀವು ಸುಲಭ ವಿದೇಶಿ ಪ್ರವಾಸವನ್ನು ಕೈಗೊಳ್ಳಲು ಯೋಜಿಸುತ್ತಿದ್ದರೆ, ಯಾವುದೇ ವೀಸಾ ಸಂಬಂಧಿ ಟೆನ್ಷನ್ ಇಲ್ಲದೆ ಆರಾಮದಾಯಕವಾಗಿ ಮಲೇಷ್ಯಾಕ್ಕೆ ಪ್ರವಾಸ ಕೈಗೊಳ್ಳಬಹುದು. ಹಾಗೇನಾದರೂ ಮಲೇಷ್ಯಾಗೆ ಹೋಗುವ ಯೋಜನೆಯಲ್ಲಿದ್ದರೆ, ಅಲ್ಲಿನ ಈ ಕೆಲವು ಅತ್ಯುತ್ತಮ ಸ್ಥಳಗಳಿಗೆ ಭೇಟಿ ನೀಡಲು ಮರೆಯದಿರಿ.
ಮಲೇಷ್ಯಾದ ರಾಜಧಾನಿಯಾದ ಕೌಲಾಲಂಪುರ್ ಪ್ರಪಂಚದಾದ್ಯಂತ ಪ್ರಸಿದ್ದಿಯನ್ನು ಪಡೆದ ನಗರವಾಗಿದೆ. ಇಲ್ಲಿ ನೀವು ನೋಡಲೇಬೇಕಾದ ಅನೇಕ ಸ್ಥಳಗಳಿವೆ. ಇಲ್ಲಿ ವಿಶ್ವದ ಅತೀ ಎತ್ತರದ ಗಗನಚುಂಬಿ ಕಟ್ಟಡಗಳನ್ನು, ವೈವಿಧ್ಯಮಯ ಶಾಪಿಂಗ್ ಮಾಲ್ಗಳನ್ನು ನೋಡಬಹುದು. ಇಲ್ಲಿರುವ ಪೆಟ್ರೋನಾನ್ ಟ್ವಿನ್ ಟವರ್ ಕೂಡಾ ಬಹಳ ಪ್ರಸಿದ್ಧವಾಗಿದೆ. ಅಲ್ಲಿಗೆ ಕೂಡಾ ನೀವು ಭೇಟಿ ನೀಡಬಹುದು.
ಲಂಕಾವಿ ಅದರ ನೈಸರ್ಗಿಕ ಸೌಂದರ್ಯದ ಕಾರಣದಿಂದಲೇ ಬಹಳ ಪ್ರಸಿದ್ಧಿಯನ್ನು ಪಡೆದಿರುವ ಸ್ಥಳವಾಗಿದೆ. ಇದು ಅಂಡಮಾನ್ ಸಮುದ್ರದಲ್ಲಿರುವ ದ್ವೀಪಗಳ ಸಮೂಹವಾಗಿದ್ದು, ಇಲ್ಲಿ 99 ದ್ವೀಪಗಳಿವೆ. ಇಲ್ಲಿ ನೀವು ದತರನ್ ಲ್ಯಾಂಗ್, ವನ್ಯಜೀವಿ ಉದ್ಯಾನ ಮತ್ತು ಬರ್ಡ್ ಪ್ಯಾರಡೈಸ್ ಇತ್ಯಾದಿ ಸುಂದರ ಸ್ಥಳಗಳಿಗೆ ಭೇಟಿ ನೀಡಬಹುದು. ಅಲ್ಲದೆ ಇಲ್ಲಿ ನೀವು ಕೇಬಲ್ ಕಾರ್ ಮೂಲಕ ಇಡೀ ಪ್ರದೇಶದ ಅದ್ಭುತ ನೋಟವನ್ನು ಕಣ್ತುಂಬಿಕೊಳ್ಳಬಹುದು.
ಮಲಕ್ಕಾ ಮಲೇಷ್ಯಾದ ಅತ್ಯಂತ ಹಳೆಯ ವ್ಯಾಪಾರ ಬಂದರು ಸ್ಥಳವಾಗಿದೆ. ಸಾಂಸ್ಕೃತಿಕವಾಗಿ ಮಹತ್ವವನ್ನು ಪಡೆದಿರುವ ಶ್ರೀಮಂತ ಮತ್ತು ಅನೇಕ ಐತಿಹಾಸಿಕ ಸ್ಥಳಗಳನ್ನು ಹೊಂದಿರುವ ಸುಂದರ ನಗರ ಇದಾಗಿದೆ. 2008 ರಲ್ಲಿ ಮಲಕ್ಕಾವನ್ನು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ನಗರದಲ್ಲಿ ನೀವು ಪ್ರಾಚೀನ ಕಡಲತೀರಗಳು ಮತ್ತು ಹಚ್ಚಹಸಿರಿನ ಕಾಡುಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಅಲ್ಲದೆ ಕ್ರೈಸ್ಟ್ ಚರ್ಚ್, ಸ್ಟಾಡ್ತುಯಿಸ್, ಸೇಂಟ್ ಪಾಲ್ಸ್ ಹೀಲ್, ಡಚ್ ಫೋರ್ಟ್ ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ.
ಕ್ಯಾಮರೂನ್ ಹೈಲ್ಯಾಂಡ್ ಮಲೇಷ್ಯಾದಲ್ಲಿನ ಒಂದು ಎತ್ತರದ ಪ್ರದೇಶವಾಗಿದ್ದು, ಇದು ಸಮುದ್ರ ಮಟ್ಟದಿಂದ ಸುಮಾರು 5,000 ಕಿಮೀ ಎತ್ತರದಲ್ಲಿದೆ. ಈ ಸ್ಥಳ ಕೂಡಾ ಮಲೇಷ್ಯಾದಲ್ಲಿ ಭೇಟಿ ನೀಡಲು ಅತ್ಯುತ್ತಮ ತಾಣವಾಗಿದೆ. ಇಲ್ಲಿ ನೀವು ಅನೇಕ ಸುಂದರ ಚಹಾ ತೋಟಗಳನ್ನು ನೋಡಬಹುದು. ಮತ್ತು ಇಲ್ಲಿನ ಚಹಾ ಕೂಡಾ ಅಷ್ಟೇ ಪ್ರಸಿದ್ಧಿಯನ್ನು ಪಡೆದಿದೆ. ಕ್ಯಾಮರೂನ್ ಹೈಲ್ಯಾಂಡ್ ನ ಪ್ರಮುಖ ಆಕರ್ಷಣೆಯ ಕೇಂದ್ರಗಳೆಂದರೆ ಬ್ರಿಂಚಾಂಗ್, ಟ್ರಿಂಗ್ಕಾಪ್, ತನಹ್ ರಾಟಾ ಮತ್ತು ರಿಂಗ್ಲೆಟ್ ಪ್ರದೇಶಗಳು.
ಇದನ್ನೂ ಓದಿ: ಡಿಸೆಂಬರ್ 1ರಿಂದ ಭಾರತೀಯರು ವೀಸಾವಿಲ್ಲದೆ ಮಲೇಷ್ಯಾಗೆ ಪ್ರಯಾಣಿಸಬಹುದು
ಪೆನಾಂಗ್ ಬೆಟ್ಟ ಮಲೇಷ್ಯಾದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಈ ಸ್ಥಳವನ್ನು ಬುಕೆಟ್ ಬುಂಡೇರಾ ಎಂದೂ ಕರೆಯಲಾಗುತ್ತದೆ. ಇದೊಂದು ಸುಂದರವಾದ ಪ್ರಾಕೃತಿಕ ತಾಣವಾಗಿದ್ದು, ಪ್ರಕೃತಿ ಪ್ರೇಮಿಗಳು ತಪ್ಪದೇ ಈ ಸ್ಥಳಕ್ಕೆ ಭೇಟಿ ನೀಡಲೇಬೇಕು. ಇಲ್ಲಿ ಸ್ನೇಕ್ ಟೆಂಪ್, ಕೆಕ್ ಲೋಕ್ ಸಿ ಟೆಂಪಲ್ ಸೇರಿದಂತೆ ಹಲವು ದೇವಸ್ಥಾನಗಳಿವೆ. ಇದಲ್ಲದೆ ಇಲ್ಲಿನ ಹಳ್ಳಿಗಳ ಸಮೀಪ ನೀವು ಮೀನುಗಾರಿಕೆಯನ್ನು ಸಹ ಆನಂದಿಸಬಹುದು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ