Krishna Janmashtami 2024 : ಹಬ್ಬಕ್ಕೆ ಕರಾವಳಿ ಸಾಂಪ್ರದಾಯಿಕ ತಿನಿಸು ಚಿಲಿಂಬಿ ಅಡ್ಡೆ, ಇಲ್ಲಿದೆ ರೆಸಿಪಿ
ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಕೂಡ ಒಂದು. ಭಗವಂತ ಕೃಷ್ಣನು ಜನಿಸಿದ ಈ ದಿನವನ್ನು ಇಡೀ ದೇಶದಾದಂತ್ಯ ಸಂಭ್ರಮದಿಂದ ಆಚರಿಸಲಾಗುತ್ತದೆ. ಉಡುಪಿಯ ಭಾಗದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಿಂದಿನ ದಿನವೇ ಎಲ್ಲರ ಮನೆಯಲ್ಲಿ ಈ ಸಾಂಪ್ರಾದಾಯಿಕ ತಿನಿಸು ಚಿಲಿಂಬಿಯನ್ನು ಮಾಡಲಾಗುತ್ತದೆ. ಹಾಗಾದ್ರೆ ಈ ರೆಸಿಪಿಯು ಮಾಡುವ ವಿಧಾನದ ಸಂಪೂರ್ಣ ಮಾಹಿತಿ ಇಲ್ಲಿದೆ.
ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಕೃಷ್ಣ ಹುಟ್ಟಿದ ದಿನ, ಈ ದಿನದಂದು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ದೇಶದಾದ್ಯಂತ ಭಕ್ತರು ಆಚರಿಸುತ್ತಾರೆ. ಈ ವರ್ಷ, ಆಗಸ್ಟ್ 26 ರಂದು ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಶ್ರೀಕೃಷ್ಣನಿಗೆ ಪ್ರಿಯವಾದ ತಿಂಡಿ ತಿನಿಸುಗಳನ್ನು ಮನೆಯಲ್ಲಿ ಮಾಡಿ ನೈವೇದ್ಯವಾಗಿ ಇಡಲಾಗುತ್ತದೆ. ಆದರೆ ಉಡುಪಿಯ ಕೆಲ ಭಾಗದಲ್ಲಿ ಕೃಷ್ಣ ಜನ್ಮಾಷ್ಟಮಿಯ ಒಂದು ದಿನ ಮುಂಚಿತವಾಗಿಯೇ ಸಾಂಪ್ರಾದಾಯಿಕ ತಿನಿಸು ಚಿಲಿಂಬಿ ಅಡ್ಡೆ ಮಾಡಲಾಗುತ್ತದೆ. ಈ ಸಿಹಿ ತಿನಿಸು ತಿನ್ನಲು ರುಚಿಕರ ಮಾತ್ರವಲ್ಲದೇ ಮಾಡುವುದಕ್ಕೂ ಸುಲಭ. ಈ ರುಚಿಕರ ತಿನಿಸನ್ನು ಸವಿಯುವುದರೊಂದಿಗೆ ಹಬ್ಬದ ಸಂಭ್ರಮವು ಆರಂಭವಾಗುತ್ತದೆ.
ಚಿಲಿಂಬಿ ಅಡ್ಡೆ ಮಾಡಲು ಬೇಕಾಗುವ ಸಾಮಗ್ರಿಗಳು
* ಹಲಸಿನ ಮರದ ಎಲೆ
* ಒಂದು ಕಪ್ ಕುಚ್ಚಲಕ್ಕಿ
* ತೆಂಗಿನಕಾಯಿ ತುರಿ
* ಬೆಲ್ಲದ ತುರಿ
* ತುಪ್ಪ
* ಏಲಕ್ಕಿ ಪುಡಿ
* ರುಚಿಗೆ ತಕ್ಕಷ್ಟು ಉಪ್ಪು
ಇದನ್ನೂ ಓದಿ; ಸಿಹಿ ಖಾರ ಮಿಶ್ರಿತವಾದ ಮಸಾಲೆ ನೀರುದೋಸೆ, ರೆಸಿಪಿ ಇಲ್ಲಿದೆ
ಚಿಲಿಂಬಿ ಅಡ್ಡೆ ಮಾಡಲು ವಿಧಾನ
* ಅಕ್ಕಿಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ಎಂಟು ಗಂಟೆಗಳ ಕಾಲ ನೆನೆಸಿಡಬೇಕು.
* ನೆನೆಸಿಟ್ಟ ಅಕ್ಕಿಯನ್ನು ನೀರು ಮತ್ತು ಉಪ್ಪು ಹಾಕಿ ಗಟ್ಟಿಯಾಗಿ ನುಣ್ಣಗೆ ರುಬ್ಬಿಕೊಳ್ಳಿ.
* ತೆಂಗಿನಕಾಯಿ ತುರಿಗೆ ಬೆಲ್ಲ, ಏಲಕ್ಕಿ ಪುಡಿ ಬೆರೆಸಿಟ್ಟುಕೊಳ್ಳಿ.
* ಹಲಸಿನ ಎಲೆಗಳನ್ನು ಕೋನ್ ಆಕಾರದಲ್ಲಿ ಸುತ್ತಿ ಕಡ್ಡಿಯಿಂದ ಚುಚ್ಚಿ ಬಿಗಿ ಮಾಡಿಕೊಳ್ಳಿ.
* ಕೋನ್ ಒಳಗೆ ರುಬ್ಬಿದ ಮಿಶ್ರಣವನ್ನು ಹಾಕಿ ತೆಳುವಾಗಿ ಹರಡಿಸಿಕೊಳ್ಳಿ.
* ಆ ಬಳಿಕ ಇದಕ್ಕೆ ಬೆಲ್ಲ, ಕಾಯಿತುರಿ ಹಾಗೂ ಏಲಕ್ಕಿ ಮಿಶ್ರಣವನ್ನು ತುಂಬಿಸಿ, ಬೆಲ್ಲವು ಕಾಣದಂತೆ ಅದರ ಮೇಲೆ ರುಬ್ಬಿದ ಅಕ್ಕಿ ಮಿಶ್ರಣವನ್ನು ಹರಡಿಸಿಕೊಳ್ಳಿ.
* ಹೀಗೆ ಮಾಡಿದ ಈ ಚಿಲಿಂಬಿ ಕೋನ್‌ಗಳನ್ನು ಹಬೆಯಲ್ಲಿ ಹದಿನೈದು ನಿಮಿಷಗಳ ಕಾಲ ಬೇಯಿಸಿದರೆ ಸಾಂಪ್ರದಾಯಿಕ ತಿನಿಸು ಚಿಲಿಂಬಿ ಅಡ್ಡೆ ಸವಿಯಲು ಸಿದ್ಧ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:28 am, Wed, 21 August 24