National Legal Services Day 2024: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಪಾತ್ರವೇನು? ಇಲ್ಲಿದೆ ಮಾಹಿತಿ
ಪ್ರತಿ ವರ್ಷ, ಭಾರತದಲ್ಲಿ "ಕಾನೂನು ಸೇವೆಗಳ ದಿನ" ನವೆಂಬರ್ 9 ರಂದು ಆಚರಿಸಲಾಗುತ್ತದೆ. ದೇಶಾದ್ಯಂತ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಹೊರೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರೊಂದಿಗೆ ಕಾನೂನಿನ ಬಗ್ಗೆ ಜ್ಞಾನದ ಕೊರತೆಯಿಂದಾಗಿ ಅನೇಕರಿಗೆ ನ್ಯಾಯ ಸಿಗುತ್ತಿಲ್ಲ. ಈ ಎರಡೂ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ರಾಷ್ಟ್ರೀಯ ಕಾನೂನು ಸೇವೆಗಳ ದಿನವನ್ನು ಆಚರಿಸಲಾಗುತ್ತಿದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತ ದೇಶದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಮೂರು ಅಂಗಗಳು ಇವೆ. ಇದು ದೇಶದ ಜನಜೀವನ, ವ್ಯವಹಾರ, ರಾಜಕೀಯ, ನ್ಯಾಯಾಪಾಲನೆಯೂ ಸುಗಮವಾಗಿ ಸಾಗುವಂತೆ ನೋಡಿಕೊಳ್ಳುತ್ತವೆ. ಇದರಲ್ಲಿ ನ್ಯಾಯಾಂಗವು ಜನರಿಗೆ ನ್ಯಾಯ ನೀಡುವ ಚಟುವಟಿಕೆಯಲ್ಲಿ ತೊಡಗಿಗೊಂಡಿದೆ. ಆದರೆ ನ್ಯಾಯಾಂಗದ ಸೇವೆ ಎಲ್ಲಾ ಜನರಿಗೂ ಸುಲಭವಾಗಿ ಮತ್ತು ಬೇಕಾದ ಸಂದರ್ಭದಲ್ಲಿ ಸಿಗುತ್ತಿಲ್ಲ. ಈ ವಿಶೇಷ ದಿನದಂದು ದೇಶಾದ್ಯಂತ ಅಗತ್ಯವಿರುವವರಿಗೆ ಯಾವುದೇ ಶುಲ್ಕವಿಲ್ಲದೆ ಕಾನೂನು ಸೇವೆಗಳನ್ನು ಒದಗಿಸಲಾಗುತ್ತದೆ. ಅದರೊಂದಿಗೆ ಮುಖ್ಯವಾಗಿ ದುರ್ಬಲ ವರ್ಗದ ಜನರು, ಮಹಿಳೆಯರು, ಅಂಗವಿಕಲರು, ಪರಿಶಿಷ್ಟ ಪಂಗಡಗಳು, ಪರಿಶಿಷ್ಟ ಜಾತಿಗಳು, ನೈಸರ್ಗಿಕ ವಿಕೋಪ ಸಂತ್ರಸ್ತರು ಮತ್ತು ಮಕ್ಕಳಿಗೆ ಕಾನೂನು ಸಲಹೆ ನೀಡಲಾಗುತ್ತದೆ.
ರಾಷ್ಟ್ರೀಯ ಕಾನೂನು ಸೇವೆಗಳ ದಿನದ ಇತಿಹಾಸ:
ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯಿದೆ 1987 ನ್ನು ಅಕ್ಟೋಬರ್ 1987 ರಂದು ಕೇಂದ್ರ ಸರ್ಕಾರವು ಭಾರತೀಯ ಸಂವಿಧಾನದ 39 ಎ ವಿಧಿಯ ಅಡಿಯಲ್ಲಿ ಮತ್ತು ಅದರ ಸಮಿತಿಯ ಶಿಫಾರಸುಗಳ ಮೇಲೆ ಜಾರಿಗೊಳಿಸಲಾಯಿತು. ಈ ಕಾಯಿದೆಯನ್ನು 1995 ನವೆಂಬರ್ 9 ರಂದು ಜಾರಿಗೆ ತರಲಾಯಿತು. ಈ ಕಾಯಿದೆ ಜಾರಿಗೆ ಬಂದ ದಿನದ ಸ್ಮರಣಾರ್ಥವಾಗಿ ರಾಷ್ಟ್ರೀಯ ಕಾನೂನು ಸೇವಾ ದಿನವನ್ನು ಆಚರಿಸುವುದಾಗಿ 1995 ರಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯವು ಘೋಷಿಸಿತು. ಅಂದಿನಿಂದ ಪ್ರತಿ ವರ್ಷ ನವೆಂಬರ್ 9 ರಂದು ರಾಷ್ಟ್ರೀಯ ಕಾನೂನು ಸೇವೆಗಳ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಪಾತ್ರ:
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವನ್ನು ನ್ಯಾಯಮೂರ್ತಿ ಆರ್.ಎನ್ ಮಿಶ್ರಾ ಡಿಸೆಂಬರ್ 05, 1995 ರಂದು ಕಾನೂನು ಸೇವೆಗಳ ಪ್ರಾಧಿಕಾರ 1987 ರ ಅಡಿಯಲ್ಲಿ ಜಾರಿಗೆ ತಂದರು. ಈ ಪ್ರಾಧಿಕಾರವು ಅಗತ್ಯವಿರುವವರಿಗೆ ಉಚಿತ ಕಾನೂನು ನೆರವು, ಮಾರ್ಗದರ್ಶನವನ್ನು ಒದಗಿಸುತ್ತದೆ. ಅದಲ್ಲದೇ, ಮಧ್ಯಸ್ಥಿಕೆ ಹಾಗೂ ಸೌಹಾರ್ದಯುತವಾದ ಮಾತುಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸುವಂತಹ ಕೆಲಸವನ್ನು ಮಾಡುತ್ತದೆ.
ಇದನ್ನು ಓದಿ: ಏನನ್ನಾದರೂ ತಿಂದ ತಕ್ಷಣ ಹೊಟ್ಟೆ ತುಂಬಿದಂತಾಗುತ್ತದೆಯೇ? ಈ ಚಿಹ್ನೆಯ ಬಗ್ಗೆ ಎಂದಿಗೂ ನಿರ್ಲಕ್ಷ್ಯ ಬೇಡ!
ರಾಷ್ಟ್ರೀಯ ಕಾನೂನು ಸೇವೆಗಳ ದಿನದ ಮಹತ್ವ:
ವ್ಯಕ್ತಿ ಬಡವನಾಗಿರಲಿ, ವಿಕಲ ಚೇತನರಾಗಿರಲಿ, ಸಮಾಜದ ದುರ್ಬಲ ವರ್ಗದವನಾಗಿರಲಿ ಎಲ್ಲರಿಗೂ ನ್ಯಾಯ ಪಡೆಯುವ ಸಮಾನ ಅವಕಾಶವಿದೆ. ಹೀಗಾಗಿ ಈ ವಿಶೇಷ ದಿನದಂದು ಅವರಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳಲು ಅವರಿಗೆ ಉಚಿತ ಕಾನೂನು ನೆರವು ಮತ್ತು ಉಚಿತ ಸಮಲೋಚನೆಯನ್ನು ನೀಡಲಾಗುತ್ತದೆ. ಜನರಿಗೆ ನ್ಯಾಯ ಪಡೆಯುವ ಹಕ್ಕಿನ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಶಿಕ್ಷಣ ಸಂಸ್ಥೆಗಳು ಮತ್ತು ಇತರ ಸ್ಥಳಗಳಲ್ಲಿ ಪ್ರಮುಖ ಕಾನೂನುಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಮಹಿಳೆಯರಿಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ. ಈ ಹಿನ್ನಲೆಯಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ