Precautions On Deepavali: ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸುವಾಗ ಮಕ್ಕಳ ಸುರಕ್ಷತೆಯ ಬಗ್ಗೆ ವಹಿಸಬೇಕಾದ ಎಚ್ಚರಿಕೆ ಕ್ರಮಗಳು

| Updated By: ಅಕ್ಷತಾ ವರ್ಕಾಡಿ

Updated on: Nov 10, 2023 | 7:12 PM

ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ದೀಪಾವಳಿ ಹಬ್ಬ ಕೂಡಾ ಒಂದು. ಈ ಹಬ್ಬವನ್ನು ದೇಶಾದ್ಯಂತ ವಿಜೃಂಭನೆಯಿಂದ ಆಚರಿಸಲಾಗುತ್ತದೆ. ಜೊತೆಗೆ ದೀಪಾವಳಿ ಆಚರಣೆಯಲ್ಲಿ ಪಟಾಕಿಗಳನ್ನು ಸಿಡಿಸಲಾಗುತ್ತದೆ. ಪಟಾಕಿ ಸಿಡಿಸುವ ಸಂದರ್ಭದಲ್ಲಿ ವಿಶೇಷವಾಗಿ ಮಕ್ಕಳ ಸುರಕ್ಷತೆಯ ಬಗ್ಗೆ ಕಾಳಜಿಯನ್ನು ವಹಿಸುವುದು ತುಂಬಾ ಮುಖ್ಯ.

Precautions On Deepavali: ದೀಪಾವಳಿ ಹಬ್ಬದಲ್ಲಿ  ಪಟಾಕಿ ಸಿಡಿಸುವಾಗ ಮಕ್ಕಳ ಸುರಕ್ಷತೆಯ ಬಗ್ಗೆ  ವಹಿಸಬೇಕಾದ ಎಚ್ಚರಿಕೆ ಕ್ರಮಗಳು
Follow us on

ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ದೀಪಾವಳಿಯನ್ನು ದೇಶಾದ್ಯಂತ ಬಹಳ ವಿಜೃಂಭನೆಯಿಂದ ಆಚರಿಸಲಾಗುತ್ತದೆ. ಈ ಹಬ್ಬದ ಸಂದರ್ಭದಲ್ಲಿ ಜನರು ತಮ್ಮ ಮನೆಗಳನ್ನು ದೀಪ ಹಾಗೂ ವಿವಿಧ ಅಲಂಕಾರಿಕ ವಸ್ತುಗಳಿಂದ ಅಲಂಕರಿಸುತ್ತಾರೆ. ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸುತ್ತಾರೆ. ಮತ್ತು ಪರಸ್ಪರ ಉಡುಗೊರೆಗಳನ್ನು ನೀಡುತ್ತಾ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸುತ್ತಾರೆ. ಜೊತೆಗೆ ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸುವ ಪದ್ಧತಿ ಕೂಡ ಇದೆ. ಈ ಹಬ್ಬದಲ್ಲಿ ಎಲ್ಲರೂ ತಮ್ಮ ಮನೆಗಳಲ್ಲಿ ಪಟಾಕಿ ಸಿಡಿಸುತ್ತಾರೆ. ಆದರೆ ಪಟಾಕಿ ಸಿಡಿಸುವಾಗ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಅವಶ್ಯಕ. ಅದರಲ್ಲೂ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ ಪಟಾಕಿ ಹೊಡೆಯುವಾಗ ಬೆಂಕಿಯಿಂದ ಕೆಲವೊಂದು ಅವಘಡಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಈ ರೀತಿ ಪಟಾಕಿ ಹೊಡೆಯುವಾಗ ಉಂಟಾದ ಅವಘಡಗಳ ಬಗ್ಗೆ ನಾವೆಲ್ಲರೂ ಕೇಳಿರುತ್ತೇವೆ. ಆದ ಕಾರಣ ದೀಪಾವಳಿಯಲ್ಲಿ ಸ್ವಲ್ಪ ಎಚ್ಚರಿಕೆ ಕ್ರಮಗಳನ್ನು ವಹಿಸುವ ಮೂಲಕ ಹಬ್ಬವನ್ನು ಸಂಪೂರ್ಣವಾಗಿ ಆನಂದಿಸಬಹುದು.

ಪಟಾಕಿ ಸಿಡಿಸುವಾಗ ಮಕ್ಕಳ ಸುರಕ್ಷತೆಯ ಬಗ್ಗೆ ತೆಗೆದುಕೊಳ್ಳಬೇಕಾದ ಮುಂಜಾಗೃತ ಕ್ರಮಗಳು:

ಬಟ್ಟೆಗಳನ್ನು ನೋಡಿಕೊಳ್ಳಿ:

ದೀಪಾವಳಿ ಸಂಜೆಯಲ್ಲಿ ಪಟಾಕಿ ಸಿಡಿಸುವ ವೇಳೆಯಲ್ಲಿ ಮಕ್ಕಳಿಗೆ ನೆಟೆಡ್, ಸ್ಯಾಟಿನ್, ವೆಲ್ವೆಟ್, ರೇಷ್ಮೆ, ಜಾರ್ಜೆಟ್ ಮುಂತಾದ ಬಟ್ಟೆಗಳನ್ನು ಧರಿಸುವ ಬದಲು ಹತ್ತಿ ಬಟ್ಟೆ ಮಾತ್ರ ಧರಿಸಿ. ಏಕೆಂದರೆ ಹತ್ತಿ ಬಟ್ಟೆ ಚರ್ಮಕ್ಕೆ ಅಂಟಿಕೊಳ್ಳುವುದಿಲ್ಲ. ಆದರೆ ಸಿಂಥೆಟಿಕ್ ಬಟ್ಟೆಗಳು ಚರ್ಮಕ್ಕೆ ಅಂಟಿಕೊಳ್ಳುತ್ತವೆ. ಆದ್ದರಿಂದ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಅವರಿಗೆ ಹತ್ತಿ ಬಟ್ಟೆಯನ್ನು ಧರಿಸಿ.

ಪಟಾಕಿಗಳ ಗುಣಮಟ್ಟ:

ನೀವು ಮಕ್ಕಳಿಗಾಗಿ ಪಟಾಕಿಗಳನ್ನು ಖರೀದಿಸುತ್ತಿದ್ದರೆ, ಉತ್ತಮ ಗುಣಮಟ್ಟದ ಪಟಾಕಿಗಳನ್ನು ಸರ್ಕಾರಿ ಪರವಾನಗಿ ಹೊಂದಿರುವ ಅಂಗಡಿಗಳಲ್ಲಿ ಮಾತ್ರ ಖರೀದಿಸಿ. ಮಕ್ಕಳಿರುವುದರಿಂದ ಅಪಾಯಕಾರಿ ಪಟಾಕಿಗಳನ್ನು ಸಿಡಿಸುವ ಬದಲು ಭೂ ಚಕ್ರ, ಸುರುಸುರು ಬತ್ತಿ, ಹೂಕುಂಡ ಇತ್ಯಾದಿ ಅಪಾಯಕಾರಿಯಲ್ಲದ ಪಟಾಕಿಗಳನ್ನು ಸಿಡಿಸಿ. ಅಲ್ಲದೆ ಪಟಾಕಿ ಸಿಡಿಸುವ ಸಂದರ್ಭದಲ್ಲಿ ಉಂಟಾಗುವ ಅಪಾಯಗಳನ್ನು ತಪ್ಪಿಸಲು, ಅವುಗಳನ್ನು ಸಿಡಿಸುವ ಮೊದಲು ಪಟಾಕಿ ಬಾಕ್ಸ್ ಮೇಲೆ ಬರೆದಿರುವ ಎಚ್ಚರಿಕೆ ಸೂಚನೆಗಳನ್ನು ಓದಿ.

ಇದನ್ನೂ ಓದಿ:  ದೀಪಾವಳಿ ಹಬ್ಬ ಯಾವಾಗ? ದಿನದ ಮಹತ್ವ, ಪೂಜಾ ವಿಧಾನ, ಮುಹೂರ್ತಗಳ ಬಗ್ಗೆ ತಿಳಿದುಕೊಳ್ಳಿ

ಕಣ್ಣುಗಳ ಸುರಕ್ಷತೆ:

ದೀಪಾವಳಿಯ ಸಂದರ್ಭದಲ್ಲಿ ಪಟಾಕಿಗಳನ್ನು ಸಿಡಿಸುವಾಗ ಕಣ್ಣಿನ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ವಿಶೇಷವಾಗಿ ಮಕ್ಕಳ ಕಣ್ಣುಗಳ ಬಗ್ಗೆ. ಕಣ್ಣಿನ ಸುರಕ್ಷತೆಗೆ ಸಂಬಂಧಿಸಿದಂತೆ, ಹತ್ತಿರದಿಂದ ಪಟಾಕಿ ಸಿಡಿಸುವಾಗ ಕಣ್ಣುಗಳಿಗೆ ಕನ್ನಡಕವನ್ನು ಧರಿಸಿ ಅಥವಾ ಪಟಾಕಿ ಹೊಡೆಯುವಾಗ ಮಕ್ಕಳ ಮುಖವನ್ನು ತಿರುಗಿಸಿ. ಪಟಾಕಿಗಳನ್ನು ಸುಟ್ಟ ನಂತರ ಅವರು ಕಣ್ಣುಗಳನ್ನು ಮುಟ್ಟುವ ಮೊದಲು ಸೋಪ್ ಅಥವಾ ನೀರಿನಿಂದ ಕೈಯನ್ನು ತೊಳೆಯಲು ಹೇಳಿ.

ಪ್ರಥಮ ಚಿಕಿತ್ಸಾ ಪೆಟ್ಟಿಗೆ:

ಪಟಾಕಿ ಸಿಡಿಸುವ ಸಂದರ್ಭದಲ್ಲಿ ಯಾವಾಗಲೂ ನಿಮ್ಮ ಹತ್ತಿರದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇರಬೇಕು. ನಿಮಗೆ ಅಥವಾ ನಿಮ್ಮ ಮಕ್ಕಳಿಗೆ ಪಟಾಕಿ ಸಿಡಿಸುವ ಸಂದರ್ಭದಲ್ಲಿ ಅಪ್ಪಿತಪ್ಪಿ ಏನಾದರೂ ಸಣ್ಣಪುಟ್ಟ ಗಾಯಗಳಾದರೆ, ಇದರಿಂದ ತಕ್ಷಣಕ್ಕೆ ಚಿಕಿತ್ಸೆ ನೀಡಬಹುದು.

ಪೋಷಕರು ಮಕ್ಕಳ ಜೊತೆಯಲ್ಲಿಯೇ ಇರಬೇಕು:

ಪಟಾಕಿ ಸಿಡಿಸುವ ಮೊದಲು, ಪಾಲಿಸಬೇಕಾದ ಅತ್ಯಂತ ಮುಖ್ಯವಾದ ವಿಷಯವೆಂದರೆ, ಮಕ್ಕಳಿಗೆ ಪಟಾಕಿಗಳನ್ನು ಸಿಡಿಸುವ ಸರಿಯಾದ ಕ್ರಮವನ್ನು ವಿವರಿಸಿ. ಜೊತೆಗೆ ಮಕ್ಕಳು ಪಟಾಕಿ ಹಚ್ಚುವಾಗ ಅವರ ಜೊತೆ ನೀವು ಕೂಡ ಇರಲೇಬೇಕು. ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ.

ಆರೋಗ್ಯ ಕಾಳಜಿ:

ನಿಮ್ಮ ಮನೆಯಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿದ್ದರೆ, ಪಟಾಕಿಗಳ ದೊಡ್ಡ ಶಬ್ದಗಳಿಂದ ಉಂಟಾಗುವ ಹಾನಿಯಿಂದ ಕಿವಿಯನ್ನು ರಕ್ಷಿಸಲು ಮಕ್ಕಳ ಕಿವಿಗೆ ಇಯರ್ಪ್ಲಗ್ಗಳು ಅಥವಾ ಹತ್ತಿ ಚೆಂಡನ್ನು ಇಡಿ. ನಿಮ್ಮ ಮಗುವಿಗೆ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ, ವಿಶೇಷವಾಗಿ ಉಸಿರಾಟದ ತೊಂದರೆಗಳಿದ್ದರೆ, ಅವರನ್ನು ಹೊಗೆ ತುಂಬಿದ ಪ್ರದೇಶಗಳಿಂದ ಆದಷ್ಟು ದೂರವಿರಿಸಿ.

ಪುಟ್ಟಮಕ್ಕಳ ಬಗ್ಗೆ ಈ ವಿಷಯದಲ್ಲಿ ಜಾಗೃತೆ ವಹಿಸಿ:

ದೀಪಾವಳಿ ಹಬ್ಬದಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕ್ಯಾಂಡಲ್ ಮತ್ತು ದೀಪಗಳನ್ನು ಬೆಳಗಿಸಿಡಲಾಗುತ್ತದೆ. ಅಂತಹ ಸಂದರ್ಭದಲ್ಲಿ ಅಂಬೆಗಾಲಿಡುವ ಮಕ್ಕಳು ಆ ದೀಪಗಳ ಬಳಿ ಹೋಗದಿರುವಂತೆ ನೋಡಿಕೊಳ್ಳಿ, ಏಕೆಂದರೆ ಅಪ್ಪಿತಪ್ಪಿ ಪುಟ್ಟ ಮಕ್ಕಳು ದೀಪವನ್ನು ಮುಟ್ಟಿದರೆ ಅವರ ಕೈಗಳಿಗೆ ಗಾಯವಾಗುವ ಸಾಧ್ಯತೆಯಿರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: