Parenting Tips : ಈ ಗುಣಗಳು ನಿಮ್ಮಲ್ಲಿದ್ದರೆ ಮಕ್ಕಳ ಪಾಲಿಗೆ ನೀವು ಫೇವರಿಟ್ ಅಮ್ಮನೇ ಬಿಡಿ
ಒಂಬತ್ತು ತಿಂಗಳು ತನ್ನ ಗರ್ಭದಲ್ಲಿಟ್ಟುಕೊಂಡು ತನ್ನ ಕಂದನ ಆಗಮನಕ್ಕಾಗಿ ಕಾಯುವ ತಾಯಿಯೂ, ಜೀವನ ಪರ್ಯಂತ ತನ್ನ ಮಕ್ಕಳ ಹಿತಕ್ಕಾಗಿ ಶ್ರಮಿಸುತ್ತಾಳೆ. ತನ್ನ ಆರೋಗ್ಯದ ಬಗ್ಗೆಯು ಕಾಳಜಿ ವಹಿಸದೇ ಸಂಬಳವಿಲ್ಲದೇ ದುಡಿಯುವ ಆಕೆಯು ಸ್ವಲ್ಪ ಎಚ್ಚರ ತಪ್ಪಿದರೂ ಮಕ್ಕಳ ಭವಿಷ್ಯವೇ ಹಾಳಾಗುತ್ತದೆ. ಆದರೆ, ಎಲ್ಲಾ ತಾಯಂದಿರು ಮಕ್ಕಳನ್ನು ಪ್ರೀತಿಸುವ, ಬೆಳೆಸುವ ವಿಧಾನ ಒಂದೇ ರೀತಿ ಇರುವುದಿಲ್ಲ. ನನ್ನ ಮಕ್ಕಳು ನನ್ನಂತೆ ಆಗುವುದು ಬೇಡ ಒಳ್ಳೆಯ ಬದುಕು ರೂಪಿಸಿಕೊಳ್ಳಲಿ ಎನ್ನುವ ಆಸೆಯೂ ಎಲ್ಲಾ ತಾಯಿಗೂ ಇರುತ್ತದೆ. ಆದರೆ ಮಕ್ಕಳ ಪಾಲಿಗೆ ಒಬ್ಬ ಉತ್ತಮ ತಾಯಿಯಾಗುವುದು ಹೇಗೆ? ಆಕೆಗೆ ಇರಬೇಕಾದ ಗುಣಗಳಾವುವು? ಎನ್ನುವ ಮಾಹಿತಿ ಇಲ್ಲಿದೆ.
ಸಾಂದರ್ಭಿಕ ಚಿತ್ರ
Follow us on
ಮಕ್ಕಳನ್ನು ನೀವು ಹೇಗೆ ಬೆಳೆಸುತ್ತೀರಿ ಎನ್ನುವುದರ ಮೇಲೆ ಅವರ ನಡವಳಿಕೆ ಹಾಗೂ ಭವಿಷ್ಯವು ನಿರ್ಧಾರವಾಗುತ್ತದೆ. ಹೀಗಾಗಿ ಮಕ್ಕಳನ್ನು ಬೆಳೆಸುವುದು ಸುಲಭವಾದ ಕೆಲಸವಲ್ಲ. ಸರಿಯಾದ ಸಮಯಕ್ಕೆ ಒಂದೊಳ್ಳೆ ಸಂಸ್ಕಾರವಿಟ್ಟು ಬೆಳೆಸಿದರೆ ಮಾತ್ರ ಮಕ್ಕಳು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ. ಆದರೆ ಕೆಲವೊಮ್ಮೆ ಹೆತ್ತ ತಾಯಿ ಮಕ್ಕಳನ್ನು ಬೆಳೆಸುವಾಗ ಕೆಲವು ವಿಷಯಗಳಲ್ಲಿ ಎಡವುತ್ತಾಳೆ. ಆದರೆ ಉತ್ತಮ ತಾಯಿ ಎನಿಸಿಕೊಳ್ಳಬೇಕಾದರೆ ಆಕೆಯಲ್ಲಿ ಈ ಗುಣಗಳಿರಲೇ ಬೇಕು. ಅದಲ್ಲದೇ ಆಕೆಯು ಮಕ್ಕಳನ್ನು ಈ ರೀತಿ ಬೆಳೆಸಬೇಕು.
ತಾಳ್ಮೆಯಿರಲಿ : ಹೆಣ್ಣಿಗೆ ತಾಳ್ಮೆಯಿರುವುದು ಬಹಳ ಮುಖ್ಯ. ತಾಯಿಯಾದವಳಿಗೆ ಈ ಗುಣವಿರಲೇಬೇಕಂತೆ. ಹೌದು, ಮಕ್ಕಳನ್ನು ಕಣ್ಣಿನಲ್ಲಿ ಕಣ್ಣಿಟ್ಟು ಬೆಳೆಸುವ ವೇಳೆಯಲ್ಲಿ ತಾಳ್ಮೆಗೆಡಬಾರದು. ಅದಲ್ಲದೇ ಮಕ್ಕಳು ಬೆಳೆಯುತ್ತ ದೊಡ್ಡವರಾಗುತ್ತಿದ್ದಂತೆ ಕೆಟ್ಟ ನಡವಳಿಕೆ ಹಾಗೂ ಅಭ್ಯಾಸಗಳನ್ನು ಕಲಿತುಕೊಳ್ಳಬಹುದು. ಆದರೆ ಈ ವೇಳೆಯಲ್ಲಿ ತಾಯಿಯೂ ಯಾವತ್ತಿಗೂ ತಾಳ್ಮೆ ಕಳೆದುಕೊಳ್ಳಬಾರದು. ಮಕ್ಕಳೊಂದಿಗೆ ತಾಳ್ಮೆಯಿಂದ ಮಾತನಾಡಿ, ಸರಿದಾರಿಗೆ ತರುವ ಜವಾಬ್ದಾರಿಯೂ ಆಕೆಯ ಮೇಲಿರುತ್ತದೆ. ಹೀಗಿದ್ದಾಗ ಮಾತ್ರ ಉತ್ತಮ ತಾಯಿ ಎನಿಸಿಕೊಳ್ಳಲು ಸಾಧ್ಯ.
ಮಕ್ಕಳಿಗೆ ಪ್ರೀತಿ ನೀಡಿ ದೈರ್ಯವಂತರನ್ನಾಗಿ ಬೆಳೆಸಿ : ಸಾಮಾನ್ಯವಾಗಿ ಇಬ್ಬರೂ ಮಕ್ಕಳಿದ್ದರೆ ಬಹುತೇಕ ತಾಯಂದಿರು ಎರಡನೇ ಮಗುವನ್ನು ಹೆಚ್ಚು ಮುದ್ದಿಸುತ್ತಾರೆ. ಇಬ್ಬರೂ ಮಕ್ಕಳಿಗೆ ಪ್ರೀತಿ ಯಲ್ಲಿ ಬೇಧ ಭಾವ ಮಾಡುವುದು ಸರಿಯಲ್ಲ. ಅದಲ್ಲದೇ ಮಕ್ಕಳನ್ನು ಯಾವುದೇ ವಿಷಯದಲ್ಲಿ ಹಿಂಜರಿಯುವಂತೆ ಬೆಳೆಸಬಾರದು. ಬಾಲ್ಯದಲ್ಲಿಯೇ ಮಗುವು ಏನಾದರೂ ಹೊಸತನದ್ದನ್ನು ಮಾಡಲು ಹೋದರೆ ಧೈರ್ಯ ತುಂಬಿ ಮುನ್ನಡೆ ಎಂದು ಹೇಳಿ. ಹೀಗೆ ಮಾಡುವುದರಿಂದ ಮಕ್ಕಳು ಧೈರ್ಯವಂತರಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯ.
ಮಕ್ಕಳಿಗಾಗಿ ಸಮಯ ಮೀಸಲಿಡಿ : ಈಗಿನ ಕಾಲದಲ್ಲಿ ಗಂಡ ಹೆಂಡತಿ ಇಬ್ಬರೂ ಕೂಡ ಉದ್ಯೋಗಕ್ಕೆ ತೆರಳುತ್ತಾರೆ. ಹೀಗಾಗಿ ಬಾಲ್ಯದಲ್ಲಿ ಮಗು ಬೇರೆಯವರ ಜೊತೆಗೆ ಬಾಂಧವ್ಯವನ್ನು ಬೆಳೆಸಿಕೊಳ್ಳುತ್ತದೆ. ಆದರೆ ಗೃಹಿಣಿಯಾಗಿರಲಿ ಅಥವಾ ಕೆಲಸಕ್ಕೆ ಹೋಗುವ ಮಹಿಳೆಯೇ ಆಗಿದ್ದರೂ ಮಕ್ಕಳಿಗೆ ಸದಾ ಲಭ್ಯವಿರಬೇಕು. ಅವರ ಬೆಳೆವಣಿಗೆಯ ಪ್ರತಿಯೊಂದು ಹಂತವನ್ನು ಆನಂದಿಸಬೇಕು. ಮಕ್ಕಳಿಗೆ ಯಾವ್ಯಾವ ಸಮಯಕ್ಕೆ ಏನು ಬೇಕು ಎನ್ನುವುದನ್ನು ತಾಯಿಯಾದವಳು ಅರ್ಥ ಮಾಡಿಕೊಂಡು ಮಕ್ಕಳಿಗೆ ಸಮಯ ಮೀಸಲಿಡುವುದು ಬಹಳ ಮುಖ್ಯವಾಗಿದೆ.
ಎಲ್ಲರನ್ನು ಗೌರವಿಸುವ ಗುಣವನ್ನು ಕಲಿಸಿಕೊಡಿ : ತಾಯಿಯಾದವಳು ಮಕ್ಕಳಿಗೆ ಸಂಸ್ಕಾರವನ್ನು ನೀಡಿ ಬೆಳೆಸಬೇಕು. ಬೇರೆಯವರನ್ನು ಗೌರವಿಸುವುದರೊಂದಿಗೆ ಆತ್ಮಗೌರವವನ್ನು ಕಾಪಾಡಿಕೊಳ್ಳುವುದು ಅಗತ್ಯ ಎನ್ನುವುದು ಹೇಳಿ ಕೊಡಬೇಕು. ಅದಲ್ಲದೇ, ತಂದೆ-ತಾಯಿ, ಗುರು-ಹಿರಿಯರು ಸೇರಿದಂತೆ ವಯಸ್ಸಿಗಿಂತ ಹಿರಿಯರಾದ ವ್ಯಕ್ತಿಗಳಿಗೆ ಗೌರವ ನೀಡುವುದನ್ನು ಕಲಿಸಿಕೊಡಿ. ತನ್ನ ವಯಸ್ಸಿನವರೊಂದಿಗೆ ಸ್ನೇಹಭಾವದಿಂದ ಹಾಗೂ ಸಣ್ಣವರೊಂದಿಗೆ ಪ್ರೀತಿ ವಿಶ್ವಾಸದಿಂದ ಇರಲು ಹೇಳಿಕೊಡುವ ತಾಯಿಯೇ ಒಳ್ಳೆಯ ತಾಯಿ ಎನಿಸಿಕೊಳ್ಳುತ್ತಾಳೆ.
ಮಕ್ಕಳಿಗೆ ಸದಾ ಪ್ರೋತ್ಸಾಹ ನೀಡಿ : ಮಕ್ಕಳಿಗೆ ಪ್ರತಿಯೊಂದು ಹಂತದಲ್ಲಿ ತಂದೆ ತಾಯಿಯರ ಬೆಂಬಲ ಬೇಕಾಗುತ್ತದೆ. ಮಕ್ಕಳ ಬೆಳವಣಿಗೆಯ ಹಂತದಿಂದಲೇ ತಾಯಿಯ ಪ್ರೋತ್ಸಾಹ ಅತ್ಯಗತ್ಯ. ಅದಲ್ಲದೇ, ಮಕ್ಕಳು ದೊಡ್ಡವರಾದ ಮೇಲೆ ಶಿಕ್ಷಣ, ಆಟೋಟ ಸೇರಿದಂತೆ ಏನಾದರೂ ಮಾಡಲು ಮುಂದಾಗ ಬೆಂಬಲ ನೀಡುವ ಕೆಲಸ ಮಾಡಿದರೆ ಮಕ್ಕಳು ಏನನ್ನಾದರೂ ಮಾಡಲು ಸಾಧ್ಯ. ಮಕ್ಕಳಿಗೆ ಪ್ರೋತ್ಸಾಹ ನೀಡುವ ಗುಣವು ತಾಯಿಗೆ ಇರಬೇಕು. ಹಾಗಿದ್ದಾಗ ಮಾತ್ರ ಉತ್ತಮ ತಾಯಿಯಾಗಲು ಸಾಧ್ಯ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ