ಭಾರತದಂತಹ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಗೂ ಮತದಾನ ಮಾಡುವ ಮೂಲಭೂತ ಹಕ್ಕನ್ನು ನೀಡಲಾಗಿದೆ. ಹೀಗಾಗಿ ದೇಶದ ಪ್ರತಿಯೊಬ್ಬ ಪ್ರಜೆಯೂ ದೇಶವನ್ನು ಆಳಲು ಯೋಗ್ಯವಾದ ವ್ಯಕ್ತಿಯನ್ನು ಮತದಾನದ ಮೂಲಕ ಆರಿಸಬೇಕಾಗುತ್ತದೆ. ಮತದಾನದ ಸಮಯದಲ್ಲಿ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡುವುದರಿಂದ ದೇಶದ ಪ್ರಗತಿಯಾಗಲು ಸಾಧ್ಯ. ಚುನಾವಣಾ ಪ್ರಕ್ರಿಯೆಯಲ್ಲಿ ಹೊಸ ಮತದಾರರನ್ನು, ಯುವಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜನವರಿ 25 ರಂದು ಪ್ರತಿವರ್ಷ ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತದೆ.
ಭಾರತದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಪ್ರತೀವರ್ಷ ಜನವರಿ 25ರಂದು ಆಚರಿಸಲಾಗುತ್ತದೆ. 2011ರಲ್ಲಿ ಮೊದಲ ಬಾರಿಗೆ ದೇಶಾದ್ಯಂತ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಯಿತು. 1950ರಲ್ಲಿ ಸ್ಥಾಪನೆಯಾದ ಭಾರತದ ಚುನಾವಣಾ ಆಯೋಗದ ಸಂಸ್ಥಾಪನ ದಿನದ ಸವಿನೆನಪಿಗಾಗಿ ಈ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ.
ಹೊಸ ಮತದಾರರನ್ನು ಸೆಳೆಯುವ, ಉತ್ತೇಜಿಸುವುದು ಹಾಗೂ ಮತದಾರರ ಸಂಖ್ಯೆಯನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ದೇಶದ ಮತದಾರರಿಗೆ ಮೀಸಲಾಗಿರುವ ಈ ದಿನವನ್ನು ಮತದಾರರಲ್ಲಿ ಜಾಗೃತಿ ಮೂಡಿಸಲು ಮತ್ತು ಚುನಾವಣಾ ಪ್ರಕ್ರಿಯೆಯ ತಿಳುವಳಿಕೆ ನೀಡಲು ಆಚರಣೆ ಮಾಡಲಾಗುತ್ತದೆ. ರಾಷ್ಟ್ರೀಯ ಮತದಾರರ ದಿನದಂದು ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಯುವಜನತೆಯ ಪಾತ್ರ ಅಗಾಧವಾಗಿದೆ. ಹೀಗಾಗಿ ಈ ದಿನದಂದು ಹೊಸ ಮತದಾರರಿಗೆ ಮತದಾರರ ಗುರುತಿನ ಚೀಟಿಯನ್ನು ಹಸ್ತಾಂತರ ಮಾಡಲಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಇದನ್ನೂ ಓದಿ: ಜಗತ್ತಿಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಅಗತ್ಯ
ಚುನಾವಣಾ ಆಯೋಗವು ಒಬ್ಬ ವ್ಯಕ್ತಿಗೆ ವಾಸಿಸುವ ಸ್ಥಳದಲ್ಲಿ ಮತ ಚಲಾಯಿಸಲು ಅವಕಾಶ ನೀಡುತ್ತದೆ. ಆದರೆ ವ್ಯಕ್ತಿಯೂ ತನ್ನ ವಾಸಸ್ಥಳವನ್ನು ಬದಲಾಯಿಸಿದಾಗಲೆಲ್ಲ ಚುನಾವಣಾ ಆಯೋಗಕ್ಕೆ ತಿಳಿಸಬೇಕು. ಎರಡು ಅಥವಾ ಹೆಚ್ಚು ಬೇರೆ ಬೇರೆ ಸ್ಥಳಗಳಿಂದ ಮತ ಹಾಕಿದರೆ ಅದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ ಒಬ್ಬ ವ್ಯಕ್ತಿಯೂ 18 ವರ್ಷ ತುಂಬಿದಾಗ ಮತದಾರರಾಗಿ ನೋಂದಾಯಿಸಿಕೊಳ್ಳಬಹುದು. ಮತದಾನದ ಸಮಯದಲ್ಲಿ ಪ್ರಮುಖ ದಾಖಲೆಗಳಲ್ಲಿ ಒಂದಾಗಿರುವ ವೋಟರ್ ಐಡಿ, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್ ಯಾವುದಾದರೊಂದು ದಾಖಲೆಯನ್ನು ತೆಗೆದುಕೊಂಡು ಹೋಗುವುದು ಕಡ್ಡಾಯವಾಗಿದೆ. ಈ ಮೂಲಕ ಮತದಾರರು ಮತ ಹಾಕಿ ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ ದೇಶ ಪ್ರಗತಿಯಾಗಲು ಸಾಧ್ಯ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: