World Tsunami Awareness Day 2025: ಸುನಾಮಿ ಎಚ್ಚರಿಕೆ ವ್ಯವಸ್ಥೆಗಳು ಸಾವಿರಾರು ಜೀವಗಳನ್ನು ಉಳಿಸಬಲ್ಲದು
ನೈಸರ್ಗಿಕ ವಿಕೋಪಗಳಲ್ಲಿ ಸುನಾಮಿ ಕೂಡ ಒಂದು. ಈ ವಿನಾಶಕಾರಿ ಪ್ರಾಕೃತಿಕ ವಿಕೋಪ ಅದೆಷ್ಟೋ ಜೀವಗಳನ್ನು ಬಲಿ ಪಡೆದುಕೊಳ್ಳುತ್ತವೆ. ಈ ನೈಸರ್ಗಿಕ ವಿಕೋಪಗಳನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಆದರೆ ಸುನಾಮಿ ಅಪ್ಪಳಿಸುವ ಮೊದಲು ನೀಡುವ ಎಚ್ಚರಿಕೆಗಳು ಲಕ್ಷಾಂತರ ಜೀವಗಳನ್ನು ಉಳಿಸಬಹುದು. ಹಾಗಾಗಿ ಇವುಗಳ ಬಗೆಗಿನ ತಿಳುವಳಿಕೆ, ಪ್ರಾಣ ರಕ್ಷಣೆಗಾಗಿ ತೆಗೆದುಕೊಳ್ಳಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ಜಾಗೃತಿಯನ್ನು ಮೂಡಿಸಲು ಪ್ರತಿವರ್ಷ ನವೆಂಬರ್ 05 ರಂದು ವಿಶ್ವ ಸುನಾಮಿ ದಿನವನ್ನು ಆಚರಿಸಲಾಗುತ್ತದೆ.

ಸಾಗರದ ತಳಭಾಗದಲ್ಲಿ ಸಂಭವಿಸುವ ಭೂಕಂಪನದಿಂದ ಸಮುದ್ರದ ಬೃಹತ್ ಅಲೆಗಳು ಅಪ್ಪಳಿಸುವುದನ್ನು ಸುನಾಮಿ (Tsunami) ಎಂದು ಕರೆಯಲಾಗುತ್ತದೆ. ಸಣ್ಣ ಮಟ್ಟದಲ್ಲಿನ ಭೂಕಂಪನ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಆದರೆ ಸಮುದ್ರದಲ್ಲಿ ತೀವ್ರ ಭೂಕಂಪನ ಉಂಟಾದಾಗ ಸಮುದ್ರದ ರಕ್ಕಸ ಅಲೆಗಳು ಊರಿಗೆ ಊರನ್ನೇ ಬಲಿ ಪಡೆಯುತ್ತವೆ. ಆದರೆ ಈ ಪ್ರಾಕೃತಿಕ ವಿಕೋಪಗಳು ಸಂಭವಿಸುವ ಮುನ್ನ ನೀಡುವಂತಹ ಎಚ್ಚರಿಕೆ ವ್ಯವಸ್ಥೆಗಳಿಂದ ಲಕ್ಷಾಂತರ ಜೀವಗಳನ್ನು ಉಳಿಸಬಹುದು. ಹಾಗಾಗಿ ಈ ವ್ಯವಸ್ಥೆಗಳ ಬಗ್ಗೆ ತಿಳುವಳಿಕೆ ಮೂಡಿಸಲು, ಸುನಾಮಿಯಂತಹ ವಿನಾಶಕಾರಿ ಪ್ರಾಕೃತಿಕ ವಿಕೋಪಗಳ ಅಪಾಯದ ಬಗ್ಗೆ ಜನರಿಗೆ ಶಿಕ್ಷಣ ನೀಡಲು ಮತ್ತು ಈ ವಿಕೋಪಗಳು ಸಂಭವಿಸಿದಾಗ ತೆಗೆದುಕೊಳ್ಳಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ಅರಿವು ಮೂಡಿಸಲು ಪ್ರತಿವರ್ಷ ನವೆಂಬರ್ 05 ರಂದು ವಿಶ್ವ ಸುನಾಮಿ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.
ವಿಶ್ವ ಸುನಾಮಿ ದಿನದ ಇತಿಹಾಸವೇನು?
2004ರಲ್ಲಿ ಹಿಂದೂ ಮಹಾಸಾಗರದಲ್ಲಿ ವಿನಾಶಕಾರಿ ಸುನಾಮಿ ಸಂಭವಿಸಿತ್ತು. ಈ ಭೀಕರ ಸುನಾಮಿಯಿಂದಾಗಿ ಇಂಡೋನೇಷ್ಯಾ, ಶ್ರೀಲಂಕಾ, ಭಾರತ ಮತ್ತು ಥೈಲ್ಯಾಂಡ್ ಸೇರಿದಂತೆ 14 ದೇಶಗಳಲ್ಲಿ ಲಕ್ಷಾಂತರ ಜೀವ ಹಾನಿಗಳು ಸಂಭವಿಸಿತ್ತು. ಆ ಬಳಿಕ ಸುನಾಮಿಯ ವಿನಾಶಕಾರಿ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು, ವಿಪತ್ತುಗಳಿಂದ ಉಂಟಾಗುವ ಅಪಾಗಳನ್ನು ಕಡಿಮೆ ಮಾಡಲು ಜಗತ್ತಿನಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡಲಾಯಿತು. ಅಲ್ಲದೆ ಈ ಅಪಾಯಗಳು ಸಂಭವಿಸಿದಾಗ ತೆಗೆದುಕೊಳ್ಳಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ವಿಶ್ವದ ಹಲವು ರಾಷ್ಟ್ರಗಳು ಒಗ್ಗೂಡಿ ವಿಶ್ವಸಂಸ್ಥೆಗೆ ಒಂದು ಬೇಡಿಕೆ ಸಲ್ಲಿಸಿದವು. ಈ ಪ್ರಯತ್ನಗಳ ಫಲವೇ 2015 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ನವೆಂಬರ್ 05 ರಂದು ವಿಶ್ವ ಸುನಾಮಿ ಜಾಗೃತಿ ದಿನವನ್ನು ಆಚರಿಸಲು ನಿರ್ಧರಿಸಿತು.
ಈ ದಿನವನ್ನು ಆಯ್ಕೆ ಮಾಡಿದ ಉದ್ದೇಶವೆಂದರೆ, ಜಪಾನ್‌ನ ಹಿರಾಮೆ ಎಂಬಲ್ಲಿ 1854 ರ ನವೆಂಬರ್ 5 ರಂದು ರೈತ ಹಮಗುಚಿ ಗೊರೊವ್ ಎಂಬವರು ಸುನಾಮಿ ಅಪ್ಪಳಿಸುವ ಮೊದಲು ತನ್ನ ಹೊಲದ ಬೆಳೆಗಳಿಗೆ ಬೆಂಕಿ ಹಚ್ಚುವ ಮುಖಾಂತರ ಎಚ್ಚರಿಕೆ ನೀಡಿ ಗ್ರಾಮಸ್ಥರನ್ನು ಎತ್ತರದ ಪ್ರದೇಶಕ್ಕೆ ಕರೆದೊಯ್ಯುವ ಮೂಲಕ ನೂರಾರು ಜೀವಗಳನ್ನು ರಕ್ಷಣೆ ಮಾಡಿದರು. ಇವರ ಈ ವೀರತ್ವದ ನೆನಪಿಗಾಗಿ ನವೆಂಬರ್ 5 ಅನ್ನು ವಿಶ್ವ ಸುನಾಮಿ ಜಾಗೃತಿ ದಿನವನ್ನಾಗಿ ಆಯ್ಕೆ ಮಾಡಲಾಯಿತು.
ವಿಶ್ವ ಸುನಾಮಿ ದಿನದ ಮಹತ್ವವೇನು?
- ಪ್ರಪಂಚದಾದ್ಯಂತ ಸುನಾಮಿ ಮತ್ತು ಇತರೆ ಪ್ರಾಕೃತಿಕ ವಿಕೋಪಗಳ ಬಗ್ಗೆ ಜಾಗೃತಿ ಮೂಡಿಸುವುದು, ಅದರ ಅಪಾಯಗಳನ್ನು ಕಡಿಮೆ ಮಾಡುವ ಪ್ರಯತ್ನಗಳು, ಹಾಗೂ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಆರಂಭಿಕ ಕ್ರಮಗಳ ಕುರಿತು ಜಾಗೃತಿಯನ್ನು ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.
- ಜನರಲ್ಲಿ ಜಾಗೃತಿ ಮೂಡಿಸಲು ಈ ದಿನದಂದು ವಿವಿಧ ಜಾಗೃತಿ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ.
ಇದನ್ನೂ ಓದಿ: ಸಾಗರ ಪರಿಸರ ವ್ಯವಸ್ಥೆಯನ್ನು ಸಮತೋಲನದಲ್ಲಿಡುವಲ್ಲಿ ಜೆಲ್ಲಿ ಮೀನುಗಳ ಪಾತ್ರ ಅಪಾರ
ಸುನಾಮಿಯ ಎಚ್ಚರಿಕೆ ವ್ಯವಸ್ಥೆಗಳು:
ಸುನಾಮಿ ಅಪ್ಪಳಿಸುವ ಮೊದಲು ನೀಡಲಾಗುವಂತಹ ಎಚ್ಚರಿಕೆ ಸಾವಿರಾರು ಜೀವಗಳನ್ನು ಉಳಿಸಬಹುದು. ಸುನಾಮಿಯ ಮುಂಚಿನ ಎಚ್ಚರಿಕೆ ನೀಡಲು ಹಲವಾರು ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ವ್ಯವಸ್ಥೆ ನೀರೊಳಗಿನ ಸಂವೇದಕಗಳು, ಭೂಕಂಪಮಾಪಕಗಳು ಮತ್ತು ಸ್ಯಾಟಲೈಟ್‌ಗಳನ್ನು ಒಳಗೊಂಡಿವೆ. ಈ ವ್ಯವಸ್ಥೆಗಳು ಸಾಗರದಲ್ಲಿನ ಬದಲಾವಣೆಗಳನ್ನು ಹಾಗೂ ಸುನಾಮಿಯ ಸಾಧ್ಯತೆಗಳನ್ನು ಪತ್ತೆ ಹಚ್ಚಲು ಸಹಾಯ ಮಾಡುತ್ತವೆ. ಇವುಗಳು ನೀಡುವ ಎಚ್ಚರಿಕೆಯ ಕರೆಯಿಂದ ಲಕ್ಷಾಂತರ ಜೀವಗಳನ್ನು ಉಳಿಸಬಹುದಾಗಿದೆ. ಹೀಗೆ ವಿಶ್ವ ಸುನಾಮಿ ಜಾಗೃತಿ ದಿನವು ನೈಸರ್ಗಿಕ ವಿಕೋಪಗಳನ್ನು ತಡೆಯಲು ಸಾಧ್ಯವಿಲ್ಲ, ಆದರೆ ತಿಳುವಳಿಕೆ, ಪೂರ್ವ ಸಿದ್ಧತೆ ಮತ್ತು ತಂತ್ರಜ್ಞಾನದ ಮೂಲಕ ಅವುಗಳ ಪರಿಣಾಮವನ್ನು ಕಡಿಮೆ ಮಾಡಬಹುದು ಎಂದು ನಮಗೆ ನೆನಪಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




