AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಮ್ಮೆ ಉಡುಗೊರೆಯಾಗಿ ನೀಡಿದ ಆಸ್ತಿಯನ್ನು ಮರಳಿ ಪಡೆಯಬಹುದೇ? ಕಾನೂನು ಇದರ ಬಗ್ಗೆ ಏನು ಹೇಳುತ್ತದೆ?

ಪ್ರೀತಿ, ಮೆಚ್ಚುಗೆ ಕಾಳಜಿಯನ್ನು ವ್ಯಕ್ತಪಡಿಸಲು, ಸಂಬಂಧಗಳನ್ನು ಬಲಪಡಿಸಲು ಪ್ರತಿಯೊಬ್ಬರೂ ಸಹ ಉಡುಗೊರೆಗಳನ್ನು ನೀಡುತ್ತಾರೆ. ಅದರಲ್ಲಿ ಕೆಲವರು ತಮ್ಮ ನೆಚ್ಚಿನ ವ್ಯಕ್ತಿಗೆ ಮನೆ, ಜಾಗವನ್ನು ಗಿಫ್ಟ್‌ ಆಗಿ ನೀಡುತ್ತಾರೆ. ಹೀಗೆ ಗಿಫ್ಟ್‌ ರೂಪದಲ್ಲಿ ನೀಡಿದ ಆಸ್ತಿಯನ್ನು ವಾಪಸ್‌ ಕೇಳುವ ಹಕ್ಕು ಇದ್ಯಾ? ಈ ಬಗ್ಗೆ ಭಾರತೀಯ ಕಾನೂನು ಏನು ಹೇಳುತ್ತದೆ ಎಂಬುದರ ಸಂಪೂರ ಮಾಹಿತಿಯನ್ನು ತಿಳಿಯಿರಿ.

ಒಮ್ಮೆ ಉಡುಗೊರೆಯಾಗಿ ನೀಡಿದ ಆಸ್ತಿಯನ್ನು ಮರಳಿ ಪಡೆಯಬಹುದೇ? ಕಾನೂನು ಇದರ ಬಗ್ಗೆ ಏನು ಹೇಳುತ್ತದೆ?
ಸಾಂದರ್ಭಿಕ ಚಿತ್ರ Image Credit source: Freepik
ಮಾಲಾಶ್ರೀ ಅಂಚನ್​
|

Updated on: Nov 05, 2025 | 4:47 PM

Share

ಪರಸ್ಪರ ಸಂತೋಷದ ಕ್ಷಣಗಳನ್ನು ವಿನಿಮಯ ಮಾಡಿಕೊಳ್ಳಲು, ಪ್ರೀತಿ ವ್ಯಕ್ತ ಪಡಿಸಲು, ಸಂಬಂಧ ಬಲಪಡಿಸಲು ಪ್ರತಿಯೊಬ್ಬರೂ ಉಡುಗೊರೆಗಳನ್ನು ನೀಡುತ್ತಾರೆ. ಇದರಲ್ಲಿ ಕೆಲವರು ತಮ್ಮವರಿಗೆ ಚರಾಸ್ತಿಗಳಾದ ನಗದು, ಬೆಳ್ಳಿ, ಚಿನ್ನ, ವಾಹನ, ಗೃಹೋಪಯೋಗಿ ವಸ್ತುಗಳನ್ನು ಗಿಫ್ಟ್‌ ನೀಡಿದ್ರೆ, ಇನ್ನೂ ಕೆಲವರು ಮನೆ, ಭೂಮಿ ಇತ್ಯಾದಿ ಸ್ಥಿರಾಸ್ತಿಗಳನ್ನು (property) ಉಡುಗೊರೆ ರೂಪದಲ್ಲಿ ನೀಡುತ್ತಾರೆ. ಕೆಲವೊಮ್ಮೆ ಭಿನ್ನಾಭಿಪ್ರಾಯಗಳು ಉಂಟಾಗಿ ಕೆಲವರು ತಾವು ಕೊಟ್ಟ ಗಿಫ್ಟ್‌ಗಳನ್ನು ವಾಪಸ್‌ ಕೇಳುವ ಸಾಧ್ಯತೆ ಇರುತ್ತದೆ. ಹೀಗೆ ಒಮ್ಮೆ ಗಿಫ್ಟ್‌ ನೀಡಿದ ಆಸ್ತಿಯನ್ನು ಮರಳಿ ಪಡೆಯುವಂತಹ ಹಕ್ಕು ಇದ್ಯಾ? ಇದರ ಬಗ್ಗೆ ಭಾರತೀಯ ಕಾನೂನು ಏನು ಹೇಳುತ್ತದೆ, ಈ ಆಸ್ತಿಗೆ ಸಂಬಂಧಿಸಿದಂತೆ ಇರುವ ಕಾನೂನು ನಿಯಮಗಳೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಉಡುಗೊರೆಯಾಗಿ ನೀಡಿದ ಆಸ್ತಿಯನ್ನು ವಾಪಸ್‌ ಪಡೆಯಬಹುದೇ?

ಸಾಮಾನ್ಯವಾಗಿ ಉಡುಗೊರೆಯಾಗಿ ನೀಡಿದ ಆಸ್ತಿಯನ್ನು ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ. ಹೌದು ಶಾಶ್ವತವಾಗಿ ನೀಡುವ ಉದ್ದೇಶದಿಂದ ಒಮ್ಮೆ ಉಡುಗೊರೆಯನ್ನು ಕೊಟ್ಟ ನಂತರ, ಸಂಬಂಧ ಕೊನೆಗೊಂಡರೂ ಸಹ, ಒಮ್ಮೆ ನೀಡಿದ ಅಸ್ತಿಯನ್ನು ಕಾನೂನುಬದ್ಧವಾಗಿ ಹಿಂದಕ್ಕೆ ಪಡೆಯಲಾಗುವುದಿಲ್ಲ. ಆದರೆ ನಿಶ್ಚಿತಾರ್ಥದ ಉಂಗುರಗಳು ಮತ್ತು ಕುಟುಂಬದ ಚರಾಸ್ತಿಗಳಂತಹ ವಿಷಯಗಳಿಗೆ  ಕೆಲವು ವಿನಾಯಿತಿಗಳಿದ್ದು,  ಇವುಗಳನ್ನು ಕೆಲವು ಸಂದರ್ಭಗಳಲ್ಲಿ ಹಿಂದಕ್ಕೆ ಪಡೆಯಬಹುದು.

ಯಾವ ಸಂದರ್ಭದಲ್ಲಿ ಗಿಫ್ಟ್‌  ನೀಡಿದ ಆಸ್ತಿಯನ್ನು  ವಾಪಸ್‌ ಕೇಳಬಹುದು?

ಕಾನೂನಿನ ಪ್ರಕಾರ, ಉಡುಗೊರೆಯನ್ನು  ಪ್ರೀತಿ ನಂಬಿಕೆಯಿಂದ ನೀಡಿದ್ದರೆ, ಅದನ್ನು ವಾಪಸ್‌ ಬೇಡುವ ಹಕ್ಕು ಇಲ್ಲ. ಆದರೆ ಆಸ್ತಿ ವರ್ಗಾವಣೆ ಕಾಯ್ದೆಯ ಸೆಕ್ಷನ್ 126 ಪ್ರಕಾರ ಕೆಲವು ಸಂದರ್ಭಗಳಲ್ಲಿ ಉಡುಗೊರೆ ಪತ್ರವನ್ನು ರದ್ದುಗೊಳಿಸಬಹುದು.

  • ಉಡುಗೊರೆ ನೀಡುವವರು ಮತ್ತು ಸ್ವೀಕರಿಸುವವರು ಇಬ್ಬರೂ ಇದಕ್ಕೆ ಒಪ್ಪಿದರೆ, ಪರಸ್ಪರ ಒಪ್ಪಿಗೆಯ ಮೂಲಕ ಉಡುಗೊರೆ ಪತ್ರವನ್ನು ಅಮಾನತುಗೊಳಿಸಬಹುದು ಅಥವಾ ರದ್ದುಗೊಳಿಸಬಹುದು.
  • ಉಡುಗೊರೆ ಪತ್ರಕ್ಕೆ ಸಹಿ ಹಾಕಿದರೂ ಆಸ್ತಿಯನ್ನು ವರ್ಗಾಯಿಸದಿದ್ದರೆ ಮತ್ತು ಗಿಫ್ಟ್‌ ಕೊಡುವವರು ನಂತರ ತಮ್ಮ ಮನಸ್ಸನ್ನು ಬದಲಾಯಿಸಿದರೆ, ಅವರ ಇಚ್ಛೆಯ ಮೂಲಕ ಉಡುಗೊರೆ ಪತ್ರವನ್ನು ಹಿಂಪಡೆಯಬಹುದು.
  •  ಉಡುಗೊರೆಯನ್ನು ವಂಚನೆ, ಬಲವಂತ ಅಥವಾ ಸುಳ್ಳು ಭರವಸೆಗಳ ಮೂಲಕ ಪಡೆದಿದ್ದರೆ, ಅದನ್ನು ಕಾನೂನುಬದ್ಧವಾಗಿ ವಾಪಸ್‌ ಪಡೆಯಬಹುದು. ಹೌದು ಉಡುಗೊರೆಯನ್ನು ನೀಡುವವರು ತಮ್ಮ ಸ್ವಂತ ಇಚ್ಛೆಯಿಂದ ಉಡುಗೊರೆಯನ್ನು ನೀಡಿದ್ದರೆ ಮಾತ್ರ ಉಡುಗೊರೆ ಮಾನ್ಯವಾಗಿರುತ್ತದೆ. ಆದರೆ ಉಡುಗೊರೆ ಸ್ವೀಕರಿಸುವವರು  ಇದನ್ನು ಬಲವಂತವಾಗಿ, ವಂಚನೆ ಅಥವಾ ತಪ್ಪು ನಿರೂಪಣೆಯ ಮೂಲಕ ಪಡೆದಿದ್ದಾರೆ ಎಂದು ನಂತರ ಸಾಬೀತಾದರೆ, ಅಂತಹ ಉಡುಗೊರೆ ಪತ್ರವನ್ನು ಅಮಾನ್ಯವೆಂದು ಘೋಷಿಸಬಹುದು.

ಈ ವಂಚನೆ ಮತ್ತು ಸುಳ್ಳು ಹೇಳಿಕೆಯ ಅಪರಾಧವನ್ನು ಐಪಿಸಿಯ ಸೆಕ್ಷನ್ 318 ಮತ್ತು 316 ರ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಬಹುದು. ಕಾನೂನು ಸಲಹೆಯನ್ನು ಯಾವಾಗ ಪಡೆಯಬೇಕು ಉಡುಗೊರೆಯನ್ನು ಮರಳಿ ಪಡೆಯುವ ಬಗ್ಗೆ ನಿಮಗೆ ಕಾನೂನು ಸಲಹೆ ಬೇಕಾದರೆ, ನೀವು ವಕೀಲರನ್ನು ಸಂಪರ್ಕಿಸಬಹುದು. ಅವರು ನಿಮ್ಮ ಪ್ರಕರಣವನ್ನು ಪರಿಶೀಲಿಸಿ,  ಸ್ಥಳೀಯ ಕಾನೂನುಗಳ ಆಧಾರದ ಮೇಲೆ ಸೂಕ್ತ ಸಲಹೆಯನ್ನು ನೀಡಬಹುದು. ಬಿಲ್‌ಗಳು ಅಥವಾ ರಶೀದಿಗಳಂತಹ ಉಡುಗೊರೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಬೇಕು. ಈ ದಾಖಲೆಗಳು ವಸ್ತುವು ಉಡುಗೊರೆಯಾಗಿತ್ತೆ ಅಥವಾ ಇಲ್ಲವೇ ಮತ್ತು ಅದರ ಮಾಲೀಕರು ಯಾರು ಎಂಬುದನ್ನು ಸಾಬೀತುಪಡಿಸಲು ನಿಮಗೆ ಸಹಾಯ ಮಾಡಬಹುದು.

ಆಸ್ತಿಯನ್ನು ಉಡುಗೊರೆಯಾಗಿ ನೀಡುವುದು ಎಂದರೆ ಮಾಲೀಕರು ಸ್ವಯಂಪ್ರೇರಣೆಯಿಂದ ಆಸ್ತಿಯನ್ನು ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸುತ್ತಾರೆ. ಇದಕ್ಕೆ ಪ್ರತಿಯಾಗಿ ಅವರು ಯಾವುದೇ ಹಣ ಅಥವಾ ಮೌಲ್ಯವನ್ನು ಪಡೆಯುವುದಿಲ್ಲ. ಹಾಗಾಗಿ ಆ ಆಸ್ತಿಯ ಕಾನೂನುಬದ್ಧ ಮಾಲೀಕತ್ವವು ಗಿಫ್ಟ್‌ ಸ್ವೀಕರಿಸುವವರಿಗೆ ಹೋಗುತ್ತದೆ ಮತ್ತು ಗಿಫ್ಟ್ ಕೊಡುವವರಿಗೆ ಅದನ್ನು ಶಾಶ್ವತವಾಗಿ ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ.  ಆದ್ದರಿಂದ, ಒಬ್ಬ ವ್ಯಕ್ತಿಗೆ ಆಸ್ತಿಯನ್ನು ಉಡುಗೊರೆಯಾಗಿ ನೀಡುವ ಮೊದಲು, ಮಾರಾಟ ಪತ್ರದಂತೆಯೇ ಉಡುಗೊರೆ ಪತ್ರವನ್ನು (gift deed) ಸಿದ್ಧಪಡಿಸುವುದು ಅವಶ್ಯಕ.

ಈ ಉಡುಗೊರೆ ಪತ್ರವು ಆಸ್ತಿಯನ್ನು ಉಡುಗೊರೆಯಾಗಿ ನೀಡಲು ಅಗತ್ಯವಾದ ಷರತ್ತನ್ನು ಒಳಗೊಂಡಿದ್ದರೆ, ಗಿಫ್ಟ್‌ ಸ್ವೀಕರಿಸಿದ ವ್ಯಕ್ತಿ ಅದನ್ನು ಪೂರೈಸಲು ವಿಫಲವಾದರೆ ಉಡುಗೊರೆಯನ್ನು ರದ್ದುಗೊಳಿಸಬಹುದು. ಉದಾಹರಣೆಗೆ, ಒಬ್ಬ ತಂದೆ ತನ್ನ ಮಗನಿಗೆ ತನ್ನ ಆಸ್ತಿಯನ್ನು ಜೀವನಪರ್ಯಂತ ನೋಡಿಕೊಳ್ಳುವ ಷರತ್ತಿನೊಂದಿಗೆ ಉಡುಗೊರೆಯಾಗಿ ನೀಡಿದರೆ, ಮತ್ತು ಮಗ  ಈ ಜವಾಬ್ದಾರಿಯನ್ನು ಪೂರೈಸಲು ವಿಫಲವಾದರೆ, ತಂದೆ ತನ್ನ ಉಡುಗೊರೆ ಪತ್ರವನ್ನು ಹಿಂಪಡೆಯಬಹುದು ಮತ್ತು ಆಸ್ತಿಯನ್ನು ಮರಳಿ ಪಡೆಯಬಹುದು.

ಇದನ್ನೂ ಓದಿ: ಆನ್‌ಲೈನ್‌ನಲ್ಲಿ ನೀವು ಆರ್ಡರ್‌ ಮಾಡಿದ ಫುಡ್‌ ಬದಲಿಗೆ ಬೇರೆ ಐಟಂ ಬಂದ್ರೆ ಏನ್‌ ಮಾಡ್ಬೇಕು ಗೊತ್ತಾ?

ಯಾವುದೇ ಆಸ್ತಿಯನ್ನು ಉಡುಗೊರೆಯಾಗಿ ನೀಡಬಹುದೇ?

ಇದಕ್ಕೆ ಸಂಬಂಧಿಸಿದಂತೆ ಹಲವಾರು ನಿಯಮಗಳು ಜಾರಿಯಲ್ಲಿವೆ. ಆಸ್ತಿಯನ್ನು ಉಡುಗೊರೆಯಾಗಿ ನೀಡುವ ನಿಯಮಗಳು ನೀವು ಮಾಲೀಕತ್ವ ಹೊಂದಿದ್ದೀರಿ ಎಂದು ನೋಂದಾಯಿಸಲಾದ ಆಸ್ತಿಯನ್ನು ಮಾತ್ರ ಉಡುಗೊರೆಯಾಗಿ ನೀಡಬಹುದು.  ಹೌದು ನೀವು ಎಲ್ಲಾ ರೀತಿಯ ಆಸ್ತಿಯನ್ನು ಉಡುಗೊರೆಯಾಗಿ ನೀಡಲು ಸಾಧ್ಯವಿಲ್ಲ. ನೀವು ಸಂಪಾದಿಸಿದ ಆಸ್ತಿಯನ್ನು ಮಾತ್ರ ಉಡುಗೊರೆಯಾಗಿ ನೀಡಬಹುದು, ಇತರ ಕುಟುಂಬ ಸದಸ್ಯರು ಅಥವಾ ನಿಮ್ಮ ಮುಂದಿನ ಪೀಳಿಗೆಯ ಉತ್ತರಾಧಿಕಾರಿಗಳಿಗೆ ವರ್ಗಾಯಿಸಲಾದ ಪಿತ್ರಾರ್ಜಿತ ಆಸ್ತಿಯನ್ನು ಯಾರಿಗೂ ಉಡುಗೊರೆಯಾಗಿ ನೀಡುವಂತಿಲ್ಲ. ನೀವು ಆಸ್ತಿಯ ಜಂಟಿ ಮಾಲೀಕರಾಗಿದ್ದರೆ, ಕೆಲವು ಷರತ್ತುಗಳಿಗೆ ಒಳಪಟ್ಟು ನೀವು ಆಸ್ತಿಯಲ್ಲಿ ನಿಮ್ಮ ಪಾಲನ್ನು ಮಾತ್ರ ಉಡುಗೊರೆಯಾಗಿ ನೀಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ