Onam 2024 : ಓಣಂ ಹಬ್ಬವನ್ನು ಸುಗ್ಗಿ ಹಬ್ಬವೆಂದು ಕರೆಯುವುದು ಏಕೆ? ಏನಿದರ ವಿಶೇಷತೆ
ಓಣಂ ದಕ್ಷಿಣದ ಕೇರಳ ರಾಜ್ಯದಲ್ಲಿ ಬಹಳ ಅದ್ದೂರಿಯಾಗಿ ಆಚರಿಸಲಾಗುವ ಹಬ್ಬಗಳಲ್ಲಿ ಒಂದು. "ಸುಗ್ಗಿ ಹಬ್ಬ" ಎಂದು ಕರೆಯಲ್ಪಡುವ ಓಣಂ ಹಬ್ಬವು ಸಾಂಸ್ಕೃತಿಕ ಹಬ್ಬವಾಗಿದ್ದು, ಎಲ್ಲಾ ಕೇರಳದ ಜನರು ಜಾತಿ ಬೇಧವನ್ನು ಮರೆತು ಬರೋಬ್ಬರಿ 10 ದಿನಗಳ ಕಾಲ ಆಚರಿಸುತ್ತಾರೆ. ಈ ಬಾರಿ ಸೆಪ್ಟೆಂಬರ್ 6 ರಿಂದ 15 ರವರೆಗೆ ಈ ಹಬ್ಬವನ್ನು ಆಚರಿಸಲಾಗುತ್ತಿದ್ದು, ಈ ದಿನದ ಇತಿಹಾಸ, ಮಹತ್ವ ಹಾಗೂ ಆಚರಣೆಯ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ದೇವರನಾಡು ಕೇರಳ ರಾಜ್ಯದ ವಿಶೇಷ ಹಬ್ಬಗಳಲ್ಲಿ ಒಂದು ಈ ಓಣಂ. ಹಬ್ಬದ ಇತಿಹಾಸ ಪುರಾಣಗಳ ಪ್ರಕಾರ, ಓಣಂ ಅನ್ನು ರಾಜ ಮಹಾಬಲಿಯ ಮರಳಿ ಬರುವ ನೆನಪಿಗಾಗಿ ಆಚರಿಸಲಾಗುತ್ತದೆ. ಇದನ್ನು ತಿರುವೋಣಂ ಎಂದು ಸಹ ಕರೆಯುತ್ತಾರೆ. ಈ ಹಬ್ಬದ ಆಚರಣೆಗಳು ಆಥಂ ದಿನದಂದು ಆರಂಭವಾಗಿ ಹತ್ತು ದಿನಗಳ ಕಾಲ ತಿರುವೋಣಂ ದಿನದವರೆಗೆ ನಡೆಯುತ್ತದೆ. ಹೀಗಾಗಿ ಕೇರಳದ ಜನರಿಗೆ ಈ ಓಣಂ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ ಎನ್ನಬಹುದು.
ಓಣಂ ಹಬ್ಬದ ಇತಿಹಾಸ:
ಪುರಾಣಗಳಲ್ಲಿ ಉಲ್ಲೇಖವಿರುವಂತೆ, ಒಂದು ಕಾಲದಲ್ಲಿ ರಾಜ ಮಹಾಬಲಿ ಭೂಲೋಕವನ್ನು ಆಳುತ್ತಿದ್ದನು. ರಾಜನಾಗಿದ್ದ ಆತನು ತನ್ನ ಪ್ರಜೆಗಳ ಮೇಲೆ ಪ್ರೀತಿ ಮತ್ತು ಗೌರವವನ್ನು ಹೊಂದಿದ್ದನು. ಈ ಬಲಿರಾಜನ ರಾಜ್ಯವು ಬಹಳ ಸಮೃದ್ಧಿಯಿಂದ ಕೂಡಿತ್ತು. ಹೀಗಾಗಿ ಅಲ್ಲಿನ ಪ್ರಜೆಗಳೆಲ್ಲರೂ ಬಹಳ ಸಂತೋಷದಿಂದ ಜೀವನ ನಡೆಸುತ್ತಿದ್ದರು. ಹೀಗೆ ಭೂಲೋಕದಲ್ಲಿ ಆಡಳಿತ ನಡೆಸುತ್ತಿದ್ದ ಮಹಾಬಲಿಯು ತನ್ನ ಪರಾಕ್ರಮದಿಂದ ಮೂರು ಲೋಕವನ್ನು ವಶಪಡಿಸಿಕೊಂಡಾಗ, ಇಂದ್ರನು ದೇವಲೋಕದ ನಿಯಂತ್ರಣವವನ್ನು ಮರಳಿ ಪಡೆಯಲು ವಿಷ್ಣು ದೇವರ ಸಹಾಯವನ್ನು ಕೋರಿದನು. ಮಹಾಬಲಿ ವಿಷ್ಣುವಿನ ಮಹಾನ್ ಭಕ್ತನಾಗಿದ್ದ ಕಾರಣ ವಿಷ್ಣುವಿಗೆ ಇವರ ನಡುವೆ ಪಕ್ಷಪಾತ ಮಾಡಲು ಕಷ್ಟವಾಯಿತು. ಆದರೆ ಈ ದೇವಲೋಕವನ್ನು ಇಂದ್ರನಿಗೆ ಮರಳಿಸುವ ಸಲುವಾಗಿ ವಿಷ್ಣು ಕುಬ್ಜ ವಾಮನನ ಅವತಾರವನ್ನು ತಾಳಿದನು.
ಮಹಾಬಲಿಯನ್ನು ಭೇಟಿಯಾಗಿ ಮೂರು ಹೆಜ್ಜೆ ಗಾತ್ರದ ಜಮೀನಿನ ಮಾಲಿಕತ್ವದ ಹಕ್ಕನ್ನು ಕೇಳಿದನು, ಈ ವೇಳೆ ರಾಜನು ಇದಕ್ಕೆ ಒಪ್ಪಿಗೆ ನೀಡಿದನು. ಈ ಸಂದರ್ಭದಲ್ಲಿ ವಾಮನ ಅವತಾರದಲ್ಲಿದ್ದ ವಿಷ್ಣುವಿನ ಗಾತ್ರ ಹಿಗ್ಗುತ್ತಾ ಹೋಯಿತು. ಬಲಿ ರಾಜ ವಶಪಡಿಸಿಕೊಂಡ ಸಂಪೂರ್ಣ ಪ್ರದೇಶವನ್ನು ಎರಡು ಹೆಜ್ಜೆಗಳನ್ನಿಡುವ ಮೂಲಕ ವಾಮನನು ಆವರಿಸಿಕೊಂಡನು. ಮೂರನೇ ಹೆಜ್ಜೆಯನ್ನು ಎಲ್ಲಿ ಇಡುವುದೆಂದು ನೋಡಿದಾಗ, ಉದಾತ್ತನಾಗಿದ್ದ ಮಹಾಬಲಿಯು ಮೂರನೇ ಹಜ್ಜೆಯನ್ನು ತನ್ನ ತಲೆಯ ಮೇಲಿಡಲು ಹೇಳಿದನು. ಹೀಗೆ ವಾಮನ ರೂಪದಲ್ಲಿದ್ದ ವಿಷ್ಣುವು ಮಹಾಬಲಿಯ ತಲೆ ಮೇಲೆ ಕಾಲನ್ನಿಟ್ಟಾಗ ಆತ ಪಾತಳ ಲೋಕಕ್ಕೆ ತಳ್ಳಿದನು. ಕೊನೆಗೆ ಈತನ ನಿಷ್ಠೆಗೆ ಮೆಚ್ಚಿದ ವಿಷ್ಣುವು ಮಹಾಬಲಿಗೆ ವರ್ಷಕ್ಕೊಮ್ಮೆ ಭೂಮಿಗೆ ಬಂದು ತನ್ನ ಪ್ರಜೆಗಳನ್ನು ಭೇಟಿಯಾಗುವ ವರವನ್ನು ನೀಡುತ್ತಾರೆ. ಬಲಿಚಕ್ರವರ್ತಿ ಭೂಮಿಗೆ ಬರುವ ದಿನವನ್ನು ಕೇರಳದಲ್ಲಿ ಓಣಂ ಹಬ್ಬವೆಂದು ಆಚರಿಸಲಾಗುತ್ತದೆ.
ಓಣಂ ಹಬ್ಬದ ಮಹತ್ವ ಹಾಗೂ ಆಚರಣೆ ಹೇಗೆ?
ಕೇರಳದಲ್ಲಿ ಓಣಂ ಹಬ್ಬವು ತಿರುವೋಣಂ ನಕ್ಷತ್ರದ ಸಮಯದಲ್ಲಿ ವರ್ಷಕ್ಕೊಮ್ಮೆ ತನ್ನ ಪ್ರಜೆಗಳನ್ನು ಭೇಟಿಯಾಗಲು ಭೂಮಿಗೆ ಬಲಿರಾಜ ಬರುವ ಸುದಿನವೇ ಈ ಹಬ್ಬವಾಗಿದೆ. ಕೇರಳದಲ್ಲಿ ಹತ್ತು ದಿನಗಳ ಕಾಲ ನಡೆಯುವ ಹಬ್ಬದ ಆಚರಣೆಗಳಲ್ಲಿ ಮೊದಲ ದಿನವನ್ನು ಅಥಾನ್, ಎರಡನೇ ದಿನವನ್ನು ಚಿಥಿರಾ, ಮೂರನೇ ದಿನವನ್ನು ಚೋಧಿ ಪೂಕ್ಕಳಮ್, ನಾಲ್ಕನೇ ದಿನವನ್ನು ವಿಶಾಖಂ, ಐದನೇ ದಿನವನ್ನು ಅನಿಜಂ, ಆರನೇ ದಿನವನ್ನು ತ್ರಿಕೇಟಾ, ಏಳನೇ ದಿನವನ್ನು ಮೂಲಂ, ಎಂಟನೇ ದಿನವನ್ನು ಪೂರದಂ, ಒಂಬತ್ತನೇ ದಿನವನ್ನು ಉತಿರಾದಂ ಮತ್ತು ಹತ್ತನೇ ದಿನವನ್ನು ತಿರುವೋಣಂ ಎಂದು ಕರೆಯುತ್ತಾರೆ.
ಕೊನೆಯ ದಿನವಾದ ತಿರುವೋಣಂನ್ನು ಬಹಳ ವಿಜೃಂಭನೆ ಹಾಗೂ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನದಂದು ಕೇರಳದ ಪ್ರಸಿದ್ಧ ದೋಣಿ ಸ್ಪರ್ಧೆ, ಪುಲಿಕಲಿ, ಅಥಾಚಮಯಂ, ಥ್ರುವತಿರಕಳಿ, ಓಣಂ ಕಲಿ ಮತ್ತು ಕಥಕ್ಕಳಿ ನೃತ್ಯ ಸೇರಿದಂತೆ ವಿವಿಧ ಆಚರಣೆಗಳಿರುತ್ತದೆ. ಅದಲ್ಲದೇ, ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಮನೆಯನ್ನು ಅಲಂಕರಿಸಿ ವಿವಿಧ ಭಕ್ಷ್ಯ ಭೋಜನವನ್ನು ತಯಾರಿಸಿ ಬಲಿರಾಜನನ್ನು ಸ್ವಾಗತಿಸುವ ಕ್ರಮವಿದೆ. ಈ ಹಬ್ಬದಂದು ಕೃಷಿಕರು ಉತ್ತಮ ಬೆಳೆ ಮತ್ತು ಇಳುವರಿಗಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ಭೂಮಿ ತಾಯಿ ಒದಗಿಸಿದ ಸಮೃದ್ಧ ಫಸಲಿಗೆ ಧನ್ಯವಾದ ಸಲ್ಲಿಸುತ್ತಾರೆ. ಹೀಗಾಗಿ ಈ ಹಬ್ಬವನ್ನು ಸುಗ್ಗಿ ಹಬ್ಬವೆಂದು ಕರೆಯಲಾಗುತ್ತದೆ.
ಇದನ್ನೂ ಓದಿ: National Engineers Day 2024: ರಾಷ್ಟ್ರೀಯ ಇಂಜಿನಿಯರ್ಸ್ ದಿನದ ಇತಿಹಾಸ, ಮಹತ್ವವೇನು? ಈ ದಿನದ ಶುಭಾಶಯ ಈ ರೀತಿ ತಿಳಿಸಿ
ಓಣಂ ಹಬ್ಬಕ್ಕೆ ಕೋರಲು ಶುಭಾಶಯಗಳು ಇಲ್ಲಿವೆ:
- ಓಣಂ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಶಾಂತಿಯನ್ನು ತುಂಬಲಿ. ಅತ್ಯಂತ ಸಂಭ್ರಮದ ಹಾಗೂ ಅರ್ಥಪೂರ್ಣ ಹಬ್ಬವು ನಿಮ್ಮದಾಗಲಿ. ಓಣಂ ಹಬ್ಬದ ಶುಭಾಶಯಗಳು.
- ಓಣಂ ಹಬ್ಬ ನಿಮ್ಮ ಜೀವನದಲ್ಲಿ ನಿಮ್ಮ ಕುಟುಂಬದಲ್ಲಿ ಸುಖ, ಶಾಂತಿ, ಸಂತೋಷವನ್ನು ತರಲಿ.
- ಓಣಂನ ಬಣ್ಣಗಳು ಮತ್ತು ಹೊಳಪು ನಿಮ್ಮ ಮನೆ ಮತ್ತು ಜೀವನವನ್ನು ಹೊಸ ಶಕ್ತಿ ಮತ್ತು ಸಂತೋಷವನ್ನು ತುಂಬಲಿ. ನಿಮಗೂ ನಿಮ್ಮ ಕುಟುಂಬಕ್ಕೂ ಓಣಂ ಹಬ್ಬದ ಶುಭಾಶಯಗಳು.
- ಭಗವಂತ ಮಹಾಬಲಿ ನಿಮ್ಮನ್ನು ಆಶೀರ್ವದಿಸಲಿ ಹಾಗೂ ನಿಮ್ಮ ಜೀವನದಲ್ಲಿ ಸದಾ ಯಶಸ್ಸು ಸಿಗುವಂತಾಗಲಿ. ಓಣಂ ಹಬ್ಬದ ಹಾರ್ಥಿಕ ಶುಭಾಶಯಗಳು.
- ಓಣಂನ ಉತ್ಸಾಹವು ವರ್ಷವಿಡೀ ನಿಮ್ಮ ಮನೆಯಲ್ಲಿ ತುಂಬಿರಲಿ, ನಿಮಗೂ ನಿಮ್ಮ ಕುಟುಂಬಕ್ಕೂ ಹಾಗೂ ಎಲ್ಲರಿಗೂ ಒಳಿತಾಗಲಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:39 am, Sun, 15 September 24