
ತಮ್ಮ ಮಕ್ಕಳ ಮದುವೆ ವಿಚಾರದಲ್ಲಿ ಪೋಷಕರು (parents) ಸಾಕಷ್ಟು ಕನಸನ್ನು ಕಂಡಿರುತ್ತಾರೆ. ನನ್ನ ಮಗಳಿಗೆ ರಾಜ ಕುಮಾರನಂತಹ ಹುಡುಗನ ಜೊತೆ ಮದುವೆ ಮಾಡಬೇಕು, ಮಗನಿಗೆ ಒಂದೊಳ್ಳೆ ಸಂಸ್ಕಾರಯುತ ಹುಡುಗಿಯ ಜೊತೆ ಮದುವೆ ಮಾಡಿಸಬೇಕು ಹೀಗೆ ಸಾಕಷ್ಟು ಕನಸನ್ನು ಕಂಡಿರುತ್ತಾರೆ. ಆದ್ರೆ ಕೆಲ ಮಕ್ಕಳು ತಮ್ಮ ಪೋಷಕರ ಮಾತಿಗೆ ವಿರುದ್ಧವಾಗಿ ಪ್ರೇಮ ವಿವಾಹವಾಗಲು (Love marriage) ಬಯಸುತ್ತಾರೆ. ಅದೆಷ್ಟೋ ಜನ ತಂದೆ ತಾಯನ್ನು ತೊರೆದು ತಾವು ಪ್ರೀತಿಸಿದವರೊಂದಿಗೆ ಓಡಿ ಹೋಗಿ ಮದುವೆಯಾದ ಉದಾಹರಣೆಯೂ ಇದೆ. ಇಂತಹ ಸಂದರ್ಭದಲ್ಲಿ ಪೋಷಕರು ತಮ್ಮ ಮಕ್ಕಳೊಂದಿಗೆ ಶಾಶ್ವತವಾಗಿ ಸಂಬಂಧವನ್ನು ಕಡಿದುಕೊಳ್ಳುತ್ತಾರೆ. ಜೊತೆಗೆ ಆಸ್ತಿಯಲ್ಲಿ (property) ಅವನಿಗೆ ನಯಪೈಸೆ ಕೂಡಾ ಕೊಡಲ್ಲ ಎಂಬ ಮಾತನ್ನು ಹೇಳುತ್ತಾರೆ. ಆದ್ರೆ ಕಾನೂನಿನ ಪ್ರಕಾರ ಮಕ್ಕಳು ಪೋಷಕರ ಇಚ್ಛೆಗೆ ವಿರುದ್ಧವಾಗಿ ಮದುವೆಯಾದರೆ ಅಂತಹ ಸಂದರ್ಭದಲ್ಲಿ ಪೋಷಕರು ಅವರಿಗೆ ಆಸ್ತಿಯಲ್ಲಿ ಪಾಲು ಕೊಡುವುದನ್ನು ನಿರಾಕರಿಸಬಹುದೇ? ಈ ಬಗ್ಗೆ ಕಾನೂನು ಏನು ಹೇಳುತ್ತೆ ನೋಡಿ.
ಮಗ ಅಥವಾ ಮಗಳು ತಮ್ಮ ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾದರೆ, ಪೋಷಕರು ಅವರಿಗೆ ಆಸ್ತಿಯಲ್ಲಿ ಪಾಲು ನೀಡಲು ನಿರಾಕರಿಸಬಹುದೇ? ಅವರ ಆಸ್ತಿ ಹಕ್ಕುಗಳನ್ನು ಕಸಿದುಕೊಳ್ಳಬಹುದೇ? ಎಂಬ ಪ್ರಶ್ನೆ ನಿಮ್ಮಲ್ಲಿ ಉದ್ಭವಿಸಿದ್ದರೆ ಅದಕ್ಕೆ ಉತ್ತರ ಇಲ್ಲಿದೆ. ಮಕ್ಕಳು ತಮ್ಮ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದರೂ ಅಥವಾ ಬೇರೆ ಯಾವುದೋ ಕಾರಣಕ್ಕಾಗಿ ಮಕ್ಕಳು ತಮ್ಮೊಂದಿಗೆ ಸಂಬಂಧವನ್ನು ಕಡಿದುಕೊಂಡಿದ್ದರೂ ಸಹ ಪೋಷಕರು ತಮ್ಮ ಮಕ್ಕಳಿಗೆ ತಾವು ಸ್ವಂತವಾಗಿ ಗಳಿಸಿದ ಆಸ್ತಿಯ ಹಕ್ಕನ್ನು ನೀಡಲು ನಿರಾಕರಿಸಬಹುದು. ಉತ್ತರಾಧಿಕಾರವನ್ನು ಕಸಿದುಕೊಳ್ಳಬಹುದು. ಆದರೆ ಪೂರ್ವಜರ ಆಸ್ತಿಯಲ್ಲಿ ಮಾತ್ರ ಮಕ್ಕಳಿಗೂ ಹಕ್ಕಿದೆ ಎಂದು 2016 ರಲ್ಲಿ ದೆಹಲಿ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
ಪೋಷಕರು ತಾವು ಗಳಿಸಿದ ಆಸ್ತಿಯನ್ನು ತಾವು ಯಾರಿಗೆ ಕೊಡಬೇಕು ಎಂಬ ಸಂಪೂರ್ಣ ಹಕ್ಕನ್ನು ಅವರೇ ಹೊಂದಿರುತ್ತಾರೆ. ಉದಾಹರಣೆಗೆ ಪೋಷಕರು ತಾವು ಕಷ್ಟಪಟ್ಟು ಗಳಿಸಿದ ಮನೆ, ಜಮೀನು ಇತ್ಯಾದಿ ಆಸ್ತಿಯ ಸಂಪೂರ್ಣ ಹಕ್ಕು ಅವರ ಮೇಲೆಯೇ ಇದೆ. ಮತ್ತು ಈ ಎಲ್ಲಾ ಆಸ್ತಿಯನ್ನು ಯಾರಿಗೆ ನೀಡಬೇಕು ಎಂಬ ನಿರ್ಧಾರ ಕೂಡಾ ಅವರದ್ದೇ ಆಗಿರುತ್ತದೆ. ಮಕ್ಕಳು ಏನಾದರೂ ತಮ್ಮಿಚ್ಛೆಗೆ ವಿರುದ್ಧವಾಗಿ ಮದುವೆಯಾದರೆ ಅಂತಹ ಸಂದರ್ಭದಲ್ಲಿ ತಾವು ಗಳಿಸಿದ ಆಸ್ತಿಯಲ್ಲಿ ಮಕ್ಕಳಿಗೆ ಯಾವುದೇ ಪಾಲನ್ನು ನೀಡದಿರುವ ಹಕ್ಕನ್ನು ಪೋಷಕರು ಹೊಂದಿರುತ್ತಾರೆ. ಮತ್ತು ಆ ಆಸ್ತಿಯನ್ನು ತಾವು ಬಯಸಿದ ಯಾರಿಗಾದರೂ ನೀಡಬಹುದು.
ಆದರೆ ಪೂರ್ವಜರ ಆಸ್ತಿ ಅಂದ್ರೆ ಅಜ್ಜ ಅಜ್ಜಿಯಿಂದ ಬಂದ ಕುಟುಂಬದ ಆಸ್ತಿಯಲ್ಲಿ ಮಕ್ಕಳ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಈ ಪೂರ್ವಜರ ಆಸ್ತಿಯನ್ನು ಪೋಷಕರು ತಮ್ಮ ಮಕ್ಕಳಿಗೆ ಬಿಟ್ಟು ಬೇರೆಯವರಿಗೆ ಕೊಡಲು ಸಾಧ್ಯವಿಲ್ಲ. ಮಕ್ಕಳನ್ನು ಆಸ್ತಿಯ ಉತ್ತರಾಧಿಕಾರದಿಂದ ಹೊರಗಿಡಲು ಸಾಧ್ಯವಿಲ್ಲ.
ಇದನ್ನೂ ಓದಿ: ಸಾಲ ಮಾಡಿದ ಅಪ್ಪ ತೀರಿ ಹೋದರೆ ಮಗನ ಮೇಲೆ ಬೀಳುತ್ತಾ ಆ ಸಾಲದ ಹೊರೆ?
ಒಂದು ವೇಳೆ ಮಕ್ಕಳು ತಮ್ಮಿಚ್ಛೆಗೆ ವಿರುದ್ಧವಾಗಿ ಮದುವೆಯಾದರೆ, ಆ ಸಂದರ್ಭದಲ್ಲಿ ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಕೊಡಲು ನಿರಾಕರಿಸಿದೆ ಕಾನೂನುಬದ್ಧವಾಗಿ ಯಾರಿಗೆ ಏನು ಕೊಡಬಾರದು, ಯಾರಿಗೆ ಏನು ಕೊಡಬೇಕು ಎಂಬುದನ್ನು ಸ್ಪಷ್ಟವಾಗಿ ವಿಲ್‌ನಲ್ಲಿ ಬರೆಯಬೇಕು. ಎರಡನೆಯದಾಗಿ ಸಾರ್ವಜನಿಕ ನಿರಾಕರಣೆ ಸೂಚನೆ- ಪೋಷಕರು ಸ್ಥಳೀಯ ಪತ್ರಿಕೆಯಲ್ಲಿ “ನಾವು ನಮ್ಮ ಮಗ/ಮಗಳನ್ನು ನಮ್ಮ ಮನೆ ಮತ್ತು ಆಸ್ತಿಯಿಂದ ದೂರವಿಡುತ್ತಿದ್ದೇವೆ. ಅವರಿಗೆ ನಮ್ಮ ಆಸ್ತಿಯಲ್ಲಿ ಹಕ್ಕು ಮತ್ತು ಯಾವುದೇ ಸಂಬಂಧವಿರುವುದಿಲ್ಲ” ಎಂದು ಪ್ರಕಟಣೆಯನ್ನು ಪ್ರಕಟಿಸಬಹುದು. ಆದರೆ ಈ ದಾಖಲೆಗಳು ಸ್ವಂತವಾಗಿ ಖರೀದಿಸಿದ ಆಸ್ತಿಗಳಿಗೆ ಮಾತ್ರ ಮಾನ್ಯವಾಗಿರುತ್ತದೆ.
ಹಿಂದೂ ಉತ್ತರಾಧಿಕಾರ ಕಾಯ್ದೆ, 1956 ರ ಸೆಕ್ಷನ್ 30 ರ ಪ್ರಕಾರ, ಯಾವುದೇ ಹಿಂದೂ ವ್ಯಕ್ತಿ ತನ್ನ ಆಸ್ತಿಯನ್ನು ವಿಲ್ ಮೂಲಕ ವಿತರಿಸಬಹುದು. ಹಿಂದೂ ದತ್ತು ಮತ್ತು ನಿರ್ವಹಣಾ ಕಾಯ್ದೆ 1956 ರ ಸೆಕ್ಷನ್ 18 ರ ಪ್ರಕಾರ, ಯಾರೇ ಮಕ್ಕಳು ಶಿಸ್ತುಬದ್ಧವಾಗಿ ವರ್ತಿಸದಿದ್ದರೆ ಅಥವಾ ಪೋಷಕರ ಇಚ್ಛೆಗೆ ವಿರುದ್ಧವಾಗಿ ನಡೆದುಕೊಂಡರೆ ಅಂತಹ ಮಕ್ಕಳಿಗೆ ಪೋಷಕರು ಆಸ್ತಿಯಲ್ಲಿ ಪಾಲು ಕೊಡಲು ನಿರಾಕರಿಸಬಹುದು. ಭಾರತೀಯ ಸಂವಿಧಾನದ 300A ವಿಧಿಯ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಆಸ್ತಿಯನ್ನು ತಾನು ಬಯಸಿದಂತೆ ಯಾರಿಗೆ ಬೇಕಾದರೂ ಕೊಡಬಹುದು. ಆದರೆ ಅದು ಕಾನೂನಿಗೆ ಅನುಸಾರವಾಗಿದ್ದರೆ ಮಾತ್ರ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:13 pm, Sun, 13 April 25