National Doctors Day 2025: ಕಾಲಕಾಲಕ್ಕೆ ವೈದ್ಯ ಲೋಕದಲ್ಲಿ ಆದ ಬದಲಾವಣೆಗಳೇನು?
ವೈದ್ಯರ ದಿನಾಚರಣೆ ಜುಲೈ ಒಂದು ತಿಂಗಳಿಗೆ ಮಾತ್ರ ಸೀಮಿತವಲ್ಲ. ಕಾಯಿಲೆ ಇರುವ ವರೆಗೆ, ರೋಗಿ ಗುಣಮುಖ ಆಗುವ ವರೆಗೆ ಪ್ರತೀ ಕ್ಷಣ ಹಾಗೂ ಪ್ರತೀ ದಿನ ವೈದ್ಯರ ದಿನ ಎಂಬುದನ್ನ ನಾವು ಮರೆಯುವಂತಿಲ್ಲ. ಆದರೆ ವೈದ್ಯರು ಕೂಡ ಮನುಷ್ಯರು ಎಂಬುದನ್ನು ಕೆಲವರು ಮರೆತಿದ್ದಾರೆ. ವೈದ್ಯರಿಗೂ ಅವರದೇ ಆದಂತಹ ಒತ್ತಡ, ಸಮಸ್ಯೆಗಳಿರುತ್ತವೆ. ಇದಕ್ಕೆ ಪೂರಕವಾಗಿ ಕಾಲಕಾಲಕ್ಕೆ ವೈದ್ಯ ಲೋಕದಲ್ಲಿ ಆದ ಬದಲಾವಣೆ? ರಾಜರ ಕಾಲದಿಂದ ಇಲ್ಲಿಯ ವರೆಗೆ ವೈದ್ಯರ ಹಾದಿ ಹೇಗಿತ್ತು? ಎಂಬುದರ ಬಗ್ಗೆ ಮಂಗಳೂರು ಸರಕಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಎಂ ಅಣ್ಣಯ್ಯ ಕುಲಾಲ್ ಉಳ್ತುರು ಅವರು ಟಿವಿ9 ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

”ಶರೀರೇ ಜರ್ಝರಿ ಭೂತೆ, ವ್ಯಾದಿಗ್ರಸ್ಥ ಕಳೇವರೇ, ಔಷಧಂ ಜಾಹ್ನವೀ ತೋಯು, ವೈದ್ಯನಾರಾಯಣೋ ಹರಿ”
ಶರೀರಕ್ಕೆ ಮುಪ್ಪು ಆವರಿಸಿಕೊಂಡು, ಜರ್ಝರಿತವಾಗಿ, ಕಾಯಿಲೆಗಳ ಗೂಡಾಗಿ, ಜೀವಶ್ಯವವಾಗಿರುವಾಗ ಯಾವುದೇ ಔಷಧವಾಗಲಿ, ಯಾವುದೇ ವೈದ್ಯರಾಗಲಿ ಸಹಾಯಕ್ಕೆ ಬರುವುದಿಲ್ಲ. ಆಗ ಗಂಗಾಜಲವೇ ಔಷಧ, ಹರಿನಾರಾಯಣನೇ ವೈದ್ಯ (Doctors) ಎಂಬ ಪೂರ್ಣ ಅರ್ಥದ ಶ್ಲೋಕದ ಕೊನೆಯ ಭಾಗವಾದ “ವೈದ್ಯೋನಾರಾಯಣೇ ಹರಿ” ಎಂಬುದನ್ನು ತೆಗೆದುಕೊಂಡು, ವೈದ್ಯರೆಂದರೆ ದೇವರು ಎಂಬುದನ್ನು ಮಾತ್ರ ಅರ್ಥಮಾಡಿಕೊಂಡು, ವೈದ್ಯರೆಂದರೆ ದೇವರ ಹಾಗೇಯೇ ಇರಬೇಕು. ಅದೇ ರೀತಿಯಾಗಿ ವರ್ತಿಸಬೇಕು ಎಂಬ ಸಾಮಾಜಿಕ ಭಾವನೆ ವೈದ್ಯ ಸಮುದಾಯದತ್ತ ಬೆಳೆದು ಬಂದಿದೆ. ಇದು ವೈದ್ಯಕೀಯ ವೃತ್ತಿಯ ಬಗೆಗಿರುವ ಉತ್ತಮ ಅಭಿಪ್ರಾಯ ಹಾಗೂ ಗೌರವ ಹಗಲಿರುಳು ತನ್ನ ವೈಯಕ್ತಿಕ ಬದುಕನ್ನು ಬದಿಗಿಟ್ಟು ಅನ್ಯರ ಒಳಿತಿಗಾಗಿ ಕರಗುವ ಆ ವೃತ್ತಿಯ ಗೌರವವನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವ ನೂರಾರು – ಸಾವಿರಾರು ವೈದ್ಯರ ಬಗೆಗಿರುವ ನೈಜ ಪ್ರೀತಿ ಹಾಗೂ ಕಳಕಳಿ ಎಂಬುದರಲ್ಲಿ ಎರಡು ಮಾತಿಲ್ಲ
ವೈದ್ಯರೂ ಮನುಷ್ಯರು
ರೋಗಿಗಳ ಆರೈಕೆಗೆ ಹೆಚ್ಚಿನ ಪ್ರಾಶಸ್ತ್ರ ನೀಡಿ, ಅವರು ಚೇತರಿಸಿಕೊಂಡಾಗ ಅವರ ಕಣ್ಣಲ್ಲಿ ಮೂಡುವ ಧನ್ಯತಾ ಭಾವನೆಯಿಂದಲೇ ಜೀವನ ಸಾರ್ಥಕವಾಯ್ತು ಎಂದು ತಿಳಿಯುತ್ತಾ ಅವರು ಕೊಟ್ಟದ್ದನ್ನು ಪ್ರೀತಿಯಿಂದ ಸ್ವೀಕರಿಸುವ ವೈದ್ಯರು ಹಿಂದೆಯೂ ಇದ್ದರು, ಈಗಲೂ ಇದ್ದಾರೆ. ಹಾಗೆಂದ ಮಾತ್ರಕ್ಕೆ ಎಲ್ಲಾ ವೈದ್ಯರು ಹರಿ ನಾರಾಯಣನಾಗಲು ಸಾಧ್ಯವಿಲ್ಲ. ಕಾಲ, ಪರಿಸರ, ಬೆಳವಣಿಗೆ, ತರಬೇತಿ ಹಾಗೂ ವೆಚ್ಚಗಳು ಏರುಪೇರಾದಂತೆ, ದೇವರಲ್ಲದೆ, ಮಾನವರಾಗಿರುವ ವೈದ್ಯ ಮಾನವ ಸಹಜವಾದ ಕೋಪ, ತಾಪ, ಆಸೆ, ಅಮಿಷ, ಒತ್ತಡಗಳಿಗೆ ಒಳಗಾಗುವುದನ್ನು ತಪ್ಪು ಎಂದು ವಿಶ್ಲೇಷಿಸಲು ಸಾಧ್ಯವಿಲ್ಲ. ಏಕೆಂದರೆ ವೈದ್ಯರೂ ಸಹಾ ನಮ್ಮ ನಿಮ್ಮಂತೆ ಮೊದಲು ಮನುಷ್ಯ ಅದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು.
ವೃತ್ತಿ ವ್ಯಾಪಾರೀಕರಣ
ಹಿಂದೆ ವೈದ್ಯರುಗಳಿಗೆ ರಾಜಾಶ್ರಯವಿತ್ತು, ಅಂದಿನ ವೈದ್ಯರ ಬೇಕು ಬೇಡಗಳನ್ನು ರಾಜರೇ ಭರಿಸುತ್ತಿದ್ದರು, ಹಾಗಾಗಿ ಶೂಶ್ರುಷೆ ನೀಡುವುದೇ ಅವರ ಕರ್ತವ್ಯ, ಪ್ರಜೆಗಳ ಕಾಯಿಲೆಯನ್ನು ಹಣ ತೆಗೆದುಕೊಳ್ಳದೇ, ನಿವಾರಿಸುವುದು ವೈದ್ಯರ ಕರ್ತವ್ಯವಾಗಿತ್ತು. ಅವರಿಗೆ ಎಲ್ಲಾ ಸೌಕರ್ಯ ರಾಜರ ಆಸ್ಥಾನದಿಂದಲೇ ಸಿಗುತ್ತಿತ್ತು. ಆಗ ವೈದ್ಯರು ವಸ್ತುಶಃ ದೇವರಂತಿದ್ದರು, ಕ್ರಮೇಣ ರಾಜರ ಕಾಲ ಹೋಗಿ, ಸರಕಾರಿ ವೈದ್ಯರ ಕಾಲ ಬಂತು, ಅವರು ಸರಕಾರದಿಂದ ಎಲ್ಲಾ ಸವಲತ್ತನ್ನು ಪಡೆದು ಸೇವೆಯನ್ನು ಅಳೆದು ಜನರಿಗೆ ಬೇಕಾದಂತೆ ಕೊಡಬೇಕಾಗುತ್ತದೆ, ಅದು ಕಡ್ಡಾಯ ಹಾಗೂ ಅನಿವಾರ್ಯ ಕೂಡ ಈ ಮೇಲಿನ ಎರಡೂ ಕಾಲಘಟ್ಟದಲ್ಲಿ ವೈದ್ಯರು ಹಾಗೂ ರೋಗಿಗಳ ಸಂಬಂಧ ಹಳಸಿರಲಿಲ್ಲ, ಏಕೆಂದರೆ ರೋಗಿಗಳು ಹಣ ಖರ್ಚು ಮಾಡದೆ, ಗುಣಮುಖರಾಗುತ್ತಿದ್ದರು, ವೈದ್ಯರುಗಳ ರಾಜರು ಹಾಗೂ ಸರಕಾರಗಳು ಬೇಕು ಬೇಡಗಳನ್ನು ಪೂರೈಸುತ್ತಿದ್ದರು. ಹಾಗಾಗಿ ಎಲ್ಲಿಯೂ ಯಾರೂ ವೈದ್ಯರುಗಳನ್ನು ದೂರುವ, ದಾಳಿ ಮಾಡುವ, ತಪ್ಪ ಗ್ರಹಿಕೆಯಿಂದ ನೋಡುವ, ಹಲ್ಲೆ ನಡೆಸುವಂತಹ ಕೆಳಮಟ್ಟಕ್ಕೆ ಹೋಗಿರಲಿಲ್ಲ. ಆದರೆ ಜನಸಂಖ್ಯೆ ಹೆಚ್ಚಿದಂತೆ, ಸರಕಾರಕ್ಕೆ ಸಾವಿರಗಟ್ಟಲೆ ರೋಗಿಗಳನ್ನು, ಸಾಂಕ್ರಾಮಿಕ ರೋಗಗಳನ್ನು ಹೆಚ್ಚುತ್ತಿರುವ ವಾಹನ ಅಪಘಾತಗಳನ್ನು ತನ್ನಲ್ಲಿರುವ ಬೆರಳೆಣಿಕೆಯಷ್ಟು ವೈದ್ಯರುಗಳಿಂದ ನಿಭಾಯಿಸಲು ಕಷ್ಟವಾಯಿತು, ಖಾಸಗಿ ಆಸ್ಪತ್ರೆಗಳು, ಖಾಸಗಿ ವೈದ್ಯರುಗಳು, ಖಾಸಗಿ ವೈದ್ಯಕೀಯ ಕಾಲೇಜುಗಳು ಬಂದವು. ಹಾಗೇ ಹಣ ಕೊಟ್ಟಾಗ ಸೇವೆಗಳು ಸರಕಾರಕ್ಕಿಂತ ಉತ್ತಮ ರೀತಿ ಎಲ್ಲಾ ಸಮಯಗಳಲ್ಲಿ ಸಿಕ್ಕಾಗ ಜನರು ಖಾಸಗಿ ವೈದ್ಯರತ್ತ ಮುಗಿಬಿದ್ದರು, ನಿಗದಿತ ಸಮಯಕ್ಕೆ ಮಾತ್ರ ಸಿಗುವ ಸರಕಾರಿ ವೈದ್ಯರುಗಳಿಗಿಂತ ಹಣ ಕೊಟ್ಟು, ಖಾಸಗಿ ವೈದ್ಯರನ್ನು ಯಾವಾಗಲೂ ಭೇಟಿಯಾಗಬಹುದಾದ ಜನ ಅಲ್ಲಿ ಸುಖ ಕಂಡರು.
ಗಂಡಾಗುಂಡಿಯನ್ನಾದರೂ ಮಾಡಿ ಗಡಿಗೆ ತುಪ್ಪ ಕುಡಿಯಬೇಕೆಂಬ ಗಾದೆಯಂತೆ ಹೆಚ್ಚಿನ ಎಲ್ಲಾ ರೋಗಿಗಳು ಖಾಸಗಿಯುತ್ತ ಒಗ್ಗಿಕೊಂಡರು. ಹೀಗೆ ಒತ್ತಡಕ್ಕೆ, ವಿಪರೀತ ಆಯಾಸಕ್ಕೆ ಕೌಟುಂಬಿಕ ಜೀವನವನ್ನು ನಿಭಾಯಿಸುವಷ್ಟು ಸಮಯವಿಲ್ಲದೆ, ಕೆಲಸ ಮಾಡುವ ವೈದ್ಯರುಗಳಿಂದ ಮಾನವ ಸಹಜವಾಗಿ ತಪ್ಪುಗಳು, ಕಠಿಣ ಮಾತುಗಳು ಬರತೊಡಗಿದವು, ಹಣ ಕೊಟ್ಟು ಸೇವೆ ಪಡೆದುಕೊಳ್ಳುವ ರೋಗಿಗಳು ವೈದ್ಯರನ್ನ ವ್ಯಾಪಾರಿ ಕಣ್ಣಿನಿಂದ ಕಾಣ ತೊಡಗಿದರು, ವೈದ್ಯಕೀಯ ಅಧ್ಯಯನಕ್ಕೆ ಕೋಟಿಗಟ್ಟಲು ಖರ್ಚು ಮಾಡಿದ ವೈದ್ಯರುಗಳು, ಬ್ಯಾಂಕ್ ಸಾಲ, ಬಡ್ಡಿಯ ನಿಭಾವಣೆಗಾಗಿ ವೃತ್ತಿಯನ್ನು ಅನಿವಾರ್ಯವಾಗಿ ವ್ಯಾಪಾರೀಕರಣ ಮಾಡಲೇಬೇಕಾಯ್ತು, ಏಕೆಂದರೆ ಅವರಿಗೆ ರಾಜರಿಂದ ಸವಲತ್ತು ಸಿಗುತ್ತಿಲ್ಲ! ಅವರು ಸರಕಾರಿ ವೈದ್ಯರುಗಳಲ್ಲವೇ ಅಲ್ಲ! ಆದರೆ ಇಂದಿಗೂ ಸಹ ವೈದ್ಯರು ಹಾಗೂ ರೋಗಿಗಳ ಎರಡೂ ವರ್ಗದಲ್ಲಿ ಮೊದಲಿನಂತೆ ಬಾಂಧವ ಇಟ್ಟುಕೊಂಡು ಬಂದಿರುವ, ಬರುತ್ತಿರುವವರು ಶೇಕಡಾ 80%ರಷ್ಟಿದ್ದರೆ, ಶೇಕಡಾ 20%ರ ವೈದ್ಯರು ಹಾಗೂ ರೋಗಿಗಳು ಈ ಬಾಂಧವ್ಯವನ್ನು ಮುರಿದುಕೊಂಡು, ಗ್ರಾಹಕರ ಕಾನೂನಿನ ವ್ಯಾಪ್ತಿಯಲ್ಲಿ, ಚಿಂತಿಸುತ್ತಾ, ಕೋರ್ಟು ಕಟ್ಟಲೆ, ವ್ಯಾಜ್ಯಗಳ ಮೊರೆ ಹೋದರು, ಇನ್ನು ಕೆಲವರು ಆಸ್ಪತ್ರೆಗಳಲ್ಲಿ ಸಾವು ನೋವು ಆದಾಗ ವೈದ್ಯರ ಮೇಲೆ ಹಲ್ಲೆ ನಡೆಸುವ, ಆಸ್ಪತ್ರೆಯ ಉಪಕರಣಗಳನ್ನು ಹಾಳು ಮಾಡುವ, ಬಿಲ್ ಕೊಡದೆ ರೋಗಿಗಳನ್ನು ಹಾಗೂ ಹಣವನ್ನು ಬೆದರಿಕೆಯಿಂದ ತೆಗೆದುಕೊಂಡು ಹೋಗುವ ಘಟನೆಗಳು ಸರ್ವೇ ಸಾಮಾನ್ಯವಾದವು. ಈ ಮಧ್ಯೆ ಈ ರೀತಿಯ ಮಾನಸಿಕ ಒತ್ತಡ, ಬೆದರಿಕೆ, ಹಲ್ಲೆಗಳಿಂದ ವೈದ್ಯರನ್ನು ಮರು ಮಾಡಲು ಕೇಂದ್ರ ಸರಕಾರ ವೈದ್ಯರ ಮೇಲೆ ದಾಳಿ ಮಾಡುವ, ಆಸ್ಪತ್ರೆಯ ಮೇಲೆ ದಾಳಿ ಮಾಡುವವರಿಗೆ ಬೇಲ್ ಇಬ್ಬದ ಮೂರು ವರ್ಷ ಕಾರಾಗೃಹ ಐವತ್ತು ಸಾವಿರದಷ್ಟು ದಂಡ ಹಾಗೂ ಆಸ್ಪತ್ರೆಗೆ ಆದ ನಷ್ಟದ ಎರಡರಷ್ಟು ವಸೂಲಿ ಮಾಡುವ ಕಟ್ಟುನಿಟ್ಟಿನ ಕಾನೂನನ್ನು ತಂದಿತು. ಇದು ಹೆಚ್ಚಿನವರಿಗೆ ತಿಳಿದಿಲ್ಲ.
ವೈದ್ಯ ರೋಗಿಗಳ ಸಂಬಂಧ ಹಳಸದಿರಲಿ
ವೈದ್ಯರು ಮತ್ತು ರೋಗಿಗಳ ಮಧ್ಯೆ ಇರುವುದು ಶ್ರೇಷ್ಠ ಸಂಬಂಧ, ಆದರೆ ಇಂದು ಅದನ್ನೇ ಸಂಶಯದ ದೃಷ್ಟಿಯಿಂದ ನೋಡುವಂತಾಗಿದೆ. ಅತೀ ಪುರಾತನವಾದ ಶ್ರೇಷ್ಠ ಸಂಬಂಧವಾದ ವೈದ್ಯ ರೋಗಿಗಳ ಸಂಬಂಧ ಹಳಸದಿರಲಿ, ಒಬ್ಬರನ್ನು ಒಬ್ಬರು ಸಂಶಯದಿಂದ ನೋಡುವುದು ನಿಲ್ಲಲಿ, ಎರಡೂ ಕಡೆಯಿಂದ ಗೌರವಿಸುವ, ಪ್ರೀತಿಸುವ, ಸಂರಕ್ಷಿಸುವ ಹಾಗೂ ಈ ನೆಲದ ಕಾನೂನನ್ನು ಗೌರವಿಸುವ ಕಾರ್ಯ ನಡೆಯಲಿ. ಶ್ರೇಷ್ಠ ವೃತ್ತಿಗಳಲ್ಲಿ ಒಂದಾದ ವೈದ್ಯಕೀಯ ವೃತ್ತಿಯನ್ನು ಮೊದಲಿನಷ್ಟೇ ಪ್ರೀತಿಯಿಂದ ನೋಡುವ ಭಾಗ್ಯ ನಮ್ಮ ನಿಮ್ಮದಾಗಲಿ ಎಂಬುದೇ ಭಾರತೀಯ ವೈದ್ಯಕೀಯ ಸಂಘದ ಮೂಲ ಧೈಯ. ಒಟ್ಟಾರೆ ಆಧುನಿಕ ವೈದ್ಯ ಪದ್ಧತಿ ಅಂದಿನಿಂದ ಇಂದಿನವರೆಗೆ ಬೆಳೆದು ಬಂದ ಬಗೆ ನೋಡುವಾಗ ವೈದ್ಯಕೀಯ ಶಿಕ್ಷಣ, ವೈದ್ಯಕೀಯ ಸೇವೆ ಹಾಗೂ ವೈದ್ಯರು ಆನಿವಾರ್ಯವಾಗಿ ಸಿತಂತರ ಕಾಲಘಟ್ಟದಲ್ಲಿ ಬಂದು ನಿಂತಿದ್ದಾರೆ ಅಂತ ಹೇಳಬಹುದು. ಅಗಾಧ ಜನ ಸಂಖ್ಯೆ ಇರುವ ಭಾರತಕ್ಕೆ ಅತೀ ಅಗತ್ಯವಾಗಿದ್ದ ಕುಟುಂಬ ವೈದ್ಯ ಪದ್ಧತಿಯನ್ನು ಅವಸಾನದ ಹಂತಕ್ಕೆ ತಂದ ಕೀರ್ತಿ ಸರಕಾರಗಳಿಗೆ ಶಿಕ್ಷಣ ಸಂಸ್ಥೆಗಳಿಗೆ ತಜ್ಞ ವೈದ್ಯರಿಗೆ, ಹೆತ್ತವರಿಗೆ ನಮಗೆ, ನಿಮಗೆ ಎಲ್ಲರಿಗೂ ಸಲ್ಲುತ್ತದೆ, ವೈದ್ಯರ ಮೇಲಿನ ದಾಳಿ, ದೌರ್ಜನ್ಯಕೇಸ್ ಕೋರ್ಟ್ ಕಟ್ಟಲೆ ಗಳಿಂದಾಗಿ ಪರಿಸ್ಥಿತಿ ಎಷ್ಟು ಬಿಗಡಾಯಿಸಿದೆ ಅಂದ್ರೆ ವೈದ್ಯರ ಮಕ್ಕಳು ಹಾಗೂ ಕುಟುಂಬದವರು ವೈದ್ಯಕೀಯ ವ್ಯಕ್ತಿ ಬೇಡ ಅಂತ ಮಗು ಮುರಿಯುವಂತಾಗಿದೆ ಬಡ ಮಧ್ಯಮ ವರ್ಗದವರಿಗೆ ವೈದ್ಯಕೀಯ ಶಿಕ್ಷಣ ಗಗನ ಕುಸುಮವಾಗಿದೆ.
ಇದನ್ನೂ ಓದಿ: National Doctor’s Day 2025: ಕೇವಲ ಒಂದೇ ಒಂದು ರೂಪಾಯಿಗೆ ಬಡ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯ
ಸಂಪೂರ್ಣ ಆರೋಗ್ಯ ಹೇಗಿರಬೇಕು?
ಅಂದು ಆಧುನಿಕ ವೈದ್ಯ ಪದ್ಧತಿ ಆರಂಭವಾಗುವಾಗ ಹೆಣಗಳನ್ನು ಕೊಯ್ಯುವುದು ನಿಷಿದ್ಧವಾಗಿತ್ತು ಮತ್ತು ಹಾಗೆ ಮಾಡಲು ಹೋಗಿ ಸಿಕ್ಕಿಬಿದ್ದ ವೈದ್ಯರುಗಳನ್ನ ಕೊಲ್ಲಲಾಗಿತ್ತು. ಮಾನವನ ಅಂಗರಚನಾ ಶಾಸ್ತ್ರವನ್ನು (Anatomy) ಮಾನವನ ಹೆಣಗಳನ್ನು ಕೊಟ್ಟು ಅಭ್ಯಾಸ ಮಾಡಲು ಹೋಗಿ ಅನೇಕ ವೈದ್ಯರು ಸಿಕ್ಕಿಬಿದ್ದು ಗಲಿಗೇರಿಸಲಟ್ಟಿದ್ದಾರೆ. ಈಗಲೂ ಸಹ ಹೊಸ ಹೊಸ ರೋಗಗಳು ಬಂದರೆ ಅದಕ್ಕೆ ಸೂಕ್ತ ಚಿಕಿತ್ಸೆ ಕ೦ಡು ಹಿಡಿಯುವ ವರೆಗೂ ರೋಗಿ ಮತ್ತು ವೈದ್ಯ ಇಬ್ಬರೂ ಬಲಿದಾನ ಆಗುತ್ತಲೇ ಇದ್ದಾರೆ. ಇತ್ತೀಚಿನ ಕರೋನ ಮಹಾಮಾರಿ ಚಿಕಿತ್ಸೆ ಯಲ್ಲೂ ರೋಗಿಗಳನ್ನ ಉಳಿಸುವ ತರಾತುರಿಯಲ್ಲಿ ಪ್ರಾಣ ಕಳೆದು ಕೊಂಡ ನೂರಾರು ವೈದ್ಯರು, ನರ್ಸಿಂಗ್ ಸಿಬ್ಬಂದಿಗಳಿದ್ದಾರೆ. ಆರೋಗ್ಯ ಅಂದ್ರೆ ಬರೀ ಕಾಯಿಲೆ ಇಲ್ಲದೇ ಇರುವವರು ಅಂತ ಅಲ್ಲವೇ ಅಲ್ಲಾ, ಜೊತೆಗೆ ಮಾನಸಿಕ,ದೈಹಿಕ, ಸಾಮಾಜಿಕ, ಆರ್ಥಿಕ, ನಂಬುಗೆಯ ಆಚರಣೆಗಳಗಳಲ್ಲೂ ಸಬಲರಾಗಿದ್ದರೆ ಮಾತ್ರ ಅದು ಸಂಪೂರ್ಣ ಆರೋಗ್ಯ ಅಂತ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಜುಲೈ 1 ರಂದೇ ಹುಟ್ಟಿ ಅಂದೇ ಮರಣ ವನ್ನ ಅಪ್ಪಿದ ಡಾ ಬಿ ಸಿ ರೊಯ್, ಅವರ ನೆನಪಲ್ಲಿ ನಡೆಯುವ ವೈದ್ಯರ ದಿನಾಚರಣೆ ಜುಲೈ ಒಂದು ತಿಂಗಳಿಗೆ ಸೀಮಿತವಾಗಿರಬಾರದು, ಕಾಯಿಲೆ ಇರುವ ವರೆಗೆ, ರೋಗಿ ಗುಣಮುಖ ಆಗುವ ವರೆಗೆ ಪ್ರತೀ ಕ್ಷಣ ಹಾಗೂ ಪ್ರತೀ ದಿನ ವೈದ್ಯರ ದಿನ ಎಂಬುದನ್ನ ಮರೆಯುವಂತಿಲ್ಲ.
-ಮಂಗಳೂರು ಸರಕಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಎಂ ಅಣ್ಣಯ್ಯ ಕುಲಾಲ್ ಉಳ್ತುರು
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








