Tourist Places For Deepavali: ದೀಪಾವಳಿ ರಜೆಯಲ್ಲಿ ಈ ಸ್ಥಳಗಳಿಗೆ ಪ್ರವಾಸ ಹೋಗಿ, ಇಲ್ಲಿದೆ ಮಾಹಿತಿ
ದೀಪಾವಳಿ ಹಬ್ಬವನ್ನು ಭಾರತದಾದ್ಯಂತ ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಅದರಲ್ಲೂ ಕೆಲವೊಂದು ಸ್ಥಳಗಳಲ್ಲಿ ಬಹಳ ವಿಭಿನ್ನವಾಗಿ ಹಾಗೂ ವಿಶಿಷ್ಟವಾಗಿ ಹಬ್ಬವನ್ನು ಆಚರಿಸಲಾಗುತ್ತದೆ. ಹಾಗಿರುವಾಗ ಈ ಬಾರಿಯ Long Weekend Holidays ಸಂದರ್ಭದಲ್ಲಿ ಈ ಕೆಲವು ಸ್ಥಳಗಳಿಗೆ ಪ್ರವಾಸ ಹೋಗುವ ಮೂಲಕ ದೀಪಾವಳಿ ಹಬ್ಬವನ್ನು ಇನ್ನಷ್ಟು ಸ್ಮರಣೀಯವಾಗಿಸಬಹುದು.

ಬೆಳಕಿನ ಹಬ್ಬ ದೀಪಾವಳಿಗೆ ಇನ್ನು ಕೆಲವು ದಿನಗಳು ಮಾತ್ರ ಬಾಕಿ ಉಳಿದಿವೆ. ದಿನನಿತ್ಯದ ಕೆಲಸದ ಒತ್ತಡದಿಂದ ಮನಸ್ಸನ್ನು ಶಾಂತವಾಗಿರಿಸಲು ಈ ಬಾರಿಯ ದೀಪಾವಳಿಯ ಲಾ ಸಮಯದಲ್ಲಿ ಎಲ್ಲಾದರೂ ಪ್ರವಾಸ ಹೋಗಬೇಕೆಂದು ಯೋಜಿಸುತ್ತಿದ್ದೀರಾ? ಹಾಗಿರುವಾಗ ದೀಪಾವಳಿಯ Long Weekend Holiday ಸಂದರ್ಭದಲ್ಲಿ ನೀವು ಬೆಳಕಿನ ಹಬ್ಬವನ್ನು ವಿಶಿಷ್ಟವಾಗಿ, ಅದ್ದೂರಿಯಾಗಿ ಆಚರಿಸುವ ಕೆಲವೊಂದು ಸ್ಥಳಗಳಿಗೆ ಭೇಟಿ ನೀಡಬಹುದು. ಹೀಗೆ ಇಂತಹ ಸ್ಥಳಗಳಿಗೆ ಭೇಟಿ ನೀಡುವುದರಿಂದ ನೀವು ಮನಸ್ಸನ್ನು ಶಾಂತವಾಗಿರಿಸಲು ಪ್ರವಾಸ ಹೋದಂತೆಯೂ ಆಗುತ್ತದೆ ಹಾಗೂ ವಿಭಿನ್ನವಾಗಿ ದೀಪಾವಳಿ ಹಬ್ಬವನ್ನು ಆಚರಿಸಿದಂತೆಯೂ ಆಗುತ್ತದೆ. ಈ ಬಾರಿಯ ದೀಪಾವಳಿ ರಜಾದಿನದಂದು ಯಾವ ಸ್ಥಳಗಳಿಗೆ ಭೇಟಿ ನೀಡಿದರೆ ಸೂಕ್ತ ಎಂದು ಯೋಚಿಸುತ್ತಿದ್ದರೆ, ಈ ಕೆಲವು ಅದ್ಭುತ ಸ್ಥಳಗಳಿಗೆ ನಿಮ್ಮ ಕುಟುಂಬ ಸದಸ್ಯರೊಂದಿಗೆ ಅಥವಾ ಸ್ನೇಹಿತರೊಂದಿಗೆ ಭೇಟಿ ನೀಡಬಹುದು.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ನೀವು ಈ ಸ್ಥಳಗಳಿಗೆ ಭೇಟಿ ನೀಡಬಹುದು:
ಜೈಪುರ:
ರಾಜಸ್ಥಾನದ ರಾಜಧಾನಿಯಾಗಿರುವ ಜೈಪುರ, ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ನಗರಗಳಲ್ಲಿ ಒಂದಾಗಿದೆ. ಜೈಪುರವು ತನ್ನ ಭವ್ಯವಾದ ಅರಮನೆಗಳು, ಕೋಟೆಗಳು ಮತ್ತು ಉದ್ಯಾನವನಗಳಿಗೆ ಅತ್ಯಂತ ಪ್ರಸಿದ್ಧವಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಂತೂ ಇಡೀ ನಗರವನ್ನು ದೀಪದಿಂದ ಅಲಂಕರಿಸಲಾಗುತ್ತದೆ. ಅದನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ. ಇದರ ಹೊರತಾಗಿ ನೀವು ಇಲ್ಲಿ ಸುತ್ತಾಡಲು ಹಲವು ಆಯ್ಕೆಗಳಿವೆ. ಇಲ್ಲಿ ನೀವು ಬೆಳಕಿನ ಹಬ್ಬವನ್ನು ನಿಮ್ಮ ಕುಟುಂಬ ಸದಸ್ಯರೊಂದಿಗೆ ಮತ್ತು ಸ್ನೇಹಿತರೊಂದಿಗೆ ಆಚರಿಸಬಹುದು.
ಉದಯಪುರ:
ನೀವು ಸರೋವರಗಳ ನಗರ ಉದಯಪುರ ನಗರಕ್ಕೂ ಪ್ರವಾಸ ಕೈಗೊಳ್ಳಬಹುದು. ರಾಜಸ್ಥಾನದ ಉದಯಪುರದಲ್ಲೂ ಬಹಳ ವಿಜೃಂಭಣೆಯಿಂದ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ದೀಪಾವಳಿ ಹಬ್ಬದಂದು ಪೂರ್ತಿ ಉದಯಪುರ ನಗರವನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ. ಆ ದೀಪಾಲಂಕಾರದ ಬೆಳಕಿನ ಪ್ರತಿಬಿಂಬವನ್ನು ಪಿಚೋಲಾ ಸರೋವರದಲ್ಲಿ ಕಾಣಬಹದು. ನೀವು ಬಾರಿಯ ರಜಾದಿನಗಳಲ್ಲಿ ಉದಯಪುರಕ್ಕೆ ಪ್ರವಾಸ ಬರುತ್ತೀರಿ ಎಂದಾದರೆ, ಪಿಚೋಲಾ ಸರೋವರಾ, ಸಿಟಿ ಪ್ಯಾಲೇಸ್, ಲೇಕ್ ಪ್ಯಾಲೇಸ್ ಇತ್ಯಾದಿ ರಮಣೀಯ ಸ್ಥಳಗಳಿಗೆ ಭೇಟಿ ನೀಡಬಹುದು
ಅಯೋಧ್ಯೆ:
ಈ ಬಾರಿಯ ದೀಪಾವಳಿ ಹಬ್ಬದ ಸಂದರ್ಭದಲ್ಲಿ ನೀವು ಅಯೋಧ್ಯೆಗೆ ಭೇಟಿ ನೀಡಬಹುದು. ಪ್ರಭು ಶ್ರೀರಾಮನ ಜನ್ಮ ಸ್ಥಳವಾದ ಅಯೋಧ್ಯೆಯು ಆಧ್ಯಾತ್ಮಿಕತೆಯ ನಗರವಾಗಿದೆ. ಇಲ್ಲಿ ದೀಪಾವಳಿಯನ್ನು ಬಹಳ ವಿಶೇಷ ರೀತಿಯಲ್ಲಿ ಆಚರಿಸಲಾಗತ್ತದೆ. ದೀಪಾವಳಿಯ ಸಂದರ್ಭದಲ್ಲಿ ಇಲ್ಲಿ ಅನೇಕ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ನೀವು ದೀಪಾವಳಿಯಂದು ಇಲ್ಲಿಗೆ ಬಂದಾಗ, ನೀವು ಅನೇಕ ಧಾರ್ಮಿಕ ದೇವಾಲಯಗಳಿಗೆ ಭೇಟಿ ನೀಡಬುದು. ರಾಮಮಂದಿರದ ನಿರ್ಮಾಣದ ಕಾರ್ಯವನ್ನೂ ನೋಡಬಹುದು. ನಿಮ್ಮ ಕುಟುಂಬದವರೊಂದಿಗೆ ಇಲ್ಲಿಗೆ ಬರುವ ಮೂಲಕ ನೀವು ಈ ಬಾರಿಯ ದೀಪಾವಳಿಯನ್ನು ಇನ್ನಷ್ಟು ವಿಶೇಷವಾಗಿಸಬಹುದು. ಇಲ್ಲಿ ನೀವು ರಾಮ ಮಂದಿರ, ಕಲಾ ರಾಮ್ ದೇವಾಲಯ, ಗುಪ್ತರ್ ಘಾಟ್, ತುಳಸಿ ಸ್ಮಾರಕ ಭವನ ಇತ್ಯಾದಿ ಸ್ಥಳಗಳಿಗೆ ಭೇಟಿ ನೀಡಬಹುದು.
ಇದನ್ನೂ ಓದಿ: ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ತಾಣ, ಗಿರಿಧಾಮಗಳಿವು…
ವಾರಣಾಸಿ:
ಈ ಬಾರಿಯ ದೀಪಾವಳಿಯ ಸಂದರ್ಭದಲ್ಲಿ ಉತ್ತರ ಪ್ರದೇಶದ ವಾರಣಾಸಿಗೆ ಪ್ರವಾಸ ಕೈಗೊಳ್ಳಬಹುದು. ವಾರಣಾಸಿಯಲ್ಲಿ ದೀಪಾವಳಿ ಹಬ್ಬದ ಆಚರಣೆ ಬಹಳ ವಿಭಿನ್ನವಾಗಿದೆ. ವಾರಣಸಿಯ ಇಡೀ ನಗರವನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ. ಮತ್ತು ದೀಪಾವಳಿ ಸಂದರ್ಭದಲ್ಲಿ ಇಲ್ಲಿನ ಅಸ್ಸಿ ಘಾಟ್ನಲ್ಲಿ ವಿಶೇಷವಾದ ಆಚರಣೆ ನಡೆಯುತ್ತದೆ. ಅಲ್ಲದೆ ವಾರಣಾಸಿಯಲ್ಲಿ ನೀವು ಪವಿತ್ರ ಗಂಗಾನದಿಯ ತಟದಲ್ಲಿ ಗಂಗಾರತಿ ಮತ್ತು ವಿವಿಧ ಆಚರಣೆಗಳನ್ನು ಕಣ್ತುಂಬಿಕೊಳ್ಳಬಹುದು. ಇಲ್ಲಿ ನೀವು ಕೇವಲ ಒಂದಲ್ಲ ಹಲವಾರು ಭೇಟಿ ನೀಡುವ ಉತ್ತಮ ಸ್ಥಳಗಳಿವೆ. ದೇಶ ಮಾತ್ರವಲ್ಲದೆ ವಿದೇಶಗಳಿಂದಲೂ ಅನೇಕ ಪ್ರವಾಸಿಗಳು ದೀಪಾವಳಿಯ ಸಂದರ್ಭದಲ್ಲಿ ಇಲ್ಲಿಗೆ ಬರುತ್ತಾರೆ. ವಾರಣಾಸಿಗೆ ಪ್ರವಾಸ ಬರುತ್ತಿದ್ದೀರಿ ಎಂದಾದರೆ ವಾರಣಾಸಿ ಘಾಟ್ಗಳು, ತುಳಸಿ ಮಾನಸ ದೇವಾಲಯ, ದಶಾಶ್ವಮೇಧ ಘಾಟ್, ಸಂಕಟ ಮೋಚನ ಹನುಮ ದೇವಾಲಯ, ಕಾಶಿ ವಿಶ್ವನಾಥ ದೇವಾಲಯಗಳಿಗೆ ತಪ್ಪದೆ ಭೇಟಿ ನೀಡಿ.
ನೈನಿತಾಲ್:
ನೀವು ದೀಪಾವಳಿ ಹಬ್ಬದ ರಜೆಯ ಸಂದರ್ಭದಲ್ಲಿ ಮನಸ್ಸನ್ನು ಶಾಂತವಾಗಿರಿಸಲು ಗಿರಿಧಾಮಗಳಿರುವ ಅದ್ಭುತ ಸ್ಥಳಗಳಿಗೆ ಹೋಗಬೇಕೆಂದು ಯೋಜಿಸುತ್ತಿದ್ದರೆ, ನೈನಿತಾಲ್ ಉತ್ತಮ ಆಯ್ಕೆಯಾಗಿದೆ. ನೈನಿತಾಲ್ನ ತಂಪಾದ ಹವಾಮಾನವು ನಿಮ್ಮ ಮನಸ್ಸಿಗೆ ನೆಮ್ಮದಿ ನೀಡುವುದಂತು ಖಂಡಿತ. ಇಲ್ಲಿ ನೀವು ನೈನಿ ಸರೋವರ, ಮಾಲ್ ರೋಡ್, ನೈನಾ ದೇವಿ ದೇವಾಲಯ, ಎಕೋ ಕೇವ್ ಪಾರ್ಕ್, ಸ್ನೋ ವ್ಯೂ ಪಾಯಿಂಟ್ ಇತ್ಯಾದಿ ಸ್ಥಳಗಳಿಗೆ ಭೇಟಿ ನೀಡಬಹುದು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




