ಒಳ್ಳೆಯ ನಿದ್ರೆ ಬೇಕಂದ್ರೆ ರಾತ್ರಿ ಹೊತ್ತು ಈ ಆಹಾರಗಳನ್ನು ಸೇವನೆ ಮಾಡುವುದನ್ನು ನಿಲ್ಲಿಸಿ

ಉತ್ತಮ ಆರೋಗ್ಯಕ್ಕೆ ಉತ್ತಮ ನಿದ್ರೆ ಕೂಡ ಬಹಳಷ್ಟು ಮುಖ್ಯ. ಆದ್ರೆ ಇಂದಿನ ಬ್ಯುಸಿ ಜೀವನದಲ್ಲಿ ಅನೇಕರು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ನಿದ್ರಾಹೀನತೆ ದೈಹಿಕ ಮಾತ್ರವಲ್ಲ ಮಾನಸಿಕ ಆರೋಗ್ಯದ ಮೇಲೂ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಹೀಗಿರುವಾಗ ಉತ್ತಮ ನಿದ್ರೆ ಪಡೆಯಲು ರಾತ್ರಿ ಹೊತ್ತಿನಲ್ಲಿ ಈ ಕೆಲವು ಆಹಾರಗಳನ್ನು ಸೇವನೆ ಮಾಡುವುದನ್ನು ನಿಲ್ಲಿಸಿ.

ಒಳ್ಳೆಯ ನಿದ್ರೆ ಬೇಕಂದ್ರೆ ರಾತ್ರಿ  ಹೊತ್ತು ಈ ಆಹಾರಗಳನ್ನು ಸೇವನೆ ಮಾಡುವುದನ್ನು ನಿಲ್ಲಿಸಿ
ಸಾಂದರ್ಭಿಕ ಚಿತ್ರ
Image Credit source: Pinterest

Updated on: Apr 08, 2026 | 9:15 PM

ನಿಮ್ಮ ಕಾರ್ಯನಿರತ ಜೀವನಶೈಲಿಯು ನೀವು ಎಷ್ಟು ಚೆನ್ನಾಗಿ ನಿದ್ರಿಸುತ್ತೀರಿ ಎಂಬುದರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ನೀವು ಏನು ತಿನ್ನುತ್ತೀರಿ ಎಂಬುದು ನಿಮ್ಮ ನಿದ್ರೆ (sleep) ಮತ್ತು ಸಾಮಾನ್ಯ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ರಾತ್ರಿಯಲ್ಲಿ ನಿದ್ರಿಸುವುದರಲ್ಲಿ ತೊಂದರೆ ಅನುಭವಿಸುವುದರಿಂದ ಮರುದಿನ ಜಂಕ್ ಫುಡ್ ಮತ್ತು ಅನಾರೋಗ್ಯಕರ ತಿಂಡಿಗಳನ್ನು ತಿನ್ನುವ ಹಂಬಲ ಹೆಚ್ಚಾಗುತ್ತದೆ ಎಂದು ಹಲವಾರು ಅಧ್ಯಯನಗಳು ಸೂಚಿಸುತ್ತವೆ. ಆದ್ದರಿಂದ, ಮಲಗುವ ಮುನ್ನ ನಿಮ್ಮ ಆಹಾರವನ್ನು ಎಚ್ಚರಿಕೆಯಿಂದ ಆರಿಸಿ ಏಕೆಂದರೆ ಅದು ನಿಮ್ಮ ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಮಲಗುವ ಮುನ್ನ ಎಂದಿಗೂ ತಿನ್ನಬಾರದ ಕೆಲವು ಆಹಾರಗಳನ್ನು ಇಲ್ಲಿ ನಾವು ಪಟ್ಟಿ ಮಾಡುತ್ತಿದ್ದೇವೆ. ಈ ಲೇಖನದಲ್ಲಿ, ಮಲಗುವ ಮುನ್ನ ನೀವು ತಿನ್ನಬಹುದಾದ ಆಹಾರಗಳ ಬಗ್ಗೆಯೂ ನಾವು ಮಾತನಾಡುತ್ತಿದ್ದೇವೆ.

ಕೆಫೀನ್‌ ಪದಾರ್ಥಗಳು: ಹೆಚ್ಚು ಕೆಫೀನ್ ಸೇವಿಸುವುದರಿಂದ ನಿಮ್ಮ ಮೆದುಳು ಸಕ್ರಿಯವಾಗಿರುತ್ತದೆ ಮತ್ತು ಸರಿಯಾಗಿ ನಿದ್ರೆ ಮಾಡುವುದನ್ನು ತಡೆಯಬಹುದು. ನಿಮಗೆ ಪೂರ್ಣ, ಆಳವಾದ ನಿದ್ರೆ ಸಿಗುವುದಿಲ್ಲ. ಅದಕ್ಕಾಗಿಯೇ ನೀವು ಊಟದ ಸಮಯದಲ್ಲಿ ಕಾಫಿ, ಎನರ್ಜಿ ಡ್ರಿಂಕ್ಸ್‌ ಮತ್ತು ಕೆಫೀನ್‌ ಅಧಿಕವಾಗಿರುವ ಚೋಕೊಲೇಟ್‌ಗಳನ್ನು ಸೇವನೆ ಮಾಡಬಾರದು.

ನೀರಿನಾಂಶವಿರುವ ಆಹಾರಗಳು: ಹೆಚ್ಚಿನ ನೀರಿನ ಅಂಶ ಹೊಂದಿರುವ ಕಲ್ಲಂಗಡಿ, ಸೌತೆಕಾಯಿ, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದರೆ ರಾತ್ರಿ ಊಟದಲ್ಲಿ ಇವುಗಳನ್ನು ತಿನ್ನುವುದರಿಂದ ಹೊಟ್ಟೆ ಉಬ್ಬರ ಸಮಸ್ಯೆ ಉಂಟಾಗುತ್ತದೆ. ಅಲ್ಲದೆ ರಾತ್ರಿ ಪದೇ ಪದೇ ಮೂತ್ರ ವಿಸರ್ಜಿಸಬೇಕಾಗುತ್ತದೆ. ಇದು ನಿಮ್ಮ ನಿದ್ರೆಗೆ ಅಡ್ಡಿಪಡಿಸಬಹುದು.

ಮಸಾಲೆಯುಕ್ತ ಆಹಾರ: ರಾತ್ರಿಯಲ್ಲಿ ಮಸಾಲೆಯುಕ್ತ ಆಹಾರಗಳು ಅಥವಾ ಹುರಿದ ಆಹಾರವನ್ನು ಸೇವಿಸುವುದರಿಂದ ಹೊಟ್ಟೆ ಬಿಸಿಯಾಗಬಹುದು. ಇದು ಆಮ್ಲೀಯತೆ, ಎದೆಯುರಿ ಮತ್ತು ಎದೆಯಲ್ಲಿ ಭಾರವಾದ ಭಾವನೆಗೆ ಕಾರಣವಾಗಬಹುದು. ಇವೆಲ್ಲವೂ ದೇಹವು ವಿಶ್ರಾಂತಿ ಪಡೆಯಲು ಕಷ್ಟವಾಗುತ್ತದೆ ಮತ್ತು ನಿದ್ರೆಗೆ ಅಡ್ಡಿಪಡಿಸುತ್ತದೆ.

ಚಾಕೊಲೇಟ್: ಚಾಕೊಲೇಟ್ ರುಚಿಕರವಾಗಿರುತ್ತದೆ, ಆದರೆ ಮಲಗುವ ಮುನ್ನ ಇದು ಒಳ್ಳೆಯ ಆಯ್ಕೆಯಲ್ಲ. ಇದರಲ್ಲಿ ಕೆಫೀನ್ ಮತ್ತು ಸಕ್ಕರೆ ಎರಡೂ ಇರುವುದರಿಂದ ಇದು ಮೆದುಳನ್ನು ಸಕ್ರಿಯಗೊಳಿಸುತ್ತದೆ ಮತ್ತು ನಿದ್ರೆಯನ್ನು ತಡೆಯುತ್ತದೆ. ಡಾರ್ಕ್ ಚಾಕೊಲೇಟ್‌ನಲ್ಲಿ ಕೆಫೀನ್ ಇನ್ನೂ ಹೆಚ್ಚಾಗಿರುತ್ತದೆ.

ಸಕ್ಕರೆಯುಕ್ತ ಆಹಾರಗಳು: ರಾತ್ರಿಯಲ್ಲಿ ಸಕ್ಕರೆಯಂಶವಿರುವ ಕೇಕ್‌, ಪೇಸ್ಟ್ರೀ ಮತ್ತು ಸಿಹಿ ತಿಂಡಿಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ ಮತ್ತು ಇದು ನಿದ್ರೆಗೆ ಅಡ್ಡಿಪಡಿಸುತ್ತದೆ. ಅದಕ್ಕಾಗಿಯೇ ನೀವು ರಾತ್ರಿಯಲ್ಲಿ ಸಕ್ಕರೆಯಂಶವಿರುವ ಆಹಾರಗಳನ್ನು ಸೇವನೆ ಮಾಡಬಾರದು.

ಆಮ್ಲೀಯ ವಸ್ತುಗಳು: ನಿಂಬೆ, ಕಿತ್ತಳೆ, ಸಿಹಿ ಗೆಣಸು, ಬಿಳಿ ವೈನ್‌ ಮತ್ತು ಟೊಮೆಟೋದಂತಹ ಆಮ್ಲೀಯ ಆಹಾರಗಳನ್ನು ರಾತ್ರಿ ಸೇವನೆ ಮಾಡುವುದರಿಂದ ಎದೆಯುರಿ ಮತ್ತು ಆಮ್ಲೀಯತೆಯಂತಹ ಸಮಸ್ಯೆಗಳು ಉಂಟಾಗಬಹುದು.  ಇದು ನಿದ್ರಾಹೀನತೆಗೆ ಕಾರಣವಾಗಬಹುದು.

ಇದನ್ನೂ ಓದಿ: ಸಹದ್ಯೋಗಿಗಳೊಂದಿಗೆ ಒಂದಷ್ಟು ವಿಚಾರಗಳ ಬಗ್ಗೆ ಮಾತನಾಡದಿದ್ದರೆಯೇ ಒಳ್ಳೆಯದು

ಕ್ರೂಸಿಫೆರಸ್‌ ತರಕಾರಿಗಳು: ಬ್ರೋಕೊಲಿ, ಎಲೆಕೋಸು, ಹೂಕೋಸುಗಳಂತಹ ಕ್ರೂಸಿಫೆರಸ್‌ ತರಕಾರಿಗಳು ಹೆಚ್ಚಿನ ಫೈಬರ್‌ ಅಂಶವನ್ನು ಹೊಂದಿರುತ್ತವೆ. ಅವು ಹೊಟ್ಟೆಯಲ್ಲಿ ಅನಿಲವನ್ನು ಉಂಟುಮಾಡಬಹುದು. ಅದು ನಿದ್ರೆ ಮಾಡಲು ಕಷ್ಟಕರವಾಗಬಹುದು, ಆದ್ದರಿಂದ ಅವುಗಳನ್ನು ರಾತ್ರಿ ಊಟದೊಂದಿಗೆ ತಿನ್ನುವುದನ್ನು ತಪ್ಪಿಸಿ.

ಭಾರವಾದ ಮತ್ತು ಹುರಿದ ಆಹಾರಗಳು: ರಾತ್ರಿಯಲ್ಲಿ ಪನೀರ್, ಚೋಲೆ-ಭಾತುರೆ, ಪಿಜ್ಜಾ, ಬರ್ಗರ್‌ಗಳು, ಡೀಪ್‌ ಫ್ರೈಡ್‌ ಆಹಾರಗಳು ಮತ್ತು ಮಟನ್‌, ಹಂದಿಮಾಂಸ   ಸೇವಿಸುವುದರಿಂದ ಹೊಟ್ಟೆಯಲ್ಲಿ ಭಾರವಾದ ಭಾವನೆ ಉಂಟಾಗುತ್ತದೆ. ಅಲ್ಲದೆ ಹೆಚ್ಚಿನ ಪ್ರಮಾಣದ ಕೊಬ್ಬಿನಾಂಶವಿರುತ್ತದೆ. ಇವು ಜೀರ್ಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಮತ್ತು ನಿದ್ರೆಯ ಸಮಯದಲ್ಲಿಯೂ ದೇಹವು ಆಹಾರವನ್ನು ಜೀರ್ಣಿಸಿಕೊಳ್ಳುತ್ತಲೇ ಇರುತ್ತದೆ. ಇದು ಆಳವಾದ ನಿದ್ರೆಯನ್ನು ತಡೆಯುತ್ತದೆ.

ಮದ್ಯ: ಮದ್ಯಪಾನ ಮಾಡುವುದರಿಂದ ನಿಮಗೆ ಚೆನ್ನಾಗಿ ನಿದ್ರೆ ಬರಬಹುದು. ಆದರೆ ಅದು ನಿದ್ರೆಯ ಚಕ್ರವನ್ನು ಅಡ್ಡಿಪಡಿಸುತ್ತದೆ. ನೀವು ರಾತ್ರಿಯಲ್ಲಿ ಮೂತ್ರ ವಿಸರ್ಜಿಸಲು ಅಥವಾ ಬಾಯಾರಿಕೆಯಾಗಲು ಎಚ್ಚರಗೊಳ್ಳಬಹುದು. ಇದು ನಿಮ್ಮ ನಿದ್ರೆಗೆ ಅಡ್ಡಿಯಾಗಬಹುದು. ಆದ್ದರಿಂದ ರಾತ್ರಿಯಲ್ಲಿ ಮದ್ಯಪಾನ ಮಾಡುವುದನ್ನು ತಪ್ಪಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us