
ಗೋಡಂಬಿಯನ್ನು (Cashew) ಮಕ್ಕಳಿಂದ ಹಿಡಿದು ಹಿರಿಯರವರೆಗೂ ಪ್ರತಿಯೊಬ್ಬರೂ ತಿನ್ನಲು ಇಷ್ಟಪಡುತ್ತಾರೆ. ತಿನ್ನಲು ಮಾತ್ರವಲ್ಲದೆ ಇದರಿಂದ ಸಾಕಷ್ಟು ಖಾದ್ಯಗಳನ್ನೂ ತಯಾರಿಸುತ್ತಾರೆ, ರುಚಿ ಹೆಚ್ಚಿಸಲು ಅಡುಗೆಯಲ್ಲೂ ಬಳಸುತ್ತಾರೆ. ಈ ಒಣ ಬೀಜ ಸಖತ್ ರುಚಿಕರ ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಹೌದು ನೋಡಲು ಕಿಡ್ನಿಯಾಕಾರದಂತೆ ಕಾಣುವ ಗೋಡಂಬಿ ಪೌಷ್ಟಿಕಾಂಶಗಳಿಂದ ಹೇರಳವಾಗಿದ್ದು, ಇದು ಚರ್ಮದ ಆರೋಗ್ಯ, ಹೃದಯದ ಆರೋಗ್ಯ, ಮಧುಮೇಹ ನಿಯಂತ್ರಿಸಲು ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಂಬಾನೇ ಸಹಕಾರಿಯಾಗಿದೆ. ಗೋಡಂಬಿಯ ಈ ಆರೋಗ್ಯ ಪ್ರಯೋಜನ ಹಾಗೂ ಅದರ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿವರ್ಷ ನವೆಂಬರ್ 233 ರಂದು ರಾಷ್ಟ್ರೀಯ ಗೋಡಂಬಿ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ.
ಪ್ರತಿ ವರ್ಷ ನವೆಂಬರ್ 23 ರಂದು ಪ್ರಪಂಚದಾದ್ಯಂತ ರಾಷ್ಟ್ರೀಯ ಗೋಡಂಬಿ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ವಿಶೇಷ ಸಂದರ್ಭವಾಗಿ ಆಚರಿಸುವ ಸಂಪ್ರದಾಯವು ಯುನೈಟೆಡ್ ಸ್ಟೇಟ್ಸ್‌ನಲ್ಲಿ (ಅಮೆರಿಕ) ಹುಟ್ಟಿಕೊಂಡಿತು. ಮೊದಲ ಬಾರಿಗೆ 2015 ರಲ್ಲಿ ಈ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ನವೆಂಬರ್ 23 ರಂದು ವಿಶ್ವದಾದ್ಯಂತ ರಾಷ್ಟ್ರೀಯ ಗೋಡಂಬಿ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಇಂದು, ಬ್ರೆಜಿಲ್, ವಿಯೆಟ್ನಾಂ, ಭಾರತ ಮತ್ತು ಹಲವಾರು ಆಫ್ರಿಕನ್ ದೇಶಗಳಲ್ಲಿ ಹೆಚ್ಚಾಗಿ ಬೆಳೆಯುವ ಗೋಡಂಬಿಯ ಮೂಲ ಬ್ರೆಜಿಲ್. ನಂತರ ಪೋರ್ಚುಗೀಸ್ ಪರಿಶೋಧಕರು ಈ ಬೆಳೆಯನ್ನು ಏಷ್ಯಾ ಮತ್ತು ಆಫ್ರಿಕಾದ ಕೆಲವು ಭಾಗಗಳಿಗೆ ಹರಡಿದರು. 1558 ರಲ್ಲಿ ಯುರೋಪಿಯನ್ನರು ಮೊದಲ ಬಾರಿಗೆ ಬ್ರೆಜಿಲ್‌ನಲ್ಲಿ ಗೋಡಂಬಿಯನ್ನು ಕಂಡುಕೊಂಡಾಗ, ಅವುಗಳ ಹೊರ ಚಿಪ್ಪುಗಳು ಅನಾಕಾರ್ಡಿಕ್ ಆಮ್ಲವನ್ನು ಹೊಂದಿರುವುದರಿಂದ ಅವುಗಳನ್ನು ತಿನ್ನಲಾಗದು ಎಂದು ಪರಿಗಣಿಸಿದರು, ಅಂತಿಮವಾಗಿ ಸ್ಥಳೀಯ ಟುಪಿ ಬುಡಕಟ್ಟು ಜನಾಂಗದ ಮುಖಾಂತರ ಗೋಡಂಬಿ ಬೀಜಗಳನ್ನು ಹುರಿಯುವುದರಿಂದ ಅವು ತಿನ್ನಲು ಅತ್ಯಂತ ರುಚಿಕರವಾಗಿರುತ್ತವೆ ಎಂಬುದನ್ನು ಕಲಿತರು.
ನಂತರ 1560 ರಲ್ಲಿ ಪೋರ್ಚುಗೀಸ್ ಮಿಷನರಿಗಳು ಭಾರತದ ಗೋವಾಕ್ಕೆ ಗೋಡಂಬಿಯನ್ನು ತಂದಾಗಿನಿಂದ, ಗೋಡಂಬಿ ಏಷ್ಯಾ ಮತ್ತು ಆಫ್ರಿಕಾದಾದ್ಯಂತ ವೇಗವಾಗಿ ಜನಪ್ರಿಯತೆಯನ್ನು ಗಳಿಸಿತು.. 1905 ರಲ್ಲಿ ಗೋಡಂಬಿ ಅಮೆರಿಕಕ್ಕೇ ಪ್ರವೇಶ ಪಡೆದಾಗಿನಿಂದ ಅದರ ಜಾಗತಿಕ ಬೇಡಿಕೆ ಮತ್ತಷ್ಟು ಹೆಚ್ಚಿತು. ಇಂದು, ಗೋಡಂಬಿ ಅನೇಕ ಸಾಂಪ್ರದಾಯಿಕ ಭಕ್ಷ್ಯಗಳ ಅವಿಭಾಜ್ಯ ಅಂಗವಾಗಿದ್ದು, ರಾಷ್ಟ್ರೀಯ ಗೋಡಂಬಿ ದಿನವು ಈ ಪಾಕಶಾಲೆಯ ಪರಂಪರೆಯನ್ನು ನೆನಪಿಟ್ಟುಕೊಳ್ಳಲು ಅವಕಾಶ ಕಲ್ಪಿಸಿದೆ.
ಇದನ್ನೂ ಓದಿ: ದೂರದರ್ಶನ ದಿನವನ್ನು ಯಾಕಾಗಿ ಆಚರಿಸಲಾಗುತ್ತದೆ ಗೊತ್ತಾ?
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ