ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್‌, ವಿಡಿಯೋ ಮಾಡಿ ಹುಚ್ಚಾಟ ಮೆರೆಯುವವರಿಗೆ ಕಾನೂನಿನ ಅಡಿಯಲ್ಲಿ ಶಿಕ್ಷೆ ಇದ್ಯಾ?

ಈ ಡಿಜಿಟಲ್‌ ಜಮಾನದಲ್ಲಿ ರೀಲ್ಸ್‌, ವಿಡಿಯೋಗಳದ್ದೇ ಹವಾ. ಯಾರು ನೋಡಿದರೂ ವಿಡಿಯೋಗಳನ್ನು ಮಾಡುತ್ತಾ ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಡುತ್ತಿರುತ್ತಾರೆ. ಅದರಲ್ಲೂ ಕೆಲವರು ಪಬ್ಲಿಕ್‌ ಪ್ಲೇಸ್‌ಗಳಲ್ಲಿ ವಿಡಿಯೋ ಮಾಡುತ್ತಾ ಇತತರಿಗೆ ತೊಂದರೆ ಕೊಡುತ್ತಿರುತ್ತಾರೆ. ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್‌ ಮಾಡುತ್ತಾ ಹುಚ್ಚಾಟ ಮೆರೆದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬಹುದಾ? ಈ ಬಗ್ಗೆ ಭಾರತೀಯ ಕಾನೂನು ಏನು ಹೇಳುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್‌, ವಿಡಿಯೋ ಮಾಡಿ ಹುಚ್ಚಾಟ ಮೆರೆಯುವವರಿಗೆ ಕಾನೂನಿನ ಅಡಿಯಲ್ಲಿ ಶಿಕ್ಷೆ ಇದ್ಯಾ?
ಸಾಂದರ್ಭಿಕ ಚಿತ್ರ
Image Credit source: Freepik

Updated on: Nov 11, 2025 | 3:21 PM

ಕೆಲವರಿಗೆ ರೀಲ್ಸ್‌ (reels) ಹುಚ್ಚು ಎಷ್ಟಿದೆ ಅಂದ್ರೆ, ಎಲ್ಲೆಂದರಲ್ಲಿ ರೀಲ್ಸ್‌ ಮಾಡುತ್ತಾ ನಿಂತು ಬಿಡುತ್ತಾರೆ. ಇನ್ನೂ ಕೆಲವರು ತಾವು ಸೋಷಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗ್ಬೇಕು ಎಂಬ ಕಾರಣಕ್ಕೆ ರೈಲು, ಮೆಟ್ರೋ, ಪ್ರವಾಸಿ ತಾಣ  ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್‌, ವಿಡಿಯೋ ಮಾಡಿ ಇತರರಿಗೂ ತೊಂದರೆಯನ್ನು ಉಂಟುಮಾಡುತ್ತಿರುತ್ತಾರೆ. ಇವರುಗಳ ಹುಚ್ಚಾಟದಿಂದ ಅನೇಕರು ಅಹಿತಕರ ಭಾವನೆಯನ್ನು ಅನುಭವಿಸುತ್ತಾರೆ. ಹೀಗೆ ಪಬ್ಲಿಕ್‌ ಪ್ಲೇಸಲ್ಲಿ ರೀಲ್ಸ್‌ ಮಾಡಿ ತೊಂದರೆ ಕೊಡುವವರ ವಿರುದ್ಧ ಕ್ರಮ ಕೈಗೊಳ್ಳಬಹುದೇ? ಈ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಹುಚ್ಚಾಟ ಮೆರೆಯುವವರಿಗೆ ಯಾವ ಶಿಕ್ಷೆ ವಿಧಿಸಲಾಗುತ್ತದೆ? ಈ ಬಗ್ಗೆ ಭಾರತೀಯ ಕಾನೂನು ಏನು ಹೇಳುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.

ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್‌ ಮಾಡೋದು ತಪ್ಪಾ?

ಕೆಲವರು ತಾವು ಸಾರ್ವಜನಿಕ ಸ್ಥಳಗಳಲ್ಲಿ ಇದ್ದೇವೆ, ನಮ್ಮಿಂದ ಇತರರಿಗೂ ತೊಂದರೆ ಆಗುತ್ತದೆ ಎಂಬುದನ್ನು ಮರೆತು ಎಲ್ಲೆಂದರಲ್ಲಿ ವಿಡಿಯೋ ಮಾಡುತ್ತಿರುತ್ತಾರೆ. ಹೀಗೆ ಸಾರ್ವಜನಿಕ ಸ್ಥಳದಲ್ಲಿ ರೀಲ್ ಅಥವಾ ವಿಡಿಯೋ ಮಾಡುವುದು ಕಾನೂನುಬಾಹಿರವಲ್ಲ, ಆದರೆ ಸ್ಥಳೀಯ ಆಡಳಿತ, ಸಂಬಂಧಿತ ಇಲಾಖೆ ಅಥವಾ ಆಸ್ತಿ ಮಾಲೀಕರ ಅನುಮತಿಯೊಂದಿಗೆ ಮಾತ್ರ ವಿಡಿಯೋ ಚಿತ್ರೀಕಣ ಅಥವಾ ರೀಲ್ಸ್‌ ಮಾಡಬೇಕು. ಅಲ್ಲದೆ, ಹೀಗೆ ರೀಲ್ಸ್‌ ಮಾಡುವವರು ಯಾರ ಗೌಪ್ಯತೆ, ಭದ್ರತೆ ಅಥವಾ ಯಾವುದೇ ಕಾನೂನನ್ನು ಉಲ್ಲಂಘಿಸದಂತೆ ಜಾಗ್ರತೆ ವಹಿಸಬೇಕು. ನಿರ್ಬಂಧಿತ, ಸೂಕ್ಷ್ಮ ಅಥವಾ ಸರ್ಕಾರಿ ನಿಯಂತ್ರಣದಲ್ಲಿರುವ ಸ್ಥಳಗಳಲ್ಲಿ ನೀವು ಅನುಮತಿಯಿಲ್ಲದೆ ರೀಲ್ಸ್‌ ಅಥವಾ ವಿಡಿಯೋ ಚಿತ್ರೀಕರಣ ಮಾಡಿದರೆ, ಅದನ್ನು  ಕಾನೂನಿನಡಿಯಲ್ಲಿ ಅಪರಾಧವೆಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ ಐತಿಹಾಸಿಕ ಮತ್ತು ಪುರಾತತ್ವ ಸ್ಥಳಗಳು, ASI ನಿಂದ ರಕ್ಷಿಸಲ್ಪಟ್ಟ ಸ್ಮಾರಕಗಳು, ಕೋಟೆಗಳು ಮತ್ತು ಗುಹೆಗಳು ಅಥವಾ ಅರಮನೆಗಳು ಇಂತಹ  ಸ್ಥಳಗಳಲ್ಲಿ ನೀವು ರೀಲ್ ಅಥವಾ ವೀಡಿಯೊ ಮಾಡಿದರೆ, ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು.

ರೈಲು, ರೈಲ್ವೆ ನಿಲ್ದಾಣಗಳು, ಪ್ಲಾಟ್‌ಫಾರ್ಮ್‌ಗಳು, ಹಳಿಗಳು, ಸೇತುವೆ, ಪೊಲೀಸ್ ಠಾಣೆ, ನ್ಯಾಯಾಲಯ, ಜೈಲು, ಜಿಲ್ಲಾ ಕಲೆಕ್ಟರೇಟ್ ಸಚಿವಾಲಯ, ಬಸ್ ನಿಲ್ದಾಣಗಳು, ಮೆಟ್ರೋ ನಿಲ್ದಾಣಗಳು, ರಾಷ್ಟ್ರೀಯ ಉದ್ಯಾನವನಗಳು, ವನ್ಯಜೀವಿ ಅಭಯಾರಣ್ಯಗಳು, ಸಂರಕ್ಷಿತ ಅರಣ್ಯಗಳು, ವಿಮಾನ ನಿಲ್ದಾಣ, ವಾಯುಪಡೆಯ ನೆಲೆಗಳು, ಹಾರಾಟ ನಿಷೇಧ ವಲಯಗಳು, ಕೆಲವು ಧಾರ್ಮಿಕ ಸ್ಥಳಗಳು ಸೇರಿದಂತೆ, ಒಂದಷ್ಟು ಸ್ಥಳಗಳಲ್ಲಿ ಯಾವುದೇ ವಿಡಿಯೋಗಳನ್ನು ಮಾಡುವಂತಿಲ್ಲ.  ಒಂದು ವೇಳೆ ನೀವು ಈ ಸ್ಥಳಗಳಲ್ಲಿ ರೀಲ್ಸ್ ಅಥವಾ ವೀಡಿಯೊಗಳನ್ನು ಮಾಡಲು ಬಯಸಿದರೆ, ಮೊದಲು ಸಂಬಂಧಪಟ್ಟ ಆಡಳಿತ ಅಥವಾ ಇಲಾಖೆಯಿಂದ ಲಿಖಿತ ಅನುಮತಿಯನ್ನು ಪಡೆಯಬೇಕು.

ಇದನ್ನೂ ಓದಿ: ಒಮ್ಮೆ ಉಡುಗೊರೆಯಾಗಿ ನೀಡಿದ ಆಸ್ತಿಯನ್ನು ಮರಳಿ ಪಡೆಯಬಹುದೇ? ಕಾನೂನು ಇದರ ಬಗ್ಗೆ ಏನು ಹೇಳುತ್ತದೆ?

ರೀಲ್ಸ್‌ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಅನಾನುಕೂಲತೆ ಉಂಟುಮಾಡಿದರೆ ಶಿಕ್ಷೆಯೇನು?

ಭಾರತೀಯ ದಂಡ ಸಂಹಿತೆಯ (ಐಪಿಸಿ) ಹೊಸ ಸೆಕ್ಷನ್‌ಗಳ ಅಡಿಯಲ್ಲಿ, ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ, ಇತರರಿಗೆ ಅನಾನುಕೂಲತೆಯನ್ನು ಉಂಟುಮಾಡುವ ಅಥವಾ ಅಶಾಂತಿ ಸೃಷ್ಟಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬಹುದು. ರೀಲ್ಸ್‌, ವಿಡಿಯೋ ಮಾಡುವಾಗ ನೀವು ರಸ್ತೆ ತಡೆದರೆ, ಸಂಚಾರಕ್ಕೆ ಅಡ್ಡಿಪಡಿಸಿದರೆ ಅಥವಾ ಜನಸಮೂಹವನ್ನು ಒಟ್ಟುಗೂಡಿಸಿದರೆ, ನಿಮ್ಮ ಮೇಲೆ ಕಾನೂನು ಕ್ರಮ ಜರುಗಿಸಬಹುದು.

ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (CrPC) ಸೆಕ್ಷನ್ 353 ಮತ್ತು 355 ರಂತಹ ನಿಬಂಧನೆಗಳ ಅಡಿಯಲ್ಲಿ, ಸಾರ್ವಜನಿಕ ಸುವ್ಯವಸ್ಥೆಯನ್ನು ಉಲ್ಲಂಘಿಸುವ ಯಾರನ್ನಾದರೂ ಬಂಧಿಸುವ ಅಧಿಕಾರ ಪೊಲೀಸರಿಗೆ ಇದೆ. ಈ ಬಂಧನಕ್ಕೆ ವಾರಂಟ್ ಕೂಡ ಅಗತ್ಯವಿಲ್ಲ. ಇದರರ್ಥ ನೀವು ಸಾರ್ವಜನಿಕ ಸ್ಥಳಗಳಲ್ಲಿ ರೀಲ್ ಮಾಡುವಾಗ ನಿಯಮಗಳನ್ನು ಉಲ್ಲಂಘಿಸಿದರೆ, ಪೊಲೀಸರು ಸ್ಥಳದಲ್ಲೇ ಕ್ರಮ ಕೈಗೊಳ್ಳಬಹುದು.  ಹಾಗಾಗಿ ಸಾರ್ವಜನಿಕ ಸ್ಥಳದಲ್ಲಿ ರೀಲ್ಸ್‌ ಮಾಡುವ ಹುಚ್ಚು ಸಾಹಸಕ್ಕೆ ಕೈ ಹಾಕದಿರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:19 pm, Tue, 11 November 25