
ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಕಳಪೆ ಮಟ್ಟದ ಜೀವನಶೈಲಿಯಿಂದಾಗಿ (unhealthy lifestyle), ಬೊಜ್ಜಿನ (obesity) ಸಮಸ್ಯೆ ಇಂದು ಪ್ರಪಂಚದಾದ್ಯಂತ ಗಂಭೀರ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಸ್ಥೂಲಕಾಯದಿಂದ ತೂಕ ಏರಿಕೆ ಮಾತ್ರವಲ್ಲ, ಹೃದ್ರೋಗ, ಮಧುಮೇಹ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಕೂಡಾ ಕಾಡುತ್ತವೆ. ಹೀಗಿರುವಾಗ ಜಪಾನಿಯರಂತೆ ಆರೋಗ್ಯಕರ ಜೀವನಶೈಲಿ ಪಾಲಿಸುವುದು ತುಂಬಾನೇ ಮುಖ್ಯ. ಹೌದು ವಿಶ್ವದಲ್ಲಿ ಅತ್ಯಂತ ಸುದೀರ್ಘವಾಗಿ ಮತ್ತು ಆರೋಗ್ಯಕರ ಜೀವನ ನಡೆಸುವವರಲ್ಲಿ ಮೊದಲಿಗರಾದ ಜಪಾನಿಯರ (Japanese Lifestyle) ಕೆಲವೊಂದು ಆರೋಗ್ಯಕರ ಅಭ್ಯಾಸಗಳು ನೀವು ಕೂಡಾ ಪಾಲಿಸುವ ಮೂಲಕ ಬೊಜ್ಜಿನ ಸಮಸ್ಯೆ ನಿಮ್ಮ ಹತ್ತಿರವೂ ಸುಳಿಯದಂತೆ ನೋಡಿಕೊಳ್ಳಬಹುದು.
ಜಪಾನಿಯರು ಊಟ ಮಾಡುವ ಸಂದರ್ಭದಲ್ಲಿ ʼಹರಾ ಹಚಿ ಬುʼ ನಿಯಮವನ್ನು ಅನುಸರಿಸುತ್ತಾರೆ. ಈ ನಿಯಮದ ಪ್ರಕಾರ ನೀವು ಹೊಟ್ಟೆಯನ್ನು 80% ಮಾತ್ರ ತುಂಬಿಸಬೇಕು ಮತ್ತು ಅತಿಯಾಗಿ ತಿನ್ನಬಾರದು. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದು ಮಾತ್ರವಲ್ಲದೆ ಮತ್ತು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಹೀಗಾಗಿ ದೇಹ ತೂಕ ಕೂಡ ನಿಯಂತ್ರಣದಲ್ಲಿರುತ್ತದೆ.
ಸಮುದ್ರಾಹಾರ, ಹಸಿರು ತರಕಾರಿಗಳು, ಸೋಯಾ ಉತ್ಪನ್ನಗಳು, ಅಕ್ಕಿ ಮತ್ತು ಹಸಿರು ಚಹಾ ಜಪಾನಿನ ಆಹಾರದ ಪ್ರಮುಖ ಭಾಗಗಳಾಗಿವೆ. ಅವರ ಆಹಾರವು ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ಪೌಷ್ಟಿಕಾಂಶದಿಂದ ಸಮೃದ್ಧವಾಗಿದೆ, ಇದು ಬೊಜ್ಜು ಕಡಿಮೆ ಮಾಡುತ್ತದೆ ಮತ್ತು ದೇಹವನ್ನು ಆರೋಗ್ಯವಾಗಿಡುತ್ತದೆ. ನೀವು ಕೂಡ ಇಂತಹ ಆಹಾರಗಳನ್ನು ಸೇವನೆ ಮಾಡುವ ಮೂಲಕ ಬೊಜ್ಜಿನಿಂದ ಮುಕ್ತ ಪಡೆಯಬಹುದು.
ಜಪಾನಿನ ಜನರು ಸಂಸ್ಕರಿಸಿದ ಆಹಾರಗಳನ್ನು ಸೇವನೆ ಮಾಡುವುದನ್ನು ತಪ್ಪಿಸುತ್ತಾರೆ ಮತ್ತು ಹೆಚ್ಚು ತಾಜಾ ಹಣ್ಣುಗಳು, ತರಕಾರಿಗಳು ಮತ್ತು ಹುದುಗಿಸಿದ ಆಹಾರಗಳಾದ ಮಿಸೊ, ನುಕಾಝುಕ್ ನಂತಹ ಆಹಾರವನ್ನು ಸೇವಿಸುತ್ತಾರೆ, ಇದು ಚಯಾಪಚಯವನ್ನು ಹೆಚ್ಚಿಸಲು ಮತ್ತು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಜಪಾನಿನ ಜನರು ದೈನಂದಿನ ಕೆಲಸಗಳಿಗೆ ಹೋಗುವಾಗ ಕಾರು ಅಥವಾ ಬೈಕುಗಳನ್ನು ಕಡಿಮೆ ಬಳಸುತ್ತಾರೆ. ಒಂದಾ ನಡೆದುಕೊಂಡೇ ಕೆಲಸಕ್ಕೆ ಹೋಗುತ್ತಾರೆ ಇಲ್ಲವೆ ಸೈಕಲ್‌ಗಳನ್ನು ಉಪಯೋಗಿಸುತ್ತಾರೆ. ಇದು ಅವರ ಫಿಟ್ನೆಸ್ ಕಾಪಾಡಲು ಮತ್ತು ಕ್ಯಾಲೊರಿಗಳನ್ನು ಸುಡುವಲ್ಲಿ ಸಹಾಯ ಮಾಡುತ್ತದೆ. ಹಾಗಾಗಿ ನೀವು ಕೂಡಾ ನಡೆಯುವ, ಸೈಕಲ್ ತುಳಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ.
ಇದನ್ನೂ ಓದಿ: ಆರೋಗ್ಯಕರ, ಹೊಳೆಯುವ ಚರ್ಮ ಬೇಕಾ? ಈ 5 ಆಹಾರ ಸೇವಿಸಿ
ಜಪಾನಿನ ಜನರು ತಡರಾತ್ರಿಯಲ್ಲಿ ಊಟ ಮಾಡುವುದನ್ನು ತಪ್ಪಿಸುತ್ತಾರೆ ಮತ್ತು ಅವರ ಭೋಜನವು ಕೂಡಾ ಕಡಿಮೆ ಮತ್ತು ಹಗುರವಾಗಿ ಇರುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುವುದು ಮಾತ್ರಲ್ಲದೆ, ದೇಹದಲ್ಲಿ ಬೊಜ್ಜು ಸಂಗ್ರಹವಾಗುವುದನ್ನು ತಡೆಯುತ್ತದೆ. ಹಾಗಾಗಿ ಸ್ಲಿಮ್ ಆ್ಯಂಡ್ ಫಿಟ್ ಆಗಿ ಕಾಣಲು ಜಪಾನಿಯರ ಈ ಆರೋಗ್ಯಕರ ಅಭ್ಯಾಸವನ್ನು ನೀವು ಸಹ ಅಳವಡಿಸಿಕೊಳ್ಳಿ.
ಒತ್ತಡವೂ ಬೊಜ್ಜಿಗೆ ಪ್ರಮುಖ ಕಾರಣವಾಗಿದೆ. ಹಾಗಾಗಿ ಜಪಾನಿನ ಜನರು ಒತ್ತಡದಿಂದ ದೂರವಿದ್ದು, ಮಾನಸಿಕ ಆರೋಗ್ಯವನ್ನು ವೃದ್ಧಿಸುವ ಕಡೆಗೆ ಹೆಚ್ಚಿನ ಗಮನ ಹರಿಸುತ್ತಾರೆ. ಜಪಾನಿಯರು ಧ್ಯಾನ, ತೋಟಗಾರಿಕೆ ಮತ್ತು ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಒತ್ತಡವನ್ನು ಕಡಿಮೆ ಮಾಡುವತ್ತ ಗಮನಹರಿಸುತ್ತಾರೆ , ಇದು ಅವರ ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ