ಮಕ್ಕಳಲ್ಲಿ ಆರೋಗ್ಯಕರವಾಗಿ ತಿನ್ನುವ ರೀತಿಯನ್ನು ತಿಳಿಸಿಕೊಡುವಲ್ಲಿ ಹೆತ್ತವರ ಜತೆ ವೈದ್ಯರು ಕೂಡಾ ಶ್ರಮಿಸಬೇಕಾಗಿದೆ. ನಿಧಾನವಾಗಿ ಊಟ ಮಾಡುವುದು, ಅಗತ್ಯದಷ್ಟು ಮಾತ್ರ ಸೇವನೆ ಮತ್ತು ಗಮನವಿರಿಸಿ ಕುಟುಂಬ ಸಮೇತ ಆಹಾರ ಸ್ವೀಕರಿಸಲು ಸಲಹೆ, ಪ್ರೋತ್ಸಾಹ ನೀಡಬೇಕು ಎಂದು ವೈದ್ಯರಿಗೆ ಸಂಶೋಧನಾ ತಂಡ ಸಲಹೆ ನೀಡಿದೆ.
ಮಕ್ಕಳು ಆರೋಗ್ಯವಾಗಿದ್ದಾರೆ, ಆಟವಾಡುತ್ತಾರೆ, ಚೇಷ್ಟೆಗಳಂತೂ ಕೇಳುವಂತೆಯೇ ಇಲ್ಲ ಆದರೂ ಊಟದ ವಿಷಯ ಬಂದಾಗ ಮಾತ್ರ ಹೆಚ್ಚು ಮಂಕಾಗುತ್ತಾರೆ ಏಕೆ?
ಸಾಮಾನ್ಯವಾಗಿ ಈ ಪ್ರಶ್ನೆ ಕಾಡದಿರುವ ತಾಯಂದಿರು ವಿರಳ. ಶೇ. 50ಕ್ಕಿಂತ ಹೆಚ್ಚು ಚಿಕ್ಕ ಮಕ್ಕಳ ತಾಯಿಂದರು ಇಂಥದ್ದೊಂದು ಪ್ರಶ್ನೆಯನ್ನು ತಮ್ಮ ವೈದ್ಯರ ಮುಂದಿಡುತ್ತಾರೆ. ಮಗುವಿಗೆ ಊಟ ಮಾಡಿಸುವ ವಿಷಯದಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಕೆಲವು ಅಂಶಗಳೆಂದರೆ ಮಗುವಿನ ಸ್ವಭಾವ, ಮಗುವಿನ ಜತೆ ಪೋಷಕರ ಸಂಬಂಧ, ಮಗುವಿನ ಹಸಿವು ಹಾಗೂ ಆಹಾರ ಅಗತ್ಯಕ್ಕೆ ಪೋಷಕರು ಸ್ಪಂದಿಸುವ ರೀತಿ.
ಯಾವುದೇ ಮಗುವು ತನ್ನ ಸ್ವಾಭಾವಿಕ ಬೆಳವಣಿಗೆಗೆ ಅಗತ್ಯವಿರುವ ವಿವಿಧ ಪೌಷ್ಟಿಕಾಂಶಗಳನ್ನು ಪೂರೈಸುವ ವೈವಿಧ್ಯಮಯ ಸಮತೋಲನ ಆಹಾರ ಸೇವಿಸುವುದನ್ನು ಆರೋಗ್ಯಕರ ಆಹಾರ ಸೇವನೆ ಎನ್ನುತ್ತಾರೆ.
ಮಕ್ಕಳು ಊಟ ಮಾಡಿರಲು ಕಾರಣ
ಸಾಮಾನ್ಯವಾಗಿ ಎರಡು ವರ್ಷಕ್ಕೂ ಮೇಲ್ಪಟ್ಟ ಮಕ್ಕಳಲ್ಲಿ ಬೆಳವಣಿಗೆ ಕಡಿಮೆಯಾಗುತ್ತದೆ. ಆದ್ದರಿಂದ ಆಹಾರದ ಅವಶ್ಯ ಹಾಗೂ ಹಸಿವು ಕೂಡ ಕಮ್ಮಿ ಇರುತ್ತದೆ.
ಊಟದ ಸಮಯದಲ್ಲಿ ಮಕ್ಕಳ ಗಮನವನ್ನು ಬೇರೆ ಕಡೆಗೆ ಸೆಳೆಯುವುದಿಂದ ಊಟವನ್ನು ಸವಿಯಲು ಆಗುವುದಿಲ್ಲ. ಅಲ್ಲದೆ, ಬೇರೆ ಕಡೆಗೆ ಗಮನ ಸೆಳೆಯುವ ಚಟುವಟಿಕೆಗಳಿಂದ ಬೇಗನೆ ಮಕ್ಕಳು ಬೇಸರಗೊಂಡು, ಬೇರೆ ಚಟುವಟಿಕೆಗಳ ಅಪೇಕ್ಷೆಯಿಂದಾಗಿ ಊಟ ಮಾಡುವುದನ್ನು ಬಿಟ್ಟು ಬಿಡುತ್ತಾರೆ. ಮಕ್ಕಳಿಗೆ ಹಸಿವಾದಾಗ ಆಹಾರ ಕೊಡುವ ಬದಲು ವೇಳಾಪಟ್ಟಿಯಂತೆ ಆಹಾರ ಕೊಡುವುದರಿಂದ ಮಕ್ಕಳು ಕೊಟ್ಟ ಆಹಾರವನ್ನು ತಿರಸ್ಕರಿಸುತ್ತಾರೆ.
ತನ್ನ ಕೆಲಸವನ್ನು ತಾನೆ ಮಾಡಬೇಕು ಎನ್ನುವ ಭಾವ ಒಂದು ವರ್ಷ ತುಂಬುವಷ್ಟರಲ್ಲಿ ಮಕ್ಕಳಲ್ಲಿ ವಿಕಸಗೊಳ್ಳುತ್ತದೆ. ಹಾಗಾಗಿ ಮಕ್ಕಳು ತಮ್ಮ ಊಟವನ್ನು ತಾವೇ ಮಾಡಬೇಕೆಂದು ಬಯಸುತ್ತವೆ. ಅದನ್ನು ಅರಿಯದೆ ಪೋಷಕರು ಊಟ ಮಾಡಿಸಲು ತೊಡಗಿದಾಗ ಸಂಘರ್ಷ ಪ್ರಾರಂಭವಾಗುತ್ತದೆ. ಊಟ ಮಾಡುವ ಸಮಯದಲ್ಲಿ ಹಠ ಮಾಡಿ ಅದನ್ನೇ ಗಮನ ಸೆಳೆಯುವ ತಂತ್ರವನ್ನಾಗಿ ಬಳಸುತ್ತವೆ.
ಅದಲ್ಲದೆ ಊಟದ ಸಮಯದಲ್ಲಿ ಹಾಲನ್ನು ನೀಡುವುದನ್ನು ಅಭ್ಯಾಸ ಮಾಡಿರುತ್ತಾರೆ. ಹಾಗಾಗಿ ಪದೇಪದೆ ಹಾಲು ಕೇಳುತ್ತಾರೆ. ಆದರೆ ಅದೇ ಜಾಸ್ತಿಯಾದರೆ ಅಪಾಯ.
ನಿಮ್ಮ ಮಗುವಿಗೆ ಎಷ್ಟು ಆಹಾರ ಉತ್ತಮ?
ಎಲ್ಲಾ ಮಕ್ಕಳು 2-3 ತಿಂಗಳ ವಯಸ್ಸಿನ ನಂತರ ಹಸಿವಾದಾಗ ಅಳುವುದು ಹಾಗೂ ಹಾಲು ಕುಡಿಯುವಾಗ ಹೊಟ್ಟೆ ತುಂಬಿದ ನಂತರ ಪುನಃ ಹಾಲು ಕುಡಿಯುವುದನ್ನು ನಿಲ್ಲಿಸುತ್ತವೆ. ಆದ್ದರಿಂದ ಮಗುವಿಗೆ ಹಸಿವು ಅಥವಾ ಹೊಟ್ಟೆ ತುಂಬಿದೆ ಅನ್ನೋದು ಗೊತ್ತಾಗುವುದಿಲ್ಲ ಅನ್ನುವುದು ಸುಳ್ಳು. ಆದ್ದರಿಂದ ಎಲ್ಲಾ ಆರೋಗ್ಯವಂತ ಮಕ್ಕಳು ತಮಗೆ ಅಗತ್ಯವಿದ್ದಷ್ಟು ಊಟ ಮಾಡುತ್ತಾರೆ. ಒತ್ತಾಯ ಮಾಡಿದರೆ ವಾಂತಿ ಅಥವಾ ಹೊಟ್ಟೆನೋವು ಎಂದು ಪ್ರತಿರೋಧ ವ್ಯಕ್ತಪಡಿಸಬಹುದು. ಸಂಘರ್ಷಕ್ಕೂ ನಿಲ್ಲಬಹುದು.
ಜೀವನಶೈಲಿ
ಮಕ್ಕಳು ಸದಾ ಚಟುವಟಿಕೆಯಿಂದ ಇದ್ದರೆ ಮಾತ್ರ ಆರೋಗ್ಯವಂತರಾಗಿರುತ್ತಾರೆ. ಇಲ್ಲವಾದರೆ ಜಡತ್ವದಿಂದ ಅವರ ದೇಹಕ್ಕೂ ಅನೇಕ ಕಾಯಿಲೆಗಳು ಅಂಟಿಕೊಳ್ಳಬಹುದು. ಇನ್ನು ಶಾಲೆಗೆ ಹೋದಾಗ ಮಕ್ಕಳೊಂದಿಗೆ ಮಣ್ಣು, ಕೆಸರಿನಲ್ಲಿ ಆಟವಾಡಿದಾಗ ಬ್ಯಾಕ್ಟೀರಿಯಾಗಳು ದೇಹ ಸೇರಿ ಅನಾರೋಗ್ಯ ಉಂಟಾಗುವಂತೆ ಮಾಡುತ್ತದೆ.
ಆದ್ದರಿಂದ ಮಕ್ಕಳನ್ನು ಸದಾ ಕ್ರೀಯಾಶೀಲರನ್ನಾಗಿಸಿಡಬೇಕು. ಮಕ್ಕಳೊಂದಿಗೆ ಬೆರೆಯುವಾಗಲೂ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಪೋಷಕರು ಮಕ್ಕಳಲ್ಲಿ ಅರಿವು ಮೂಡಿಸಬೇಕು. ಆಗ ಮಾತ್ರ ಮಕ್ಕಳು ಪದೇ ಪದೇ ಕಾಯಿಲೆ ಬೀಳುವುದು ತಪ್ಪುತ್ತದೆ.
ಗಡಿಬಿಡಿಯಲ್ಲಿ ಊಟ ಮಾಡುವುದು
ಜಪಾನ್ ಅಧ್ಯಯನವೊಂದು ಯಾರು ವೇಗವಾಗಿ ಮತ್ತು ಹೊಟ್ಟೆ ಭರ್ತಿಯಾಗುವ ತನಕ ತಿನ್ನುತ್ತಾರೋ ಅವರು ಇತರರಿಗಿಂತ ದಪ್ಪಗಾಗುವ ಸಾಧ್ಯತೆ ಮೂರು ಪಟ್ಟು ಹೆಚ್ಚಿರುತ್ತದೆ ಎಂದು ಹೇಳಿದೆ. ಈ ಅಧ್ಯಯನದ ವಿವರ ಅಕ್ಟೋಬರ್ 22ರ ಬ್ರಿಟೀಷ್ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟವಾಗಿದ್ದು, ಒಸಾಕ ಯುನಿವರ್ಸಿಟಿಯ ಪ್ರೊ. ಹಿರೊಯಸು ಇಸೊ ಮತ್ತು ಸಹೋದ್ಯೋಗಿಗಳು ಸಂಶೋಧನೆಯ ರೂವಾರಿಗಳೆಂದು ಪ್ರಕಟಿಸಲಾಗಿದೆ.
ಜಪಾನ್ ಅಧ್ಯಯನದ ಪ್ರಕಾರ ಬೇರೆ ಬೇರೆ ದೇಶಗಳ ಜನರು ತಿನ್ನುವ ಶೈಲಿ ಕೂಡಾ ದೇಹದ ಬೊಜ್ಜು ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ಹೇಳಿದೆ. ಆಸ್ಟ್ರೇಲಿಯಾದ ಸೌತ್‌ವೇಲ್ಸ್ ಯುನಿವರ್ಸಿಟಿಯ ಎಲಿಜಬೆತ್ ಡೆನ್ನೀ-ವಿಲ್ಸನ್, ಡೀಕಿನ್ ಯುನಿವರ್ಸಿಟಿಯ ಕರೆನ್ ಕ್ಯಾಂಪ್‌ಬೆಲ್ ಜೊತೆಯಾಗಿ ಲೇಖನವೊಂದರಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ.
ಹೆಚ್ಚಿನ ವಯಸ್ಕರು ಕೊಬ್ಬು ಶೇಖರಣೆಗೆ ಅವಕಾಶ ಕೊಡದೆ ಹೆಚ್ಚಿನ ಕ್ಯಾಲೊರಿ ಆಹಾರವನ್ನು ತಿನ್ನುವ ಗೋಜಿಗೆ ಹೋಗುವುದಿಲ್ಲ. ಆದರೆ ತಿನ್ನುವ ಶೈಲಿ ಬದಲಾಗಿದೆ. ಅಗ್ಗದ ಆಹಾರ ಬಹುಪ್ರಮಾಣದಲ್ಲಿ ತಿನ್ನುವುದು, ಫಾಸ್ಟ್ ಫುಡ್, ಕಡಿಮೆ ಜನರು ಒಟ್ಟಿಗೆ ಕುಳಿತು ಊಟ ಮಾಡುವುದು ಮತ್ತು ಊಟ ಮಾಡುವಾಗ ಗಮನ ಬೇರೆಡೆಗೆ ಹರಿಸುವುದು ಹೆಚ್ಚಾಗುತ್ತಿದೆ. ಉದಾಹರಣೆಗೆ ಕೆಲವರು ಆಹಾರ ಸೇವಿಸುವಾಗ ಟಿವಿ ನೋಡುತ್ತಾರೆ. ಇದರಿಂದ ಕೂಡಾ ದೇಹ ತೂಕ ಹೆಚ್ಚುತ್ತದೆ ಎಂದೂ ಈ ಸಂಶೋಧನೆ ತಿಳಿಸಿದೆ.
ವೇಗವಾಗಿ ತಿನ್ನುವವರು ಮತ್ತು ತೃಪ್ತಿಯಾಗುವ ತನಕ ತಿಂದು ತೇಗುವವರನ್ನು ಗಮನಿಸಿದಾಗ ಅವರೆಲ್ಲರೂ ಧಡೂತಿ ದೇಹ ಅಥವಾ ಆಕಾರವಿಲ್ಲದ ದೇಹವನ್ನು ಹೊಂದಿದ್ದರು ಮತ್ತು ಶಕ್ತಿವಂತರಲ್ಲ. ಅವರು ಮೂರು ಪಟ್ಟು ಹೆಚ್ಚು ತೂಕ ಹೊಂದಿದ್ದರು ಎಂದು ಸಂಶೋಧನಾಕಾರರು ತಿಳಿಸಿದ್ದಾರೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ