Health Tips in Kannada : ಮಳೆಗಾಲದಲ್ಲಿ ಕಾಲಿನ ಬೆರಳುಗಳ ಸಂದಿಯಲ್ಲಿ ಬರುವ ಹುಳಗಳ ಬಗ್ಗೆ ಎಚ್ಚರವಿರಲಿ
ಸುರಿಯುವ ಮಳೆಯ ನಡುವೆ ಹಚ್ಚ ಹಸಿರಿನ ತುಂಬಿದ ಪರಿಸರವನ್ನು ನೋಡುವುದೇ ಕಣ್ಣಿಗೆ ಹಬ್ಬ. ಆದರೆ ಈ ಋತುವೆಂದರೆ ಕೆಲವರಿಗೆ ಅಲರ್ಜಿ. ಹೊರಗಡೆ ಹೋಗುವುದಕ್ಕೂ ಹಿಂದೇಟು ಹಾಕುತ್ತಾರೆ. ನೀರಿನಲ್ಲಿ ಅಡ್ಡಾಡಿದರೆ ಸಾಕು ಕಾಲುಗಳ ನಡುವೆ ತುರಿಕೆ ಕಾಣಿಸಿಕೊಳ್ಳುತ್ತವೆ. ಹೆಚ್ಚಿನವರಿಗೆ ಕಾಲಿನ ಬೆರಳುಗಳ ನಡುವೆ ಫಂಗಲ್ ಇನ್ಫೆಕ್ಷನ್ ನಿಂದಾಗಿ ನಡೆಯಲು ಕಷ್ಟವಾಗುತ್ತದೆ. ಈ ವೇಳೆಯಲ್ಲಿ ಕಾಲಿನ ಕಾಳಜಿಯ ಜೊತೆಗೆ ಮನೆ ಮದ್ದಿನ ಮೂಲಕ ಈ ಸಮಸ್ಯೆಯನ್ನು ಹೋಗಲಾಡಿಸಬಹುದು.
ಮಳೆಗಾಲ ಎಷ್ಟು ಹಿತಕರವೋ ಅಷ್ಟೇ ಕಷ್ಟಕರ. ಈ ಮಳೆಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ. ಕೆಮ್ಮು , ಶೀತ, ಸೊಳ್ಳೆಗಳಿಂದ ಹರಡುವ ಕಾಯಿಲೆಯು ಒಂದೆಡೆಯಾದರೆ ಚರ್ಮದ ಸಮಸ್ಯೆಯು ಇನ್ನೊಂದೆಡೆ. ಅದರಲ್ಲಿಯು ಕಾಲಿನ ಬೆರಳುಗಳ ನಡುವೆ ಕಾಣಿಸಿಕೊಳ್ಳುವ ತುರಿಕೆಯಂತಹ ಸಮಸ್ಯೆಯು ಜೀವ ಹಿಂಡುತ್ತವೆ. ಹೀಗಾದಾಗ ಮನೆ ಮದ್ದಿನ ಮೂಲಕ ಪಾದಗಳ ನಡುವಿನ ತುರಿಕೆಯಂತಹ ಸಮಸ್ಯೆಗಳನ್ನು ದೂರವಾಗಿಸಬಹುದು.
* ಅರಶಿನದಲ್ಲಿ ಆಂಟಿ ಬ್ಯಾಕ್ಟಿರಿಯಾ ಗುಣ ಇರುವುದರಿಂದ ಅರಿಶಿನಕ್ಕೆ ತೆಂಗಿನೆಣ್ಣೆ ಬೆರೆಸಿ ತಯಾರಿಸಿದ ಪೇಸ್ಟ್ ಅನ್ನು ಹಿಮ್ಮಡಿಗೆ ಮತ್ತು ಬೆರಳುಗಳ ಮಧ್ಯಕ್ಕೆ ಹಚ್ಚುತ್ತಿದ್ದರೆ ಕಾಲಿನ ನಂಜು ಕಡಿಮೆಯಾಗುತ್ತದೆ.
* ಮೆಹಂದಿ ಗಿಡದ ಎಲೆಗಳನ್ನು ಚೆನ್ನಾಗಿ ತೊಳೆದು ರುಬ್ಬಿ ಪೇಸ್ಟ್ ಮಾಡಿ ಕಾಲು ಬೆರಳುಗಳ ಮಧ್ಯೆ ಮತ್ತು ಪಾದದ ಸುತ್ತ ಹಚ್ಚಿಕೊಳ್ಳಿ. ಒಣಗಿದ ಬಳಿಕ ತಣ್ಣೀರಿನಿಂದ ತೊಳೆಯುತ್ತ ಬಂದರೆ ಗುಣಮುಖ ಕಾಣುತ್ತದೆ.
* ಕಾಲಿನ ನಂಜಿನ ಸಮಸ್ಯೆಗೆ ನಿಂಬೆರಸ, ಈರುಳ್ಳಿ ರಸ, ಬೆಣ್ಣೆಯೂ ಉತ್ತಮ ಔಷಧಿಯಾಗಿದೆ. ಇದರಲ್ಲಿ ಯಾವುದದನ್ನಾದರೂ ರಾತ್ರಿ ಹಚ್ಚಿ ಬೆಳಗ್ಗೆ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದರೆ ತುರಿಕೆಯು ಕಡಿಮೆಯಾಗುತ್ತದೆ.
ಇದನ್ನೂ ಓದಿ: ಇದ್ದಕ್ಕಿದ್ದಂತೆ ಕಿವಿ ನೋವು ಕಾಣಿಸಿಕೊಂಡರೆ ಗಾಬರಿಯಾಗಬೇಡಿ, ಈ ಮನೆಮದ್ದು ಟ್ರೈ ಮಾಡಿ
* ಅಡುಗೆ ಮನೆಯಲ್ಲಿರುವ ವಿನೆಗರ್ ಬಳಸುವುದರಿಂದ ಚರ್ಮದ ಬಹುತೇಕ ಕಾಯಿಲೆಗಳು ಗುಣಮುಖವಾಗುತ್ತವೆ. ಅದರಲ್ಲೂ ಕಾಲಿನಲ್ಲಾದ ಫಂಗಲ್ ಇನ್ಫೆಕ್ಷನ್ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಬೆಚ್ಚಗಿನ ನೀರಿನಲ್ಲಿ ವಿನೆಗರ್ ಮಿಶ್ರಣ ಮಾಡಿ ಕಾಲನ್ನು ನೆನೆಸಿಡುವುದರಿಂದ ಈ ಸಮಸ್ಯೆಯು ದೂರವಾಗುತ್ತದೆ.
* ಒಂದು ಚಮಚದಷ್ಟು ಆಲಿವ್ ಎಣ್ಣೆಯನ್ನು ಹತ್ತಿಯುಂಡೆಯ ಸಹಾಯದಿಂದ ಸೋಂಕಿಗೆ ಕಾಲಿನ ಬೆರಳಿನ ಸಂದಿಗಳಿಗೆ ಹಚ್ಚುತ್ತ ಬಂದರೆ ಸೋಂಕು ನಿಧಾನವಾಗಿ ದೂರವಾಗುತ್ತದೆ.
ಈ ಮನೆಮದ್ದನ್ನೊಮ್ಮೆ ಪ್ರಯತ್ನಿಸುವ ಮುನ್ನ ವೈದ್ಯರ ಸಲಹೆಗಳನ್ನು ಪಡೆದುಕೊಳ್ಳುವುದು ಉತ್ತಮ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: