AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Press Day 2026: ಡಿಜಿಟಲ್‌ ಯುಗದಲ್ಲೂ ಕಡಿಮೆಯಾಗಿಲ್ಲ ಪತ್ರಿಕೆಗಳ ಮಹತ್ವ

ಸಮಾಜದಲ್ಲಿ ಪತ್ರಿಕೆಗಳ ಪಾತ್ರ ತುಂಬಾ ದೊಡ್ಡದು. ಪತ್ರಿಕೆಗಳು ಸಮಾಜದ ಸ್ವಾಸ್ಥ್ಯ ಕಾಪಾಡುವ ಹಾಗೂ ಜಗತ್ತಿನಲ್ಲಿ ನಡೆಯುವ ವಿದ್ಯಾಮಾನಗಳ ಕುರಿತು ಜನತೆಗೆ ವಿಶ್ವಾಸಾರ್ಹ ಸುದ್ದಿಯನ್ನು ನೀಡುವ ಕಾರ್ಯವನ್ನು ಮಾಡುತ್ತಿದೆ. ಪತ್ರಿಕೆಗಳ ಈ ಪ್ರಾಮುಖ್ಯತೆ ಮತ್ತು ಅವುಗಳ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಜನವರಿ 29 ರಂದು ಭಾರತೀಯ ಪತ್ರಿಕಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಹಿನ್ನೆಲೆಯೇನು ಎಂಬುದನ್ನು ನೋಡೋಣ ಬನ್ನಿ.

Indian Press Day 2026: ಡಿಜಿಟಲ್‌ ಯುಗದಲ್ಲೂ ಕಡಿಮೆಯಾಗಿಲ್ಲ ಪತ್ರಿಕೆಗಳ ಮಹತ್ವ
ಭಾರತೀಯ ಪತ್ರಿಕಾ ದಿನImage Credit source: vecteezy
ಮಾಲಾಶ್ರೀ ಅಂಚನ್​
|

Updated on:Jan 29, 2026 | 10:51 AM

Share

ಇಂದಿನ ಈ ಡಿಜಿಟಲ್‌ ಜಗತ್ತಿನಲ್ಲಿ ಪ್ರತಿಯೊಂದು ಸುದ್ದಿಯೂ ಮೊಬೈಲ್ ಪರದೆಯಲ್ಲಿ ಸೆಕೆಂಡುಗಳಲ್ಲಿ ಲಭ್ಯವಿದ್ದರೂ ಸಹ ಪತ್ರಿಕೆಗಳು (Press) ಇನ್ನೂ ತಮ್ಮ ವಿಶ್ವಾಸಾರ್ಹತೆಯನ್ನು ಕಾಯ್ದುಕೊಂಡು ಬಂದಿವೆ ಮತ್ತು ಜನರಿಗೆ ಜಗತ್ತಿನಲ್ಲಿ ನಡೆಯುವ ವಿದ್ಯಾಮಾನಗಳ ಕುರಿತು ಓದುಗರಿಗೆ ವಿಶ್ವಾಸಾರ್ಹ ಮತ್ತು ಸಮತೋಲಿತ ಮಾಹಿತಿಯನ್ನು ಒದಗಿಸುತ್ತವೆ. ಇದೇ ಕಾರಣಕ್ಕಾಗಿ ಈ ಡಿಜಿಟಲ್‌ ಯುಗದಲ್ಲೂ ಲಕ್ಷಾಂತರ ಜನರು ಪತ್ರಿಕೆಯನ್ನು ಓದುತ್ತಿದ್ದಾರೆ. ಪತ್ರಿಕೆಗಳ ಈ ಪ್ರಾಮುಖ್ಯತೆ ಮತ್ತು ಅವುಗಳ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಹಾಗೂ ಮಾಧ್ಯಮ ಸ್ವಾತಂತ್ರ್ಯ, ಸಮಗ್ರತೆ ಮತ್ತು ನಿಷ್ಪಕ್ಷಪಾತತೆಯನ್ನು ಉತ್ತೇಜಿಸುವ ಉದ್ದೇಶದಿಂದ ಪ್ರತಿವರ್ಷ ಜನವರಿ 29 ರಂದು ಭಾರತೀಯ ಪತ್ರಿಕಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.

ಭಾರತೀಯ ಪತ್ರಿಕಾ ದಿನದ ಇತಿಹಾಸವೇನು?

ಭಾರತೀಯ ಪತ್ರಿಕಾ ದಿನದ ಇತಿಹಾಸವು ಹದಿನೆಂಟನೇ ಶತಮಾನದಷ್ಟು ಹಿಂದಿನದು. 1780 ಜನವರಿ 29 ರಲ್ಲಿ  ಐರಿಶ್ ಪತ್ರಕರ್ತ ಜೇಮ್ಸ್ ಅಗಸ್ಟಸ್ ಹಿಕ್ಕಿ ಭಾರತದ ಮೊದಲ ಪತ್ರಿಕೆ “ಹಿಕಿಸ್ ಬೆಂಗಾಲ್ ಗೆಜೆಟ್” ಪತ್ರಿಕೆಯನ್ನು ಕೋಲ್ಕತ್ತಾದಿಂದ ಪ್ರಕಟಿಸಿದರು. ಈ ಪತ್ರಿಕೆಯು ವಾರಪತ್ರಿಕೆಯಾಗಿದ್ದು, ಏಷ್ಯಾದ ಮೊದಲ ಮುದ್ರಿತ ಪತ್ರಿಕೆ ಎಂದು ಪರಿಗಣಿಸಲಾಗಿದೆ. ಆರಂಭದಲ್ಲಿ, ಹಿಕ್ಕಿಯ ಪತ್ರಿಕೆಯು ಸಾರ್ವಜನಿಕ ಸುದ್ದಿ, ಸ್ಥಳೀಯ ಸಮಸ್ಯೆಗಳು ಮತ್ತು ಜಾಹೀರಾತುಗಳ ಮೇಲೆ ಕೇಂದ್ರೀಕರಿಸಿತ್ತು, ಆದರೆ ಕ್ರಮೇಣ, ಹಿಕ್ಕಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಅದರ ಅಧಿಕಾರಿಗಳ ನೀತಿಗಳನ್ನು ಬಹಿರಂಗವಾಗಿ ಟೀಕಿಸಲು ಪ್ರಾರಂಭಿಸಿದರು. ಇದು ಬ್ರಿಟಿಷ್ ಸರ್ಕಾರವು 1782 ರಲ್ಲಿ ಇದನ್ನು ಬೆದರಿಕೆ ಎಂದು ಪರಿಗಣಿಸಿ ಮುಚ್ಚಲು ಕಾರಣವಾಯಿತು.ಹಿಕಿಸ್ ಬೆಂಗಾಲ್ ಗೆಜೆಟ್ ಅಲ್ಪಾವಧಿಯಲ್ಲಿ ಕಾರ್ಯನಿರ್ವಹಿಸಿದರೂ  ಅದರ ಪ್ರಭಾವವು ಅಗಾಧವಾಗಿತ್ತು. ಇದು ಭಾರತದಲ್ಲಿ ಸ್ವತಂತ್ರ ಪತ್ರಿಕೋದ್ಯಮಕ್ಕೆ ಅಡಿಪಾಯ ಹಾಕಿತು ಮತ್ತು ಇತರ ಅನೇಕ ಪತ್ರಿಕೆಗಳ ಪ್ರಕಟಣೆಗೆ ದಾರಿ ಮಾಡಿಕೊಟ್ಟಿತು. ಹಾಗಾಗಿ ಭಾರತದ ಮೊದಲ ಪತ್ರಿಕೆ ಹಿಕಿಸ್ ಬೆಂಗಾಲ್ ಗೆಜೆಟ್‌ನ  ಪ್ರಕಟಣೆಯ ಗೌರವಾರ್ಥವಾಗಿ ಭಾರತದಲ್ಲಿ ಪ್ರತಿವರ್ಷ ಜನವರಿ 29 ರಂದು ಪತ್ರಿಕಾ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ಜನವರಿ 26 ರಂದೇ ಏಕೆ ಗಣರಾಜ್ಯೋತ್ಸವವನ್ನು ಆಚರಿಸುವುದು? ಕುರಿತ ಇಂಟರೆಸ್ಟಿಂಗ್‌ ಸಂಗತಿ ಇಲ್ಲಿದೆ

ಭಾರತೀಯ ಪತ್ರಿಕಾ ದಿನವನ್ನು ಆಚರಿಸುವ ಉದ್ದೇಶವೇನು?

  • ಭಾರತೀಯ ಪತ್ರಿಕಾ ದಿನವನ್ನು ಆಚರಿಸುವ ಮುಖ್ಯ ಉದ್ದೇಶವೆಂದರೆ ಪತ್ರಿಕೆಗಳ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸುವುದು.
  • ಪತ್ರಿಕೆಗಳು ಕೇವಲ ಸುದ್ದಿಗಳನ್ನು ಓದುವ ಸಾಧನವಲ್ಲ, ಅವು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿಯೂ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಈ ದಿನ ನಮಗೆ ನೆನಪಿಸುತ್ತದೆ.
  • ಜನರು ನಿಯಮಿತವಾಗಿ ಪತ್ರಿಕೆಗಳನ್ನು ಓದುವಂತೆ ಪ್ರೋತ್ಸಾಹಿಸುವುದು, ಪತ್ರಿಕೋದ್ಯಮದ ಕೊಡುಗೆಗಳನ್ನು ಗೌರವಿಸುವುದು ಮತ್ತು ಪತ್ರಿಕಾ ಸ್ವಾತಂತ್ರ್ಯದ ಮಹತ್ವವನ್ನು ಒತ್ತಿಹೇಳುವುದು ಈ ದಿನದ ಉದ್ದೇಶವಾಗಿದೆ.
  • ಸಮಾಜಕ್ಕೆ ಸತ್ಯ, ಪಾರದರ್ಶಕ ಮತ್ತು ಅಧಿಕೃತ ಮಾಹಿತಿಯನ್ನು ಒದಗಿಸಲು ಪ್ರತಿದಿನ ಶ್ರಮಿಸುವ ಪತ್ರಕರ್ತರ ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ಜವಾಬ್ದಾರಿಯನ್ನು ಈ ದಿನ ಗುರುತಿಸುತ್ತದೆ.
  • ಅಲ್ಲದೆ ಈ ದಿನವು ಮಾಧ್ಯಮ ಸ್ವಾತಂತ್ರ್ಯ, ಸತ್ಯ ಮತ್ತು ನಿಷ್ಪಕ್ಷಪಾತದ ಪ್ರಚಾರವನ್ನು ಸಂಕೇತಿಸುತ್ತದೆ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರಿಕಾ ಪಾತ್ರವನ್ನು ಎತ್ತಿ ತೋರಿಸುತ್ತದೆ.
  • ಈ ದಿನ ದೇಶದ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯಲ್ಲಿ ಪತ್ರಿಕೆಗಳು ಹೇಗೆ ಪ್ರಮುಖ ಪಾತ್ರ ವಹಿಸಿವೆ ಎಂಬುದನ್ನು ನೆನಪಿಸಿಕೊಳ್ಳಲು ಅವಕಾಶವನ್ನು ನೀಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:32 am, Thu, 29 January 26