
ಹೈನುಗಾರಿಕೆ (Dairy farming) ಗ್ರಾಮೀಣ ಪ್ರದೇಶದ ಆರ್ಥಿಕತೆಯ ಬೆನ್ನೆಲುಬು ಅಂತಾನೇ ಹೇಳಬಹುದು. ಇದು ಲಕ್ಷಾಂತರ ರೈತ ಕುಟುಂಬಗಳಿಗೆ ಆದಾಯ ನೀಡುವ ಪ್ರಮುಖ ಜೀವನಾಧಾರವಾಗಿದೆ. ಅದೆಷ್ಟೋ ಜನರು ಹೈನುಗಾರಿಕೆಯಿಂದಲೇ ಉತ್ತಮ ಜೀವನವನ್ನು ನಡೆಸುತ್ತಿದ್ದಾರೆ. ಇದಕ್ಕೆಲ್ಲಾ ಮೂಲ ಕಾರಣಕರ್ತರು ಶ್ವೇತಕ್ರಾಂತಿಯ ಹರಿಕಾರ ಡಾ. ವರ್ಗೀಸ್ ಕುರಿಯನ್ ಅವರು. ಹಾಲು ಉತ್ಪಾದನೆಯಲ್ಲಿ ದೇಶವನ್ನು ಸ್ವಾವಲಂಬಿಯಾಗಿಸಲು, ರೈತರ ಜೀವನಮಟ್ಟವನ್ನು ಸುಧಾರಿಸಲು ಶ್ರಮಿಸಿದ ಇವರು ಭಾರತವನ್ನು ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶವನ್ನಾಗಿ ಮಾಡಿದರು. ಇವರ ಜನ್ಮಜಯಂತಿಯ ಅಂಗವಾಗಿ ಪ್ರತಿವರ್ಷ ನವೆಂಬರ್ 26 ರಂದು ರಾಷ್ಟ್ರೀಯ ಕ್ಷೀರ ದಿನವನ್ನು ಆಚರಿಸಲಾಗುತ್ತದೆ. ಈ ಸುದಿನದಂದು ಹೈನುಗಾರಿಕೆಯನ್ನು ಪ್ರಾರಂಭಿಸುವುದು ಹೇಗೆ, ಹೈನುಗಾರಿಕೆಯಿಂದ ಉತ್ತಮ ಲಾಭವನ್ನು ಪಡೆಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಹಸು ಸಾಕಾಣಿಕೆ, ಸಮತೋಲಿತ ಆಹಾರ, ಸಕಾಲಿಕ ಲಸಿಕೆಗಳು ಮತ್ತು ಸರಿಯಾದ ಆರೈಕೆಯ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಹಾಲು ಉತ್ಪಾದನೆಯನ್ನು ಹೆಚ್ಚಿಸಬಹುದು. ಇದಲ್ಲದೆ, ಹಾಲಿನೊಂದಿಗೆ ಹಸುವಿನ ಸಗಣಿಯಿಂದ ಸಾವಯವ ಗೊಬ್ಬರವನ್ನು ಉತ್ಪಾದಿಸುವ ಮೂಲಕ ಹೈನುಗಾರಿಕೆಯಲ್ಲಿ ಹೆಚ್ಚುವರಿ ಆದಾಯವನ್ನು ಗಳಿಸಬಹುದು.
ಹೈನುಗಾರಿಯನ್ನು ಆರಂಭಿಸುವಾಗ ಎಮ್ಮೆ ಮತ್ತು ಹಸುಗಳ ತಳಿ ಮತ್ತು ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಮರೆಯದಿರಿ. ಉತ್ತಮ ತಳಿಯ ಹಸು, ಎಮ್ಮೆಗಳನ್ನೇ ಆಯ್ಕೆ ಮಾಡಿ. ಅನಾರೋಗ್ಯ ಅಥವಾ ಸೋಂಕಿತ ಪ್ರಾಣಿಗಳನ್ನು ಸಾಕುವುದನ್ನು ತಪ್ಪಿಸಿ. ಹಸು ಸಾಕಲು ಬಯಸುವವರು ಗಿರ್ ಅಥವಾ ಸಹಿವಾಲ್ ತಳಿಯನ್ನು ಆರಿಸಿಕೊಳ್ಳಬೇಕು. ಎಮ್ಮೆ ಸಾಕಲು ಬಯಸುವವರು ಮುರ್ರಾ, ಸುರತಿ, ಮೆಹ್ಸಾನಾ ಅಥವಾ ಜಾಫರಾಬಾದಿಯಂತಹ ತಳಿಗಳನ್ನು ಆಯ್ಕೆ ಮಾಡಬಹುದು. ಅವುಗಳನ್ನು ಖರೀದಿಸುವಾಗ, ಅವು ಗಾಯಗಳು ಅಥವಾ ಸೋಂಕಿನ ಚಿಹ್ನೆಗಳಿಂದ ಮುಕ್ತವಾಗಿವೆಯೇ ಎಂದು ಖಚಿತಪಡಿಸಿಕೊಳ್ಳಿ.
ನೀವು ಸಾಕುವ ಹಸು, ಎಮ್ಮೆಗಳಿಗೆ ಸ್ವಚ್ಛ, ವಿಶಾಲವಾದ, ಗಾಳಿ ಬೀಸುವ ಮತ್ತು ಚೆನ್ನಾಗಿ ಬೆಳಕು ಬೀಳುವ ಶೆಡ್ ನಿರ್ಮಿಸಿ. ಅವುಗಳಿಗೆ ಶುದ್ಧ ನೀರು ಲಭ್ಯವುರುವಂತೆ ನೋಡಿಕೊಳ್ಳಿ. ಮುಖ್ಯವಾಗಿ ಅನಾರೋಗ್ಯ ಅಥವಾ ಸೋಂಕನ್ನು ತಡೆಗಟ್ಟಲು ಶೆಡ್ ಆವರಣವನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿರಬೇಕು.
ಕೇವಲ ₹3 ಲಕ್ಷದಿಂದ ಹೈನುಗಾರಿಕೆಯನ್ನು ಪ್ರಾರಂಭಿಸಬಹುದು. ₹3 ಲಕ್ಷದಲ್ಲಿ ಧಾರಾಳವಾಗಿ ಎರಡು ಹಸು ಅಥವಾ ಎಮ್ಮೆ ಖರೀದಿಸಬಹುದು ಮತ್ತು ಉತ್ತಮ ಶೆಡ್ ನಿರ್ಮಾಣ ಮಾಡಬಹುದು.ಕ್ರಮೇಣ, ನೀವು ಲಾಭ ಹೆಚ್ಚಿಸಲು ಹೆಚ್ಚು ಹಸುಗಳನ್ನು ಸಾಕಬಹುದು. ಅಲ್ಲದೆ ಹೈನುಗಾರಿಕೆಗೆ ಸರ್ಕಾರದ ವತಿಯಿಂದ ಸಬ್ಸಿಡಿ, ಸಹಾಯಧನಗಳು ಕೂಡ ದೊರೆಯುತ್ತವೆ.
ಉತ್ತಮ ತಳಿಯ ಹಸುಗಳು ಮತ್ತು ಎಮ್ಮೆಗಳು ಪ್ರತಿದಿನ 10 ಲೀಟರ್ ಹಾಲು ಉತ್ಪಾದಿಸುತ್ತವೆ. ಮೂರು ಹಸುಗಳು ಏಕಕಾಲದಲ್ಲಿ ಹಾಲು ನೀಡಿದರೆ, ನೀವು ಪ್ರತಿದಿನ 30-35 ಲೀಟರ್ ಹಾಲು ಮಾರಾಟ ಮಾಡಬಹುದು. ಇದರಿಂದ ದಿನಕ್ಕೆ ಸರಾಸರಿ 2,000 ರೂ. ಗಳಿಸಬಹುದು. ಮತ್ತು ಮಾಸಿಕ 60,000 ರೂ. ಆದಾಯ ಗಳಿಸಬಹುದು.
ಹೈನುಗಾರಿಕೆಯ ಆದಾಯವನ್ನು ಹೆಚ್ಚಿಸಿಕೊಳ್ಳಲು ಬಯಸಿದರೆ, ಕೇವಲ ಹಾಲು ಮಾರಾಟ ಮಾಡಿದರೆ ಸಾಲದು. ಹಾಲಿನಿಂದ ಸಂಸ್ಕರಿಸಿ ತುಪ್ಪ, ಮಜ್ಜಿಗೆ, ಬೆಣ್ಣೆ ಮತ್ತು ಖೋಯಾ ಮುಂತಾದ ಉತ್ಪನ್ನಗಳನ್ನು ಮಾರಾಟ ಮಾಡಿ. ಇತ್ತೀಚಿನ ದಿನಗಳಲ್ಲಿ ಡೈರಿ ಉತ್ಪನ್ನಗಳು ಹೆಚ್ಚಾಗಿ ಕಲಬೆರಕೆಯಾಗುತ್ತಿವೆ. ಹೀಗಿರುವಾಗ ನೀವು ಶುದ್ಧ, ಸಂಸ್ಕರಿಸಿದ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಉತ್ತಮ ಲಾಭವನ್ನು ಪಡೆಯಿರಿ. ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ನೀವು ಸಾಮಾಜಿಕ ಜಾಲತಾಣವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬಹುದು.
ಅಲ್ಲದೆ ಹಸುವಿನ ಸಗಣಿಯಿಂದ ಸಾವಯವ ಗೊಬ್ಬರವನ್ನು ತಯಾರಿಸಬಹುದು. ಇದನ್ನು ಮಾರುಕಟ್ಟೆಯಲ್ಲೂ ಮಾರಾಟ ಮಾಡಬಹುದು. ಅನೇಕ ಪ್ರದೇಶಗಳಲ್ಲಿ ಹಸುವಿನ ಸಗಣಿಗಳಿಗೆ ಉತ್ತಮ ಬೇಡಿಕೆಯಿದೆ. ನೀವು ಹಸುವಿನ ಗೊಬ್ಬರವನ್ನು ಮಾರಾಟ ಮಾಡುವ ಮೂಲಕವು ಉತ್ತಮ ಆದಾಯವನ್ನು ಗಳಿಸಬಹುದು.
ಇದನ್ನೂ ಓದಿ: ದಾಸವಾಳ ಹೂವಿನಿಂದ ತಯಾರಿಸಿದ ಈ ನ್ಯಾಚುರಲ್ ಶಾಂಪೂ ಕೂದಲಿನ ಹೊಳಪನ್ನು ಹೆಚ್ಚಿಸಲು ಸಹಕಾರಿ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:02 pm, Thu, 26 November 26