Paneer Butter Masala: ಮನೆಯಲ್ಲಿಯೇ ತಯಾರಿಸಿ ರೆಸ್ಟೋರೆಂಟ್ ಸ್ಟೈಲಿನ ಪನೀರ್ ಬಟರ್ ಮಸಾಲಾ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 16, 2023 | 5:27 PM

ಹೆಚ್ಚಿನವರು ಹೋಟೆಲ್ ಅಥವಾ ರೆಸ್ಟೋರೆಂಟ್​​ಗೆ ಊಟಕ್ಕೆಂದು ಹೋದಾಗ ಬಟರ್ ನಾನ್ ಜೊತೆಗೆ ಪನೀರ್ ಬಟರ್ ಮಸಾಲವನ್ನು ತಿನ್ನಲು ಇಷ್ಟಪಡುತ್ತಾರೆ. ಹೋಟೆಲ್​​​ಗಳಲ್ಲಿ ಈ ಒಂದು ಖಾದ್ಯಕ್ಕೆ ವಿಶೇಷ ಬೇಡಿಕೆಯಿದೆ. ಪನೀರ್ ಬಟರ್ ಮಸಾಲಾ ಮಾಡುವುದು ಕಷ್ಟದ ಕೆಲಸವಲ್ಲ. ನೀವು ಮನೆಯಲ್ಲಿಯೇ ರೆಸ್ಟೋರೆಂಟ್ ಶೈಲಿಯ ಪನೀರ್ ಬಟರ್ ಮಸಾಲಾ ಮಾಡಲು ಬಯಸಿದರೆ, ಇಲ್ಲಿದೆ ಇದರ ಸುಲಭ ಪಾಕವಿಧಾನ.

Paneer Butter Masala: ಮನೆಯಲ್ಲಿಯೇ ತಯಾರಿಸಿ ರೆಸ್ಟೋರೆಂಟ್ ಸ್ಟೈಲಿನ ಪನೀರ್ ಬಟರ್ ಮಸಾಲಾ
ಸಾಂದರ್ಭಿಕ ಚಿತ್ರ
Follow us on

ಪನೀರ್ ಬಟರ್ ಮಸಾಲಾ (Paneer Butter Masala) ಉತ್ತರ ಭಾರತದ ಶೈಲಿಯ ಖಾದ್ಯವಾಗಿದ್ದು, ಇದು ರೊಟ್ಟಿ, ಬಟರ್ ನಾನ್ ಅಥವಾ ಪರಾಠದೊಂದಿಗೆ ತಿನ್ನಲು ರುಚಿಕರವಾಗಿರುತ್ತದೆ. ಹೆಚ್ಚಿನವರಿಗೆ ಪನೀರ್ ಬಟರ್ ಮಸಾಲಾ ಎಂದಾಕ್ಷಣ ಬಾಯಲ್ಲಿ ನೀರೂರುತ್ತದೆ. ಅಲ್ಲದೆ ಹೆಚ್ಚಿನವರು ಹೋಟೆಲ್ ಅಥವಾ ರೆಸ್ಟೋರೆಂಟ್​​​ಗೆ ಊಟಕ್ಕೆಂದು ಹೋದಾಗ ಬಟರ್ ನಾನ್ ಜೊತೆಗೆ ಪನೀರ್ ಬಟರ್ ಮಸಾಲವನ್ನು ತಿನ್ನಲು ಇಷ್ಟಪಡುತ್ತಾರೆ. ವಿಶೇಷವಾಗಿ ಈ ಒಂದು ಖಾದ್ಯವನ್ನು ತಯಾರಿಸುವುದು ಕಷ್ಟಕರವೆಂದು ಅನೇಕರು ಭಾವಿಸುತ್ತಾರೆ. ನಿಮಗೆ ಗೊತ್ತಾ ಮನೆಯಲ್ಲಿಯೂ ರೆಸ್ಟೋರೆಂಟ್ ಶೈಲಿಯ ಪನೀರ್ ಬಟರ್ ಮಸಾಲ ರೆಸಿಪಿಯನ್ನು ಸುಲಭವಾಗಿ ತಯಾರಿಸಬಹುದು. ಇಲ್ಲಿದೆ ಇದರ ಸುಲಭ ಪಾಕವಿಧಾನದ ಬಗೆಗಿನ ಮಾಹಿತಿ.

ಪನೀರ್ ಬಟರ್ ಮಸಾಲಾ ಮಾಡಲು ಬೇಕಾಗುವ ಸಾಮಾಗ್ರಿಗಳು:

• 2 ಕಪ್ ಪನೀರ್ ತುಂಡುಗಳು

• 2 ಸಣ್ಣಗೆ ಹೆಚ್ಚಿದ ಈರುಳ್ಳಿ

• 2 ರಿಂದ 2 ಟೊಮೆಟೊ

• ಬೆಳ್ಳುಳ್ಳಿ

• ಲವಂಗ, ಏಲಕ್ಕಿ

• ಗೋಡಂಬಿ

• 1/2 ಕಪ್ ಹಾಲು

• ಬೆಣ್ಣೆ

• 2 ಚಮಚ ಫ್ರೆಶ್ ಕ್ರೀಮ್ ಅಥವಾ ಮಲೈ

• ಪಲಾವ್ ಎಲೆ

• 2 ಹಸಿ ಮೆಣಸಿನಕಾಯಿ

• ಒಂದು ತುಂಡು ಶುಂಠಿ

• ಧನಿಯಾ ಪುಡಿ

• ಗರಂ ಮಸಾಲಾ

• ಅರಶಿನ ಪುಡಿ

• ಜೀರಿಗೆ ಪುಡಿ

• ಕಾಶ್ಮೀರಿ ಮೆಣಸಿನ ಪುಡಿ

• ಕಸೂರಿ ಮೇಥಿ

• ಎಣ್ಣೆ

• ಉಪ್ಪು

ರೆಸ್ಟೋರೆಂಟ್ ಶೈಲಿಯ ಪನೀರ್ ಬಟರ್ ಮಸಾಲ ಮಾಡುವುದು ಹೇಗೆ?

ಇದನ್ನು ಮಾಡಲು ಮೊದಲು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಮತ್ತು ಬೆಣ್ಣೆಯನ್ನು ಹಾಕಿ. ಈಗ ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಮತ್ತು ಟೊಮೆಟೊ ಹಾಕಿ ಹುರಿಯಿರಿ. ನಂತರ ಅದಕ್ಕೆ ಗೋಡಂಬಿ ಹಾಕಿ ಇನ್ನೊಂದು ಬಾರಿ ಈ ಮಿಶ್ರಣವನ್ನು ಹುರಿಯಿರಿ. ನಂತರ ಇದು ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್​​ಗೆ ಈ ಮಿಶ್ರಣವನ್ನು ಹಾಕಿ ನುಣ್ಣಗೆ ಪೇಸ್ಟ್ ರೀತಿಯಲ್ಲಿ ರುಬ್ಬಿಟ್ಟುಕೊಳ್ಳಿ.

ಇದನ್ನೂ ಓದಿ: ಚಳಿಗಾಲದಲ್ಲಿ ಮಸಾಲ ಟೀ ಕುಡಿಯುವುದರಿಂದ ಆರೋಗ್ಯಕ್ಕೆ ಏನೆಲ್ಲ ಉಪಯೋಗಗಳಿಗೆ ಗೊತ್ತಾ?

ನಂತರ ಒಂದು ಬಾಣಲೆಗೆ ಬೆಣ್ಣೆ ಹಾಕಿ ಅದು ಕಾದ ಬಳಿಕ ಲವಂಗ, ಏಲಕ್ಕಿ ಮತ್ತು ಪಲಾವ್ ಎಲೆಯನ್ನು ಹಾಕಿ ಹುರಿಯಿರಿ. ಅದಕ್ಕೆ ಅರಶಿನ ಪುಡಿ, ಅಚ್ಚಖಾರದ ಪುಡಿ ಅಥವಾ ಕಾಶ್ಮೀರಿ ಮೆಣಸಿನ ಪುಡಿ, ಗರಂ ಮಸಾಲ, ಜೀರಿಗೆ ಪುಡಿ, ಧನಿಯಾ ಪುಡಿ ಹಾಕಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಹುರಿಯಿರಿ. ನಂತರ ಅದಕ್ಕೆ ಮೊದಲೇ ರುಬ್ಬಿಟ್ಟುಕೊಂಡ ಈರುಳ್ಳಿ ಟೊಮೆಟೊ ಪೇಸ್ಟ್ ಸೇರಿಸಿ. ಈ ಮಿಶ್ರಣ ಚೆನ್ನಾಗಿ ಬೆಂದಾಗ ಅದು ಎಣ್ಣೆ ಬಿಡಲು ಪ್ರಾರಂಭವಾಗುತ್ತದೆ. ಆಗ ಮಿಶ್ರಣಕ್ಕೆ ಅರ್ಧ ಕಪ್ ಹಾಲು ಮತ್ತು ಅರ್ಧ ಕಪ್ ನೀರನ್ನು ಸೇರಿಸಿ. ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ಸಕ್ಕರೆಯನ್ನು ಸೇರಿಸಿ ಗ್ರೇವಿಯನ್ನು ಕುದಿಯಲು ಬಿಡಿ. ಗ್ರೇವಿಯ ಮೇಲ್ಭಾಗದಲ್ಲಿ ಎಣ್ಣೆ ತೇಳಲು ಪ್ರಾರಂಭಿಸಿದಾಗ ಪನೀರ್ ತುಂಡು ಸೇರಿಸಿ ಆ ಗ್ರೇವಿಯನ್ನು ಇನ್ನೊಂದು ಬಾರಿ ಮಿಶ್ರಣ ಮಾಡಿಕೊಳ್ಳಿ. ನಂತರ ಕಸೂರಿ ಮೇಥಿಯನ್ನು ಕೈಯಲ್ಲಿ ಪುಡಿಮಾಡಿ ಹಾಕಿಕೊಳ್ಳಿ. ಗ್ರೇವಿ ದಪ್ಪವಾಗುವವರೆ ಕುದಿಸಬೇಕು. ಕೊನೆಯಲ್ಲಿ ಅದಕ್ಕೆ ಕೆನೆ ಅಥವಾ ಫ್ರೆಶ್ ಕ್ರೀಮ್ ಹಾಕಿದರೆ ರೆಸ್ಟೋರೆಂಟ್ ಶೈಲಿಯ ಪನೀರ್ ಬಟರ್ ಮಸಾಲಾ ಸವಿಯಲು ಸಿದ್ಧ. ಇದನ್ನು ಪರಾಠ, ಅಥವಾ ನಾನ್ ಜೊತೆಗೆ ಬಡಿಸಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: