Onam 2021: ಕೇರಳದಲ್ಲಿ ಇಂದಿನಿಂದ ಓಣಂ ಸಂಭ್ರಮ; ಈ ಹಬ್ಬದಂದು ಭೂಮಿಗೆ ಬರುತ್ತಾನೆ ಬಲಿ ಚಕ್ರವರ್ತಿ!

|

Updated on: Aug 12, 2021 | 2:53 PM

Onam Festival in Kerala: ಇಂದಿನಿಂದ 10 ದಿನ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ. ಐಶ್ವರ್ಯ, ಸಮೃದ್ಧಿ ಹಬ್ಬವಾದ ಓಣಂ ಹಬ್ಬದ ದಿನ ಬಲಿ ಚಕ್ರವರ್ತಿ ಭೂಮಿಗೆ ಬರುತ್ತಾನೆಂಬ ನಂಬಿಕೆ ಕೇರಳಿಗರದ್ದು. ಓಣಂ ಹಬ್ಬದ ಹಿಂದಿನ ಅಚ್ಚರಿಯ ಮಾಹಿತಿ ಇಲ್ಲಿದೆ...

Onam 2021: ಕೇರಳದಲ್ಲಿ ಇಂದಿನಿಂದ ಓಣಂ ಸಂಭ್ರಮ; ಈ ಹಬ್ಬದಂದು ಭೂಮಿಗೆ ಬರುತ್ತಾನೆ ಬಲಿ ಚಕ್ರವರ್ತಿ!
ಓಣಂ ಹಬ್ಬ
Follow us on

ದಕ್ಷಿಣ ಭಾರತದ ರಾಜ್ಯಗಳು ತಮ್ಮ ಸಾಂಸ್ಕೃತಿಕ, ಸಾಂಪ್ರದಾಯಿಕ ಭಿನ್ನತೆಯಿಂದಾಗಿಯೇ ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಬಹಳ ಪ್ರಸಿದ್ಧಿ ಪಡೆದಿವೆ. ಕರ್ನಾಟಕದ ನವರಾತ್ರಿ (ದಸರಾ), ಯುಗಾದಿ (Ugadi), ಕೇರಳದ ಓಣಂ (Onam 2021) ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶದ ಹಬ್ಬ ಹಾಗೂ ಆಚರಣೆಗಳು ಬೇರೆ ರಾಜ್ಯಗಳಿಗಿಂತ ಬಹಳ ವಿಭಿನ್ನವಾಗಿವೆ. ಇಂದಿನಿಂದ ಕೇರಳದಲ್ಲಿ ಓಣಂ ಹಬ್ಬ (Onam Festival)  ಶುರುವಾಗಿದೆ. ಮಲಯಾಳಿಗರಿಗೆ ಓಣಂ ಬಹಳ ಪ್ರಮುಖ ಹಾಗೂ ಅತಿದೊಡ್ಡ ಹಬ್ಬ. ಕರ್ನಾಟಕದಲ್ಲಿ ವರ್ಷದ ಮೊದಲ ಹಬ್ಬವಾದ ಯುಗಾದಿಯನ್ನು ಹೇಗೆ ಆಚರಿಸುತ್ತಾರೋ ಅದೇರೀತಿ ಮಲಯಾಳಿಗರಿಗೆ ಪಂಚಾಂಗದ ಮೊದಲ ತಿಂಗಳು ಚಿಂಗಮ್ ಸಂದರ್ಭದಲ್ಲಿ ಆಚರಿಸಲಾಗುವ ಮೊದಲ ಹಬ್ಬ ಓಣಂ. ಇಂದಿನಿಂದ ಆಗಸ್ಟ್​ 21ರವರೆಗೂ ಓಣಂ ಸಂಭ್ರಮಾಚರಣೆ ಇರುತ್ತದೆ.

ದೇವರ ನಾಡು ಎಂದೇ ಕರೆಯಲ್ಪಡುವ ಕೇರಳದಲ್ಲಿ ಪ್ರತಿವರ್ಷ ಆಗಸ್ಟ್​- ಸೆಪ್ಟೆಂಬರ್ ತಿಂಗಳಲ್ಲಿ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ತಿರು-ಓಣಂ ಅಥವಾ ತಿರುವೋಣಂ, ಓಣಂ ಎಂದು ಕರೆಯುತ್ತಾರೆ. ವರ್ಷದ ಮೊದಲ ಪೈರು ಅಥವಾ ಬೆಳೆಯ ಖುಷಿಯನ್ನು ಓಣಂ ಹಬ್ಬದ ಸಂದರ್ಭದಲ್ಲಿ ಆಚರಿಸಲಾಗುತ್ತದೆ. ಹೀಗಾಗಿ, ರೈತ ಸಮುದಾಯ ಸೇರಿದಂತೆ ಕೇರಳದ ಎಲ್ಲರಿಗೂ ಇದು ಬಹಳ ದೊಡ್ಡ ಹಬ್ಬ. ಚಿಂಗಮ್ ತಿಂಗಳಲ್ಲಿ ನಡೆಯುವ ಈ ಹಬ್ಬಕ್ಕೆ ತನ್ನದೇ ಆದ ಇತಿಹಾಸವಿದೆ. ವಿಶ್ವದೆಲ್ಲೆಡೆ ಇರುವ ಮಲಯಾಳಂ ಸಮುದಾಯದವರು ಓಣಂ ಹಬ್ಬದಂದು ರಾಜ ಮಹಾಬಲಿ (ಬಲಿ ಚಕ್ರವರ್ತಿ) ಓಣಂ ಹಬ್ಬದಂದು ಪಾತಾಳ ಲೋಕದಿಂದ ಭೂಮಿಗೆ ವಾಪಾಸ್ ಬರುತ್ತಾನೆ ಎಂದು ನಂಬುತ್ತಾರೆ. ಕರ್ನಾಟಕದಲ್ಲಿ ದಸರಾವನ್ನು ಹೇಗೆ ವಿಶೇಷವಾಗಿ ಆಚರಿಸುತ್ತೀವೋ ಅದೇ ರೀತಿ ಕೇರಳದಲ್ಲಿ ಓಣಂ ಆಚರಿಸಲಾಗುತ್ತದೆ.

ಇಂದಿನಿಂದ 10 ದಿನಗಳ ಕಾಲ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ. ಐಶ್ವರ್ಯ, ಸಮೃದ್ಧಿ ಹಬ್ಬವಾದ 9ನೇ ದಿನವನ್ನು ತಿರು ಓಣಂ ಎಂದು ಕರೆಯಲಾಗುತ್ತದೆ. ಓಣಂ ಹಬ್ಬದಲ್ಲಿ ಮಹಿಳೆಯರು ಹೂವಿನಿಂದಲೇ ರಂಗೋಲಿ ಬಿಡಿಸಿ, ಸಾಂಪ್ರದಾಯಿಕ ಉಡುಗೆ ತೊಟ್ಟು, ಕೇರಳದ ಸಿಹಿ ಭಕ್ಷ್ಯಗಳನ್ನು ಮಾಡುತ್ತಾರೆ. ಹಾಗೇ, ದೋಣಿಯಾಟ, ಕೇರಳದ ಸಾಂಪ್ರದಾಯಿಕ ನೃತ್ಯ ಕೂಡ ಈ ಹಬ್ಬದ ಪ್ರಮುಖ ಆಕರ್ಷಣೆ. ಓಣಂ ಹಬ್ಬದಲ್ಲಿ ಮಹಿಳೆಯರು ವಿವಿಧ ಬಣ್ಣದ ಹೂವುಗಳನ್ನು ತಂದು, ಮನೆಯ ಮುಂದೆ ಪೂಕಳಂ ಎನ್ನುವ ಸುಂದರ ಹೂವಿನ ರಂಗೋಲಿಯನ್ನು ಹಾಕುತ್ತಾರೆ ಮತ್ತು ಸಾಂಪ್ರದಾಯಿಕ ಹಾಡುಗಳನ್ನು ಹಾಡುತ್ತಾರೆ. ಓಣಂ ಹಬ್ಬದಲ್ಲಿ ಪೂಕಳಂ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಹಾಗೇ, ಓಣಂ ಹಬ್ಬದ ಸಂದರ್ಭದಲ್ಲಿ ಜಾನಪದ ಹುಲಿ ನೃತ್ಯ, ಹಗ್ಗಜಗ್ಗಾಟ (ವಾಡಂ ವಾಲಿ), ದೋಣಿಯಾಟ (ವಲ್ಲಂ ಕಲಿ) ಪ್ರಮುಖ ಆಕರ್ಷಣೆಯಾಗಿರುತ್ತದೆ. ಓಣಂ ಹಬ್ಬದ ಪ್ರಯುಕ್ತ ಮಹಿಳೆಯರು ಕೇರಳದ ಸಾಂಪ್ರದಾಯಿಕ ಬಿಳಿ ಮತ್ತು ಚಿನ್ನದ ಬಣ್ಣದ ಅಂಚಿರುವ ಸೀರೆಯನ್ನುಟ್ಟು ಸಂಭ್ರಮಿಸುತ್ತಾರೆ. ಹಾಗೇ, ತುಂಬಿ ತುಲ್ಲಾಲ್‌ ಎಂಬ ಸಾಂಪ್ರದಾಯಿಕ ಜಾನಪದ ನೃತ್ಯವನ್ನು ಕೂಡ ಮಹಿಳೆಯರು ಪ್ರದರ್ಶಿಸುತ್ತಾರೆ.

ಓಣಂ ಹಬ್ಬದಲ್ಲಿ ಊಟ ಕೂಡ ಬಹಳ ವಿಶೇಷವಾಗಿರುತ್ತದೆ. ಓಣಸಡ್ಯ ಎಂಬುದೂ ತಿರು-ಓಣಂ ದಿನ ಮಾಡುವ ವಿಶೇಷ ಊಟವಾಗಿದೆ. ಹೊಸ ಬೆಳೆಗಳನ್ನು ತಂದು ಈ ದಿನ ಆಹಾರವನ್ನು ತಯಾರಿಸಲಾಗುತ್ತದೆ. ಈ ಊಟವು ರಾಜ ಮನೆತನದ ವೈಭೋಗದ ಊಟವಾಗಿದ್ದು, ಮೂರು ಬಗೆಯ ಪಾಯಸ ಸೇರಿದಂತೆ ಇನ್ನೂ ನಾನಾ ರೀತಿಯ ಸಿಹಿ ತಿಂಡಿ, ಕೇರಳದ ಸಾಂಪ್ರದಾಯಿಕ ಶೈಲಿಯ ಅಡುಗೆ ಮಾಡಲಾಗುತ್ತದೆ.

ಬಲಿ ಚಕ್ರವರ್ತಿಯ ಸಂಹಾರ:

ಬಲಿ ಚಕ್ರವರ್ತಿಯ ಸಂಹಾರದ ಪ್ರಸ್ತಾಪ ಪುರಾಣದ ಹಲವು ಕಡೆಗಳಲ್ಲಿ ಆಗಿದೆ. ಹಾಗೇ, ವಾಮನ ರೂಪದಲ್ಲಿ ಬಂದ ವಿಷ್ಣು ಬಲಿ ಚಕ್ರವರ್ತಿಯನ್ನು ಸಂಹಾರ ಮಾಡಿದ ನಂತರ ಓಣಂ ಹಬ್ಬದ ಆಚರಣೆ ಶುರುವಾಗಿದೆ ಎಂಬುದು ಪುರಾಣದ ಕಥೆಗಳಿಂದ ತಿಳಿದು ಬರುತ್ತದೆ. ಕೇರಳವನ್ನು ಆಳಿದ್ದ ರಾಜ ಮಹಾಬಲಿ (ಬಲಿ ಚಕ್ರವರ್ತಿ) ಆಡಳಿತದ ಅವಧಿಯಲ್ಲಿ ಕೇರಳದ ಜನರು ಸಮೃದ್ಧಿ, ನೆಮ್ಮದಿಯಿಂದ ಬದುಕಿದ್ದರು. ಆದರೆ, ಅಹಂಕಾರಿಯಾಗಿದ್ದ ಬಲಿ ಚಕ್ರವರ್ತಿ ಬಹಳ ಪರಾಕ್ರಮಿಯಾಗಿದ್ದ, ತನ್ನ ಪ್ರಜೆಗಳ ಬಗ್ಗೆ ಬಹಳ ಪ್ರೀತಿ ಹೊಂದಿದ್ದ. ದೇವತೆಗಳೊಂದಿಗೆ ಯುದ್ಧ ಸಾರುತ್ತಿದ್ದ ಬಲಿ ಚಕ್ರವರ್ತಿಯ ಉಪಟಳ ಹೆಚ್ಚಾಗಿತ್ತು. ಇಂದ್ರನ ಪದವಿಯನ್ನು ತಾನು ಪಡೆಯಬೇಕೆಂದು ಹಠ ತೊಟ್ಟ ಬಲಿ ಚಕ್ರವರ್ತಿ ಅದಕ್ಕಾಗಿ ಮಹಾಯಾಗ ಕೈಗೊಂಡ. ಆಗ ದೇವತೆಗಳ ಬೇಡಿಕೆಯಂತೆ ಭಗವಾನ್ ವಿಷ್ಣು ವಾಮನ ರೂಪದಲ್ಲಿ ಬಂದು ತಪಸ್ಸಿಗೆ ಕುಳಿತಿದ್ದ ಬಲಿ ಚಕ್ರವರ್ತಿಯ ಬಳಿ ತನಗಾಗಿ 3 ಹೆಜ್ಜೆಯಷ್ಟು ಜಾಗವನ್ನು ದಾನವಾಗಿ ನೀಡಬೇಕೆಂದು ಬೇಡಿಕೊಳ್ಳುತ್ತಾನೆ. ರಾಜನಾದ ನಾನು ನಿನಗೆ 3 ಹೆಜ್ಜೆಯಷ್ಟು ಜಾಗ ಕೊಡುವುದಿಲ್ಲವೇ? ಎಂದು ಹೇಳುವ ಮಹಾದಾನಿ ಬಲಿ ಚಕ್ರವರ್ತಿ ನಿನಗೆ ಎಲ್ಲಿ ಬೇಕೋ ಅಲ್ಲಿ ಜಾಗ ಪಡೆದುಕೋ ಎಂದು ಹೇಳುತ್ತಾನೆ. ಆಗ ತನ್ನ ನಿಜ ಸ್ವರೂಪವನ್ನು ತೋರಿಸುವ ವಿಷ್ಣು ತ್ರಿವಿಕ್ರಮನಾಗಿ ಬೆಳೆದು ಆಕಾಶ, ಭೂಮಿಗೆ ಒಂದೊಂದು ಹೆಜ್ಜೆಯನ್ನಿಷ್ಟು ಮೂರನೇ ಹೆಜ್ಜೆಯನ್ನಿಟ್ಟು ಮೂರನೇ ಹೆಜ್ಜೆಯನ್ನಿಡಲು ಜಾಗವೇ ಇಲ್ಲವಲ್ಲ ಎಂದು ಪ್ರಶ್ನೆ ಮಾಡುತ್ತಾನೆ.

ತಾನು ಕೊಟ್ಟ ಮಾತಿಗೆ ತಪ್ಪಬಾರದು ಎಂದು ಬಲಿ ಚಕ್ರವರ್ತಿ ತನ್ನ ತಲೆಯ ಮೇಲೆ ಮೂರನೇ ಹೆಜ್ಜೆ ಇಡುವಂತೆ ಕೇಳಿಕೊಳ್ಳುತ್ತಾನೆ. ಆಗ ಬಲಿ ಚಕ್ರವರ್ತಿಯ ತಲೆ ಮೇಲೆ ಹೆಜ್ಜೆ ಇಡುವ ವಿಷ್ಣು ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತಳ್ಳುತ್ತಾನೆ. ಆದರೆ, ನನ್ನ ರಾಜ್ಯದ ಪ್ರಜೆಗಳು ಸಮೃದ್ಧಿಯಿಂದ ಬದುಕುತ್ತಿರುವುದನ್ನು ನೋಡಲು ವರ್ಷದಲ್ಲಿ ಒಮ್ಮೆ ನನಗೆ ಭೂಮಿಗೆ ಬರಲು ಅವಕಾಶ ನೀಡಬೇಕೆಂದು ಈ ವೇಳೆ ಬಲಿ ಚಕ್ರವರ್ತಿ ವಿಷ್ಣುವಿನ ಬಳಿ ಬೇಡಿಕೊಳ್ಳುತ್ತಾನೆ. ಅದಕ್ಕೆ ವಿಷ್ಣು ಒಪ್ಪಿಗೆ ನೀಡುತ್ತಾನೆ. ಅದರಂತೆ ಓಣಂ ಹಬ್ಬದ ದಿನ ಬಲಿ ಚಕ್ರವರ್ತಿ ತನ್ನ ಪ್ರಜೆಗಳನ್ನು ನೋಡಲು ಬರುತ್ತಾನೆ ಎಂಬ ನಂಬಿಕೆ ಕೇರಳಿಗರದ್ದು. ಹಾಗಾಗಿ ಮನೆಯ ಮುಂದೆ ಹೂವಿನ ರಂಗೋಲಿ ಹಾಕಿ ಮಧ್ಯೆ ದೀಪವನ್ನಿಟ್ಟು ವಿವಿಧ ಭಕ್ಷ್ಯ ಭೋಜನಗಳನ್ನು ತಯಾರಿಸಿ ಬಲಿ ಚಕ್ರವರ್ತಿಗಾಗಿ ಮಲಯಾಳಿಗಳು ಕಾಯುತ್ತಾರೆ.
ಇದನ್ನೂ ಓದಿ:

ಇದನ್ನೂ ಓದಿ: ಶ್ರಾವಣ ಮಾಸದ ಹಬ್ಬಗಳು; 2021ರಲ್ಲಿ ರಕ್ಷಾ ಬಂಧನ, ಕೃಷ್ಣ ಜನ್ಮಾಷ್ಠಮಿ ಯಾವಾಗ?

Bank Holidays in August 2021; ಆಗಸ್ಟ್​ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿ ಇಲ್ಲಿದೆ; ಈ ದಿನಗಳು ವಹಿವಾಟು ಇರಲ್ಲ

(Onam 2021 Date, significance, importance and Interesting History of Onam Harvest festival in Kerala)