National Doctor’s Day 2025: ಕೇವಲ ಒಂದೇ ಒಂದು ರೂಪಾಯಿಗೆ ಬಡ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯ
ತಪಾಸಣೆಗೆಂದು ಹೋದ್ರೆ ಡಾಕ್ಟರ್‌ಗಳು ಹಾಗೂ ಆಸ್ಪತ್ರೆಗಳು ಹಣ ಪೀಕುವುದೇ ಹೆಚ್ಚು ಎಂದು ಹಲವರು ಮಾತನಾಡಿಕೊಳ್ಳುತ್ತಿರುತ್ತಾರೆ. ಈ ಮಾತನ್ನು ನೀವು ಸಹ ಕೇಳಿರುತ್ತೀರಿ ಅಲ್ವಾ. ಆದರೆ ಇಲ್ಲೊಬ್ಬರು ವೈದ್ಯರು, ಬಡವರು ಹಾಗೂ ನಿರ್ಗತಿಕರಿಗೆ ಬರೀ ಒಂದು ರೂಪಾಯಿಗೆ ಚಿಕಿತ್ಸೆ ನೀಡುವ ಮೂಲಕ ಬಡವರ ಪಾಲಿನ ದೇವರಾಗಿದ್ದಾರೆ. ವೈದ್ಯರ ದಿನದ ಈ ಶುಭ ಸಂದರ್ಧದಲ್ಲಿ ನಿಸ್ವಾರ್ಥದಿಂದ ಜನ ಸೇವೆ ಸಲ್ಲಿಸುತ್ತಿರುವ ಡಾ. ಶಂಕರ್ ರಾಮಚಂದಾನಿ ಅವರ ಸ್ಪೂರ್ತಿದಾಕಯ ಕಥೆಯನ್ನು ಕೇಳಿ.

ಶಿಕ್ಷಣ, ಆಸ್ಪತ್ರೆ ಇತ್ಯಾದಿ ಜನರ ಸೇವೆಗಳಿಗಾಗಿ ಇರುವ ಉದ್ಯಮಗಳು ಇಂದು ಹಣ ಪೀಕುವ ಮಶಿನ್‌ಗಳಾಗಿ ಬದಲಾಗಿಬಿಟ್ಟಿವೆ. ಒಂದ್ಕಡೆ ಸ್ಕೂಲ್‌ಗಳಲ್ಲಿ ಮಕ್ಕಳ ಫೀಸ್ ಲಕ್ಷ ಲಕ್ಷ ಇದ್ರೆ, ಇನ್ನೊಂದು ಕಡೆ ಆಸ್ಪತ್ರೆ, ವೈದ್ಯರು (Doctors) ಚಿಕಿತ್ಸೆಯ ಹೆಸರಲ್ಲಿ ರೋಗಿಗಳಿಂದ ಹೆಚ್ಚು ಹೆಚ್ಚು ಹಣವನ್ನು ಪೀಕುತ್ತಾರೆ ಎಂಬ ಆರೋಪಗಳು ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತವೆ. ಆದರೆ ಇಲ್ಲೊಬ್ಬರು ವೈದ್ಯರು ಬರೀ ಒಂದು ರೂಪಾಯಿಗೆ ಚಿಕಿತ್ಸೆ ನೀಡುವ ಮೂಲಕ ಜನರ ಪಾಲಿಗೆ ದೇವರಾಗಿದ್ದಾರೆ. ಹೌದು ಒಡಿಶಾದ ಡಾ. ಶಂಕರ್ ರಾಮಚಂದಾನಿ (Dr. Shankar Ramachandani) ಎಂಬವರು 1 ರೂಪಾಯಿಯ ಕ್ಲಿನಿಕ್ ಆರಂಭಿಸಿ, ಬಡವರು ಹಾಗೂ ನಿರ್ಗತಿಕರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಬರೀ ಒಂದು ರೂಪಾಯಿಗೆ ಚಿಕಿತ್ಸೆ:
ವೈದ್ಯೋ ನಾರಾಯಣೋ ಹರಿ ಎಂದರೆ ವೈದ್ಯರು ದೇವರಿಗೆ ಸಮವೆಂದರ್ಥ. ಈ ಮಾತಿಗೆ ಅನುಗುಣವಾಗಿ ಇಲ್ಲೊಬ್ಬರು ಡಾಕ್ಟರ್ ಬಡವರು ಹಾಗೂ ನಿರ್ಗತಿಕರಿಗೆ ಬರೀ 1 ರೂಪಾಯಿಗೆ ಚಿಕಿತ್ಸೆ ನೀಡುವ ಮೂಲಕ ಜನರ ಪಾಲಿನ ದೇವರಾಗಿದ್ದಾರೆ. ಒಡಿಶಾದ ಸಂಬಲ್ಪುರ ಜಿಲ್ಲೆಯ ವೈದ್ಯರಾದ ಡಾ. ಶಂಕರ್ ರಾಮಚಂದಾನಿ ಅವರು ಒಂದು ರೂಪಾಯಿಗೆ ಚಿಕಿತ್ಸೆ ನೀಡುವ ಮೂಲಕ ಜನ ಸೇವೆಯನ್ನು ಮಾಡುತ್ತಿದ್ದಾರೆ. ಇವರು 2021 ರಲ್ಲಿ ಸಂಬಲ್ಪುರದ ಬುರ್ಲಾ ಪ್ರದೇಶದಲ್ಲಿ ‘ಒಂದು ರೂಪಾಯಿ’ ಕ್ಲಿನಿಕ್ ಸ್ಥಾಪಿಸಿ, ಆ ಮೂಲಕ ಬಡವರಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ನೀಡುತ್ತಾ ಬಂದಿದ್ದಾರೆ. ಇವರು ತಮ್ಮ ಔದಾರ್ಯದಿಂದಲೇ ಬಹಳ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.
ತಮ್ಮ ಕ್ಲಿನಿಕ್‌ಗೆ ತಪಾಸಣೆಗೆಂದು ಬರುವ ರೋಗಿಗಳಿಗೆ ಇವರ ಕೇವಲ ಒಂದು ರೂಪಾಯಿ ಮಾತ್ರ ಶುಲ್ಕ ವಿಧಿಸುತ್ತಾರೆ. ರೋಗಿಗೆ ತಾನು ಉಚಿತವಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದೆನಿಸಬಾರದು ಎಂಬ ಉದ್ದೇಶದಿಂದ ಈ ಒಂದು ರೂಪಾಯಿ ಕೂಡ ಶುಲ್ಕ ವಿಧಿಸುತ್ತೇನೆ ಎಂದು ಡಾ. ರಾಮಚಂದಾನಿ ಹೇಳುತ್ತಾರೆ.
ಇದನ್ನೂ ಓದಿ: ಜುಲೈ ತಿಂಗಳಲ್ಲಿ ಆಚರಿಸಲಾಗುವ ರಾಷ್ಟ್ರೀಯ, ಅಂತಾರಾಷ್ಟ್ರೀಯ ದಿನಾಚರಣೆಗಳ ಪಟ್ಟಿ ಇಲ್ಲಿದೆ
ಬಡ ರೋಗಿಗಳಿಗೆ ಸೇವೆ ಸಲ್ಲಿಸುವ ಬಯಕೆ:
ಡಾ. ಶಂಕರ್ ರಾಮಚಂದಾನಿ ಬುರ್ಲಾದ ವೀರ್ ಸುರೇಂದ್ರ ಸಾಯಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ (VIMSAR) ವೈದ್ಯಕೀಯ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಅಗತ್ಯವಿರುವ ಜನರಿಗೆ, ರೋಗಿಗಳಿಗೆ ಸೇವೆ ಸಲ್ಲಿಸುವ ಬಯಕೆ ಕೂಡಾ ಇವರಲ್ಲಿತ್ತು. ಹೀಗೆ ಜನರ ಸೇವೆ ಮಾಡಬೇಕೆಂಬ ಉದ್ದೇಶದಿಂದ ಇವರು 2021 ರಲ್ಲಿ ಒಂದು ರೂಪಾಯಿ ಕ್ಲಿನಿಕನ್ನು ತೆರೆದರು.
ಬಾಲ್ಯದಿಂದಲೂ ಬಡವರು ಹಾಗೂ ನಿರ್ಗತಿಕರ ಬಗ್ಗೆ ಸಹಾನುಭೂತಿಯನ್ನು ಹೊಂದಿದ್ದ ಇವರು ಕೊರೊನಾ ಅವಧಿಯಲ್ಲಿ, ಸೋಂಕಿತ ರೋಗಿಗಳನ್ನುಸ್ವತಃ ತಮ್ಮ ಕಾರಿನಲ್ಲಿಯೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದರು. ಇದೀಗ ಕ್ಲಿನಿಕ್ ತೆರೆದು ಬರೀ ಒಂದು ರೂಪಾಯಿಗೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇತ್ತೀಚಿಗಷ್ಟೇ ತಮ್ಮ ಕ್ಲಿನಿಕ್‌ಗೆ ನಾಲ್ಕು ವರ್ಷ ತುಂಬಿದ ಸಲುವಾಗಿ ಬಡವರಿಗಾಗಿ ‘ಒಂದು ರೂಪಾಯಿ’ ವಾಕಿಂಗ್ ಸ್ಟಿಕ್ ಮತ್ತು ಇಸಿಜಿ ಸೇವೆಗಳನ್ನು ಸಹ ಪ್ರಾರಂಭಿಸಿದರು.
ಹಣ ಪೀಕುವವರೇ ಹೆಚ್ಚಿರುವ ಈ ಕಾಲದಲ್ಲಿ ಯಾವುದೇ ಸ್ವಾರ್ಥವಿಲ್ಲದೆ ಜನರ ಸೇವೆ ಮಾಡುತ್ತಿರುವ ಡಾ. ಶಂಕರ್ ರಾಮಚಂದಾನಿ ಜನರ ಪಾಲಿನ ದೇವರೆಂದರೆ ತಪ್ಪಾಗಲಾರದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








