ಕಷ್ಟದ ಪರಿಸ್ಥಿತಿಯಲ್ಲಿ ಜನರ ಜೀವ ಉಳಿಸಲು ಸಹಾಯ ಮಾಡುವ ವೈದ್ಯರ ದಿನವಿಂದು. ಅಗತ್ಯವಿರುವ ಸಮಯದಲ್ಲಿ ನಿಸ್ವಾರ್ಥವಾಗಿ ಸಹಾಯ ಮಾಡಿದ ವೈದ್ಯರಿಗೆ ಕೃತಜ್ಞತೆ ಸಲ್ಲಿಸಲು ಪ್ರತೀ ವರ್ಷ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಅದರಲ್ಲಿಯೂ ಕೊವಿಡ್19 ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ತಮ್ಮ ಜೀವವನ್ನೇ ಒತ್ತೆ ಇಟ್ಟು ಜನರ ಸೇವೆಯಲ್ಲಿ ದಿನವಿಡೀ ಕೆಲಸ ನಿರ್ವಹಿಸಿದ ವೈದ್ಯರಿಗೆ ಇಂದು ಕೃತಜ್ಞತೆ ಸಲ್ಲಿಸಲೇಬೇಕು. ಹೀಗಿರುವಾಗ ಎಲ್ಲಾ ಮಹಿಳಾ ವೈದ್ಯರಿಗೆ ಸ್ಪೂರ್ತಿಯಾಗಿರುವ, ಭಾರತದಲ್ಲಿ ಮೊದಲ ಮಹಿಳಾ ವೈದ್ಯರಾಗಿ ಸೇವೆ ಸಲ್ಲಿಸಿದ ಆನಂದ ಬಾಯಿ ಗೋಪಾಲರಾವ್ ಜೋಶಿ ಅವರ ಜೀವನ ಚರಿತ್ರೆ ಕುರಿತು ತಿಳಿಯೋಣ.
ಆನಂದ ಬಾಯಿ ಅವರು 1865 ಮಾರ್ಚ್ 31ರಂದು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಸಂಪ್ರದಾಯವಾದಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಪೋಷಕರು ಅವರಿಗೆ ಯಮುನಾ ಎಂಬ ಹೆಸರಿಟ್ಟು ನಾಮಕರಣ ಮಾಡಿದರು. ಆದರೆ, ಮದುವೆಯ ಬಳಿಕ ಅವರ ಹೆಸರನ್ನು ಬದಲಾಯಿಸಲಾಯಿತು. ತಮ್ಮ ಒಂಭತ್ತನೇ ವಯಸ್ಸಿನಲ್ಲಿ 25 ವರ್ಷದ ಗೋಪಾಲರಾವ್ ಜೋಶಿ ಅವರನ್ನು ವಿವಾಹವಾದರು. ಮದುವೆಯ ನಂತರ ಅಧ್ಯಯನ ಮಾಡಬೇಕು ಎಂಬ ಷರತ್ತಿನಿಂದ ಗೋಪಾಲರಾವ್ ಅವರು ಮದುವೆಯಾಗಲು ಒಪ್ಪಿಕೊಂಡಿದ್ದರು. ಆದರೆ, ಆನಂದ ಬಾಯಿ ಅವರಿಗೆ ವರ್ಣಮಾಲೆಯ ಅಕ್ಷರಗಳ ಕುರಿತಾಗಿ ಜ್ಞಾನವಿರಲಿಲ್ಲ ಹಾಗಾಗಿ ಶಿಕ್ಷಣ ಪಡೆಯುವುದರ ಕುರಿತಾಗಿ ಅವರ ಕುಟುಂಬವು ವಿರೋಧಿಸಿತು. ಆದರೆ, ಗೋಪಾಲರಾವ್ ಅವರ ಆಶಯದ ಸಲುವಾಗಿ ಆನಂದಬಾಯಿ ಅವರು ಶಿಕ್ಷಣ ಕಲಿಯಲು ಮುಂದಾದರು.
ಆರಂಭದಲ್ಲಿ ಆನಂದ ಬಾಯಿ ಜೋಶಿ ಅವರಿಗೆ ಶಿಕ್ಷಣದಲ್ಲಿ ಅಷ್ಟಾಗಿ ಆಸಕ್ತಿ ಇರಲಿಲ್ಲ. ಅವರಿಗೆ ಶಿಕ್ಷಣ ಕಲಿಸಲು ಅವರ ಪತಿ ಗದರಿಸುತ್ತಿದ್ದರು. ಹಾಗಿರುವಾಗ ಜೀವನದಲ್ಲಿ ಅವರು ಅನುಭವಿಸಿದ ಒಂದು ಹಿನ್ನಡೆ ಅವರನ್ನು ಶಿಕ್ಷಣ ಕಲಿಯುವಂತೆ ಮಾಡಿತು. ಆನಂದ ಬಾಯಿ ಅವರು 14ನೇ ವಯಸ್ಸಿನಲ್ಲಿದ್ದಾಗ ತಮ್ಮ 10 ದಿನಗಳ ಮಗುವನ್ನು ಕಳೆದುಕೊಂಡರು. ಮಗುವಿನ ಸಾವಿನ ಸುದ್ದಿ ಅವರನ್ನು ಹೆಚ್ಚು ಚಿಂತೆಗೀಡು ಮಾಡಿತು. ಇದರಿಂದ ಅವರು ಆಘಾತಕ್ಕೊಳಗಾದರು. ಈ ನೋವಿನಿಂದ ಬೇಸತ್ತಿದ್ದ ಅವರು ವೈದ್ಯರಾಗಲು ನಿರ್ಧಾರ ಕೈಗೊಂಡರು.
ವೈದ್ಯರಾಗಲೇಬೇಕು ಎಂದು ಪ್ರತಿಜ್ಞೆ ಮಾಡಿದ್ದ ಅವರು ಹೆಚ್ಚು ಅಧ್ಯಯನದ ಕುರಿತಾಗಿ ಒಲವು ತೋರಿಸಿದರು. ಮೂಲಭೂತ ಶಿಕ್ಷಣವನ್ನು ಪೂರ್ಣಗೊಳಿಸಿದ ಬಳಿಕ ಪೆನ್ಸಿಲ್ವೇನಿಯಾದ ವುಮೆನ್ಸ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಕಾರ್ಯಕ್ರಮಕ್ಕೆ ಸೇರಿಕೊಂಡರು. ಈ ಕಾಲೇಜು ವಿಶ್ವದ ಎರಡು ಮಹಿಳಾ ವೈದ್ಯಕೀಯ ಕಾಲೇಜುಗಳಲ್ಲಿ ಒಂದಾಗಿದೆ. ವಿವಾಹಿತ ಮಹಿಳೆಯಾಗಿ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗಿದ್ದಕ್ಕಾಗಿ ಸಮಾಜದಿಂದ ಸಾಕಷ್ಟು ಟೀಕೆಗೆ ಒಳಗಾದರು. ಆದರೂ ಸಹ ಛಲ ಬಿಡದೆ ತಮ್ಮ ಗುರಿಯತ್ತ ಮಾತ್ರ ಗಮನಹರಿಸಿದ್ದರು.
ಟೀಕೆಯ ಬಗ್ಗೆ ಗಮನಕೊಡದೇ ಗೋಪಾಲರಾವ್ ಜೋಶಿ ಅವರು ತಮ್ಮ ಪತ್ನಿಯನ್ನು ಗುರಿ ಸಾಧಿಸುವ ಸಲುವಾಗಿ ಹಡಗಿನಲ್ಲಿ ಕೋಲ್ಕತ್ತಾದಿಂದ ನ್ಯೂಯಾರ್ಕ್ಗೆ ಕಳುಹಿಸಿದರು. ಯುನೈಟೆಡ್ ಸ್ಟೇಟ್ನಿಂದ ತಮ್ಮ 19ನೇ ವಯಸ್ಸಿನಲ್ಲಿರುವಾಗ ಪಾಶ್ಚಿಮಾತ್ಯ ಔಷಧದಲ್ಲಿ ಎರಡು ವರ್ಷಗಳ ಪದವಿ ಪಡೆದು ಭಾರತದ ಮೊದಲ ಮಹಿಳಾ ವೈದ್ಯರಾದರು.
ಭಾರತಕ್ಕೆ ಹಿಂದಿರುಗಿದ ನಂತರ ಅವರಿಗೆ ಹೆಮ್ಮೆಯಿಂದ ಸ್ವಾಗತ ಕೋರಲಾಯಿತು. ಬಳಿಕ ಜನರಿಗೆ ಸೇವೆ ಮಾಡುತ್ತ ತಮ್ಮ ವೃತ್ತಿಯಲ್ಲಿ ಮುಂದುವರೆದರು. ಅವರು ತಮ್ಮ 22ನೇ ವಯಸ್ಸಿನಲ್ಲಿ ಕ್ಷಯರೋಗಕ್ಕೆ ಬಲಿಯಾದರು. ಆದರೆ ತಮ್ಮ ಶಿಕ್ಷಣವನ್ನು ಮುಂದುವರೆಸಲು ಮತ್ತು ಮಹಿಳೆಯರ ಶಿಕ್ಷಣ ಪಡೆಯುವಂತೆ ಸ್ಪೂರ್ತಿಯಾದ ಮಹಿಳೆ ಎಂಬ ಹೆಸರಿಗೆ ಇಂದಿಗೂ ಪಾತ್ರರಾಗಿದ್ದಾರೆ.
ಇದನ್ನೂ ಓದಿ: